ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಿದ್ದಾರೆಂಬ ಸುಳ್ಳು ಬಿತ್ತರಿಸಿ ದ್ವೇಷ ಹರಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.
ಮೈಸೂರು (ಮೇ.12): ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಿದ್ದಾರೆಂಬ ಸುಳ್ಳು ಬಿತ್ತರಿಸಿ ದ್ವೇಷ ಹರಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ. ಹೇಳಿಕೊಳ್ಳಲು ಯಾವ ಸಾಧನೆಗಳೂ ಇಲ್ಲದ ಬಿಜೆಪಿಗರು ಲೋಕಸಭಾ ಚುನಾವಣೆಯ ಕಾರಣಕ್ಕಾಗಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ನಗು ತರಿಸುವಂತಹ ಮಾತುಗಳನ್ನು ಕೆಲವು ದಿನಗಳಿಂದ ಹುಟ್ಟು ಹಾಕುತ್ತಿದ್ದು, ಇವರ ಮಾತಿಗೂ ಮತ್ತು ವಾಸ್ತವ ಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ಅಂಕಿ ಅಂಶಗಳೇ ನಮಗೆ ತಿಳಿಸಿಕೊಡುತ್ತವೆ ಎಂದು ಹೇಳಿದ್ದಾರೆ.
1900 ನಂತರ ಅಂದರೆ ಬಂಗಾಳ ವಿಭಜನೆಯಾಗಿ, ಪಂಜಾಬ್ ಭೂಮಿ ಒತ್ತುವರಿ ಕಾಯ್ದೆ ಹಾಗೂ 1909ರ ಭಾರತ ಕೌನ್ಸಿಲ್ ಕಾಯ್ದೆಯು ಮುಸ್ಲೀಮರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ನೀಡಿದ ಮೇಲೆ ಮುಸ್ಲೀಮರ ಸಂಖ್ಯೆ ಹಿಂದೂಗಳಿಗಿಂತಲೂ ಹೆಚ್ಚುತ್ತಿದೆ ಎಂಬ ಮಾತುಗಳು ಹೆಚ್ಚು ಮುನ್ನಲೆಗೆ ಬರುತ್ತಿವೆ ಎಂದು ತಿಳಿಸಿದ್ದಾರೆ. 2004ರಲ್ಲಿ ಉತ್ತರ ಗುಜರಾತ್ ಪ್ರಾಂತ್ಯದ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷರಾಗಿದ್ದ ಚಿನುಭಾಯಿ ಪಟೇಲ್ ಅವರು 2001ನೇ ಜನಗಣತಿಯ ವೇಳೆಗೆ ಮುಸ್ಲೀಮರ ಜನಸಂಖ್ಯೆಯು ಶೇ.36 ನಷ್ಟು ಹೆಚ್ಚಾಗಿದ್ದು, ಕ್ರಮೇಣ ಭಾರತವು ಹಿಂದೂ ರಾಷ್ಟ್ರದಿಂದ ಮುಸ್ಲಿಂ ರಾಷ್ಟ್ರವಾಗುವ ಅಪಾಯವಿದೆ ಎಂದು ಹೇಳಿದ್ದರು.
ಇನ್ನೂ 2019ರ ಅಕ್ಟೋಬರ್ ನಲ್ಲಿ ಬಿಜೆಪಿ ನಾಯಕರಾದ ಸುರೇಂದ್ರ ಸಿಂಗ್ ಅವರು ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ತರದೇ ಇದ್ದರೆ ಮುಂದಿನ 50 ವರ್ಷಗಳ ಅವಧಿಯಲ್ಲಿ ಹಿಂದುತ್ವ ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಹೇಳಿದ್ದರು. ಆದರೆ, ಜನಸಂಖ್ಯೆಗೆ ಸಂಬಂಧಿಸಿದ ಈ ಭ್ರಮೆಗಳನ್ನು ಎಸ್.ವೈ. ಖುರೇಶಿಯವರು ತಮ್ಮ ಸುದೀರ್ಘ ಅಧ್ಯಯನ ಮತ್ತು ಸಮೀಕ್ಷೆಗಳಿಂದ ಸಂಗ್ರಹಿಸಿದ ಬೃಹತ್ ಮಾಹಿತಿಯ ಮೂಲಕ ಕಳಚುವ ಪ್ರಯತ್ನ ಮಾಡಿದ್ದಾರೆ. ಇವರ ಅಧ್ಯಯನದ ಪ್ರಕಾರ ಕಳೆದ 70 ವರ್ಷಗಳಲ್ಲಿ ಎಂದಿಗೂ ಕೂಡಾ ಮುಸ್ಲೀಮರ ಜನಸಂಖ್ಯೆಯು ಹಿಂದೂಗಳ ಜನಸಂಖ್ಯೆಗೆ ಸವಾಲಾಗೇ ಇಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕರುಳು ಸಂಬಂಧಿ ರೋಗ ತೀವ್ರ ಹೆಚ್ಚಳ: ಇದರ ಲಕ್ಷಣಗಳೇನು?
ಅಷ್ಟೇ ಏಕೆ? ಮುಂದಿನ 2101 ನೇ ಇಸವಿಯಲ್ಲಿ ಈಗಿನ ಜನಸಂಖ್ಯಾ ಅಭಿವೃದ್ಧಿ ದರದಲ್ಲಿ ಭಾರತದ ಜನಸಂಖ್ಯೆಯು 1.7 ಬಿಲಿಯನ್ ಇರಲಿದ್ದು, ಈ ಪೈಕಿ ಹಿಂದೂಗಳು 1.27 ಬಿಲಿಯನ್ ಹಾಗೂ ಮುಸ್ಲೀಮರ ಸಂಖ್ಯೆ 320 ಮಿಲಿಯನ್ ಇರಲಿದೆ. ಒಂದು ವೇಳೆ ಭಾರತವೇನಾದರೂ ವಿಶ್ವಸಂಸ್ಥೆ ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಅಂಶಗಳನ್ನು ಸರಿಯಾಗಿ ಅಳವಡಿಸಿಕೊಂಡಿದ್ದೇ ಆದರೆ 2100ನೇ ಇಸವಿಯ ಹೊತ್ತಿಗೆ ಭಾರತದ ಜನಸಂಖ್ಯೆಯು 929 ಮಿಲಿಯನ್ ಗೆ ಇಳಿಕೆಯಾಗಲಿದೆ ಎಂದು ಕಳೆದ ವರ್ಷದ ಲಾನ್ಸೆಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಚುನಾವಣೆಯ ಕಾರಣಕ್ಕಾಗಿ ಜನರಲ್ಲಿ ಭಯ ಮೂಡಿಸುವ ಯತ್ನ ಮಾಡುತ್ತಿರುವ ಬಿಜೆಪಿ ಮತ್ತದರ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿರುವ ಮಾಧ್ಯಮಗಳು ಕೂಡಲೇ ಸುಳ್ಳುಗಳನ್ನು ಹರಡುವ ತಮ್ಮ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.