ನನಗೆ ಅಪ್ಪನೂ ಬೇಡ, ಅಮ್ಮಾನೂ ಬೇಡ. ನಾನು ಈಗೆಲ್ಲಿದ್ದೀನೋ ಅಲ್ಲೇ ಇರ್ತಿನಿ. ಅಲ್ಲಿ ತುಂಬಾ ಫ್ರೆಂಡ್ಸ್ ಇದ್ದಾರೆ. ಅವರಾರಯರಿಗೂ ನನ್ನ ಹಾಗೆ ಅಪ್ಪ-ಅಮ್ಮ ಇಲ್ಲ.
ಆರ್ ಕೇಶವಮೂರ್ತಿ
- ಕೌಟುಂಬಿಕ ನ್ಯಾಯಾಲಯದಲ್ಲಿ ಜಡ್ಜ್ ಮುಂದೆ ನಿಂತ ಪುಟ್ಟಮಗುವಿನ ಈ ಮಾತುಗಳು ಚಿತ್ರದ ಕತೆಯ ಶಕ್ತಿಯೂ ಹೌದು. ಅದೇ ಸಂರ್ಭದಲ್ಲಿ ಸಂಬಂಧಗಳನ್ನೇ ದೂರ ಮಾಡಿಕೊಂಡವರ ಕನ್ನಡಿ, ದೂರವಾದವರು ಒಂದಾಗಬೇಕೆಂಬ ಜೀವನೋತ್ಸಾಹ ತುಂಬುವ ದೃಶ್ಯವೂ ಹೌದು. ಇಡೀ ಸಿನಿಮಾ ಇಂಥ ಆಪ್ತವಾದ ದೃಶ್ಯ ಮತ್ತು ಮಾತುಗಳಿಂದಲೇ ನೋಡುಗರನ್ನು ಹಿಡಿದಿಟ್ಟುಕೊಂಡು ಸಾಗುತ್ತದೆ. ಆ ಕಾರಣಕ್ಕೆ ‘ಅನಂತು ವರ್ಸಸ್ ನುಸ್ರತ್’ ಕತೆಯನ್ನಷ್ಟೆನಂಬಿಕೊಂಡ ಚಿತ್ರ. ‘ನಾನು ಧೂಳು ಒರೆಸುತ್ತಿರುವುದು ದೂರವಾದ ಸಂಬಂಧಗಳ ಮೇಲೆ’, ‘ಚಿಗುರೇ ಇಷ್ಟುಚೆನ್ನಾಗಿದ್ದರೆ ಅದರ ಬೇರು ಇನ್ನೆಷ್ಟುಚೆನ್ನಾಗಿರುತ್ತೆ ಅಂತ ನೋಡಕ್ಕೆ ಬಂದೆ’ ಎನ್ನುವ ಹರಿಪರಾಕ್ ಹಾಗೂ ವರುಣದೇವ ಕೊಲಪು ಅವರ ಸಂಭಾಷಣೆಗಳು ಚಿತ್ರಕ್ಕೆ ಗಟ್ಟಿತಳಪಾಯ ಹಾಕುತ್ತವೆ.
undefined
ಕನ್ನಡದಲ್ಲಿ ಒಳ್ಳೆಯ ಕತೆಯ ಸಿನಿಮಾ ಬಂದಿಲ್ಲ. ಬರೀ ಬಿಲ್ಡಪ್, ಹೀರೋಯಿಸಂ ಇರುವ ಸಿನಿಮಾಗಳೇ ಹೆಚ್ಚು ಎಂದು ಕೊರಗುವವರ ಮನಸ್ಸಿಗೆ ಮುಟ್ಟುವಂತಹ ಸರಳವಾದ ಜೀವನ ಕತೆಯನ್ನು ನಿರ್ದೇಶಕ ಸುಧೀರ್ ಶಾನುಭೋಗ್ ಹೇಳುತ್ತಾರೆ. ಅಪ್ಪನ ಮಾತು ಮೀರದ ಮಗ, ವೃತ್ತಿಯಲ್ಲಿ ಲಾಯರ್. ಆದರೂ ಸಂಬಂಧಗಳನ್ನು ದೂರ ಮಾಡದ ಕೇಸಿನ ತಂಟೆಗೆ ಹೋಗದಷ್ಟುಪ್ರಾಮಾಣಿಕತೆಯ ಈ ಹುಡುಗ ಮುಂದೆ ತಾನೇ ಹಾಕಿಕೊಂಡ ಲಕ್ಷ್ಮಣ ರೇಖೆ ದಾಟಬೇಕಾಗುತ್ತದೆ. ಇತ್ತ ಅಪ್ಪ ಒಳಗೆ ಕುದಿಯುತ್ತೇನೆ. ಸೇರಿಸಿದ ಸಂಬಂಧಗಳು ಕಾನೂನು ದೂರ ಮಾಡುತ್ತದೆಯೇ? ಎಂದು ಕೇಳುವ ಹೊತ್ತಿಗೆ ಕತೆ ಮತ್ತೊಂದು ಮಗ್ಗುಲು ಬದಲಿಸುತ್ತದೆ. ಇತ್ತ ನಾಯಕಿ ಕೌಟುಂಬಿಕ ನ್ಯಾಯಲಯದ ಯಂಗ್ ಜಡ್ಜ್. ಆದರೆ, ತನ್ನ ಅಪ್ಪ- ಅಮ್ಮನೇ ದೂರವಾಗಿದ್ದಾರೆ. ಕಾನೂನು, ಕೋರ್ಟು, ಸಂಬಂಧಗಳ ಸುತ್ತ ಸಾಗುವ ಈ ಚಿತ್ರ, ನಿಜಕ್ಕೂ ಫ್ಯಾಮಿಲಿ ಸಿನಿಮಾ. ‘ನನಗೆ ನೀನು ಬೇಡ’ ಎನ್ನುವ ಪ್ರತಿಯೊಬ್ಬನ ಅಂತರಂಗದ ಚಿತ್ರವಾಗಿ ನಿಲ್ಲುವುದೇ ಇಲ್ಲಿನ ಕತೆಯ ಹೆಚ್ಚುಗಾರಿಕೆ.
ಸಾಮಾನ್ಯವಾಗಿ ಹಿಂದೂ ಮುಸ್ಲಿಂ ಪ್ರೇಮ ಕತೆ ಎಂದಾಗ ಎರಡು ಧರ್ಮಗಳ ನೆರಳು ಸುತ್ತಿ ಚಳಿ ಕಾಯಿಸಿಕೊಳ್ಳುವುದನ್ನು ತೆರೆ ಮೇಲೂ ನೋಡಿದ್ದೇವೆ. ಆದರೆ, ನಿರ್ದೇಶಕ ಸುಧೀರ್ ಶಾನುಭೋಗ್ ಇಂಥ ಪೂರ್ವ ನಿರ್ಧಾರಿತ ಬೇಲಿಯನ್ನು ಕಿತ್ತೆಸೆಯುತ್ತಾರೆ. ಜತೆಗೆ ನಿರೂಪಣೆ, ಪಾತ್ರಗಳ ಸಂಯೋಜನೆ, ಮೇಕಿಂಗ್... ಹೀಗೆ ಎಲ್ಲೂ ಪ್ರೇಕ್ಷಕರಿಗೆ ಅಮಿಷಗಳನ್ನು ಒಡ್ಡಲ್ಲ. ಯಾಕೆಂದರೆ ಅವರು ನಂಬಿರುವುದು ಕೇವಲ ಕತೆಯನ್ನು ಮಾತ್ರ. ಪ್ರೇಕ್ಷಕ ಕೂಡ ಕತೆ ನಂಬಿದರೆ ಅನಂತು ಮನಸ್ಸಿಗೆ ಮುಟ್ಟಿದರೆ, ನುಸ್ರತ್, ನೋಡಗನ ಕಣ್ಣಲ್ಲಿ ಮಿಂಚಾಗುತ್ತಾಳೆ. ವಿನಯ್ ರಾಜ್‌ಕುಮಾರ್ ಇಂಥ ಸರಳವಾದ ಕತೆಯನ್ನು ಒಪ್ಪಿಕೊಳ್ಳುವ ಮೂಲಕ ‘ಕಲಾವಿದ’ ಎನಿಸಿಕೊಳ್ಳುವ ಹಾದಿಯುತ್ತ ಮುಖ ಮಾಡಿದ್ದಾರೆ. ಆ ಕಾರಣಕ್ಕೆ ಮೊದಲ ಬಾರಿಗೆ ವಿನಯ್ ಅಭಿನಯ ಇಷ್ಟವಾಗುತ್ತದೆ. ಇನ್ನೂ ಲತಾ ಹೆಗಡೆ ನಟನೆ ಚಿತ್ರದಲ್ಲಿ ಬರುವ ಅಮೀರ್ ಖುಸ್ರೋನ ಗಜಲ್‌ನಷ್ಟೇ ಸುಂದರ ಮತ್ತು ಆಪ್ತ. ಇದರ ನಡುವೆ ಸಪ್ರೈಸ್ ಆಗಿ ಎಂಟ್ರಿ ಕೊಡುವುದು ನಟ ಪ್ರಜ್ವಲ್ ದೇವರಾಜ್. ಈ ಹಿಂದೆ ನೋಡಿರದ ಡೈನಾಮಿಕ್ ಪ್ರಿನ್ಸ್‌ನನ್ನು ಇಲ್ಲಿ ನೋಡುತ್ತೀರಿ. ಉಳಿದಂತೆ ಬಿ ಸುರೇಶ್ ಎಂದಿನಂತೆ ಪಾತ್ರವನ್ನು ಅಪ್ಪಿಕೊಂಡಿದ್ದಾರೆ.
ಅಭಿಷೇಕ್ ಜಿ ಕಾಸರಗೋಡು ಅವರ ಕ್ಯಾಮೆರಾ ಕಣ್ಣು ಕತ್ತಲಲ್ಲಿ ದರ್ಗಾ ಸೌಂದರ್ಯವನ್ನು ಸೆರೆಯುತ್ತಲೇ ಕೋರ್ಟ್ ರೂಮ್‌ನ ಸಂಬಂಧಗಳ ಬಿಕ್ಕಟ್ಟಿನ ಕಾರಿಡಾರ್‌ನಲ್ಲಿ ಮತ್ತಷ್ಟುಹತ್ತಿರವಾಗುತ್ತದೆ. ಒಮ್ಮೆಯೂ ತಿರುಗಿ ನೋಡದ ನೀನು ಹಾಗೂ ಈಗ ತಾನೆ ಜಾರಿಯಾಗಿದೆ ಎನ್ನುವ ಹಾಡಿನ ಜತೆಗೆ ಒಂದು ಕವ್ವಾಲಿ ಗೀತೆಯಲ್ಲಿ ಸುನಾದ್ ಗೌತಮ್‌ರ ಸಂಗೀತ, ಫಸ್ಟ್ ರಾರಯಂಕ್ ಎನಿಸಿಕೊಳ್ಳುತ್ತದೆ.
ಚಿತ್ರ: ಅನಂತು ವರ್ಸಸ್ ನುಸ್ರತ್
ತಾರಾಗಣ: ವಿನಯ್ ರಾಜ್‌ಕುಮಾರ್, ಲತಾ ಹೆಗಡೆ, ಬಿ ಸುರೇಶ್, ರವಿಶಂಕರ್, ಹರಿಣಿ, ಸುಚೇಂದ್ರ ಪ್ರಸಾದ್, ಹರಿಣಿ, ಸ್ವಾತಿ, ಮಠ ಗುರುಪ್ರಸಾದ್, ದತ್ತಣ್ಣ, ನವೀನ್ ಡಿ ಪಡೀಲ್
ನಿರ್ದೇಶನ: ಸುಧೀರ್ ಶಾನುಭೋಗ್
ನಿರ್ಮಾಣ: ಮಾಣಿಕ್ಯ ಪ್ರೊಡಕ್ಷನ್
ಸಂಗೀತ: ಸುನಾದ್ ಗೌತಮ್
ಛಾಯಾಗ್ರಾಹಣ: ಅಭಿಷೇಕ್ ಜಿ ಕಾಸರಗೋಡು
ರೇಟಿಂಗ್: ****