
ಡಾ.ರಾಜ್‌ಕುಮಾರ್ ಅವರ ನಟನೆ ಎಂದರೆ ಹಾಗೆನೇ. ಅದರ ಬಗ್ಗೆ ಬೇರೆ ಹೇಳಬೇಕಾದದ್ದೇ ಇಲ್ಲ. ಆ ಪಾತ್ರದೊಳಗೆ ರಾಜ್‌ಕುಮಾರ್ ಇದ್ದಾರೋ ಅಥವಾ ಆ ಪಾತ್ರವೇ ಇವರಾಗಿದ್ದಾರೋ ಎನ್ನುವಂಥ ನಟನೆ ಅವರದ್ದು. ಅದು ಹೀರೋನೇ ಇರಬಹುದು, ವಿಲನ್ ಇರಬಹುದು, ಐತಿಹಾಸಿಕ ಪಾತ್ರವೇ ಇರಬಹುದು, ದೇವರ ಪಾತ್ರವೇ ಆಗಿರಬಹುದು... ಅಲ್ಲಿ ಡಾ.ರಾಜ್‌ಕುಮಾರ್, ನಟನಾಗಿರುವುದಿಲ್ಲ. ಬದಲಿಗೆ ಆ ಪಾತ್ರವೇ ಅವರಾಗಿರುತ್ತದೆ. ಅವರ ನೋಟ, ಹಾವ-ಭಾವ ಎಲ್ಲವೂ ವೀಕ್ಷಕರನ್ನು ಮರುಳಾಗಿಸಿಬಿಡುವಂಥ ಅದ್ಭುತ ನಟನೆ ಅವರದ್ದು. ಅದಕ್ಕೇ ಅಲ್ಲವೆ ಅವರನ್ನು ನಟಸಾರ್ವಭೌಮ ಎಂದು ಕರೆದದ್ದು. ಇದೀಗ ಅವರ ಕೆಲವೊಂದು ಚಿತ್ರದಲ್ಲಿ ನಟಿಸಿರುವ ನಟಿ ಸುಧಾರಾಣಿ 'ಅಪ್ಪಾಜಿ' ಜೊತೆಗಿನ ರೋಚಕ ಪಯಣವನ್ನು ತೆರೆದಿಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಡಾ.ರಾಜ್‌ಕುಮಾರ್ ಅವರ ಜೊತೆಗೆ ನಟಿಸಿರುವ ಚಿತ್ರಗಳ ಬಗ್ಗೆ ಮಾತನಾಡಿರುವ ಸುಧಾರಾಣಿ ಅವರು, 1988ರಲ್ಲಿ ಬಿಡುಗಡೆಯಾದ ದೇವತಾ ಮನುಷ್ಯ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಸುಧಾರಾಣಿ ಅವರು ರಾಜ್ ಅವರ ಮಗಳಾಗಿ ನಟಿಸಿದ್ದಾರೆ. ಆಗಿನ್ನೂ ಸುಧಾರಾಣಿ ಅವರಿಗೆ 15 ವರ್ಷ. ಅಂಥ ಮೇರು ನಟನ ಜೊತೆ ನಟನೆ ಮಾಡುವುದು ಎಂದರೆ ಸುಲಭದ ಮಾತೆ? ಅವರ ಮಗಳಾಗಿ ನಟಿಸುವಾಗಲೂ ಅಪ್ಪನಿಗೆ ಸಮನಾಗಿ ನಟಿಸಲೇಬೇಕು ಎನ್ನುವ ಛಲ ಸುಧಾರಾಣಿ ಅವರದ್ದು. ಆದರೆ, ಡಾ.ರಾಜ್ ಎದುರು ನಟಿಸುವುದು ಕೇಳಿದರೆನೇ ಎಂಥ ನಟರೇ ಭಯಪಡುತ್ತಿದ್ದರು. ತಮ್ಮ ಸಹನಟರನ್ನು ರಾಜ್‌ಕುಮಾರ್ ಅವರು ಅದೆಷ್ಟು ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು, ಅದೆಷ್ಟು ಪ್ರೀತಿಸುತ್ತಿದ್ದರು, ಶೂಟಿಂಗ್ ಸಮಯದಲ್ಲಿ ಅದೆಷ್ಟು ರೀತಿಯಲ್ಲಿ ಕಾಳಜಿ ವಹಿಸುತ್ತಿದ್ದರು ಎನ್ನುವುದನ್ನು ಇದಾಗಲೇ ಹಲವಾರು ಮಂದಿ ಮಾತನಾಡಿದ್ದಾರೆ. ಆದರೆ, ಆ ಸಮಯದಲ್ಲಿ ಸುಧಾರಾಣಿ ಅವರಿಗೆ ತುಂಬಾ ಭಯವಾಗಿ ಹೋಗಿತ್ತಂತೆ.
'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್ ನೋಡ್ಲೇ ಇಲ್ಲ- ಡಬ್ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್
ಕೊನೆಗೆ ಅಪ್ಪಾಜಿಯವರೇ ಹೇಗೆ ತಮ್ಮನ್ನು ಸಮಾಧಾನ ಮಾಡಿದರು ಎಂದು ನಟಿ ಹೇಳಿದ್ದಾರೆ. ಹೊರಗಡೆ ಸಕತ್ ತಮಾಷೆ ಮಾಡುತ್ತಿದ್ದ ರಾಜ್‌ಕುಮಾರ್ ಅವರು ಬಣ್ಣ ಹಚ್ಚಿ ಶೂಟಿಂಗ್ನಲ್ಲಿ ಪಾತ್ರಧಾರಿಯಾದಾಗ, ಸಂಪೂರ್ಣ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ನಾನು ಶಾಕ್ಗೆ ಒಳಗಾಗಿ ಹೋದೆ ಎಂದಿದ್ದಾರೆ ಸುಧಾರಾಣಿ. ಹೊರಗೆ ನೋಡಿದ್ದ ಅಪ್ಪಾಜಿಯೇ ಬೇರೆ, ಇಲ್ಲಿ ನೋಡ್ತಿರೋ ಅಪ್ಪಾಜಿಯೇ ಬೇರೆ. ಆ ಪಾತ್ರದಲ್ಲಿ ಅಪ್ಪಾಜಿ ಮೈಮರೆತುಹೋಗಿದ್ದರು, ಅವರೇ ಆ ಪಾತ್ರವಾಗಿಬಿಟ್ಟಿದ್ದರು, ಅವರನ್ನು ನೋಡುತ್ತಿದ್ದಂತೆಯೇ ಮೊದಲೇ ಹೆದರಿದ್ದ ನನಗೆ ಇನ್ನಷ್ಟು ಭಯ ಆಗೋಯ್ತು ಎಂದು ನೆನಪಿಸಿಕೊಂಡಿದ್ದಾರೆ.
ಹಾಲಲ್ಲಾದರೂ ಹಾಕು ಶೂಟಿಂಗ್ ಸಮಯದಲ್ಲಿ ನಡೆದ ಈ ಘಟನೆಯ ಬಗ್ಗೆ ವಿವರಿಸಿರುವ ನಟಿ, ಈ ಹಾಡಿನ ಸಮಯದಲ್ಲಿಯೂ ನಾನು ತುಂಬಾ ಭಯ ಪಟ್ಟಿದ್ದೆ. ಆದರೆ ನಾನು ಹೊರಗಡೆಯಿಂದ ಒಳಗೆ ಬರುವಾಗ ಅಪ್ಪಾಜಿ ಒಂದು ಲುಕ್ ಕೊಡುತ್ತಾರೆ ಅದನ್ನು ನೀವು ನೋಡಿರಬಹುದು... ಎನ್ನುತ್ತಲೇ ಆ ನೋಟವನ್ನು ಬೀರಿದಾಗ ತಮಗೆ ಆದ ರೋಮಾಂಚನ ಅನುಭವವನ್ನು ನಟಿ ಹೇಳಿಕೊಂಡಿದ್ದಾರೆ. ಅಪ್ಪಾಜಿ ಆ ನೋಟ ನೋಡಿದಾಗ ನನಗೆ ಅಲ್ಲಿ ಅಪ್ಪಾಜಿಯೂ ಕಾಣಿಸಲಿಲ್ಲ, ಡಾ.ರಾಜ್‌ಕುಮಾರ್ ಅವರೂ ಕಾಣಿಸಲಿಲ್ಲ... ಬದಲಿಗೆ ಸಾಕ್ಷಾತ್ ರಾಘವೇಂದ್ರ ಅವರೇ ಪ್ರತ್ಯಕ್ಷರಾಗಿ ನನಗೆ ಅಭಯ ನೀಡುತ್ತಾರೆ ಎನ್ನಿಸಿಬಿಟ್ಟಿತು. ಆ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಅಂದು ನಡೆದ ಆ ಘಟನೆಯಿಂದಲೇ ನಾನು ಸಲೀಸಾಗಿ ಅವರ ಜೊತೆ ಮಗಳಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದಾರೆ.
ಪಾರ್ವತಿಗೆ ಮಾತ್ರ ಈ ವಿಷ್ಯ ಹೇಳ್ಬೇಡಪ್ಪಾ ಎಂದಿದ್ದ ಡಾ.ರಾಜ್: ಆ ರಹಸ್ಯದ ಬಗ್ಗೆ ಮುಖ್ಯಮಂತ್ರಿ ಚಂದ್ರು ನೆನಪು..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.