ಹೀರೋ ಆಗಲ್ಲ; ಕಾಮಿಡಿ ಬಿಡಲ್ಲ: ಚಿಕ್ಕಣ್ಣ

First Published Jul 10, 2018, 4:01 PM IST
Highlights

ಚಿಕ್ಕಣ್ಣ ಅಭಿನಯದ ಡಬಲ್ ಇಂಜಿನ್ ಈ ವಾರ ತೆರೆಗೆ ಬರುತ್ತಿದೆ. ಟೈಟಲ್ ಡಬಲ್ ಮೀನಿಂಗ್ ಥರ ಕಂಡರೂ ಶುದ್ಧ ಹಾಸ್ಯದ ಚಿತ್ರ ಅಂತಾರೆ ಚಿಕ್ಕಣ್ಣ. 

ಫೇಮಸ್ ಹಾಸ್ಯಗಾರ ಚಿಕ್ಕಣ್ಣ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಹಾಸ್ಯಕ್ಕೆ ಬಿದ್ದು ಬಿದ್ದು ನಗ್ತೀವಿ. ಅವರ ಹಾಸ್ಯಭರಿತ ಚಿತ್ರವೊಂದು ಇದೇ ವಾರ ತೆರೆಗೆ ಬರ್ತಾ ಇದೆ. ಅದರ ಹೆಸ್ರು ಡಬಲ್ ಇಂಜೀನ್. 

ಚಿತ್ರದ ಹೆಸರೇ ಸಿಕ್ಕಾಪಟ್ಟೆ ಡಬಲ್ ಮೀನಿಂಗ್?
ಚಿತ್ರದ ಹೆಸರು ಹಾಗೂ ಪೋಸ್ಟರ್‌ಗಳನ್ನು ನೋಡುವವರಿಗೆ ಹಾಗೆ  ಅನಿಸಬಹುದು. ಸಿನಿಮಾ ನೋಡಿದಾಗ ನಿಮ್ಮ ಅಭಿಪ್ರಾಯ ಬದಲಾಗುತ್ತದೆ. ಮನರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಚಂದ್ರಮೋಹನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾವೆಲ್ಲ ನಗಿಸುತ್ತೇವೆ ಎಂಬುದು ಮಾತ್ರ ಸತ್ಯ.

ಕಾಮಿಡಿ ಚಿತ್ರಕ್ಕೆ ಇಂಥ ಹೆಸರು, ಗ್ಲಾಮರ್ ಫೋಸುಗಳು ಯಾಕೆ?
ಖಾಲಿ ಪೋಸ್ಟರ್ ಹಾಕಿ ನಾವು ನಗಿಸುತ್ತೇವೆ, ಇದು ಒಳ್ಳೆಯ ಸಿನಿಮಾ ಬನ್ನಿ ಅಂದ್ರೆ ಯಾರೂ ಬರಲ್ಲ. ಸಿನಿಮಾ ಎಂದ ಮೇಲೆ ಒಂಚೂರು ಮಸಾಲೆ, ಕುತೂಹಲ, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಜಾಣ್ಮೆ ಬೇಕಾಗುತ್ತದೆ. ಅದರ ಕಸರತ್ತುಗಳೇ ಚಿತ್ರದ ಹೆಸರು, ಪೋಸ್ಟರ್‌ಗಳಲ್ಲಿ ಸುಮನ್ ರಂಗನಾಥ್ ಹಾಟ್ ಆಗಿ ಕಾಣಿಸಿಕೊಂಡಿರುವುದು.

ಚಿತ್ರದಲ್ಲಿ ಇಬ್ಬರು ಗ್ಲಾಮರಸ್ ನಾಯಕಿಯರು ಇದ್ದಾರೆ. ಇವರಲ್ಲಿ ನಿಮ್ಮ ಜೋಡಿ ಯಾರು?

ನಾಯಕಿಯನ್ನೇ ಕೊಡದೇನೆ ನನ್ನಿಂದ ಪಾತ್ರ ಮಾಡಿಸಿಕೊಂಡಿದ್ದಾರೆ. ಆದರೆ, ನನ್ನ ಪಾತ್ರವನ್ನು ನಿರ್ದೇಶಕ ಚಂದ್ರಮೋಹನ್ ಅವರು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಳ್ಳಿಯ ರೈತನ ಮಗನ ಪಾತ್ರ. ದುಡ್ಡು ಮಾಡುವುದಕ್ಕೆ ಹೊರಟಾಗ ಆಗುವ ಅವಾಂತರಗಳ ಸುತ್ತ ನನ್ನ ಪಾತ್ರ.

ಟೋಪಿ ಹಾಕೋ ಮಕ್ಮಲ್ ಟೋಪಿಲಾಲನ ಪಾತ್ರ?
ಹಳ್ಳಿಯ ರೈತರ ಮಕ್ಕಳಾದ ಮೂವರಿಗೆ ಇದ್ದಕ್ಕಿದ್ದಂತೆ ಹಣ ಮಾಡುವ ಆಸೆ ಹುಟ್ಟಿಕೊಳ್ಳುತ್ತದೆ. ಹಣಕ್ಕಾಗಿ ಏನು ಬೇಕಾದರೂ ಮಾಡುವುದಕ್ಕೆ ಸಿದ್ದ ಇರುವ ಈ ಮೂವರು ಹಳ್ಳಿ ಬಿಟ್ಟು ನಗರ ಸೇರಿಕೊಳ್ಳುತ್ತಾರೆ. ಈ ಮೂವರು ಮುಂದೆ ಎಂಥ ಸಮಸ್ಯೆಗಳನ್ನು ಎದುರಿಸುತ್ತಾರೆ, ಅವು ನೋಡುಗರಿಗೆ ಎಷ್ಟು ಹಾಸ್ಯಮಯವಾಗಿರುತ್ತವೆ ಎಂಬುದು ಕತೆ.

ಈ ಚಿತ್ರದ ಮೂಲಕ ಏನನ್ನ ಹೇಳುವುದಕ್ಕೆ ಹೊರಟಿದ್ದೀರಿ?
ಕೃಷ್ಣಿ ಲಾಭದಾಯಕವಲ್ಲ ಎನ್ನುವವರಿಗೆ ಇಲ್ಲಿ ಉತ್ತರ ಇದೆ. ಒಂದು ಎಕರೆಯಲ್ಲಿ ಹೂವು ಬೆಳೆದರೆ ಎಷ್ಟು ಲಕ್ಷ ದುಡಿಯಬಹುದು ಎಂಬುದು ನನಗೆ ಗೊತ್ತು. ಯಾಕೆಂದರೆ ನಾನು ರೈತನ ಮಗ. ಹಳ್ಳಿ, ರೈತರು, ಕೃಷಿಯ
ಮಹತ್ವವನ್ನು ಯಾವುದೇ ರೀತಿಯ ಭೋದನೆ ಇಲ್ಲದೆ ಹೇಳುತ್ತೇವೆ.

ಈಗಂತೂ ನೀವು ಪುರುಸೊತ್ತಿಲ್ಲದ ಸ್ಟಾರ್ ಕಾಮಿಡಿಯನ್?
ಸ್ಟಾರ್ ಅಂತೇನಿಲ್ಲ. ಕೈ ತುಂಬಾ ಚಿತ್ರಗಳಿವೆ. ಸದ್ಯಕ್ಕೆ ಚಿತ್ರೀಕರಣದಲ್ಲೇ ಏಳೆಂಟು ಚಿತ್ರಗಳಿವೆ. ಸೀತಾರಾಮ ಕಲ್ಯಾಣ, ಭರತ ಬಾಹುಬಲಿ, ನಟ ಸಾರ್ವಭೌಮ, ಪಡ್ಡೆಹುಲಿ, ಅಮರ್, ರಾಜಾಮಾರ್ತಾಂಡ, ಹೌಸ್ ಫಾರ್ ಸೇಲ್... ಹೀಗೆ ಸಾಕಷ್ಟು ಸಿನಿಮಾಗಳಿವೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರನ್ನು ನಗಿಸುವ ಕಲಾವಿದ.
 

ನಿಮ್ಮ ಲೈಫ್ ಸ್ಟೈಲ್ ಬದಲಾಗಿರಬೇಕಲ್ಲ?
ನೋಡಿ ಏನು ಬದಲಾಗಿದ್ದೇನೆ ಅಂತ. ಹಾಗೆ ಇದ್ದೀನಲ್ವಾ!? ‘ರಾಜಾಹುಲಿ’ ನಂತರ ನಾನು ಯಾರು ಅಂತ ಗೊತ್ತಾಯಿತು. ನಿರೀಕ್ಷೆಗೂ ಮೀರಿ ಅವಕಾಶಗಳು ಬರುತ್ತಿವೆ. ಆಗ ಊಟಕ್ಕೆ ೧೦ ರುಪಾಯಿ ಕೊಡುತ್ತಿದ್ರು. ಈಗ ೨೫ ರುಪಾಯಿ ಕೊಡ್ತಾರೆ. ಆಗ ಸಿಂಗಲ್ ಟೈಮ್‌ನಲ್ಲೂ ಕೆಲಸ ಇರಲಿಲ್ಲ. ಈಗ ಡಬಲ್ ಕಾಲ್‌ಶೀಟ್ ಕೊಡುವಷ್ಟು ಕೆಲಸ ಇದೆ. ಲೈಫು ಒಂಥರಾ ಡಬಲ್ ಇಂಜಿನ್ ಆಗಿದೆ. ಆದರೆ, ನಾನು ಬದಲಾಗಿಲ್ಲ. ಅದೇ ಚಿಕ್ಕಣ್ಣ.

ಈ ಯಶಸ್ಸು, ಸ್ಥಾನ-ಮಾನ ನೀವು ನಿರೀಕ್ಷೆ ಮಾಡಿದ್ರಾ?
ಖಂಡಿತ ಇಲ್ಲ. ಕೈಯಲ್ಲಿ ಫೋಟೋ ಆಲ್ಬಂ ಹಿಡಿದು ಸಿನಿಮಾ ಮುಹೂರ್ತದ ಜಾಗಕ್ಕೆ ಹೋಗುತ್ತಿದ್ದ ಆ ಚಿಕ್ಕಣ್ಣನಿಗೆ ಇಂಥ ಯಾವ ನಿರೀಕ್ಷೆಗಳೂ ಇರಲಿಲ್ಲ. ಸಿಕ್ಕರೆ ಒಂದೆರಡು ಸಿನಿಮಾ ಸಿಗಬಹುದು. ಆದರೆ, ಟಿವಿನಲ್ಲಿ ಪ್ರೋಗ್ರಾಮ್ ಮಾಡಿಕೊಂಡು ಜೀವನ ಮಾಡಬಹುದೆಂಬ ನಿರೀಕ್ಷೆ ಇತ್ತು ಅಷ್ಟೆ. ಎಲ್ಲವೂ ಆಕಸ್ಮಿಕವಾಗಿ ಬಂತು. ಸಿನಿಮಾ ಬರುವುದಕ್ಕಿಂತ ಮುಂಚೆ ಏನು ಮಾಡುತ್ತಿದ್ದೇನೆ ಎಂದು ಯಾರಿಗೂ ಗೊತ್ತಿಲ್ಲ. ಹೇಳೋದು ಇಲ್ಲ. ಹೇಳಿದರೆ ಕಣ್ಣೀರು ಬರುತ್ತದೆ. ಆ ನನ್ನ ಕಣ್ಣೀರಿನ ದಿನಗಳು ನನ್ನೊಳಗೆ ಹಾಗೆ ಗುಟ್ಟಾಗಿರಲಿ.

ಹಾಸ್ಯ ನಟನಾಗಿಯೇ ಉಳಿದುಕೊಳ್ಳುತ್ತೀರಾ?
 ಸದ್ಯಕ್ಕೆ ನಗಿಸುವುದು ಮಾತ್ರ. ಮುಂದೆ ಹೇಗಿರುತ್ತೇನೋ ನನಗೆ ಗೊತ್ತಿಲ್ಲ. ರಾಜಾಹುಲಿ ನಂತರ ನನ್ನ ಹೀರೋ ಮಾಡುವುದಕ್ಕೇ ಅಂತಲೇ ಐದಾರು ಸಿನಿಮಾಗಳು ಒಟ್ಟಿಗೆ ಬಂದವು. ಯಾವುದನ್ನೂ ಒಪ್ಪಲಿಲ್ಲ. ಹೀರೋ ಆಗಬಾರದು ಎನ್ನುವುದಲ್ಲ. ಅದೊಂದು ದೊಡ್ಡ ಜವಾಬ್ದಾರಿ. ಅದನ್ನು ನಿಭಾಯಿಸುವ ಶಕ್ತಿ, ಟ್ಯಾಲೆಂಟು ನನಗಿಲ್ಲ. ನಗಿಸುವವನ ಹಿಂದೆ ಭಾವುಕತೆ ಇರುತ್ತದೆ. ಅಂಥ ಎಮೋಷನ್ ಪಾತ್ರ ಮಾಡುವ ಆಸೆ ಇದೆ.

ನಿಮ್ಮನ್ನು ಜನ ಯಾಕೆ ಒಪ್ಪಿಕೊಂಡಿದ್ದಾರೆ ಅನಿಸುತ್ತದೆ?
 ನನ್ನಿಂದ ಕಾಮಿಡಿ ಬಿಟ್ಟರೆ ಬೇರೆ ನಿರೀಕ್ಷೆ ಮಾಡಲ್ಲ. ನನಗೆ ಅದು ಬಿಟ್ಟು ಬೇರೆಯದ್ದನ್ನು ಮಾಡಕ್ಕಾಗಲ್ಲ. ಜತೆಗೆ ಕೃತಕ ಅನಿಸದೆ ನ್ಯಾಚುರಲ್ಲಾಗಿ ನಟಿಸುತ್ತೇನೆಂಬ ಕಾರಣಕ್ಕೆ ಜನ ಒಪ್ಪಿಕೊಂಡಿರಬಹುದು.
 

ಕತೆಗಳನ್ನು ಪೂರ್ತಿ ಕೇಳಿ ಒಪ್ಪಿಕೊಳ್ಳುತ್ತೀರಾ?
ಇಡೀ ಸಿನಿಮಾ ಕತೆ ನಾನು ಕೇಳಕ್ಕೆ ಹೋಗಲ್ಲ. ನನ್ನ ಪಾತ್ರದ ಕತೆಯನ್ನು ಮಾತ್ರ ಕೇಳುತ್ತೇನೆ. ಅದಕ್ಕೆ ಮಾತ್ರ ನಾನು ತಯಾರಿ ಮಾಡಿಕೊಂಡು ಹೋಗುತ್ತೇನೆ. 
 

click me!