Heeremandi Web Series Review: ಸಂಜಯ್ ಲೀಲಾ ಬನ್ಸಾಲಿಯ ಮತ್ತದೇ ಹಳೇ ಬೋರಿಂಗ್ ಕಥೆ

By Suvarna News  |  First Published May 3, 2024, 5:44 PM IST

Devdas, Hum Dil Chuke Sanam ಸೇರಿ ಸೆಟ್, ಆ್ಯಕ್ಟಿಂಗ್ ಎಲ್ಲವೂ ವಾವ್ ಎನ್ನುವಂತೆ ನಿರ್ದೇಶಿಸುವ ಸಂಜಯ್ ಲೀಲಾ ಬನ್ಸಾಲಿ ಅವರು ಇದೀಗ  ಹೀರಾಮಂಡಿ ಎಂಬ ವೆಬ್ ಸೀರಿಸ್ ನಿರ್ದೇಶಿದ್ದು, ಸಪ್ಪೆಯಾಗಿದೆ ಎನ್ನುತ್ತಾರೆ ಖ್ಯಾತ ಲೇಖಕಿ ತೇಜಸ್ವಿನಿ ಹೆಗಡೆ.


- ತೇಜಸ್ವಿನಿ ಹೆಗಡೆ

ವೆಬ್ ಸೀರಿಸ್:  ಹೀರಾಮಂಡಿ
ನಿರ್ದೇಶನ: ಸಂಜಯ್ ಲೀಲಾ ಬನ್ಸಾಲಿ
ಸ್ಟ್ರೀಮಿಂಗ್ ಇನ್ ನೆಟ್‌ಫ್ಲೆಕ್ಸ್
ಕಲಾವಿದರು: ಅದಿತಿ ಹೈದರಿ, ಮನಿಶಾ ಕೊಯಿರಲಾ, ಸಂಜೀದಾ ಶೇಖ್, ಶರ್ಮಿನ್ ಶೇಗಲ್

Tap to resize

Latest Videos

undefined

ಬನ್ಸಾಲಿಯವರ ವಜ್ರವೆಂದು ನೋಡಹೋದರೆ, ಬಿಳಿ ಹರಳಿನ ದರ್ಶನವಾಯ್ತು!

2017ರಲ್ಲಿ ಬಿಡುಗಡೆಯಾಗಿದ್ದ ವಿದ್ಯಾ ಬಾಲನ್ ಅಭಿನಯದ ‘Begam Jaan',1981ರಲ್ಲಿ ಬಿಡುಗಡೆಯಾದ ರೇಖಾ ನಟನೆಯ ಪ್ರಸಿದ್ಧ ‘Umrao Jaan', 2006ರಲ್ಲಿ ಮತ್ತೆ ಐಶ್ವರ್ಯಾ, ಅಭಿಷೇಕ್ ಬಚ್ಚನ್ ಜೋಡಿಯಲ್ಲಿ ಹೊರತಂದ ಫ್ಲಾಪ್ ಚಿತ್ರ ' Umrao Jaan’ (ರಿಮೇಕ್), 1986ರಲ್ಲಿ ಬಿಡುಗಡೆಗೊಂಡಿದ್ದ B.R.Chopra ಅವರ ‘Tawaif' ಚಲನಚಿತ್ರ, ಇದೇ ಸಂಜಯ್ ಲೀಲಾ ಬನ್ಸಾಲಿಯವರ `Bajirao Mastani', ಇವರದ್ದೇ ಇನ್ನೊಂದು ಪ್ರಸಿದ್ಧ ಚಲನಚಿತ್ರ ‘Devdas', ತೀರಾ ಎರಡು ವರ್ಷಗಳ ಹಿಂದೆಯಷ್ಟೇ ಇದೇ ಬನ್ಸಾಲಿ ಸಾಹೇಬರ ನಿರ್ದೇಶನದಡಿ ಬಿಡುಗಡೆಗೊಂಡು ಆಲಿಯಾಗೆ ಪ್ರಸಿದ್ಧಿ ತಂದುಕೊಟ್ಟ, ವೇಶ್ಯೆಯರ ಬವಣೆ ಹೇಳುವ ‘Gangubai Kathiawadi’,  - ಇವೆಲ್ಲ ಚಲನಚಿತ್ರಗಳ ಜೊತೆಗೆ ಇನ್ನೂ ಹಲವೊಂದಿಷ್ಟು ಈಗಾಗಲೇ ಬಂದ ಇದೇ ವಸ್ತುವುಳ್ಳ ಚಿತ್ರಕಥೆಗಳನ್ನೆಲ್ಲ ಮಿಕ್ಸ್ ಮಾಡಿ, ಗಿರಗಿರನೆ ತಿರುಗಿಸಿ ಹಿಂಡಿ, ಅದರ ರಸಕ್ಕಿಂತ ಜಿಡ್ಡನ್ನು ಹೆಚ್ಚು ಸೇರಿಸಿ ಒಂದು ಸಪ್ಪೆಯಾದ, ತೀರಾ ಸಾಮಾನ್ಯವಾದ ‘Heeramandi' (The Diamond Bazaar) ಎನ್ನುವ ವೆಬ್ ಸೀರಿಸನ್ನು ಉಣಬಡಿಸಿದ್ದಾರೆ ಬನ್ಸಾಲಿ ಸಾಹೇಬರು. 

ಸಂಜಯ್ ಲೀಲಾ ಬನ್ಸಾಲಿ ಅವರ ಚಲನಚಿತ್ರಗಳೆಂದರೆ ಕಣ್ಣಿಗೆ ಹಬ್ಬ, ಅವರು ನಯನ ಮನೋಹರವಾದ ಅತ್ಯದ್ಭುತ ಸೆಟ್ಸ್ ನಿರ್ಮಿಸುತ್ತಾರೆ, ಇನ್ನು ಸಂಭಾಷಣೆಯಂತೂ ಕತ್ತಿಗಿಂತ ಹರಿತ, ಹಾಡುಗಳೂ ಸುಮಧುರ, ವೇಷಭೂಷಣ, ನಟಿಯ ಮಾರ್ದವತೆ, ನಟ-ನಟಿಯೊಳಗಿನ ಸಾಮರ್ಥ್ಯ ಹೊರತೆಗೆದು ಬೆರಗಾಗಿಸುವ ಅತ್ಯುತ್ತಮ ನಿರ್ದೇಶಕ - ಎಂದೆಲ್ಲ ಅಭಿಮಾನಿಗಳು ಹೊಗಳುತ್ತಾರೆ. ಚಿತ್ರ ಕಥೆಯೂ ಅಷ್ಟೇ ಕ್ರಿಸ್ಪ್ ಆಗಿ, ಆಳವಾಗಿ ಮೂಡಿ ಬಂದಿರುತ್ತದೆ ಎಂದೇ ವಿಮರ್ಶಕರಿಂದಲೂ ಹೇಳಲಾಗುತ್ತದೆ. ಇದು ಬಹುತೇಕ ಅವರ ಚಲನಚಿತ್ರಗಳಲ್ಲಿ ನಿಜವೂ ಆಗಿದೆ. ಆದರೆ ಅವರ ಬಹುಚರ್ಚಿತ ‘ಹೀರಾಮಂಡಿ’ಯಲ್ಲಿ ಮಾತ್ರ ಆಗಿದ್ದೆಲ್ಲ ಬೇರೆಯೇ! 

BHAKSHAK MOVIE REVIEW: ಹದಿಹರೆಯದ ಲೈಂಗಿಕ ಸಂತ್ರಸ್ತೆಯಾರಿಗಾಗಿ ಹೋರಾಟ

ಅದೇ ಚರ್ವಿತಚರ್ವಣ ಕಥೆಗಳಿಗೆ ಹೊಸ ಅಂಗಿ ತೊಡಿಸಿ, ಈ ಹಿಂದಿನ ಅವರದ್ದೇ ಚಲನಚಿತ್ರಗಳ ಸೆಟ್ಸ್ ಹೋಲುವ ಎರಡು ಹವೇಲಿಗಳು, ತೀರ ಸಾಮಾನ್ಯ ಸಂಭಾಷಣೆಗಳು, ಮನಸೊಳಗೆ ಹೊಕ್ಕಿ ಕಾಡದ ಹಾಡುಗಳು (ಒಂದು ಹಾಡನ್ನು ಬಿಟ್ಟು), ರಬ್ಬರ್ ಇಲಾಸ್ಟಿಕ್ಕಿನಂತೇ ಎಳೆದೆಳೆದು ಕಟ್ಟಿದ ಕಥೆ, ಪ್ರಭಾವ ಬೀರದ ಆಭಿನಯವನ್ನಿತ್ತ ಹೊಸ ಪಾತ್ರಧಾರಿಗಳು - ಒಟ್ಟಿನಲ್ಲಿ ಬಿಳೀ ವಜ್ರವನ್ನು ನೋಡಲು ಹೋದವರಿಗೆ ಬಿಳಿ ಹರಳು ಕಂಡಂಥ ಅನುಭವ ಎನ್ನಬಹುದು.

ಇನ್ನು ನಟನೆಯ ವಿಷಯದಲ್ಲಿ ಅದಿತಿ ಹೈದರಿ, ಮನಿಶಾ ಕೊಯಿರಲಾ, ಸಂಜೀದಾ ಶೇಖ್ ಅವರುಗಳ ನಟನೆ ಚೆನ್ನಾಗಿಯೇ ಇದೆ. ಆದರೆ ಪ್ರಮುಖ ಪಾತ್ರಧಾರಿ ಎಂಬಂತೇ ಬಿಂಬಿಸಲಾದ ಸ್ವತಃ ನಿರ್ದೇಶಕನ ಸಂಬಂಧಿಯೆನ್ನಲಾಗಿರುವ ‘Sharmin Segal’ ನಟನೆಯಂತೂ ಬಹಳ ಸಪ್ಪೆಯಾಗಿಬಿಟ್ಟಿದೆ. ಯಾವ ಭಾವವನ್ನೂ ಆಕೆ ಪರಿಣಾಮಕಾರಿಯಾಗಿ ತೋರಿಲ್ಲ! ತೀರಾ ಸಾಮಾನ್ಯ ಪಾತ್ರವೊಂದಕ್ಕೆ ಬಹಳ ದುಬಾರಿ ಕಥೆ ಹೊದೆಸಿಬಿಟ್ಟಂತಾಗಿದೆ. ರಿಚಾ ಚಡ್ಡಾ ನಟನೆಯ Lajjo ಪಾತ್ರವಂತೂ ಅನಗತ್ಯವಾಗಿ ನಡುವೆ ತುರುಕಿಸಿದಂತಿದೆ! ಇದ್ದುದರಲ್ಲೇ ಬಹಳ ಗಮನ ಸೆಳೇದದ್ದು ಉಸ್ತಾದ್ ಮಾತ್ರಧಾರಿಯಾದ Indresh mallik ಅವರ ನಟನೆ. ಹಾಗೆಯೇ ‘ಹಮೆ ದೇಖನಿ ಹೈ ಆಝಾದಿ.." ಹಾಡು ಬಹಳ ಇಂಪಾಗಿದೆ ಮತ್ತು ಅದರ ಅರ್ಥವೂ ಮಾರ್ಮಿಕವಾಗಿದೆ. ಹಿಂದಿ ಅದರಲ್ಲೂ ಉರ್ದು ಭಾಷೆ ಚೆನ್ನಾಗಿ ಅರ್ಥವಾಗುವವರು ಸರಾಗವಾಗಿ ನೋಡಬಹುದು. ನನಗೆ ಮೊದಲಿನಿಂದಲೂ ಶಾಯರಿ, ಗಝಲ್ ಹುಚ್ಚಿದ್ದರಿಂದ ಆಸ್ಥೆಯಿಂದ ನೋಡಲು ಹೊರಟಿದ್ದು, ಆದರೆ ಅದೂ ಇಲ್ಲಿ ನಿರಾಸೆಯೇ ಆಯಿತು ಅನ್ನಬಹುದು.

Appa I Love You Review: ಅಪ್ಪನ ಕಣ್ಣೀರಲ್ಲಿ ಮಗನ ಜೀವನ ಜೋಕಾಲಿ

ಒಟ್ಟಿನಲ್ಲಿ ಐದು ಎಪಿಸೋಡಿಗೂ ಹೆಚ್ಚೆನ್ನಿ ಸಿಬಿಡುವ ಕಥೆಯೊಂದನ್ನು ಎಂಟು ಎಪಿಸೋಡ್‌ಗಳವರೆಗೆ ಎಳೆದೆಳೆದು ತಯಾರಿಸಿದ್ದಾರೆ. ನಾನಂತೂ ಬಹಳಷ್ಟನ್ನು ಓಡಿಸಿ ಓಡಿಸಿಯೇ ನೋಡಿದ್ದು. ಅದೂ ನಾನು ಮೆಚ್ಚುವ ಬನ್ಸಾಲಿಯವರ ನಿರ್ದೇಶನದ ವೆಬ್ ಸೀರೀಸ್, ಏನೋ ಇದ್ದಿರಬಹುದು ಎಂಬ ಕುತೂಹಲಕ್ಕಾಗಿ. ಆದರೆ ಹೆಚ್ಚು ನಿರಾಸೆಯೇ ಆಯಿತು. ಇದರ ಬದಲು ಈಗಾಗಲೇ ಮೂರು ಬಾರಿ ನೋಡಿರುವ Shyam Benagal ಅವರ ಸುಪ್ರಸಿದ್ಧ ‘Mandi’ ಚಲನಚಿತ್ರವನ್ನು (ಇದೇ ಕಥೆಯನ್ನೊಳಗೊಂಡ) ಇನ್ನೂ ಒಂದು ಸಲ ನೋಡಿ ಬಿಡಬಹುದು ಅನ್ನಿಸಿತು.

click me!