ಕರಾಲಿ ಸಿನಿಮಾ ವಿಮರ್ಶೆ; ಕರ್ರಾಲಿ... ಡಾ!

By Suvarna Web DeskFirst Published May 20, 2017, 3:09 PM IST
Highlights

ನಿರ್ದೇಶಕರ ವಸ್ತುವಿನ ಆಯ್ಕೆ ಚೆನ್ನಾಗಿದೆ. ಆದರೆ ನಿರೂಪಣೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಸಂಗೀತ ಹಾಗೂ ಛಾಯಾಗ್ರಹಣದಲ್ಲೂ ಸಾಕಷ್ಟು ದೋಷಗಳಿವೆ. ಅದು ಚಿತ್ರದ ವೇಗಕ್ಕೆ ಅಡ್ಡಿ ಆಗುತ್ತದೆ. ಹಿನ್ನೆಲೆ ಸಂಗೀತ ಅನೇಕ ಬಾರಿ ಕಿರಿಕಿರಿ ಎನಿಸುತ್ತದೆ.

ಚಿತ್ರ: ಕರಾಲಿ
ತಾರಾಗಣ: ಸಾಹಿಲ್‌, ವಿಕಾಸ್‌, ಪ್ರೇರಣಾ, ಶಾಲಿನಿ ಭಟ್‌, ವೈದ್ಯ
ನಿರ್ದೇಶನ: ದಕ್ಷಿಣ ಮೂರ್ತಿ
ನಿರ್ಮಾಣ: ದಕ್ಷಿಣ ಮೂರ್ತಿ
ಸಂಗೀತ: ಆರ್ಯಮಾನ್‌
ಛಾಯಾಗ್ರಹಣ: ಪವನ್‌ ಕರ್ಕೇರಾ

ರೇಟಿಂಗ್‌: ***

ಗಾಂಧಿನಗರಕ್ಕೇ ಭೂತ ಹಿಡಿಯುವಷ್ಟು ಹಾರರ್‌ ಸಿನಿಮಾಗಳು ಬಂದುಹೋಗಿವೆ. ಹೆಚ್ಚು ಬಂಡವಾಳ ಬೇಕಿಲ್ಲ ಎನ್ನುವುದರಾಚೆ ಪ್ರತಿಭೆಯ ಪ್ರದರ್ಶನಕ್ಕೆ ಅವೇ ಸೂಕ್ತ ವೇದಿಕೆ ಎನ್ನುವುದು ಹೊಸಬರ ನಂಬಿಕೆ. ‘ಕರಾಲಿ' ಕೂಡ ಅಂಥದ್ದೇ ಪ್ರಯತ್ನ. ಹಾಗಂತ ಇದೇನು ಪೂರ್ಣ ಪ್ರಮಾಣದ ಭೂತದ ಕತೆಯಲ್ಲ. ಒಂದು ಆತ್ಮದ ಕತೆ. ಹೆಣ್ಣೂ ಅಲ್ಲದ, ಗಂಡೂ ಅಲ್ಲದ ತಪ್ಪಿಗೆ ಹೆಣ್ಣಿನ ಗುಣವಿದ್ದರೂ ತಾಯಿಯಾಗದ, ಪ್ರೀತಿಯಿದ್ದರೂ ಹೆಣ್ತನದ ಅನುಭವ ಕಾಣದ ಒಬ್ಬ ಮಂಗಳಮುಖಿಯ ನೋವಿನ ಬದುಕೇ ಕಥಾವಸ್ತು. ಆಕೆಯ ನೋವನ್ನು ತೆರೆಮೇಲೆ ತೋರಿಸಲು ನಿರ್ದೇಶಕರು ಹಾರರ್‌ ಜಾಡಿಗೆ ಜಾರಿದ್ದು ವಿಶೇಷ ಮತ್ತು ಅದೇ ದೋಷ.

ಯಾಕಂದರೆ ಫ್ಲ್ಯಾಷ್‌'ಬ್ಯಾಕ್‌'ನಲ್ಲಿ ಬರುವ ಕಾಡಿಸುವಿಕೆ ಅದರ ಮೊದಲರ್ಧದ ಹಾರರ್‌ ದೃಶ್ಯಗಳಲ್ಲಿ ಕಾಣುವುದಿಲ್ಲ. ಕರ್ಕಶವಾದ ಶಬ್ದ, ಬಾಗಿಲು ತೆರೆಯುವುದು- ಮುಚ್ಚುವುದೇ ಹಾರರ್‌ ಎನ್ನುವ ಅನುಭವ ಪ್ರೇಕ್ಷಕರಲ್ಲಿ ಕಿರಿಕಿರಿ ತರಿಸುತ್ತದೆ. ಇಷ್ಟಾಗಿಯೂ ಮಂಗಳಮುಖಿ ಊರ್ಮಿಳಾ ನೋವಿನಗಾಥೆ ಮನ ಕಲುಕುತ್ತದೆ. ಪ್ರೀತಿ, ಪ್ರೇಮದ ನೆರಳಲ್ಲಿ ಮಂಗಳಮುಖಿ ನಿಮ್ಮ ಮುಂದೆ ನಿಲ್ಲುತ್ತಾಳೆ. ಯಾಕೆ ಆಕೆಗೂ ಪ್ರೀತಿ ಸಿಗಲಿಲ್ಲ ಎನ್ನುವ ನೋವು ನೋಡುಗನ ಮನಸ್ಸಿಗೆ ನಾಟುತ್ತದೆ. ಅದೇ ಈ ಚಿತ್ರದ ಹೈಲೆಟ್ಸ್‌. ಉಳಿದಂತೆ ಹಾರರ್‌ ಅನ್ನುವುದೇ ಚಿತ್ರದ ವೀಕ್‌'ನೆಸ್‌. ಮೊದಲರ್ಧ ಹಾರರ್‌ ಅನುಭವ. ಕತೆಗೆ ಥ್ರಿಲ್ಲಿಂಗ್‌ ಎಂಟ್ರಿ ಇರಲಿ ಅಂತ ನಾಯಕ ವೇದ್‌ ದೆವ್ವದ ಮುಖವಾಡ ಹಾಕಿ, ತನ್ನ ಭಾವಿ ಪತ್ನಿ ನಿಹಾರಿಕಾಗೆ ಶಾಕ್‌ ನೀಡುತ್ತಾನೆ. ಅದು ತಮಾಷೆ ಮಾತ್ರ. ಮುಂದೆ ಅದೇ ನಿಜವಾಗುತ್ತದೆ. ಅಲ್ಲಿಂದ ಕತೆ ಹಾರರ್‌'ಗೆ ತೆರೆದುಕೊಳ್ಳುತ್ತದೆ. 

ನಾಯಕ ವೇದ್‌ ಹಾಗೂ ನಾಯಕಿ ನಿಹಾರಿಕಾಗೆ ಎಂಗೇಜ್‌'ಮೆಂಟ್‌ ಆಗುತ್ತದೆ. ಅಲ್ಲಿಂದ ಅವರಿಬ್ಬರ ನಡುವೆ ಮತ್ತೊಂದು ಪಾತ್ರದ ಎಂಟ್ರಿ. ಅದು ಊರ್ಮಿಳಾ ಆತ್ಮ. ಅದರ ದೃಷ್ಟಿ ನಾಯಕನ ಮೇಲೆ. ನಿಹಾರಿಕಾಳ ವೇಷದಲ್ಲಿ ಬರುತ್ತದೆ. ನಿಹಾರಿಕಾ ಮನೆಯಲ್ಲಿದ್ದರೂ, ಅವಳ ರೂಪದಲ್ಲಿಯೇ ವೇದ್‌ ಎದುರು ಹಾಜರಾಗುತ್ತದೆ. ಅದು ವೇದ್‌'ಗೆ ಗೊತ್ತೇ ಆಗುವುದಿಲ್ಲ. ಅದು ಗೊತ್ತಾಗುವ ಹೊತ್ತಿಗೆ ದೊಡ್ಡದೊಂದು ಅನಾಹುತದ ಸೂಚನೆ ಸಿಗುತ್ತದೆ. ಅಲ್ಲಿಂದ ಪರಿಹಾರಕ್ಕೆ ಹುಡುಕುವಾಗ ಕತೆ ಇನ್ನೊಂದು ಕಡೆ ತಿರುಗುತ್ತದೆ. ಕರಾಲಿ ಅಂದ್ರೇನು ಎನ್ನುವುದು ಆಗ ಗೊತ್ತಾಗುತ್ತದೆ. ಆತ್ಮದ ರೂಪದಲ್ಲಿ ತಿರುಗಾಡುತ್ತಿರುವ ಹೆಣ್ಣು ಕೆಟ್ಟವಳಾಗುವ ಮುನ್ನವೇ ಆಕೆಯನ್ನು ಬಂಧಿಸಬೇಕೆನ್ನುವ ಹೋರಾಟ ಅದು. ಆ ಕಾರಣಕ್ಕೆ ಮಂಗಳಮುಖಿ ಊರ್ಮಿಳಾ ಆತ್ಮ ಅಲ್ಲಿ ಪ್ರಧಾನವಾಗುತ್ತದೆ. ಆಕೆ ಅವರಿಬ್ಬರ ನಡುವೆ ಯಾಕೆ ಬಂತು? ಊರ್ಮಿಳಾ ಆತ್ಮಕ್ಕೂ ವೇದ್‌'ಗೂ ಸಂಬಂಧವೇನು? ಅದು ಚಿತ್ರದ ಕುತೂಹಲದ ಸಂಗತಿ. 

ಅದೆಷ್ಟೋ ಮಂದಿ ಮಂಗಳಮುಖಿಯರು, ತಾವು ಕೂಡ ಇತರರಂತೆ ಪ್ರೇಯಸಿ ಆಗಿ, ಮಡದಿಯಾಗಿ, ತಾಯಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಕೊರುಗುತ್ತಿದ್ದಾರೆ. ಅವರೆಲ್ಲರ ಪ್ರತಿರೂಪ ಇವಳು. ಈ ನಿಟ್ಟಿನಲ್ಲಿ ನಿರ್ದೇಶಕರ ವಸ್ತುವಿನ ಆಯ್ಕೆ ಚೆನ್ನಾಗಿದೆ. ಆದರೆ ನಿರೂಪಣೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಸಂಗೀತ ಹಾಗೂ ಛಾಯಾಗ್ರಹಣದಲ್ಲೂ ಸಾಕಷ್ಟು ದೋಷಗಳಿವೆ. ಅದು ಚಿತ್ರದ ವೇಗಕ್ಕೆ ಅಡ್ಡಿ ಆಗುತ್ತದೆ. ಹಿನ್ನೆಲೆ ಸಂಗೀತ ಅನೇಕ ಬಾರಿ ಕಿರಿಕಿರಿ ಎನಿಸುತ್ತದೆ. ಇಲ್ಲಿ ಹೆಚ್ಚು ಪಾತ್ರಧಾರಿಗಳೇ ಇಲ್ಲ. ಇರುವುದೇ ನಾಲ್ವರು. ನಾಯಕನಾಗಿ ಸಾಹಿಲ್‌, ನಾಯಕಿ ಪ್ರೇರಣಾ, ಊರ್ಮಿಳಾ ಪಾತ್ರದಲ್ಲಿ ಶಾಲಿನಿ ಭಟ್‌ ಹಾಗೂ ಚಂಚಲ್‌ ಪಾತ್ರದಲ್ಲಿ ವಿಕಾಸ್‌ ಬಣ್ಣ ಹಚ್ಚಿದ್ದಾರೆ. ಅವರೆಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕತೆಯ ಕಾರಣಕ್ಕೆ ಹೊಸಬರ ಪಯತ್ನ ಹಿಡಿಸುತ್ತದೆ.

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ
epaper.kannadaprabha.in

click me!