‘ಮಿಷನ್‌ ಶಕ್ತಿ’ ಬಳಿಕವೂ ದೋಸ್ತಿಗಳಿಗೆ ಕಾರ್ಯಕರ್ತರ ಅಸಹಕಾರ ಆತಂಕ!

By Web DeskFirst Published Apr 2, 2019, 8:00 AM IST
Highlights

‘ಮಿಷನ್‌ ಶಕ್ತಿ’ ಬಳಿಕವೂ ದೋಸ್ತಿಗಳಿಗೆ| ಕಾರ್ಯಕರ್ತರ ಅಸಹಕಾರ ಆತಂಕ!| ಮಿತ್ರಪಕ್ಷಗಳಿಗೆ ಕಾರ್ಯಕರ್ತರನ್ನು ಒಂದುಗೂಡಿಸುವ ಸವಾಲು| ಬೆಂಗಳೂರಲ್ಲಿ ಜಂಟಿ ಸಮಾವೇಶ ಮೂಲಕ ಒಗ್ಗಟ್ಟು ಪ್ರದರ್ಶಿಸಿದ ಕೈ-ದಳ ನಾಯಕರು| ಆದರೆ, ತಳಮಟ್ಟದಲ್ಲಿ ಕಾರ್ಯಕರ್ತರ ವಿರೋಧದ ಭೀತಿಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ 

ಬೆಂಗಳೂರು[ಏ.02]: ಲೋಕಸಭೆ ಚುನಾವಣೆ ಸಮರದಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳು ಬೃಹತ್‌ ಸಮಾವೇಶದ ಮೂಲಕ ಪರಸ್ಪರ ಸಹಕಾರಕ್ಕೆ ಶಪಥ ಮಾಡಿದರೂ ತಳಮಟ್ಟದಲ್ಲಿ ಮಾತ್ರ ಉಭಯ ಪಕ್ಷಗಳ ಕಾಯಕರ್ತರ ನಡುವಿನ ಸಾಂಪ್ರದಾಯಿಕ ಭಿನ್ನಮತ ಮಾಯವಾಗಿಲ್ಲ.

ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೇರಿದಂತೆ ಉಭಯ ಪಕ್ಷಗಳ ಮುಖಂಡರು ರಾಜ್ಯ ಮಟ್ಟದಲ್ಲಿ ಪರಸ್ಪರ ಸಹಕಾರದ ರಣಕಹಳೆಯನ್ನೇನೊ ಮೊಳಗಿಸಿದ್ದಾರೆ. ಆದರೆ, ತಳಮಟ್ಟದ ಕಾರ್ಯಕರ್ತರ ನಡುವಿನ ಅಭಿಪ್ರಾಯ ಇರುವ ವಾಸ್ತವಾಂಶವೇ ಬೇರೆಯಾಗಿದ್ದು, ಅಂತರಿಕವಾಗಿ ‘ಅಸಹಕಾರ’ ಚಳವಳಿ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದು ಜೆಡಿಎಸ್‌ ಪಾಳೆಯದಲ್ಲಿ ಆತಂಕವನ್ನೇ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ 28 ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಾಬಲ್ಯ ಇರುವುದು ಹಳೇ ಮೈಸೂರು ಭಾಗದಲ್ಲಿ ಹೆಚ್ಚು. ಇನ್ನುಳಿದಂತೆ ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ ಗಮನಿಸಿದರೆ ರಾಯಚೂರು ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪಲ್ಪ ಮಟ್ಟಿನ ಪಾರುಪತ್ಯ ಕಾಣಬಹುದು. ಮುಂಬೈ-ಕರ್ನಾಟಕ ಭಾಗದಲ್ಲಿ ಬೀದರ್‌, ಹುಬ್ಬಳ್ಳಿ-ಧಾರವಾಡದಲ್ಲಿ ಪಕ್ಷದ ಪ್ರಭಾವ ಸ್ಪಲ್ಪ ಕಡಮೆಯೇ ಇದೆ. ಕರಾವಳಿ ಭಾಗದಲ್ಲಂತೂ ಜೆಡಿಎಸ್‌ ಹೇಳಿಕೊಳ್ಳುವಂತಹ ಸ್ಥಿತಿಯಲ್ಲೇನು ಇಲ್ಲ. ಹೆಚ್ಚಿನ ಪಾರುಪತ್ಯ ಇರುವ ಹಳೇ ಮೈಸೂರು ಭಾಗವೇ ಜೆಡಿಎಸ್‌ಗೆ ಮಗ್ಗಲು ಮುಳುವಾಗಿದ್ದು, ಆ ಭಾಗದಲ್ಲಿಯೇ ಅಸಹಕಾರ ಚಳವಳಿ ಹೆಚ್ಚಿದೆ. ಇದು ದಳಪತಿಗಳನ್ನು ನಿದ್ದೆಗೆಡಿಸಿದೆ ಎಂದು ತಿಳಿದು ಬಂದಿದೆ.

ಒಗ್ಗೂಡದ ‘ವೈರಿ’ ಮನಸುಗಳು:

ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌-ಜೆಡಿಎಸ್‌ ಪ್ರಬಲ ವಿರೋಧಿಗಳು. ರಾಜ್ಯಮಟ್ಟದ ನಾಯಕರು ತಮ್ಮ ಅನುಕೂಲಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಎಂಬುದು ಕಾರ್ಯಕರ್ತರ ವಾದ. ಇದು ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.

‘ಚುನಾವಣೆ ವೇಳೆ ಬದ್ಧ ವೈರಿಗಳಂತೆ ಕೆಲಸ ಮಾಡಿದ ಕಾರ್ಯಕರ್ತರು ಇದೀಗ ಒಗ್ಗೂಡಿ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಒಲ್ಲದ ಮನಸ್ಸಿನಲ್ಲಿಯೇ ಕೆಲವರು ಪ್ರಚಾರಕ್ಕಾಗಿ ಹೋಗಲು ಅಣಿಯಾಗಿದ್ದಾರೆ. ಸಾಂಪ್ರದಾಯಿಕ ವಿರೋಧಿ ಕ್ಷೇತ್ರಗಳಲ್ಲಿ ಒಂದಾಗಿ ಕೆಲಸ ಮಾಡುವುದು ಸುಲಭವಲ್ಲ’ ಎಂಬುದು ಸ್ಥಳೀಯಮಟ್ಟದ ನಾಯಕರ ಅಭಿಮತ.

ಜೆಡಿಎಸ್‌ನವವರೂ ದೂರ:

ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರೂ ಅಂತರ ಕಾಯ್ದುಕೊಳ್ಳಲು ಚಿಂತನೆ ನಡೆಸಿದ್ದಾರೆ. ಅಂತೆಯೇ ಜೆಡಿಎಸ್‌ ಕಣದಲ್ಲಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರು ದೂರ ಇರುವ ಬಗ್ಗೆ ಆಲೋಚನೆ ನಡೆಸಿದ್ದಾರೆ ಎಂಬ ಮಾಹಿತಿಯ ಲಭಿಸಿದೆ. ಕೆಲವೆಡೆ ಮಾತ್ರ ಅನಿವಾರ್ಯವಾಗಿ ಉಭಯ ಪಕ್ಷಗಳ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಇದು ಬಿಜೆಪಿಗೆ ಲಾಭವಾಗಿ ಪರಿಣಮಿಸಬಹುದೇ ಎಂಬ ಆತಂಕ ಜೆಡಿಎಸ್‌ ನಾಯಕರದ್ದು.

ಮಿತ್ರಪಕ್ಷಗಳ ನಡುವಿನ ಮುಸುಕಿನ ಗುದ್ದಾಟ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಉಭಯ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಜೆಡಿಎಸ್‌ ಪರ ಅಭ್ಯರ್ಥಿಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದು ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂಬ ನಿರಾಸೆಯ ಮಾತುಗಳು ಜೆಡಿಎಸ್‌ನ ಸ್ಥಳೀಯ ಮಟ್ಟದ ನಾಯಕರಿಂದ ಕೇಳಿ ಬರುತ್ತಿವೆ.

ಸಮಸ್ಯೆಗೆ ಉದಾಹರಣೆ

1. ಹಾಸನ: ಕಾಂಗ್ರೆಸ್‌ನಿಂದ ವಲಸೆ ಹೋದ ಎ.ಮಂಜು ಬಿಜೆಪಿ ಅಭ್ಯರ್ಥಿ. ಪಕ್ಷಕ್ಕೆ ಟಿಕೆಟ್‌ ಸಿಗದ ಕೋಪದಲ್ಲಿ ಕಾರ್ಯಕರ್ತರು ಮಂಜು ಬೆಂಬಲಿಸುತ್ತಾರೋ ಎಂಬ ಆತಂಕ

2. ಮಂಡ್ಯ: ಕಾಂಗ್ರೆಸ್ಸಲ್ಲೇ ಇದ್ದ ಅಂಬರೀಷ್‌ ಪತ್ನಿ ಸುಮಲತಾ ಎದುರಾಳಿ. ಇವರಿಗೆ ಬಿಜೆಪಿ ಬೆಂಬಲ. ಇಲ್ಲೂ ತಳಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರು ಕೈಕೊಡುವ ಭೀತಿ

3. ತುಮಕೂರು: ಕಾಂಗ್ರೆಸ್‌ ಸಂಸದ ಮುದ್ದಹನುಮೇಗೌಡ ಬಂಡೆದ್ದಿದ್ದ ಕ್ಷೇತ್ರದಲ್ಲಿ ದೇವೇಗೌಡ ಸ್ಪರ್ಧೆ. ಮೇಲ್ನೋಟಕ್ಕೆ ಬಂಡಾಯ ಶಮನಗೊಂಡಿದ್ದರೂ ಒಳೇಟು ಚಿಂತೆ

4. ಮೈಸೂರು: ಬಿಜೆಪಿಯಿಂದ ವಲಸೆ ಬಂದ ವಿಜಯಶಂಕರ್‌ ಕಾಂಗ್ರೆಸ್‌ ಅಭ್ಯರ್ಥಿ. ಕೆಲ ಜೆಡಿಎಸ್‌ ನಾಯಕರೇ ಪ್ರಚಾರಕ್ಕೆ ಬರುತ್ತಿಲ್ಲ. ಇನ್ನು ಕಾರ್ಯಕರ್ತರೇನು ಮಾಡ್ತಾರೆ?

5. ರಾಯಚೂರು: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್‌ ನಾಯಕ್‌ ಕಾಂಗ್ರೆಸ್‌, ಜೆಡಿಎಸ್ಸಲ್ಲಿ ಇದ್ದವರು. ಅಮರೇಶ್‌ಗೆ ಅವರಿಗೆ ಸ್ಥಳೀಯ ಕಾಂಗ್ರೆಸ್ಸಿಗರೇ ಸಹಕರಿಸುವ ಆತಂಕ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!