ಚುನಾವಣೆ ಬಳಿಕ ಚೋರ್‌ ಬಹಿರಂಗ : ಏ.23ರ ಬಳಿಕ ರಾಜ್ಯ ಸರ್ಕಾರ ಪತನ

By Web DeskFirst Published Apr 13, 2019, 3:33 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ನಾಯಕರ ಬಿರುಸಿನ ಪ್ರಚಾರ ನಡೆಯುತ್ತಿದೆ. ಈ ವೇಳೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸದಾನಂದಗೌಡ ಅವರು ರಾಜ್ಯ ರಾಜಕಾರಣದ ಬಗ್ಗೆ ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು :  ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರನ್ನು ‘ಚೌಕಿದಾರ್‌ ಚೋರ್‌ ಹೈ’ (ಕಾವಲುಗಾರ ಕಳ್ಳ) ಎಂದು ಜರೆದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಕಾಮನ್‌ಸೆನ್ಸ್‌ ಇಲ್ಲ. ಸಂವಿಧಾನಿಕ ಹುದ್ದೆಯಲ್ಲಿರುವವರ ಕುರಿತು ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಟೀಕಾಪ್ರಹಾರ ನಡೆಸಿದ್ದಾರೆ.

ಶುಕ್ರವಾರ ಬೆಂಗಳೂರು ಪ್ರೆಸ್‌ಕ್ಲಬ್‌ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಹುದ್ದೆಗೆ ಅಗೌರವ ನೀಡುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿರುವ ಮೋದಿ ಅವರನ್ನು ಚೋರ್‌ ಎಂದು ಜರೆಯಲಾಗುತ್ತಿದೆ. ಚುನಾವಣೆಯಲ್ಲಿ ಯಾರು ಚೌಕಿದಾರ್‌, ಯಾರು ಚೋರ್‌ ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ಕಾಯಬೇಕಾದ ಅಗತ್ಯ ಇಲ್ಲ. ಏ.23ರಂದು ಮತದಾನ ಮುಗಿಯುತ್ತಿದ್ದಂತೆ ಕಾಂಗ್ರೆಸ್‌-ಜೆಡಿಎಸ್‌ ಮಿತ್ರ ಪಕ್ಷಗಳ ಒಳಜಗಳ ಮತ್ತಷ್ಟುತೀವ್ರಗೊಳ್ಳಲಿದೆ. ಕಿತ್ತಾಟದಿಂದ ಸರ್ಕಾರ ಪತನವಾಗಲಿದ್ದು, ಐದು ವರ್ಷದವರೆಗೆ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುವುದಿಲ್ಲ. ಚುನಾವಣಾ ಪ್ರಚಾರದಲ್ಲಿಯೂ ಅವರು ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಹಾದಿಬೀದಿಯಲ್ಲಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.

ಸದಾನಂದಗೌಡ ಅವರು ಸಂವಾದ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಇತರ ಅಂಶಗಳ ವಿವರದ ಪ್ರಶ್ನೋತ್ತರ ಇಲ್ಲಿದೆ:

* ಬಿಜೆಪಿ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿ ಹೆಸರಲ್ಲಿ ಚುನಾವಣೆ ಎದುರಿಸದೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಚುನಾವಣೆ ಎದುರಿಸುತ್ತಿದ್ದಾರಲ್ಲ?

- ಹೌದು, ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಆದರೆ, ಅದೊಂದೇ ಮಾನದಂಡವಲ್ಲ, ನಮ್ಮ ಅಭಿವೃದ್ಧಿಯ ಕಾರ್ಯಗಳನ್ನು ಸಹ ಜನತೆಯ ಮುಂದಿಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮರ್ಥ ನಾಯಕತ್ವ ಗುಣಗಳುಳ್ಳ ವ್ಯಕ್ತಿಯ ಅಗತ್ಯ ಇದೆ. ಅದನ್ನು ನರೇಂದ್ರ ಮೋದಿ ಅವರಲ್ಲಿ ಕಾಣಬಹುದು. ನಾಯಕತ್ವವನ್ನು ಮುಂದಿಟ್ಟುಕೊಂಡು ಹೋಗುವುದರಲ್ಲಿ ತಪ್ಪೇನು? ಕಾಂಗ್ರೆಸ್‌ನವರು ಮಾಡುತ್ತಿಲ್ಲವೇ? ರಾಷ್ಟ್ರಕ್ಕೆ ಸುಭದ್ರ ಸರ್ಕಾರ ಬೇಕು. ಅದನ್ನು ಬಿಜೆಪಿಯಿಂದ ನೀಡಲು ಸಾಧ್ಯ.

* ಪ್ರಧಾನಿ ನರೇಂದ್ರ ಮೊದಿ ಸಹ ಪ್ರತಿಪಕ್ಷಗಳ ವಿರುದ್ಧ ಟೀಕೆ ಪ್ರಹಾರ ಮಾಡುತ್ತಿದ್ದಾರೆಯೇ ಹೊರತು ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸುತ್ತಿಲ್ಲ?

- ಅಂಕಿ ಅಂಶಗಳನ್ನು ನೋಡಿದರೆ ಸರ್ಕಾರದ ಸಾಧನೆಗಳ ಬಗ್ಗೆ ಗೊತ್ತಾಗುತ್ತದೆ. ಅಭಿವೃದ್ಧಿಗೆ ಅನ್ವರ್ಥನಾಮವೆಂಬಂತೆ ಸರ್ಕಾರ ಕೆಲಸ ಮಾಡುತ್ತಿದೆ. 2104ರಲ್ಲಿ ಅಭಿವೃದ್ಧಿಯಲ್ಲಿ 147ನೇ ರಾರ‍ಯಂಕ್‌ನಲ್ಲಿದ್ದ ಭಾರತ ಇದೀಗ 77ನೇ ರಾರ‍ಯಂಕ್‌ಗೆ ಬಂದಿದೆ. ಇದು ಅಭಿವೃದ್ಧಿಯ ಸಂಕೇತವಲ್ಲವೇ? ಮೊದಲು ದೇಶ, ನಂತರ ಬೇರೆಯದು ಎಂಬ ಉದ್ದೇಶವನ್ನಿಟ್ಟುಕೊಂಡು ಆಡಳಿತ ನಡೆಸಲಾಗುತ್ತಿದೆ. ಕೇವಲ ಭಾಷಣ, ಪ್ರಣಾಳಿಕೆಯ ಮೇಲೆ ಚುನಾವಣೆಗೆ ಹೋಗುವುದಿಲ್ಲ. ಮಾಡಿರುವ ಕೆಲಸವನ್ನು ಮುಂದಿಟ್ಟುಕೊಂಡು ಹೋಗುತ್ತೇವೆ.

* ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಹೊಸತರಲ್ಲಿ ನಿಮಗೆ ಉತ್ತಮ ಖಾತೆ ಲಭ್ಯವಾಗಿತ್ತು. ನಂತರ ಖಾತೆ ಬದಲಾಗಿ ಹಿನ್ನಡೆ ಆಯಿತಲ್ಲವೇ?

- ಮಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯಕ್ಕೆ ಕೊಟ್ಟಕೊಡುಗೆಯಿಂದಾಗಿ ಮುಂಬಡ್ತಿ ದೊರೆಯಿತು. ಪ್ರಾಮಾಣಿಕತೆ ಮತ್ತು ಬದ್ಧತೆ ಇದ್ದರೆ ಅರ್ಹತೆ ಹಾಗೂ ಸಾಮರ್ಥ್ಯ ತಾನಾಗಿಯೇ ಬರುತ್ತದೆ. ಸಂಪುಟ ಪುನರ್‌ರಚನೆ ವೇಳೆ ಸಚಿವ ಸ್ಥಾನ ಬದಲಾಗುವುದು ಸಹಜ. ನನಗಿಂತ ನುರಿತ, ಅರ್ಹತೆ ಇರುವ ಸುರೇಶ್‌ ಪ್ರಭು ಅವರಿಗೆ ರೈಲ್ವೆ ಖಾತೆ ನೀಡಲಾಯಿತು. ಇದನ್ನು ಸಂತೋಷದಿಂದ ಸ್ವಾಗತಿಸಿದೆ.

* ಹಿಂದೆ ನೀವು ರೈಲ್ವೆ ಖಾತೆ ಮತ್ತು ಕಾನೂನು ಖಾತೆಗಳನ್ನು ಹೊಂದಿದ್ದಿರಿ. ರಾಜ್ಯಕ್ಕೆ ಯಾವ ಕೊಡುಗೆ ಕೊಟ್ಟಿದ್ದೀರಿ?

- ರೈಲ್ವೆ ದೇಶದ ಜೀವನಾಡಿ ಇದ್ದಂತೆ. ಬುಲೆಟ್‌ ಟ್ರೈನ್‌ ಹೊರತುಪಡಿಸಿ 21 ಹೊಸ ರೈಲುಗಳು ಕಾರ್ಯಾಚರಣೆ ಮಾಡುವಂತೆ ಕ್ರಮ ಕೈಗೊಂಡಿದ್ದೇನೆ. ನನಗಿಂತ ಮೊದಲು ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಎರಡು ಪಟ್ಟು ಅನುದಾನವನ್ನು ರಾಜ್ಯಕ್ಕೆ ತರಲು ಶ್ರಮಿಸಿದ್ದೇನೆ. ಇ-ಟಿಕೆಟ್‌ ವ್ಯವಸ್ಥೆ ಜಾರಿಯಿಂದ ಶೇ.70ರಷ್ಟುಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್‌ ಆಗುತ್ತವೆ. 11 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದ ಡಬ್ಲಿಂಗ್‌ ಮತ್ತು ವಿದ್ಯುದೀಕರಣಕ್ಕೆ ಒತ್ತು ನೀಡಿದ್ದೇನೆ. ಶ್ರೀರಂಗಪಟ್ಟದಲ್ಲಿನ ಟಿಪ್ಪು ಸುಲ್ತಾನ್‌ ನಿರ್ಮಿಸಿದ ಸ್ಮಾರಕವೊಂದನ್ನು 200 ಮೀಟರ್‌ ದೂರಕ್ಕೆ ಸ್ಥಳಾಂತರಿಸಲಾಗಿದೆ. ಅಮೆರಿಕದಿಂದ ತಂತ್ರಜ್ಞಾನವನ್ನು ತರಿಸಿ ಸ್ಥಳಾಂತರ ಮಾಡಲಾಯಿತು. ಕಾನೂನು ಸಚಿವನಾದ ಬಳಿಕ ಗೊಂದಲ ಮತ್ತು ಉಪಯೋಗಕ್ಕೆ ಬಾರದಂತಹ 1241 ಕಾನೂನುಗಳನ್ನು ತೆಗೆದುಹಾಕಲಾಯಿತು.

* ರಫೇಲ್‌ ಹಗರಣದ ಬಗ್ಗೆ ಬಿಜೆಪಿ ಪ್ರಸ್ತಾಪಿಸುತ್ತಿಲ್ಲ ಏಕೆ?

- ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಂಗವೇ ಅಂತಿಮ. ಸುಪ್ರೀಂಕೋರ್ಟ್‌ ರಫೇಲ್‌ ಡೀಲ್‌ನಲ್ಲಿ ಅವ್ಯವಹಾರ ನಡೆದಿಲ್ಲ ಎಂದು ತಿಳಿಸಿದೆ.

* ಅದೇ ನ್ಯಾಯಾಲಯ ಇದೀಗ ಮರುತನಿಖೆಗೆ ಆದೇಶ ನೀಡಿದೆ?

- ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ತಿರಸ್ಕೃತಗೊಂಡರೆ ಕೇಂದ್ರದ ಪರ ಎನ್ನುತ್ತೀರಿ. ನ್ಯಾಯಾಲಯವು ವಿಚಾರಣೆ ನಡೆಸಲಿದ್ದು, ಅಂತಿಮವಾಗಿ ಗೊತ್ತಾಗಲಿದೆ. ನ್ಯಾಯಾಲಯದಲ್ಲಿರುವ ಕಾರಣ ನಾನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ.

* ಮಂಡ್ಯದಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಿದ್ದೀರಿ. ಅದು ಪಕ್ಷಕ್ಕೆ ವರವೇ ಅಥವಾ ಶಾಪವೇ?

- ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಇಬ್ಬರ ವಿರುದ್ಧ ಮಲ್ಲಯುದ್ಧ ಮಾಡಬೇಕಾಗಿತ್ತು. ಅದಕ್ಕಿಂತ ಒಬ್ಬರ ವಿರುದ್ಧ ಮಲ್ಲಯುದ್ಧ ಮಾಡುವುದು ಲೇಸು. ಬೆಂಬಲ ನೀಡುವ ಮೂಲಕ ಮಲ್ಲಯುದ್ಧದಲ್ಲಿ ಪಕ್ಷದ ಶತ್ರುವನ್ನು ಮಣಿಸುವುದು ಸುಲಭವಾಗಲಿದೆ.

* ಪಕ್ಷದ ಮುಖಂಡ ಸಂತೋಷ್‌ ಅವರು ಜೀನ್ಸ್‌ ಮತ್ತು ಡಿಎನ್‌ಎ ವಿಚಾರ ಪ್ರಸ್ತಾಪಿಸಿದ್ದಾರೆ. ಆ ವಿಚಾರ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮಾತ್ರ ಸೀಮಿತವೇ?

-ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ಈ ಬಗ್ಗೆ ಗಮನಿಸಿದ್ದೇನೆ ಅಷ್ಟೆ. ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

* ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ. ಆಪರೇಷನ್‌ ಕಮಲ ಮತ್ತೊಮ್ಮೆ ಮಾಡಲಾಗುತ್ತದೆಯೇ?

- ಅದರ ಅಗತ್ಯ ಇಲ್ಲ. ಪ್ರಸಕ್ತ ವಿದ್ಯಮಾನ ಗಮನಿಸಿದರೆ ಏನು ಬೇಕಾದರೂ ಆಗಬಹುದು. ಚುನಾವಣಾ ಫಲಿತಾಂಶದವರೆಗೆ ಕಾಯಬೇಕಾದ ಅಗತ್ಯ ಇಲ್ಲ. ಏ.23ಕ್ಕೆ ಚುನಾವಣೆ ಮುಗಿಯಲಿದ್ದು, ನಂತರದಲ್ಲಿ ಮಿತ್ರ ಪಕ್ಷದವರೇ ಕಿತ್ತಾಡಿಕೊಂಡು ಸರ್ಕಾರವನ್ನು ಪತನಗೊಳಿಸಲಿದ್ದಾರೆ. ಬಹುಮತ ಪಡೆದಿರುವ ಬಿಜೆಪಿ ಮುಂದಿನ ನಡೆಯ ಬಗ್ಗೆ ನಿರ್ಧಾರ ಮಾಡಲಿದೆ.

* ಬೆಂಗಳೂರು ಉತ್ತರ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನೂ ಇಲ್ಲ ಎಂಬ ಆರೋಪವನ್ನು ಮಿತ್ರಪಕ್ಷಗಳು ಮಾಡುತ್ತಿವೆ?

- ನಾನು ಕ್ಷೇತ್ರಕ್ಕೆ ಮಾಡಿರುವ ಕೆಲಸದ ಬಗ್ಗೆ ಪ್ರಚಾರ ತೆಗೆದುಕೊಂಡಿಲ್ಲ. ಹೀಗಾಗಿ ಅಭಿವೃದ್ಧಿ ಕೆಲಸಗಳ ಬಗ್ಗೆ ಅವರಿಗೆ ಗೊತ್ತಿಲ್ಲ. ನಾನೇನು ಕೊಡುಗೆ ನೀಡಿದ್ದೇನೆ ಎಂಬುದಕ್ಕೆ ನನ್ನ ಕೆಲಸವೇ ಉತ್ತರ ನೀಡುತ್ತದೆ. ವೈಯಕ್ತಿಕ ಟೀಕೆ ಮಾಡುವ ರಾಜಕಾರಣ ನÜನಗೆ ಗೊತ್ತಿಲ್ಲ. ಬ್ಯಾಟರಾಯನಪುರ ಕ್ಷೇತ್ರಕ್ಕೆ 124 ಬಾರಿ ಭೇಟಿ ನೀಡಿ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ್ದೇನೆ. ರಾಜ್ಯ ಮತ್ತು ಕೇಂದ್ರದ ಕೊಂಡಿಯಾಗಿ ಕೆಲಸ ಮಾಡಿದ್ದೇನೆ.

* ಕೇಂದ್ರ ಸಚಿವರಾಗಿ, ಸಂಸದರಾಗಿ ನೀವು ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೀರಿ?

- ರಾಜ್ಯದ ಮತ್ತು ಕ್ಷೇತ್ರದ ಹಿತಾಸಕ್ತಿ ಬಂದಾಗ ರಾಜಕಾರಣ ಮೀರಿ ಕೆಲಸ ಮಾಡಿದ್ದೇನೆ. 2014-19ರ ಅವಧಿಯಲ್ಲಿ 2.36 ಲಕ್ಷ ಕೋಟಿ ರು. ಬಂದಿದೆ. ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ತರುವ ಪ್ರಯತ್ನ ಮಾಡಿದ್ದೇನೆ. ದಿವಂಗತ ಅನಂತಕುಮಾರ್‌ ಸೇರಿದಂತೆ ಬೆಂಗಳೂರಿನ ಸಂಸದರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಸೇನಾ ಭೂಮಿಯ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. 28 ವಿಚಾರಗಳ ಪೈಕಿ 21 ವಿಚಾರಗಳಿಗೆ ಪರಿಹಾರ ದೊರಕಿಸಿಕೊಡಲಾಗಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಸಹ ಮಾಡಿಕೊಂಡಿದ್ದಾರೆ. 70 ವರ್ಷದಿಂದ ಬಗೆಹರಿಯದಿರುವ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗಿದೆ.

* ಕ್ಷೇತ್ರಕ್ಕೆ ಸರಿಯಾದ ಅನುದಾನ ತಂದುಕೊಡುವಲ್ಲಿ ವಿಫಲರಾಗಿದ್ದೀರಿ ಎಂಬ ಆರೋಪಗಳು ಕೇಳಿಬಂದಿವೆ?

- ಈ ಚುನಾವಣೆಯಲ್ಲಿ ನನ್ನ ಎದುರಾಳಿಯಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಸಚಿವ ಕೃಷ್ಣಬೈರೇಗೌಡ ಅವರು ಎರಡು ತಿಂಗಳ ಹಿಂದೆ ಭೇಟಿ ಮಾಡಿ ಅನುದಾನ ಹೆಚ್ಚಳ ಕುರಿತು ಮಾತುಕತೆ ನಡೆಸಿದ್ದರು. ಕರ್ನಾಟಕ ಭವನದಲ್ಲಿ ಸಭೆ ಕರೆದರೆ ಯಾರೂ ಬರುವುದಿಲ್ಲ. ನೀವು ಕರೆಯಿರಿ ಎಂದು ನನಗೆ ಮನವಿ ಮಾಡಿದ್ದರು. ಹೀಗಾಗಿ ನನ್ನ ಮನೆಯಲ್ಲೇ ಸಭೆ ಕರೆದಿದ್ದೆ. ಅಲ್ಲಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವು ಮುಖಂಡರು ಆಗಮಿಸಿ ಚರ್ಚಿಸಿದ್ದರು. ನೇತೃತ್ವವನ್ನು ನಾನೇ ವಹಿಸಿಕೊಂಡಿದ್ದೆ. ಅನುದಾನವನ್ನೂ ತಂದಿದ್ದೇನೆ.

* ನಿಮ್ಮ ಎದುರಾಗಳಿ ಈ ಬಾರಿ ಪ್ರಬಲವಾಗಿದ್ದಾರೆ. ಗೆಲ್ಲುವ ವಿಶ್ವಾಸ ಇದೆಯೇ?

- ನನ್ನ ಕೆಲಸ ನೋಡಿ ಆಶೀರ್ವಾದ ಮಾಡುವಂತೆ ಜನರನ್ನು ಕೇಳುತ್ತಿದ್ದೇನೆ. ನನಗೆ ಅತಿವಿಶ್ವಾಸ ಇಲ್ಲ, ಆದರೆ ಆತ್ಮವಿಶ್ವಾಸ ಇದೆ. ಚುನಾವಣೆಯಲ್ಲಿ ಗೆಲ್ಲುತ್ತೇನೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!