ರಾಘವೇಂದ್ರ ಓಟಕ್ಕೆ ಬ್ರೇಕ್ ಹಾಕ್ತಾರಾ ಮಧು !

By Web DeskFirst Published Apr 18, 2019, 10:46 AM IST
Highlights

ಲೋಕಸಭಾ ಮಹಾ ಸಮರ ಕರ್ನಾಟಕದಲ್ಲಿ ಆರಂಭವಾಗಿದೆ. ಇತ್ತ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದ ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ನಡುವೆ ಹಣಾಹಣಿ ನಡೆಯುತ್ತಿದೆ. ಒಬ್ಬರಿಗೆ ಮೋದಿ ಅಲೆಯಿದ್ದರೆ, ಇನ್ನೊಬ್ಬರಿಗೆ ಮೈತ್ರಿ ಭಲವಿದೆ. 

ಶಿವಮೊಗ್ಗ :  ಮಲೆನಾಡಿನ ತಪ್ಪಲು ಶಿವಮೊಗ್ಗ ಕ್ಷೇತ್ರದಲ್ಲಿ ಬಿರು ಬೇಸಿಗೆಯ ಬಿಸಿಲ ಝಳದ ಜತೆ ಈಗ ಲೋಕಸಭಾ ಚುನಾವಣೆ ಕಾವು ಒಳಗೊಳಗೇ ತಟ್ಟಲಾರಂಭಿಸಿದ್ದು, ಮಾಜಿ ಮುಖ್ಯಮಂತ್ರಿಗಳಿಬ್ಬರ ಮಕ್ಕಳು ನೇರಾನೇರಾ ಹೋರಾಟಕ್ಕಿಳಿದಿದ್ದಾರೆ. ಹ್ಯಾಟ್ರಿಕ್ ಸಾಧನೆ ಹಾದಿಯಲ್ಲಿ ಬಿಜೆಪಿಯ ಹಾಲಿ ಸಂಸದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರ ನ್ನು ಕಟ್ಟಿ ಹಾಕಲು ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ.

ರಾಘವೇಂದ್ರ ಅವರದ್ದು 3 ನೇ ಗೆಲುವಿಗಾಗಿನ ಹೋರಾಟವಾದರೆ, ಮಧು ಬಂಗಾರಪ್ಪನವರದು ವಿಧಾನಸಭಾ ಚುನಾವಣೆ ಸೇರಿ ಒಂದು ವರ್ಷದಲ್ಲಿ 3 ನೇ ಸೋಲು ಮುಸುಕದಂತೆ ತಡೆಯುವ ಪ್ರಯತ್ನ. ರಾಘವೇಂದ್ರರಿಗೆ ಮೋದಿ ಹೆಸರಿನ ಜೊತೆ ತಂದೆ ಯಡಿಯೂರಪ್ಪನವರ ಅಭಯ ಹಸ್ತ, ಕೆ.ಎಸ್. ಈಶ್ವರಪ್ಪ ಅವರ ನಾಯಕತ್ವದಲ್ಲಿ ಏಳು ಜನ ಶಾಸಕರ ಸಂಘಟನಾತ್ಮಕ ಬೆಂಬಲ, ಸಂಘ ಪರಿವಾರದ ಸಂಘಟಿತ ನೆರವು, ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕೆಂಬ ಗುರಿ ಇಟ್ಟುಕೊಂಡ ಕಾರ್ಯಕರ್ತರ ದೊಡ್ಡ ಪಡೆ ಬೆನ್ನಿಗಿದೆ.

ಇನ್ನು ಮಧು ಬಂಗಾರಪ್ಪನವರಿಗೆ ತಂದೆ ದಿ. ಬಂಗಾರಪ್ಪನವರ ಹೆಸರಿನ ಜೊತೆ ಕುಮಾರಸ್ವಾಮಿ-ದೇವೇಗೌಡರ ಆಶೀರ್ವಾದ, ಡಿ.ಕೆ.ಶಿವಕುಮಾರ್ ದೂರದೃಷ್ಟಿಯ ಲೆಕ್ಕಾಚಾರ ಮತ್ತು ಕಾರ್ಯಕರ್ತರನ್ನು ಚುರುಕುಗೊಳಿಸುವ ಖಡಕ್ ಮಾತುಗಳು ನೆರವಾಗುತ್ತಿವೆ. ಕಾಂಗ್ರೆಸ್-ಜೆಡಿಎಸ್ ನಾಯಕ ರ ಮತ್ತು ಕಾರ್ಯಕರ್ತರ ನಡುವೆ ಅಷ್ಟೇನೂ ಗೊಂದಲವಿಲ್ಲದ ಸಂಘಟಿತ ಹೋರಾಟ, ಒಮ್ಮೆಯಾದರೂ ಬಿಜೆಪಿ ಭದ್ರಕೋಟೆ ಒಡೆಯಬೇಕೆಂಬ ಹಂಬಲದ ಸಾಥ್ ಇದೆ. 

ಕಳೆದ 2014 ರಲ್ಲಿ ಯಡಿಯೂರಪ್ಪ ತಾವೇ ಸ್ಪರ್ಧಿಸಿದಾಗ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಜೊತೆಗೆ ಜೆಡಿಎಸ್ ನಿಂದ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ಕುಮಾರ್ ಎದುರಾಳಿಯಾದರು. ಯಡಿಯೂರಪ್ಪ ಅತ್ಯಧಿಕ ಅಂತರದ ಮತಗಳಿಂದ ಗೆಲುವು ಸಾಧಿಸಿದರು. ನಂತರ ಸಂಸದನ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜ್ಯ ರಾಜಕೀಯಕ್ಕೆ ಇಳಿದ ಹಿನ್ನೆಲೆಯಲ್ಲಿ 2014 ರ ಲೋಕ ಉಪಚುನಾವಣೆಯಲ್ಲಿ ಮೈತ್ರಿಕೂಟದಿಂದ ಮಧು ಬಂಗಾರಪ್ಪ ಅಭ್ಯರ್ಥಿಯಾದರು. ಆಗ ತಮ್ಮ ಪುತ್ರ ರಾಘವೇಂದ್ರರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬಂದರು.

ಯಡಿಯೂರಪ್ಪರಿಗೂ ಪ್ರತಿಷ್ಠೆ ಈ ಚುನಾವಣೆ ಯಡಿಯೂರಪ್ಪ ಕುಟುಂಬ ಮತ್ತು ಮಧು ಬಂಗಾರಪ್ಪ ಇಬ್ಬರಿಗೂ ಬಹು ಮುಖ್ಯವಾದುದು. ಸದ್ಯಕ್ಕೆ ರಾಜ್ಯದಲ್ಲಿ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರ ತವರು ಜಿಲ್ಲೆಯ ಕ್ಷೇತ್ರ ಇದು ಎಂಬುದಷ್ಟೇ ಅಲ್ಲ, ತಮ್ಮ ಪುತ್ರನನ್ನೇ ಕಣಕ್ಕೆ ಇಳಿಸಿರುವುದರಿಂದ ಗೆಲ್ಲಿಸಿಕೊಂಡು ಬರುವುದು ಭವಿಷ್ಯದ ರಾಜಕೀಯಕ್ಕೆ ಬಹುಮುಖ್ಯ. ಇನ್ನೊಂದೆಡೆ ಮಧು 2014 ರ ವಿಧಾನಸಭಾ ಚುನಾವಣೆಯಲ್ಲಿ, ಬಳಿಕ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಸೋತಿದ್ದು, ಅವರ ರಾಜಕೀಯದ ದೃಷ್ಟಿಯಿಂದಲೂ ಗೆಲುವು ಅನಿವಾರ್ಯ. ಗೆಲ್ಲದಿದ್ದರೆ ಮತ್ತೆ 4 ವರ್ಷ ಕಾಯಬೇಕು. 

ರಾಜಕೀಯ ಬಲಾಬಲ ಜಿಪಂನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಅಧಿಕಾರ ಹಿಡಿದಿದ್ದರೂ, ಸಂಖ್ಯಾಬಲದ ದೃಷ್ಟಿಯಿಂದ ಬಿಜೆಪಿ ಮತ್ತು ಮೈತ್ರಿಕೂಟ ಬಹುತೇಕ ಸಮಬಲ ಹೊಂದಿದೆ. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 7 ರಲ್ಲಿ ಗೆದ್ದಿದ್ದು, ಕಾಂಗ್ರೆಸ್ ಒಂದರಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್‌ಗೆ ಒಂದೂ ಸ್ಥಾನವಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿಕಾರಿಪುರ, ಶಿವಮೊಗ್ಗ, ತೀರ್ಥಹಳ್ಳಿ, ಬೈಂದೂರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದ್ದರೆ, ಸೊರಬ, ಭದ್ರಾವತಿ ಮತ್ತು ಸಾಗರದಲ್ಲಿ ಮೈತ್ರಿಕೂಟ ಲೀಡ್ ಗಳಿಸಿತ್ತು. 

ಜಾತಿ ಲೆಕ್ಕಾಚಾರ 
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನೊಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರ ಜಾತಿಗಿಂತ ಸಿದ್ಧಾಂತಕ್ಕೇ ಹೆಚ್ಚು ಒಲಿದಿದ್ದರೂ, ರಾಜಕಾರಣಿಗಳು ಜಾತಿ ಲೆಕ್ಕಾಚಾರದ ಹಿಂದೆ ಬಿದ್ದಿದ್ದಾರೆ. ಪ್ರಮುಖ ಜಾತಿಗಳನ್ನು ಎಲ್ಲ ರಾಜಕೀಯ ಪಕ್ಷಗಳು ಇಬ್ಭಾಗ ಮಾಡಿಕೊಂಡು ಉಳಿದ ಜಾತಿಗಳನ್ನು ಸೆಳೆಯಲು ಇನ್ನಿಲ್ಲದ ತಂತ್ರ ಹೆಣೆಯುತ್ತಿವೆ. ಲಿಂಗಾಯತ, ಈಡಿಗ, ಮುಸ್ಲಿಂ, ಬ್ರಾಹ್ಮಣ, ಒಕ್ಕಲಿಗ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದವರು ಇಲ್ಲಿ ಬಹುಸಂಖ್ಯಾತರಿದ್ದು, ಲಿಂಗಾಯತರು, ಬ್ರಾಹ್ಮಣರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದು ಬಿಜೆಪಿ ಲೆಕ್ಕಾಚಾರ. ಈಡಿಗ, ಒಕ್ಕಲಿಗ ಮತಗಳು ಮೈತ್ರಿಕೂಟಕ್ಕೆ ಹೋಗುವ ಸಾಧ್ಯತೆ ಹೆಚ್ಚು ಎಂಬ ಲೆಕ್ಕಾಚಾರ ಎರಡೂ ಪಕ್ಷಗಳಲ್ಲಿದೆ. ಇದನ್ನು ಒಡೆಯುವ ಪ್ರಯತ್ನದಲ್ಲಿ ಬಿಜೆಪಿ ನಿರತವಾಗಿದೆ. 

ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ಮತಗಳು ಹಂಚಿ ಹೋಗಿದ್ದು, ನಿರ್ದಿಷ್ಟ ಪಕ್ಷದ ಒಲವು ಅಲ್ಲಿಲ್ಲ ಎಂಬುದನ್ನು ಒಪ್ಪುತ್ತಾರೆ. ಮುಸ್ಲಿಂ ಮತ್ತು ಕ್ರೈಸ್ತ ಮತಗಳು ಮೈತ್ರಿಕೂಟದ ಪರವಾಗಿ ದ್ದು, ಈಡಿಗ ಮತ್ತು ಒಕ್ಕಲಿಗ ಮತಗಳು ಒಡೆಯದೆ ತಮ್ಮ ಕಡೆಗಿರುವಂತೆ ನೋಡಿಕೊಳ್ಳಲು ಮೈತ್ರಿಕೂಟದ ನಾಯಕರು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯರನ್ನು ಮುಂದಿಟ್ಟು ಕೊಂಡು ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಡೀಕರಿ ಸುವ ಯತ್ನವೂ ನಡೆದಿದೆ. ಕಳೆದ ಚುನಾವಣೆಯಲ್ಲಿ ಈಡಿಗ ಮತಗಳು ಸಾರಾಸಗಟಾಗಿ ಮಧು ಅವರನ್ನು ಕೈ ಹಿಡಿಯಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಿದೆ.

ಉಭಯ ಪಾಳೆಯಗಳಲ್ಲೂ ತಂತ್ರಗಾರಿಕೆ
ಕ್ಷೇತ್ರದಲ್ಲಿ ಬಿಜೆಪಿಯ ಮತ ಮತ್ತು ಬಿಜೆಪಿಯೇತರ ಮತ ಸರಿ ಸುಮಾರು 50- 1.25 ಲಕ್ಷದವರೆಗೆ ವ್ಯತ್ಯಾಸವಾಗುತ್ತಿದೆ. 2009 ರ ಚುನಾವಣೆಯಲ್ಲಿ ಸುಮಾರು 52 ಸಾವಿರ ಮತಗಳ  ಅಂತರದಿಂದ ರಾಘವೇಂದ್ರ ಗೆದ್ದಿದ್ದರು. 2014 ರಲ್ಲಿ ಯಡಿಯೂರಪ್ಪ ರಾಜ್ಯದಲ್ಲೇ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಎಂದು ಬೀಗಿದರೂ, ಬಿಜೆಪಿಯೇತರ ಮತಗಳನ್ನು ಒಟ್ಟುಗೂಡಿಸಿದರೆ ಈ ವ್ಯತ್ಯಾಸ ಸುಮಾರು 1.20 ಲಕ್ಷದಷ್ಟಾಗುತ್ತದೆ. ಆದರೆ 2018 ರ ಉಪಚುನಾವಣೆಯಲ್ಲಿ ಈ ವ್ಯತ್ಯಾಸ ಪುನಃ 52 ಸಾವಿರಕ್ಕೆ ಇಳಿಯಿತು. ಇದನ್ನು ಗಮನಿಸಿರುವ ಮೈತ್ರಿಕೂಟ ಈ ಬಾರಿ ಈ ವ್ಯತ್ಯಾಸವನ್ನು ಮೀರಿ ಮುನ್ನಡಿಯಿಡಲು ತಂತ್ರಗಾರಿಕೆ ರೂಪಿಸುತ್ತಿದೆ. ಅಂದರೆ, 50 - 60  ಸಾವಿರ ಹೆಚ್ಚುವರಿ ಮತಗಳನ್ನು ತನ್ನ ಬುಟ್ಟಿಗೆ
ಸೆಳೆದುಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ.

ಅಭ್ಯರ್ಥಿಗಳು
ಬಿ.ವೈ. ರಾಘವೇಂದ್ರ (ಬಿಜೆಪಿ), ಮಧು ಬಂಗಾರಪ್ಪ (ಜೆಡಿಎಸ್), ಗುಡ್ಡಪ್ಪ (ಬಹುಜನ ಸಮಾಜ ಪಕ್ಷ), ಆರ್. ವೆಂಕಟೇಶ್(ಉತ್ತಮ ಪ್ರಜಾಕೀಯ ಪಕ್ಷ), ಪಕ್ಷೇತರ ಅಭ್ಯರ್ಥಿಗಳಾಗಿ ಕೆ. ಕೃಷ್ಣ , ಎನ್. ಟಿ. ವಿಜಯಕುಮಾರ್, ಶೇಖರ್‌ನಾಯ್ಕ್, ಎಸ್. ಉಮೇಶಪ್ಪ, ಶಶಿಕುಮಾರ್ ಬಿ.ಕೆ., ಉಮೇಶ ವರ್ಮಾ, ಮಹ್ಮದ್ ಯೂಸೂಫ್ ಖಾನ್ ಮತ್ತು ವಿನಯ್ ಕೆ. ಸಿ.

ಜಾತಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಈಡಿಗ 2.40 ಲಕ್ಷ, ಲಿಂಗಾಯತರು 2.80 ಲಕ್ಷ, ಮುಸ್ಲಿಮರು 2 ಲಕ್ಷ, ಒಕ್ಕಲಿಗರು 1.30 ಲಕ್ಷ, ಬ್ರಾಹ್ಮಣರು 1.50 ಲಕ್ಷ, ಪರಿಶಿಷ್ಟ ಜಾತಿ ಮತ್ತು ವರ್ಗದ 3 ಲಕ್ಷ ಜನರಿದ್ದಾರೆ. ಸುಮಾರು 70 ಸಾವಿರ ಬಂಟ ಸಮುದಾಯ ದವರಿದ್ದಾರೆ. ತಮಿಳರು,ಉಪ್ಪಾರರು,ಕುರುಬರು,ಮಡಿವಾಳರು,ಬೆಸ್ತರು,ಕುಂಬಾರರಲ್ಲದೆ ಇತರೆ ಜಾತಿಗರು ಈ ಕ್ಷೇತ್ರದಲ್ಲಿದ್ದಾರೆ.

ವರದಿ : ಗೋಪಾಲ್ ಯಡಗೆರೆ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!