ಬಡತನವಿದ್ದರೇನಂತೆ ಶಿಕ್ಷಣ ಮುಖ್ಯ: ಮಗನಿಗಾಗಿ ಕೈಯ್ಯಾರೆ ಚೀಲ ಹೊಲಿದ ತಂದೆ!

By Web DeskFirst Published Jun 24, 2019, 1:49 PM IST
Highlights

ಮಗುವಿಗೆ ಸ್ಕೂಲ್ ಬ್ಯಾಗ್ ಕೊಡಿಸಲು ಹಣವಿಲ್ಲ| ಬಡತನವಿದ್ದರೇನಂತೆ ಮಗನಿಗೆ ಶಿಕ್ಷಣ ಮುಖ್ಯ| ಬ್ಯಾಗ್ ಖರೀದಿಸಲು ಹಣವಿಲ್ಲದ ತಂದೆ ತಾನೇ ಬ್ಯಾಗ್ ಮಾಡಿ ಕೊಟ್ರು!| ನೆಟ್ಟಿಗರ ಮನಗೆದ್ದ ಬಾಲಕನ ಓದಿನ ಮೇಲಿನ ಆಸಕ್ತಿ, ತಂದೆಯ ಪ್ರೋತ್ಸಾಹ

ಕಾಂಬೋಡಿಯಾ[ಜೂ.24]: ಸದ್ಯ ಫ್ಯಾನ್ಸಿ ಸ್ಕೂಲ್ ಬ್ಯಾಗ್ ಭಾರೀ ಟ್ರೆಂಡ್ ಹುಟ್ಟಿಸಿದೆ. ಡೋರೆಮೋನ್, ನೋಬಿತಾ, ಬಾರ್ಬಿ ಡಾಲ್, ಛೋಟಾ ಭೀಮ್ ಹೀಗೆ ವಿವಿಧ ರೀತಿಯ ಪ್ರಿಂಟೆಡ್ ಬ್ಯಾಗ್ ಗಳು ಮಾರುಕಟ್ಟೆಯಲ್ಲಿ ಬಂದು ಕುಳಿತಿವೆ. ತಮ್ಮ ಮಗು ಶಾಲೆಗೆ ಹೋಗಲು ಆರಂಭಿಸಿತು ಅಥವಾ ಮತ್ತೊಂದು ತರಗತಿಗೆ ಪ್ರವೇಶಿಸಿತು ಎನ್ನುವಾಗ ಇತ್ತ ತಂದೆ ತಾಯಿ ಕೂಡಾ ಅತ್ಯುತ್ತಮ ಬ್ಯಾಗ್ ಕೊಡಿಸಲು ಸಜ್ಜಾಗುತ್ತಾರೆ. ಆದರೆ ಇಂತಹ ಫ್ಯಾಷನ್ ಯುಗದಲ್ಲಿ ತನ್ನ ಮಗನಿಗೆ ಬ್ಯಾಗ್ ಕೊಡಿಸಲು ಹಣವಿಲ್ಲದ ತಂದೆ, ತಾನೇ ತನ್ನ ಕೈಯ್ಯಾರೆ ಬ್ಯಾಗ್ ಒಂದನ್ನು ಮಾಡಿಕೊಟ್ಟಿದ್ದಾರೆ. ಈ ಬ್ಯಾಗ್ ಸೌಂದರ್ಯ ಮಾರುಕಟ್ಟೆಯಲ್ಲಿ ಸಿಗುವ ಬ್ಯಾಗ್ ಗಳನ್ನೂ ಮೀರಿಸುವಂತಿದೆ. ಸದ್ಯ ಬಡ ರೈತ ತನ್ನ ಮಗನಿಗಾಗಿ ಹೊಲಿದ ಈ ಸ್ಕೂಲ್ ಬ್ಯಾಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಂಬೋಡಿಯಾದ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ ಫೋಟೋಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡುತ್ತಾ 'ಮಕ್ಕಳಿಗೆ ಪುಸ್ತಕ, ಪೆನ್ಸಿಲ್, ರಬ್ಬರ್ ಹೀಗೆ ಶಾಲೆಗೆ ಕಳುಹಿಸಲು ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಗದೆ, ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ತಂದೆ ತಾಯಿ ಹಲವರಿದ್ದಾರೆ. ಮಕ್ಕಳನ್ನು ಪ್ರೋತ್ಸಾಹಿಸಿ. ಒಂದು ವೇಳೆ ನಿಮ್ಮ ಮಕ್ಕಳಿಗೆ ಬೇಕಾದ ಪೆನ್, ಪೆನ್ಸಿಲ್, ರಬ್ಬರ್, ಬಾಟಲ್ ಕೊಡಿಸಲು ಸಾಧ್ಯವಾಗದಿದ್ದರೆ ಕೆಂಗ್ ತಂದೆಯಂತೆ ನೀವೂ ಒಂದು ದಾರಿ ಕಂಡುಹಿಡಿಯಿರಿ' ಎಂದಿದ್ದಾರೆ. ಈ ಮೂಲಕ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಲು ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಾಂಬೋಡಿಯಾದ 5 ವರ್ಷದ ಎನ್ವಾಯಿ ಕೆಂಗ್ ತನ್ನ ಶಾಲೆಗೆ ತಲುಪಿದಾಗ ಎಲ್ಲಾ ಮಕ್ಕಳ ಕಣ್ಣು ಆತನ ಬ್ಯಾಗ್ ಮೇಲಿತ್ತು. ಕೆಂಗ್ ತರಗತಿ ಟೀಚರ್ Sophous Suon ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಒಂದು ಸಾಧಾರಣ ಬ್ಯಾಗ್ ಬೆಲೆ 30,000 ರಿಯಲ್ಸ್ ಅಂದರೆ 488 ರೂಪಾಯಿ ಇರುತ್ತದೆ. ಕೆಲ ತಂದೆ ತಾಯಿಗೆ ತಮ್ಮ ಮಕ್ಕಳಿಗೆ ಇಷ್ಟು ಮೌಲ್ಯದ ಬ್ಯಾಗ್ ಕೊಡಿಸಲು ಸಾಧ್ಯವಾಗುವುದಿಲ್ಲ. ಇಂತಹವರು ಹೆಚ್ಚು ಹಣ ಇಲ್ಲದಿದ್ದರೂ ಮಕ್ಕಳಿಗೆ ಹೇಗೆ ಸುಂದರವಾದ ಬ್ಯಾಗ್ ಕೊಡಬಹುದು ಎಂದು ಕೆಂಗ್ ತಂದೆಯಿಂದ ಕಲಿಯಬೇಕು' ಎಂದಿದ್ದಾರೆ.

ವರದಿಗಳನ್ವಯ ಕೆಂಗ್ ತಂದೆ ಈ ಬ್ಯಾಗನ್ನು Raffia String ಮೂಲಕ ಮಾಡಿದ್ದಾರೆ ಎನ್ನಲಾಗಿದೆ. ಕೆಂಗ್ ಟೀಚರ್ ಆತನ ತಂದೆಗೆ ಮಗನ ಮೇಲಿರುವ ಪ್ರೀತಿ, ಅವರ ಕ್ರಿಯೇಟಿವಿಟಿ ಹಾಗೂ ಮಗುವಿಗೆ ಶಿಕ್ಷಣ ಪಡೆಯಬೇಕೆಂಬ ಆ ಹಂಬಲ ಎಷ್ಟಿದೆ ಎಂಬುವುದನ್ನು ಜನರಿಗೆ ತೋರಿಸಲು ಇಚ್ಛಿಸಿದ್ದರು. ಹೀಗಾಗೆ ಪೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

US ವರದಿಯನ್ವಯ ಸುಮಾರು 6 ಕೋಟಿ ಪ್ರಾಥಮಿಕ ಶಾಲಾ ವರ್ಗದ ಮಕ್ಕಳು ಬಡತನದಿಂದಾಗಿ ಶಿಕ್ಷಣ ವಂಚಿತರಾಗುತ್ತಾರೆ ಎನ್ನಲಾಗಿದೆ. ಶಾಲೆಗೆ ಹೋಗಿ ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ಬಡತನದಿಂದ ನಲುಗುತ್ತಿರುವ ತಮ್ಮ ಕುಟುಂಬಕ್ಕೆ ಆಸರೆಯಾಗಿ ದುಡಿಯುತ್ತಿರುವ ಮಕ್ಕಳು ಅನೇಕರಿದ್ದಾರೆ. ಇನ್ನು ಕೆಲ ಮಕ್ಕಳು ನೀರು ಪೂರೈಕೆ ಹಾಗೂ ತಮ್ಮ ತಂಗಿ/ತಮ್ಮನನ್ನು ನೊಡಿಕೊಳ್ಳುವ ಸಲುವಾಗಿ ಶಾಲೆಗೆ ಹೋಗದೆ ಉಳಿದುಕೊಳ್ಳುತ್ತಾರೆ.

click me!