ಪರೀಕ್ಷೆ ಕಟ್ಟುನಿಟ್ಟು: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ?

By Kannadaprabha NewsFirst Published May 5, 2024, 10:05 AM IST
Highlights

ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ದಾಖಲೆ ಬರೆಯುತ್ತಿದ್ದ ಎಸ್ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಈ ಬಾರಿ ಕುಸಿತ ಕಾಣುವ ಸಾಧ್ಯತೆ ಇದೆ. 
 

ಬೆಂಗಳೂರು (ಮೇ.05): ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ದಾಖಲೆ ಬರೆಯುತ್ತಿದ್ದ ಎಸ್ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಈ ಬಾರಿ ಕುಸಿತ ಕಾಣುವ ಸಾಧ್ಯತೆ ಇದೆ. ಏಕೆಂದರೆ, ಎಲ್ಲ ಪರೀಕ್ಷಾ ಕೇಂದ್ರಗಳು, ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಸುವ ಜೊತೆಗೆ ವೆಬ್ ಕ್ಯಾಸ್ಟಿಂಗ್ ಕೂಡ ಮಾಡಿರುವುದರಿಂದ ರಾಜ್ಯದ ಎಲ್ಲೆಡೆ ಪರೀಕ್ಷೆ ಕಟ್ಟುನಿಟ್ಟಾಗಿ ನಡೆದಿದೆ. 

‘ಕೈಚಳಕ ಮತ್ತು ಕಣ್ಚಳಕ’ಕ್ಕೆ ಅವಕಾಶ ಸಿಗದ ಕಾರಣ ಫಲಿತಾಂಶ ಕುಸಿತವಾಗಲಿದೆ ಎಂದು ಹೇಳಲಾಗಿದೆ. ಮೌಲ್ಯಮಾಪನ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂದಿನ ವಾರ ಫಲಿತಾಂಶ ನಿರೀಕ್ಷಿಸಲಾಗಿದೆ. ಉತ್ತೀರ್ಣ ಪ್ರಮಾಣ ಶೇ.60ರ ಆಸುಪಾಸು ಇದ್ದರೂ ಆಶ್ಚರ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಹಿಂದಿನ ಎರಡು ವರ್ಷಗಳಲ್ಲಿ ಉತ್ತೀರ್ಣ ಪ್ರಮಾಣ ಕ್ರಮವಾಗಿ ಶೇ.85 ಮತ್ತು ಶೇ.83ರಷ್ಟು ದಾಖಲಾಗಿತ್ತು. 

16 ಇಂಟರ್‌ಚೇಂಜ್‌ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಿದ್ಧತೆ: ಬಿಎಂಆರ್‌ಸಿಎಲ್‌

ಶೈಕ್ಷಣಿಕವಾಗಿ ಮುಂದಿರುವ ಕರಾವಳಿ ಜಿಲ್ಲೆಗಳು ಈ ಬಾರಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿ ಇರಲಿವೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳ ಫಲಿತಾಂಶ ಎಂದಿನಂತೆ ಕಡಿಮೆ ಇರಲಿದೆ ಎಂದು ಹೇಳಲಾಗಿದೆ. ಮಾರ್ಚ್ ಕೊನೆಯ ವಾರದಲ್ಲಿ ನಡೆದ ಪರೀಕ್ಷೆಗೆ 8.9 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದರು. ಕಳೆದ ತಿಂಗಳು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದಾಖಲೆಯ ಶೇ.81ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

click me!