ಸ್ಮಾರ್ಟ್ ಫೋನ್, ಟಿವಿ ಬದಲು ಮಕ್ಕಳಿಗೆ ರೇಡಿಯೋ ಕೊಡಲಿ: ವೈರಲ್ ಆಯ್ತು ಐಡಿಯಾ!

By Suvarna News  |  First Published Jul 10, 2020, 12:35 PM IST

ಆನ್‌ಲೈನ್‌ ಶಿಕ್ಷಣ ಬೇಡ, ಟಿವಿ ಶಿಕ್ಷಣಕ್ಕೆ ಮಳೆಗಾಲ ಅಡ್ಡಿ ಎನ್ನುವ ಆತಂಕದ ನಡುವೆ ಗಮನ ಸೆಳೆದ ರೇಡಿಯೋ ಶಿಕ್ಷಣ| ಕಡಿಮೆ ಬೆಲೆಗೆ ಸಿಗುತ್ತೆ ರೇಡಿಯೋ, ಸಿಗ್ನಲ್ ಸಮಸ್ಯೆಯೂ ಇರುವುದಿಲ್ಲ| ಮಕ್ಕಳು ಹಾಳಾಗುತ್ತಾರೆಂಬ ಚಿಂತೆಯೂ ಪೋಷಕರನ್ನು ಸತಾಯಿಸುವುದಿಲ್ಲ| ವೈರಲ್ ಆಯ್ತು ರೇಡಿಯೋ ಶಿಕ್ಷಣದ ಬಗ್ಗೆ ಬರೆದ ಪೋಸ್ಟ್


ಬೆಂಗಳೂರು(ಜು.10): ಕೊರೋನಾದಿಂದಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ ಎಂಬ ಚಿಂತೆ ಸದ್ಯ ಪೋಷಕರು, ಶಿಕ್ಷಕರು ಹಾಗೂ ಸರ್ಕಾರವನ್ನು ಕಾಡುತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಸದ್ಯ ಆನ್‌ಲೈನ್‌ ತರಗತಿ, ಟಿವಿ ಮೂಲಕ ಶಿಕ್ಷಣ ನೀಡುವ ಕುರಿತು ಚರ್ಚೆ, ಸಿದ್ಧತೆ ನಡೆಯುತ್ತಿದೆ. ಆದರೆ ಈ ಮಾದರಿಯ ಶಿಕ್ಷಣಕ್ಕೆ ಪೋಷಕರು, ವಿದ್ಯಾರ್ಥಿಗಳು ಹಾಗೂ ಸರ್ಕಾರ ಸಂಪೂರ್ವಾಗಿ ತಯಾರಿಲ್ಲ. ಇದಕ್ಕೆ ನಾನಾ ಕಾರಣಗಳಿವೆ.

ಆನ್‌ಲೈನ್‌ ಶಿಕ್ಷಣದಿಂದ ಮಕ್ಕಳು ಹಾಳಾಗುತ್ತಾರೆ. ಇಂತಹ ಶಿಕ್ಷಣದಿಂದ ಅವರು ಏಕಾಗ್ರತೆಯಿಂದ ಕಲಿಯುವುದು ಬಹಳ ಕಷ್ಟ. ಮೊಬೈಲ್‌ ಮಕ್ಕಳ ಕೈಗೆ ಕೊಟ್ಟರೆ ಅವರ ಗಮನ ಬೇರೆಡೆ ಹೋಗುತ್ತದೆ. ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆಂಬ ಆತಂಕ ಪೋಷಕರದ್ದು. ಅಲ್ಲದೇ ಅನೇಕರಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳಿಲ್ಲ. ಇಂಟರ್ನೆಟ್‌ ಸಂಪರ್ಕ, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್‌ ಹೀಗೆ ಅನೇಕ ಬಗೆಯ ಸವಲತ್ತುಗಳಿಲ್ಲ ಇರುವುದರಿಂದ ಮಕ್ಕಳು ಈ ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಬಹುದೆಂಬ ಚಿಂತೆ ಸರ್ಕಾರದ್ದು.

Latest Videos

undefined

ಸರ್ಕಾರಿ ಶಾಲಾ ಮಕ್ಕಳು ವಂಚಿತರು; ಆನ್‌ಲೈನ್‌ ಶಿಕ್ಷಣಕ್ಕೆ ಪೋಷಕರ ವಿರೋಧ

ಇನ್ನು ಟಿವಿ ವಿಚಾರಕ್ಕೆ ಬರುವುದಾದರೆ, ಇದು ಉತ್ತಮ ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ ಇಂದು ಬಹುತೇಕ ಎಲ್ಲರ ಮನೆಯಲ್ಲೂ ಟಿವಿ ಇದೆ ಎಂಬುವುದು ಎಲ್ಲರ ಅಭಿಪ್ರಾಯ ಇದೇ ನಿಟ್ಟಿನಲ್ಲಿ ಸರ್ಕಾರ ಕೂಡಾ ಸದ್ಯ ಚಂದನ ಸೇರಿ ಇನ್ನೆರಡು ವಾಹಿನಿಗಳ ಮೂಲಕ ಟಿವಿ ಶಿಕ್ಷಣಕ್ಕೆ ತಯಾರಿ ನಡೆಸುತ್ತದೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಮಕ್ಕಳ ಕತೆ ಏನು? ಅಲ್ಲದೇ ಈಗ ಮಳೆಗಾಲ ಬೇರೆ ಆರಂಭವಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಸುರಿಯುವ ಗಾಳಿ ಮಳೆಗೆ ಹಲವಾರು ಮರಗಳು ಉರುಳಿ ವಿದ್ಯುತ್ ಕಂಬ, ತಂತಿ ಮುರಿದು ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯ. ಇದು ರಿಪೇರಿಯಾಗಿ ಮತ್ತೆ ವಿದ್ಯುತ್ ಬರಲು ಗ್ರಾಮೀಣ ಭಾಗದಲ್ಲಿ ಕಡಿಮೆ ಎಂದರೂ ಐದಾರು ದಿನಗಳು ತಗುಲುತ್ತವೆ. ಹೀಗಿರುವಾಗ ಟಿವಿ ಮೂಲಕ ಶಿಕ್ಷಣ ಎಷ್ಟು ಸೂಕ್ತ ಎಂಬುವುದು ಯೋಚಿಸಲೇಬೇಕಾಗುತ್ತದೆ.

ಹೀಗಿರುವಾಗ ಆನ್‌ಲೈನ್‌ ಹಾಗೂ ಟಿವಿಗೆ ಪರ್ಯಾಯವಾಗಿ ರೆಡಿಯೋ ಶಿಕ್ಷಣ ಹೇಗೆ? ಎಂಬ ಪೋಸ್ಟ್‌ ಒಂದು ಸೋ‍ಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಾಧ್ಯಾಪಕ ಹಾಗೂ ಶಿಕ್ಷಣ ತಜ್ಞ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಾಯಾಯಣ ರೈ ಕುಕ್ಕುವಳ್ಳಿಯವರ ಈ ಅಭಿಪ್ರಾಯ ಸದ್ಯ ಪೋಷಕರಿಗೂ ಹಿಡಿಸಿದೆ.

ಸರ್ಕಾರದ ಆದೇಶಗಳಿಗೆ ತಡೆ ನೀಡಿ ಆನ್‌ಲೈನ್‌ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹೈಕೋರ್ಟ್

- ರೆಡಿಯೋ ಮೂಲಕ ಶಿಕ್ಷಣ ಆರಂಭಿಸಿದರೆ ಆನ್‌ಲೈನ್‌ ಕ್ಲಾಸ್‌ ವೇಳೆ ಮೊಬೈಲ್‌, ಲ್ಯಾಪ್‌ಟಾಪ್‌ ನೋಡಿ, ದುರುಪಯೋಗಪಡಿಸಿ ಮಕ್ಕಳು ಹಾಳಾಗುತ್ತಾರೆ ಎಂಬ ಚಿಂತೆ ಇಲ್ಲ. 

- ಮೊಬೈಲ್‌ ಇಲ್ಲ, ಖರೀದಿಸಲು ಬಲು ದುಬಾರಿ ಎನ್ನುವವರಿಗೆ ರೆಡಿಯೋ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ಸರ್ಕಾರವೂ ಗುಣಮಟ್ಟದ ರೇಡಿಯೋ ಪೂರೈಸುವುದು ಬಹಳ ಸುಲಭ.

- ಟಿವಿಯಂತೆ ವಿದ್ಯುತ್ ಸಂಪರ್ಕ ಎಂಬ ಚಿಂತೆ ಇಲ್ಲ ಯಾಕೆಂದರೆ ಬ್ಯಾಟರಿ ಮೂಲಕವೂ ರೇಡಿಯೋ ಕಾರ್ಯ ನಿರ್ವಹಿಸುತ್ತದೆ. 

- ಇನ್ನು ಸಿಗ್ನಲ್ ಬಗ್ಗೆ ಮತ್ತೊಂದು ಮಾತೇ ಇಲ್ಲ. ಯಾಕೆಂದರೆ ರೇಡಿಯೋ ಸಿಗ್ನಲ್ ಯಾವ ಮೂಲೆಯಲ್ಲಾದರೂ ಸಿಗುತ್ತದೆ ಎಂಬುವುದು ಪ್ರತಿಯೊಬ್ಬನಿಗೂ ತಿಳಿದಿರುವ ವಿಚಾರ. 

- ಇಷ್ಟೇ ಅಲ್ಲದೇ ಇದಕ್ಕಾಗಿ ನೀವು ಹೊಸ ರೇಡಿಯೋವನ್ನೇ ಖರೀದಿಸಬೇಕೆಂಬ ಚಿಂತೆಯೂ ಇಲ್ಲ. ಯಾಕೆಂದರೆ ಕೀ ಪ್ಯಾಡ್‌ ಮೊಬೈಲ್‌ನಿಂದ ಸ್ಮಾರ್ಟ್‌ಫೋನ್‌ ಮೊಬೈಲ್‌ ಹೀಗೆ ಎಲ್ಲಾ ಫೋನ್‌ ಹೀಗೆ ಎಲ್ಲಾ ಬಗೆಯ ಫೋನ್‌ಗಳಲ್ಲೂ ರೇಡಿಯೋ ಕಾರ್ಯ ನಿರ್ವಹಿಸುತ್ತದೆ. ಬಹುತೇಕ ಎಲ್ಲರ ಬಳಿಯೂ ಇಂದು ಕೀ ಪ್ಯಾಡ್‌ ಸೆಟ್ ಮೊಬೈಲ್‌ ಆದರೂ ಇರುತ್ತದೆ. 

ಆನ್‌ಲೈನ್‌ ಶಿಕ್ಷಣ ಜೊತೆಗೆ ಆಫ್‌ಲೈನ್‌ ಪಾಠಕ್ಕೆ ಸಲಹೆ: ಸರ್ಕಾರಕ್ಕೆ ತಜ್ಞರ ಸಮಿತಿ 10 ಶಿಫಾರಸು!

ನಾರಾಯಣ ರೈ ಕುಕ್ಕುವಳ್ಳಿಯವರು ಬರೆದ ಲೇಖನದಲ್ಲೇನಿದೆ?

* ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ನಕ್ಕು ನಲಿದು ಸಂತೋಷದಲ್ಲಿರಬೇಕಾದ ನಮ್ಮ ಮಕ್ಕಳು ಇಂದು ಮನೆಯೊಳಗೇ ಬಂಧಿಗಳು. ಅವರಿಗೆ ಶಿಕ್ಷಣ ಬೋಧಿಸಬೇಕಾದ ಶಿಕ್ಷಕರ ಪಾಡು ಕೇಳುವವರಾರು?

* ನನ್ನ ಆತ್ಮೀಯ ಸ್ನೇಹಿತರೂ ಕಾಣಿಯೂರು ಪ್ರಗತಿ ಸಂಸ್ಥೆಯ ಮುಖ್ಯಗುರು ಹಾಘೂ ಸವಣೂರು ಗ್ರಾ. ಪಂ. ಸದಸ್ಯರಾಗಿರುವ ಗಿರಿಶಂಕರ್ ಸುಲಾಯ ಅವರು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಹೇಳಿದ 'ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸುವ ಕಾರ್ಯ ಗೊಂದಲದಲ್ಲಿದೆ. ಟಿ. ವಿ., ಮೊಬೈಲ್  ಮೂಲಕ ತರಗತಿ ಕೊಡಿಸುವ ಬದಲು ರೇಡಿಯೋ ಪಾಠ ಮಾಡುವುದು ಉತ್ತಮ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು'
ಈ ಮಾತು ಅತ್ಯಂತ ಸೂಕ್ತ, ಸಕಾಲಿಕ ಸಲಹೆ. ನಾನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕನಾಗಿದ್ದಾಗ 'ಬಾನುಲಿ' ಪಾಠ ನಡೆಯುತ್ತಿತ್ತು. ಅದರ ದಾಖಲೆ ಇಡುತ್ತಿದ್ದೆ. ಪರಿಣಾಮಕಾರಿ. ನನಗೆ 'ಬಾಂದನಿ' ರಾಜ್ಯ ಪುರಸ್ಕಾರವೂ ಲಭಿಸಿತ್ತು. ಖಾಸಗಿ ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ಮನೆಯಲ್ಲೇ ಕೇಳಲು ಗುಣಮಟ್ಟದ ರೇಡಿಯೋ ನೀಡಲಿ. ಕೇಂದ್ರ- ರಾಜ್ಯ ಸರಕಾರಗಳು ಬಾನುಲಿ ಪಾಠಗಳ ವ್ಯವಸ್ಥೆ ಮಾಡಲಿ.

* ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರ ನೆರವಿನ ಹಸ್ತ. ಇದು ಮಾನವೀಯತೆಗೂ ಹಿಡಿದ ಕೈಗನ್ನಡಿ. ವೇತನವಿಲ್ಲದ ಖಾಸಗಿ ಶಿಕ್ಷಕರು ಪಡುವ ಭವಣೆ ಶಿಕ್ಷಣ ಸಚಿವರ ಮನ ಮುಟ್ಟಿದೆ.

ಸದ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆದ ಈ ಲೇಖನ ಹಾಗೂ ಅಂಶಗಳು ಪೋಷಕರ ಗಮನ ಸೆಳೆದಿದೆ. ಶಿಕ್ಷಣ ಸಚಿವರೂ ಈ ಬಗ್ಗೆ ಗಮನ ಹರಿಸಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಗಗತ್ಯವಿದೆ.

click me!