ಹುಬ್ಬಳ್ಳಿಯಲ್ಲಿ ಭಯಾನಕ ಸ್ಥಿತಿ: ದೆಹಲಿ ಮಾಲಿನ್ಯಕ್ಕಿಂತ ಭೀಕರ ಧೂಳು

By Web DeskFirst Published Nov 3, 2019, 10:26 AM IST
Highlights

ಅತಿವೃಷ್ಟಿಯ ಬೆನ್ನಲ್ಲೇ ಅಪಾಯಕಾರಿ ಧೂಳು ಸೃಷ್ಟಿ| ಮೊದಲೇ ಕಳಪೆ ಕಾಮಗಾರಿಯ ರಸ್ತೆಗಳಿಗ ಕಿತ್ತುಹೋಗಿವೆ | ಧೂಳಿನಿಂದ ಕಂಗೆಟ್ಟ ಜನತೆಮಾಸ್ಕ್, ಸ್ಕಾರ್ಫ್‌ಗಳಿಗೆ ಮೊರೆ| ಇಲ್ಲೂ ಜಾರಿಯಾಗುತ್ತಾ ‘ಆರೋಗ್ಯ ತುರ್ತು ಪರಿಸ್ಥಿತಿ’? | ರಸ್ತೆ ಬದಿ ತಿನಿಸು ತಿನ್ನುವ ಮೊದಲು ಎಚ್ಚರ ವಹಿಸಿ|
 

ನಾಗರಾಜ ಮಾರೇರ 

ಹುಬ್ಬಳ್ಳಿ[ನ.3]: ಅತಿಯಾದ ವಾಯು ಮಾಲಿನ್ಯದಿಂದಾಗಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಈಗ ‘ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸಲಾಗಿದೆ. ಆದರೆ, ಕರ್ನಾಟಕದ ಎರಡನೇ ರಾಜಧಾನಿ ಎನಿಸಿರುವ ಹುಬ್ಬಳ್ಳಿಯಲ್ಲಿನ ‘ಧೂಳು’ ದೆಹಲಿಯ ಆ ವಾಯು ಮಾಲಿನ್ಯಕ್ಕಿಂತಲೂ ಭೀಕರವಾಗಿದೆ!

ಹುಬ್ಬಳ್ಳಿಯ ಹೃದಯ ಭಾಗ ಎನಿಸಿರುವ ಕಿತ್ತೂರು ಚೆನ್ನಮ್ಮ ವೃತ್ತ ಮತ್ತು ಅದಕ್ಕೆ ಅಂಟಿಕೊಂಡಿರುವ ಹಳೇ ಬಸ್ ನಿಲ್ದಾಣ, ನೀಲಿಜಿನ್ ರಸ್ತೆ, ಕೋರ್ಟ್ ವೃತ್ತ, ದೇಸಾಯಿ ವೃತ್ತ, ನ್ಯೂ ಕಾಟನ್ ಮಾರ್ಕೆಟ್, ಹಳೇ ಹುಬ್ಬಳ್ಳಿ ರಸ್ತೆ, ಸ್ಟೇಶನ್ ರೋಡ್, ಸಿಬಿಟಿ ರಸ್ತೆಗಳಲ್ಲಿಅಕ್ಷರಶಃ ಉಸಿರುಗಟ್ಟುವ ಪರಿಸ್ಥಿತಿ ಇದೆ. ಇಲ್ಲಿ ಓಡಾಡುವ ವಾಹನ ಸವಾರರು, ಪಾದಚಾರಿಗಳ ಗೋಳು ಹೇಳತೀರದು. ಮೂಗಿಗೆ ಕರವಸ್ತ್ರ ಹಿಡಿದುಕೊಂಡೂ ಸೀನುತ್ತ, ಕೆಮ್ಮುತ್ತಲೇ ಸಾಗುತ್ತಾರೆ.

ದೆಹಲಿಯಲ್ಲಿ ಮಾಸ್ಕ್ ಧರಿಸಿಯಾದರೂ ಓಡಾಡಬಹುದು. ಹುಬ್ಬಳ್ಳಿಯಲ್ಲಿ ಮಾತ್ರ ಮಾಸ್ಕ್‌ ಅಲ್ಲ, ಗಗನ ಯಾತ್ರಿಗಳಂತೆ ಸಂಪೂರ್ಣ ಕವಚ ಮತ್ತು ಬೆನ್ನಮೇಲೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಳ್ಳುವ ಭಯಾನಕ ಸ್ಥಿತಿ ಉದ್ಭವಿಸಿದೆ. ಅದರಲ್ಲೂ ಯಾವುದಾದರೂ ವಾಹನ ವೇಗದಿಂದ ಸಾಗಿದರಂತೂ ಆ ವಾಹನ ಮತ್ತು ಎದುರಿಗಿದ್ದವರೂ ಕಾಣದಷ್ಟು ದಟ್ಟ ಧೂಳಿನ ಮೋಡವೇ ಸೃಷ್ಟಿಯಾಗುತ್ತದೆ. ಅಲ್ಲಿದ್ದವರು ಒಂದೆರಡು ನಿಮಿಷ ನಿಂತು ಹೋಗಬೇಕೆ ವಿನಃ, ಹಾಗೆಯೇ ಹೋಗುವಂತೆಯೇ ಇಲ್ಲ. ಹೀಗೆ ಧೂಳುಮಯ ಮತ್ತು ಹೊಂಡಮಯ ಆಗಿರುವ ರಸ್ತೆಗಳಲ್ಲೇ ನಿತ್ಯ ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಪಾಲಿಕೆಯ ಮಾಜಿ ಸದಸ್ಯರು, ಅಧಿಕಾರಿಗಳು, ಗಣ್ಯರು ದೊಡ್ಡ ದೊಡ್ಡ ಲಕ್ಸುರಿ ಕಾರುಗಳಲ್ಲಿ ಓಡಾಡುತ್ತಾರೆ. ಆದರೂ ಈ ರಸ್ತೆಗಳ ಹಣೆಬರಹ ಬದಲಾಗಿಲ್ಲ.  ಎರಡು ದಶಕಗಳಿಂದಲೂ ಹುಬ್ಬಳ್ಳಿ ಜನತೆಯನ್ನು ಧೂಳಿನಿಂದ ಮುಕ್ತಗೊಳಿಸುವ ಕೆಲಸ ಮಹಾನಗರ ಪಾಲಿಕೆ ಅಥವಾ ಸರ್ಕಾರದಿಂದ ಆಗಿಲ್ಲ.

ಮಳೆಯ ಬೆನ್ನಲ್ಲಿ ಧೂಳಿನ ದಾಳಿ: 

ಹುಬ್ಬಳ್ಳಿಯಲ್ಲಿ ಯಾವತ್ತೂ ಸದೃಢ ರಸ್ತೆಗಳ ನಿರ್ಮಾಣ ಆಗಿಲ್ಲ. ಕಾಂಕ್ರೀಟ್ ರಸ್ತೆಗಳೂ ಕಳಪೆ. ಇಂಥ ಕಳಪೆ ರಸ್ತೆಗಳು ಪ್ರಸಕ್ತ ಮುಂಗಾರಿನಲ್ಲಿ ಬಿಟ್ಟೂ ಬಿಡದೇ ಸುರಿದ ಮಳೆಗೆ ನೆನೆದು ಕಿತ್ತು ಹೋಗಿವೆ. ಈ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿ, ತಗ್ಗುಗಳಲ್ಲಿ ಸಾಗಲು ಟ್ರ್ಯಾಕ್ಟರ್, ಕುದುರೆ ಗಾಡಿ, ಚಕ್ಕಡಿಗಳು ಹಿಂದೇಟು ಹಾಕುತ್ತಿವೆ. ಅಷ್ಟು ಹದಗೆಟ್ಟಿವೆ ಹುಬ್ಬಳ್ಳಿ ರಸ್ತೆಗಳು. ಮಳೆಗಾಲದಲ್ಲಿ ಕೆಸರು ಗದ್ದೆದಂತೆ ಆಗುವ ರಸ್ತೆಗಳು ಬಿಸಿಲಿನಲ್ಲಿ ಧೂಳು ಸೂಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಎರಡು ತಿಂಗಳು ಸುರಿದ ಮಳೆಯಿಂದ ಮಹಾನಗರದ ರಸ್ತೆಗಳು ಅಕ್ಷರಶ ಹೊಂಡಗಳಾಗಿವೆ. ಇದೀಗ ಪಾಲಿಕೆ ತಾತ್ಕಾಲಿಕವಾಗಿ ರಸ್ತೆ ಗುಂಡಿಗಳಿಗೆ ಜಲ್ಲಿ ಕಲ್ಲು ಮಿಶ್ರಿತ ಮಣ್ಣು ಹಾಕಿದೆ. ವಾಹನಗಳು ಅದರ ಮೇಲೆ ಸಂಚರಿಸುತ್ತಿದ್ದಂತೆ ಧೂಳು ಧುತ್ತೆಂದು ಎದ್ದು ವಾತಾವರಣ ಆಕ್ರಮಿಸುತ್ತಿದೆ. ಹಿಂದಿನ ವಾಹನ ಸವಾರರಿಗೆ ಎದುಗಿರುವ ವಾಹನ, ಜನರಿಗೆ ಅಕ್ಕ ಪಕ್ಕದ ಜನತೆ, ಕಟ್ಟಡ ಕಾಣದಷ್ಟು ಧೂಳು ಆವರಿಸುತ್ತಿದೆ. ಇದರಿಂದಾಗಿ ಧೂಳು ಜನರ ಆರೋಗ್ಯ ಕಸಿಯುವಜತೆಗೆ ಅಪಘಾತಕ್ಕೂ ಕಾರಣವಾಗಿದೆ. 

ದೆಹಲಿ ಮಾಲಿನ್ಯಕ್ಕಿಂತ ಹುಬ್ಬಳ್ಳಿಯಲ್ಲಿ ಭೀಕರವಾಗಿರುವ ಧೂಳಿನ ಕಣಗಳು ಜನರ ಮುಕ್ಕುತ್ತಿದೆ. ಮಾಸ್ಕ್, ಸ್ಕಾರ್ಫ್‌ ಧರಿಸುತ್ತಿದ್ದರೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಜನರ ಬೆನ್ನು ಬಿದ್ದಿದೆ. ಅಷ್ಟೊಂದು ಧೂಳಿನ ಕಣಗಳು ವಾತಾವರಣದಲ್ಲಿ ಸೇರಿ ಜನರ ದೇಹ ಹೊಕ್ಕುತ್ತಿದೆ. ಶ್ವಾಸಕೋಶದ ಮೇಲೆ ಧೂಳು ಸವಾರಿ ಮಾಡುತ್ತಿದ್ದರೂ ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಧೂಳುನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿಲ್ಲ. ಹುಬ್ಬಳ್ಳಿ ಪಾಲಿಕೆ ಕಚೇರಿ ಎದುರೇ ಹದಗೆಟ್ಟ ರಸ್ತೆಯಿಂದ ದಟ್ಟವಾದ ಧೂಳು ಆವರಿಸಿ ತನ್ನ ಕಟ್ಟಡವನ್ನೇ ಮುತ್ತಿತ್ತಿದೆ. 

ಅಭಿವೃದ್ಧಿ ಯೋಜನೆಯ ಧೂಳು: 

ನಗರೋತ್ಥಾನ, ಸ್ಮಾರ್ಟ್‌ಸಿಟಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಿಂದ ಮತ್ತು ಅರೆಬರೆಯಾಗಿ ನಡೆಯುತ್ತಿರುವ ಬಿಆರ್‌ಟಿಸ್ ಕಾಮಗಾರಿಗಳು ಧೂಳು ಹೆಚ್ಚಲು ಪ್ರಮುಖ ಕಾರಣ. ಇನ್ನೊಂದೆಡೆ ನಿರಂತರ ಮಳೆಯಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ಧೂಳು ಹೆಚ್ಚಾಗುತ್ತಿದೆ. ಪಾಲಿಕೆ ತಾತ್ಕಾಲಿಕ ಗುಂಡಿ ಮುಚ್ಚಿದರೂ ವಾಹನಗಳ ಹೆಚ್ಚಾದ ಸಂಚಾರದಿಂದ ಮತ್ತೆ ತೆರೆದುಕೊಂಡಿವೆ. ಗುಂಡಿಗಳಿಗೆ ಮಳೆಯಲ್ಲಿ ಮಣ್ಣು ಮಿಶ್ರಿತ ಜಲ್ಲಿ ಕಲ್ಲು ಹಾಕಿ ನೀರು ನಿಲ್ಲದಂತೆ ಪಾಲಿಕೆ ಮಾಡಿದೆ. ಇದು ಅವೈಜ್ಞಾನಿಕವಾಗಿದ್ದರಿಂದ ವಾಹನಗಳು ಅದರ ಮೇಲೆ ಸಂಚರಿಸಿದರೆ ಜಲ್ಲಿ ಕಲ್ಲುಗಳು ಸಿಡಿಯಲು ಆರಂಭಿಸಿವೆ. ಈ ರೀತಿ ಸಿಡಿದ ಕಲ್ಲು ಪಾದಚಾರಿಗಳಿಗೆ, ಬೀದಿ ವ್ಯಾಪಾರಸ್ಥರಿಗೆ ಬಡಿದು ಗಾಯಗೊಳಿಸಿವೆ.

ನಿರಂತರ ಮಳೆಗಾಲ ಇದ್ದ ಕಾರಣ ರಸ್ತೆ ದುರಸ್ತಿಗೆ ಸಾಧ್ಯವಾಗಿರಲಿಲ್ಲ. ಆದರೆ, ನೀಲಿಜನ್ ರಸ್ತೆ ಸೇರಿ ಕೆಲ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಯೋಜನೆ ಸಿದ್ಧವಾಗಿದೆ. ಧೂಳಿನಿಂದ ತಾತ್ಕಾಲಿಕ ಮುಕ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಹೇಳಿದ್ದಾರೆ. 

ಮನೆಯಿಂದ ಹೊರಗೆ ಅಡಿ ಇಡುವುದೇ ಬೇಸರವೆನ್ನಿಸಿದೆ. ಬಿಳಿ ಬಟ್ಟೆ ಹಾಕಿಕೊಂಡು ಮಾರುಕಟ್ಟೆ ಬಂದರೆ ಧೂಳು ಮೆತ್ತಿಕೊಳ್ಳುತ್ತಿದೆ. ಮೊದಲೇ ನನಗೆ ವಯಸ್ಸಾಗಿದೆ. ಈ ಧೂಳು ಮತ್ತಷ್ಟು ಆರೋಗ್ಯ ಸಮಸ್ಯೆ ಉಣಿಸುತ್ತಿದೆ ಎಂದು ಸ್ಥಳೀಯ ನಿವಾಸಿ ಅರವಿಂದ ವೈ ಅವರು ತಿಳಿಸಿದ್ದಾರೆ. 

ಧೂಳಿನಿಂದ ಉಸಿರಾಡಲು ಆಗುತ್ತಿಲ್ಲ. ದಿನವಿಡಿ ಕುಳಿತು ವ್ಯಾಪಾರ ಮಾಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು. ಮುಖಕ್ಕೆ ವಸ್ತ್ರ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ರಸ್ತೆಯ ಕೆಸರು ವಾಹನಗಳ ಸಂಚರಿಸಿದಾಗ ಮೈಗೆ ಸಿಡಿದರೆ, ಬಿಸಲಿನಲ್ಲಿ ಧೂಳು ನಮ್ಮನ್ನು ಆವರಿಸುತ್ತದೆ. ರಾತ್ರಿ ಉಸಿರಾಟ ತೊಂದರೆಯಾಗುತ್ತಿದ್ದರೂ ಹೊಟ್ಟೆಗಾಗಿ ಧೂಳು ಸೇವಿಸಲೇಬೇಕು ಎಂದು  ಬೀದಿಬದಿಯ ವ್ಯಾಪಾರಿ ಚಂದ್ರವ್ವ ಅವರು ಹೇಳಿದ್ದಾರೆ. 

ಈ ಮೊದಲು ಹುಬ್ಬಳ್ಳಿಗೆ ಬಂದರೆ ಚೆನ್ನಮ್ಮ ವೃತ್ತ ನೋಡುವುದೇ ಒಂದು ಖುಷಿ. ಆದರೆ, ಇದೀಗ ಚೆನ್ನಮ್ಮ ಪುತ್ಥಳಿ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಧೂಳು ಮೆತ್ತಿಕೊಂಡಿದೆ. ಯಾಕಾದರೂ ಈ ನಗರಕ್ಕೆ ಬಂದಿದ್ದೇನೆ ಎಂದು ಬೇಸರವಾಗುತ್ತಿದೆ ಎಂದು ಹೊರ ಜಿಲ್ಲೆಯವರಾದ ಮಹೇಶ ಅವರು ಹೇಳಿದ್ದಾರೆ. 

click me!