ಕರ್ನಾಟಕ ಮಹಿಳೆಯರಿಗೆ ಸುರಕ್ಷಿತವಲ್ಲ. ಇದಕ್ಕೆ ಹುಬ್ಬಳ್ಳಿಯ ನೇಹಾ ಹತ್ಯೆಯೇ ಸಾಕ್ಷಿ. ನಿಮ್ಮಿಂದ (ಕಾಂಗ್ರೆಸ್) ಮಹಿಳೆಯರಿಗೆ ರಕ್ಷಣೆ ಕೊಡಲು ಆಗದಿದ್ದರೆ ಹೊರಹೋಗಿ. ನಾವು ರಕ್ಷಣೆ ನೀಡಿ ತೋರಿಸುತ್ತೇವೆ. ಕರ್ನಾಟಕವನ್ನು ಸುರಕ್ಷಿತ ತಾಣವನ್ನಾಗಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿ (ಮೇ.02): ಕರ್ನಾಟಕ ಮಹಿಳೆಯರಿಗೆ ಸುರಕ್ಷಿತವಲ್ಲ. ಇದಕ್ಕೆ ಹುಬ್ಬಳ್ಳಿಯ ನೇಹಾ ಹತ್ಯೆಯೇ ಸಾಕ್ಷಿ. ನಿಮ್ಮಿಂದ (ಕಾಂಗ್ರೆಸ್) ಮಹಿಳೆಯರಿಗೆ ರಕ್ಷಣೆ ಕೊಡಲು ಆಗದಿದ್ದರೆ ಹೊರಹೋಗಿ. ನಾವು ರಕ್ಷಣೆ ನೀಡಿ ತೋರಿಸುತ್ತೇವೆ. ಕರ್ನಾಟಕವನ್ನು ಸುರಕ್ಷಿತ ತಾಣವನ್ನಾಗಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದ ನೆಹರು ಕ್ರೀಡಾಂಗಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರ ಪ್ರಚಾರ ಭಾಷಣ ಮಾಡಿದ ಶಾ, ಹುಬ್ಬಳ್ಳಿಯ ನೇಹಾ ಹತ್ಯೆ ಹಾಗೂ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಗಳನ್ನು ಪ್ರಸ್ತಾಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಾಯಿತು. ಅದಕ್ಕೆ ಹೊಣೆ ಯಾರು? ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡಹಗಲೇ ಯುವತಿಯ ಹತ್ಯೆಯಾಗುತ್ತದೆ ಎಂದರೆ ಮಹಿಳೆಯರಿಗೆ ಇಲ್ಲಿ ಎಷ್ಟು ಸುರಕ್ಷತೆ ಇದೆ ಎಂಬುದು ಗೊತ್ತಾಗುತ್ತದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ಆದರೆ, ಇವರಿಗೆ ಅದು ಕೇಳಿಸುವುದಿಲ್ಲ. ಅದು ದೆಹಲಿಯಲ್ಲಿರುವ ನಮಗೆ ಕೇಳಿಸುತ್ತದೆ. ಬೆಂಗಳೂರಲ್ಲಿ ಬಾಂಬ್ ಸ್ಫೋಟ ಆಗುತ್ತದೆ. ಅದು ಸಿಲಿಂಡರ್ ಸ್ಫೋಟ ಎಂದು ಹೇಳುತ್ತಾರೆ. ಎನ್‌ಐಎ ತನಿಖೆ ಮಾಡಿದ ಮೇಲೆ ಅದು ದುಷ್ಕೃತ್ಯ ಎಂಬುದು ಬೆಳಕಿಗೆ ಬರುತ್ತದೆ. ಇವರೇನು ಮಾಡುತ್ತಿದ್ದಾರೆ? ಕರ್ನಾಟಕ ಸುರಕ್ಷಿತವಾಗಿದೆಯೇ? ನಿಮಗೆ ಮಹಿಳೆಯರಿಗೆ, ಜನರಿಗೆ ರಕ್ಷಣೆ ಕೊಡಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಇಳಿಯಿರಿ, ನಾವು ರಕ್ಷಣೆಯನ್ನೂ ನೀಡುತ್ತೇವೆ. ಆಡಳಿತವನ್ನು ನಡೆಸಿ ತೋರಿಸುತ್ತೇವೆ ಎಂದರು.
ಮತದಾರರಿಗೆ ಹಣ ಕೊಡುವವರೇ ರಣಹೇಡಿಗಳು: ಡಿಕೆಶಿಗೆ ಎಚ್‌ಡಿಕೆ ತಿರುಗೇಟು
ಇದೇ ವೇಳೆ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಪ್ರಸ್ತಾಪಿಸಿದ ಶಾ, ಹೆಣ್ಣು ಮಕ್ಕಳಿಗೆ, ಮಾತೆಯರಿಗೆ ಅತ್ಯಂತ ಗೌರವ ಕೊಡುವ ಪಕ್ಷ ಬಿಜೆಪಿ. ಈ ವಿಷಯದಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಜೊತೆ ಬಿಜೆಪಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾರ ಪ್ರಜ್ವಲ್ ಪ್ರಕರಣದ ತನಿಖೆಯನ್ನು ಮಾಡಲಿ. ತಪ್ಪಿತಸ್ಥರಿದ್ದರೆ ಅತಿ ಕಠಿಣವಾದ ಶಿಕ್ಷೆ ನೀಡಲಿ. ಆದರೆ, ಕಾಂಗ್ರೆಸ್ ಪಕ್ಷ ಇದರಲ್ಲಿ ರಾಜಕಾರಣ ಮಾಡುತ್ತಿದೆ. ಇದು ಭಯಂಕರ ಅಪರಾಧ ಕೂಡ. ತಪ್ಪಿತಸ್ಥರಿಗೆ ಇಲ್ಲಿನ ಸರ್ಕಾರ ಅತಿ ಕಠೋರವಾದ ಶಿಕ್ಷೆ ನೀಡಲಿ. ಅಷ್ಟಕ್ಕೂ ಪ್ರಜ್ವಲ್ ಅವರಿಗೆ ವಿದೇಶಕ್ಕೆ ಹೋಗಲು ಏಕೆ ಬಿಟ್ಟಿರಿ. ನಿಮ್ಮದೇ ಸರ್ಕಾರವಿದೆಯೆಲ್ಲ ಎಂದು ಪ್ರಶ್ನಿಸಿದರು.
ಸಿಎಂ-ಡಿಸಿಎಂ ಕಚ್ಚಾಟದಿಂದ ಬರ ಪರಿಹಾರ ವಿಳಂಬ: ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬರುವುದು ವಿಳಂಬವಾಗಿದೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ, ಅದು ರಾಜ್ಯದ ಸಿಎಂ-ಡಿಸಿಎಂ ಕಚ್ಚಾಟದಿಂದ ವಿಳಂಬವಾಯಿತು. ಇವರು ಪರಸ್ಪರ ಕಚ್ಚಾಡುತ್ತಾ ವರದಿ ಕಳುಹಿಸುವುದನ್ನು ವಿಳಂಬ ಮಾಡಿದರು. ಹೀಗಾಗಿ, ಪರಿಹಾರ ನೀಡುವುದು ವಿಳಂಬವಾಗಿದೆ ಅಷ್ಟೇ. ರಾಜ್ಯಕ್ಕೆ ಅನುದಾನ ನೀಡಿಕೆ, ತೆರಿಗೆ ಹಂಚಿಕೆ ಸೇರಿದಂತೆ ಎಲ್ಲದರಲ್ಲೂ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಪ್ರಮಾಣದ ಅನುದಾನವನ್ನು ಎನ್‌ಡಿಎ ಸರ್ಕಾರ ನೀಡಿದೆ ಎಂದು ಅವರು ಹೇಳಿದರು.
ಕಾಶ್ಮೀರದಲ್ಲಿ ಅಭಿವೃದ್ಧಿ ಶಕೆ: ಕಾಶ್ಮೀರದಲ್ಲಿ 370ನೇ ಕಲಂ ತೆಗೆದಾಗಲೂ ಕಾಂಗ್ರೆಸ್ ವಿರೋಧಿಸಿತ್ತು. ರಾಹುಲ್ ಬಾಬಾ ಅಲ್ಲಿ ರಕ್ತದ ನದಿಯೇ ಹರಿಯುತ್ತದೆ ಎಂದು ಹೇಳಿದ್ದರು. ಆದರೆ, 370ನೇ ಕಲಂ ತೆಗೆದು ಇಷ್ಟ ದಿನಗಳಾಗಿವೆ. ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ಅಲ್ಲಿನ ಶಾಂತಿಗೆ ಭಂಗ ಬಂದಿಲ್ಲ. ಅಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದೆ. ಪುಲ್ವಾಮಾ ದಾಳಿ ಆದಾಗ ಪಾಕಿಸ್ತಾನದೊಳಗೆ ನುಗ್ಗಿ ಆತಂಕವಾದಿಗಳನ್ನು ಹೊಡೆದುರುಳಿಸಿದ್ದೇವೆ ಎಂದರು.
ಬರ ಪರಿಹಾರ ನೀಡದೆ ಮೋದಿ, ಶಾ ಸೋಲಿನ ಸೇಡು: ರಣದೀಪ್ ಸುರ್ಜೇವಾಲಾ
ಗಾಂಧಿ ಪರಿವಾರವಾದಿಗಳು (ರಾಹುಲ್, ಪ್ರಿಯಾಂಕಾ) ರಜೆಯಲ್ಲಿ ಮಜಾ ಮಾಡಲು ವಿದೇಶಗಳಿಗೆ ಹೋಗುತ್ತಾರೆ. ಆದರೆ, ಮೋದಿ ಅವರು, ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುತ್ತಾರೆ. ಇವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಆದರೆ, ಮೋದಿ 10 ವರ್ಷದಿಂದ ಆಡಳಿತ ನಡೆಸುತ್ತಿದ್ದರೂ 15 ಪೈಸೆಯಷ್ಟು ಭ್ರಷ್ಟಾಚಾರದ ಆರೋಪ ಅವರ ವಿರುದ್ಧ ಕೇಳಿ ಬಂದಿಲ್ಲ ಎಂದರು. ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾ ಮಹೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್‌ಗೆ ಆಹ್ವಾನ ನೀಡಿದ್ದೇವು. ಆದರೆ, ಅಲ್ಲಿಗೆ ಬಂದರೆ ಎಲ್ಲಿ ಅಲ್ಪಸಂಖ್ಯಾತರ ಮತ ಹೋಗಿ ಬಿಡುತ್ತವೆಯೋ ಎಂದುಕೊಂಡು ಬರಲಿಲ್ಲ. ಇವರದು ಬರೀ ಓಟ್ ಬ್ಯಾಂಕ್ ರಾಜಕಾರಣ ಎಂದು ಕಿಡಿಕಾರಿದರು.