ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ಮಂತ್ರಿ ಬಿ.ನಾಗೇಂದ್ರ ಅವರ ಇಬ್ಬರು ಆಪ್ತರು ಸೇರಿದಂತೆ ಮೂವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿದೆ.
ಬೆಂಗಳೂರು (ಜೂ.06): ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ರಾಜ್ಯ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ಮಂತ್ರಿ ಬಿ.ನಾಗೇಂದ್ರ ಅವರ ಇಬ್ಬರು ಆಪ್ತರು ಸೇರಿದಂತೆ ಮೂವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿದೆ. ಬಳ್ಳಾರಿ ಜಿಲ್ಲೆಯ ನೆಕ್ಕುಂಟಿ ನಾಗರಾಜ್, ಅವರ ಬಾಮೈದ ನಾಗೇಶ್ವರ್ ರಾವ್ ಹಾಗೂ ತೆಲಂಗಾಣದ ಹೈದರಾಬಾದ್‌ನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ್ ಬಂಧಿತರಾಗಿದ್ದು, ಈ ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಿ ಹೆಚ್ಚಿನ ತನಿಖೆಗೆ 7 ದಿನ ಎಸ್ಐಟಿ ವಶಕ್ಕೆ ಪಡೆದಿದೆ.
ಕೆಲ ತಿಂಗಳ ಹಿಂದೆ ಹಂತ ಹಂತವಾಗಿ ಹೈದರಾಬಾದ್‌ನ ಸತ್ಯನಾರಾಯಣ್ ಅವರು ಅಧ್ಯಕ್ಷರಾಗಿರುವ ‘ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್) 18 ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ಅಕ್ರಮವಾಗಿ 94.73 ಕೋಟಿ ರು. ಹಣ ವರ್ಗಾವಣೆಯಾಗಿತ್ತು. ಈ ಸಹಕಾರಿ ಬ್ಯಾಂಕ್‌ಗೆ ಹಣ ವರ್ಗಾವಣೆಯಲ್ಲಿ ಸಚಿವರ ಆಪ್ತ ನಾಗರಾಜ್ ಹಾಗೂ ಅವರ ಬಾಮೈದ ನಾಗೇಶ್ವರ್ ರಾವ್ ಮಧ್ಯವರ್ತಿಗಳಾಗಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
undefined
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಸಿದ್ದರಾಮಯ್ಯ
18 ನಕಲಿ ಖಾತೆಗಳಿಗೆ ಕೋಟಿ: ವಾಲ್ಮೀಕಿ ನಿಗಮದ ಯೂನಿಯನ್ ಬ್ಯಾಂಕ್ ಖಾತೆಗಳಿಂದ ಹೈದರಾಬಾದ್‌ನಲ್ಲಿರುವ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್‌ನ 18 ಖಾತೆಗಳಿಗೆ 94.73 ಕೋಟಿ ರು. ಹಣ ವರ್ಗಾವಣೆಯಾಗಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಸಹಕಾರಿ ಬ್ಯಾಂಕ್‌ನಲ್ಲಿ ಹಣ ವರ್ಗಾವಣೆಗೆ ತೆರೆಯಲಾಗಿದ್ದ 18 ಖಾತೆಗಳು ನಕಲಿ ಎಂಬ ಸಂಗತಿ ಗೊತ್ತಾಯಿತು ಎಂದು ಮೂಲಗಳು ಹೇಳಿವೆ. ಈ ಹಣ ಅಕ್ರಮ ವರ್ಗಾವಣೆ ಕುರಿತು ಹೈಗ್ರೌಂಡ್ಸ್ ಠಾಣೆಗೆ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಎಸ್‌ಐಟಿ, ದಾಖಲೆಗಳನ್ನು ಶೋಧಿಸಿದಾಗ ಹೈದರಾಬಾದ್ ನಂಟು ಪತ್ತೆಯಾಯಿತು. ಈ ಸುಳಿವು ಆಧರಿಸಿ ಹೈದರಾಬಾದ್‌ನಲ್ಲಿ ಮೂರು ದಿನ ಕಾರ್ಯಾಚರಣೆ ನಡೆಸಿ ಸಹಕಾರಿ ಬ್ಯಾಂಕ್ ಅಧ್ಯಕ್ಷನನ್ನು ಬಂಧಿಸಿ ಎಸ್‌ಐಟಿ ಅಧಿಕಾರಿಗಳು ಕರೆ ತಂದಿದ್ದಾರೆ. ಬಳಿಕ ವಿಚಾರಣೆ ವೇಳೆ ಹಣ ವರ್ಗಾವಣೆಯಲ್ಲಿ ಸಚಿವರ ಆಪ್ತರ ಪಾತ್ರ ಗೊತ್ತಾಯಿತು. ಈ ಮಾಹಿತಿ ಆಧರಿಸಿ ಭಾವ-ಬಾಮೈದ ಜೋಡಿಯನ್ನು ಎಸ್‌ಐಟಿ ಬೇಟೆಯಾಡಿದೆ ಎಂದು ತಿಳಿದು ಬಂದಿದೆ.
45 ಕೋಟಿ ರು. ಹಣ ಮುಟ್ಟುಗೋಲು: ಈ ಪ್ರಕರಣ ಸಂಬಂಧ ಬಂಧಿತ ಆರೋಪಿ ಸತ್ಯನಾರಾಯಣ್ ಒಡೆತನದ ಸಹಕಾರಿ ಬ್ಯಾಂಕ್ ಖಾತೆಯಲ್ಲಿ 45 ಕೋಟಿ ರು. ಹಣವನ್ನು ಎಸ್ಐಟಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಬ್ಯಾಂಕ್ ಖಾತೆಗೆ ನಿಗಮದಿಂದ ವರ್ಗಾವಣೆಯಾಗಿದ್ದ ಹಣದ ಪೈಕಿ ಬಹುಪಾಲು ಹಣ ಡ್ರಾ ಆಗಿತ್ತು. ಇದರಲ್ಲಿ ಒಬ್ಬಾತ ಮಾತ್ರ ತನ್ನ ಖಾತೆಗೆ ಬಂದಿದ್ದ 5 ಕೋಟಿ ರು. ಹಣವನ್ನು ಮರಳಿಸಿದ್ದಾನೆ. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್‌ಐಟಿ ತನಿಖೆ ಮುಂದುವರೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹನ್ನೊಂದು ವರ್ಷಗಳ ಹಿಂದೆ ತಮ್ಮ ಸ್ನೇಹಿತರ ಜತೆ ಸೇರಿ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯನ್ನು ಸತ್ಯನಾರಾಯಣ್ ಸ್ಥಾಪಿಸಿದ್ದರು. ಮೊದಲು 10 ಗ್ರಾಹಕರಿಂದ ಶುರುವಾದ ಬ್ಯಾಂಕ್ ಈಗ ಏಳು ಸಾವಿರ ಗ್ರಾಹಕರನ್ನು ಹೊಂದಿ ಬೃಹತ್ತಾಗಿ ಬೆಳದಿದೆ. ಅಲ್ಲದೆ ಹೈದರಾಬಾದ್‌ನಲ್ಲಿ 13 ಶಾಖೆಗಳಿದ್ದು, ನಲ್ಲಕುಂಟದಲ್ಲಿ ಸೊಸೈಟಿಯ ಪ್ರಧಾನ ಕಚೇರಿ ಇದೆ. ವಾರ್ಷಿಕ ನೂರಾರು ಕೋಟಿ ಹಣದ ವಹಿವಾಟು ನಡೆಸುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರಾಜಕಾರಣಿಗಳು ಹಾಗೂ ಉದ್ಯಮಿಗಳ ಜತೆ ಸತ್ಯನಾರಾಯಣ್ ಸ್ನೇಹವಿದೆ. ಆಂಧ್ರ ರಾಜಕಾರಣಿಗಳ ಮೂಲಕವೇ ಬಳ್ಳಾರಿ ರಾಜಕೀಯ ಮುಖಂಡರಿಗೂ ಸತ್ಯನಾರಾಯಣ್ ಪರಿಯವಾಗಿತ್ತು. ಈ ಸ್ನೇಹದಲ್ಲಿ ಹಣಕಾಸು ವ್ಯವಹಾರ ನಡೆದಿರಬಹುದು ಎಂದು ಅಧಿಕಾರಿಗಳ ಶಂಕಿಸಿದ್ದಾರೆ.
ಎಂಡಿ ಭೇಟಿ ಮಾಡಿಸಿದ್ದೇ ಸಚಿವರ ಆಪ್ತ: ಹಣ ಅಕ್ರಮ ವರ್ಗಾವಣೆ ವಿಚಾರವಾಗಿ ಆಗಿನ ನಿಗಮದ ವ್ಯವಸ್ಥಾಪಕ ಜೆ.ಜೆ.ಪದ್ಮನಾಭ್ ಮೇಲೆ ಸಚಿವರ ಆಪ್ತ ನೆಕ್ಕುಂಟಿ ನಾಗರಾಜ್ ಹಾಗೂ ನಾಗೇಶ್ವರ್ ರಾವ್ ಒತ್ತಡ ಹೇರಿದ್ದರು. ಅಲ್ಲದೆ ಎಂಡಿ ಅವರಿಗೆ ಹೈದರಾಬಾದ್ ತಂಡವನ್ನು ಈ ಭಾವ-ಬಾಮೈದ ಜೋಡಿ ಪರಿಚಯ ಮಾಡಿಸಿತ್ತು. ತರುವಾಯ ವ್ಯವಹಾರ ಕುದುರಿ ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ.
ಪ್ರಭಾವಿಗಳ ಜೊತೆ ಒಡನಾಟ: ‘ಆರೋಪಿ ಸತ್ಯನಾರಾಯಣ ಹಾಗೂ ಇತರರು ಸೇರಿಕೊಂಡು 2013ರಲ್ಲಿ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದರು. ಆರಂಭದಲ್ಲಿ 10 ಗ್ರಾಹಕರು ಮಾತ್ರ ಇದ್ದರು. ಇದೀಗ 7,000 ಗ್ರಾಹಕರಿದ್ದು, 13 ಶಾಖೆಗಳಿವೆ. ಹೈದರಾಬಾದ್‌ನ ನಲ್ಲಕುಂಟದಲ್ಲಿ ಸೊಸೈಟಿಯ ಪ್ರಧಾನ ಕಚೇರಿ ಇದೆ. ವರ್ಷದಿಂದ ವರ್ಷಕ್ಕೆ ಸೊಸೈಟಿ ವಹಿವಾಟು ಹೆಚ್ಚಳ ಆಗುತ್ತಿದೆ’ ಎಂದು ಮೂಲಗಳು ತಿಳಿಸಿವೆ. ‘ರಾಜ್ಯದ ಕೆಲ ರಾಜಕಾರಣಿಗಳು, ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ಜೊತೆ ಸತ್ಯನಾರಾಯಣ್ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆ. ಹೀಗಾಗಿಯೇ, ರಾಜ್ಯದ ಹಲವು ಖಾತೆಗಳಿಂದ ಆಗಾಗ ಸೊಸೈಟಿಯ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿದೆ. ಇದೀಗ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವೂ ಇದೇ ಸೊಸೈಟಿ ಖಾತೆಗಳಿಗೆ ವರ್ಗಾವಣೆ ಆಗಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ: ಗ್ಯಾರಂಟಿ ಯೋಜನೆಗಳ ನಿಲ್ಲಿಸಲು ಕಾಂಗ್ರೆಸ್ ಶಾಸಕರ ಒತ್ತಡ?
‘ಈಗಾಗಲೇ ಪ್ರಕರಣದಲ್ಲಿ ಬಂಧಿಸಲಾಗಿರುವ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ (55) ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ ಸಹಿಯುಳ್ಳ ಚೆಕ್‌ಗಳ ಮೂಲಕವೇ ಸೊಸೈಟಿ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಆದರೆ, ತಮ್ಮ ಸಹಿ ಹಾಗೂ ಮೊಹರು ನಕಲು ಮಾಡಿರುವುದಾಗಿ ಇಬ್ಬರೂ ಆರೋಪಿಗಳು ಹೇಳುತ್ತಿದ್ದಾರೆ. ಅಸಲಿ ಹಾಗೂ ನಕಲಿ ಸಹಿ–ಮೊಹರುಗಳನ್ನು ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ತಿಳಿದು ಬಂದಿದೆ.