: ನಕಲಿ ಕಂಪನಿಗಳ ಹೆಸರಿನಲ್ಲಿ ಎಂಪ್ಲಾಯಿಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೋರೆಷನ್ (ಇಎಸ್‌ಐ) ಇ-ಪೆಹಚಾನ್ ಕಾರ್ಡ್ ವಿತರಣೆ ಪ್ರಕರಣ ಸಂಬಂಧ ಖಾಸಗಿ ಆಸ್ಪತ್ರೆಯ ಆಪ್ತ ಸಮಾಲೋಚಕನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ನ.20): ನಕಲಿ ಕಂಪನಿಗಳ ಹೆಸರಿನಲ್ಲಿ ಎಂಪ್ಲಾಯಿಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೋರೆಷನ್ (ಇಎಸ್‌ಐ) ಇ-ಪೆಹಚಾನ್ ಕಾರ್ಡ್ ವಿತರಣೆ ಪ್ರಕರಣ ಸಂಬಂಧ ಖಾಸಗಿ ಆಸ್ಪತ್ರೆಯ ಆಪ್ತ ಸಮಾಲೋಚಕನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಸಮೀಪದ ಅಟ್ಟೂರು ಲೇಔಟ್‌ನ ಅಕ್ಷಯನಗರದ ನಿವಾಸಿ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಆಪ್ತ ಸಮಾಲೋಚಕ ಎಸ್.ಎಚ್.ಚಂದ್ರಕುಮಾರ್ ಬಂಧಿತ. ನಕಲಿ ಪೆಹಚಾನ್ ಕಾರ್ಡ್ ಜಾಲದಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ. ಪ್ರಕರಣ ಸಂಬಂಧ ಶ್ವೇತಾ ಹಾಗೂ ಶಶಿಕಲಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
undefined
ಕೆಲ ದಿನಗಳ ಹಿಂದೆ ನಕಲಿ ಪೆಹಚಾನ್ ಕಾರ್ಡ್ ಜಾಲವನ್ನು ಪತ್ತೆ ಹಚ್ಚಿದ್ದ ಪೊಲೀಸರು, ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಹಾಗೂ ಮಾಜಿ ಸೈನಿಕ ಶ್ರೀಧರ್, ಕ್ಯಾಂಟೀನ್ ಮಾಲೀಕ ರಮೇಶ್, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಆಪ್ತ ಸಮಾಲೋಚಕ ಶಿವಗಂಗನನ್ನು ಸಿಸಿಬಿ ಬಂಧಿಸಿದ್ದರು. ಬಳಿಕ ಈ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಚಂದ್ರು ಕುಮಾರ್‌ನನ್ನು ಬಂಧಿಸಲಾಯಿತು. ಆರೋಪಿಗಳಿಂದ 90 ಮೊಹರು, 10 ಮೊಬೈಲ್, ಎರಡು ಬ್ಯಾಂಕ್ ಪಾಸ್ ಬುಕ್ ಹಾಗೂ ₹59 ಸಾವಿರ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಾಲ ತೀರಿಸಲು ಆಸ್ಪತ್ರೇಲಿ ಸ್ಕ್ಯಾನಿಂಗ್ ಮಷಿನ್‌ಪ್ರೋಬ್ಸ್ ಕದ್ದ ಆಸಾಮಿ!
ಏನಿದು ಇ-ಪೆಹಚಾನ್ ಕಾರ್ಡ್?:
ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ₹21 ಸಾವಿರಕ್ಕಿಂತ ಕಡಿಮೆ ವೇತನ ಹೊಂದಿರುವ ನೌಕರರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರವು ಇ-ಪೆಹಚಾನ್ ಕಾರ್ಡ್ ವಿತರಿಸುತ್ತಿದೆ. ಈ ಕಾರ್ಡ್ ಬಳಸಿಕೊಂಡು ಇಎಸ್‌ಐ ಹಾಗೂ ಇಎಸ್‌ಐ ಒಪ್ಪಂದಿತ ಆಸ್ಪತ್ರೆಗಳಲ್ಲಿ ಕಾರ್ಮಿಕರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾಗಿದೆ. ಅನಾರೋಗ್ಯ ಸಂಬಂಧ ಆಸ್ಪತ್ರೆಗೆ ದಾಖಲಾದರೆ ಕಾರ್ಡ್ ನೋಂದಣಿ ಸಂಖ್ಯೆ ನೀಡಿದರೆ ಆ ಆಸ್ಪತ್ರೆ ಸಿಬ್ಬಂದಿ, ಆ ಕಾರ್ಡನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಚಿಕಿತ್ಸೆ ವಿವರ ನೀಡುತ್ತಾರೆ. ಅಲ್ಲದೆ ಕಾರ್ಡ್ ತೋರಿಸಿ ಔಷಧ ಪಡೆಯಬಹುದಾಗಿದೆ.
10 ರಿಂದ 2 ಲಕ್ಷ ರು.ವರೆಗೆ ಕಾರ್ಡ್ ಮಾರಾಟ:
ರಾಜಾಜಿನಗರ ಇಎಸ್‌ಐ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಇ-ಪೆಹಚಾನ್ ಕಾರ್ಡ್ ಇಲ್ಲದೆ ಇದ್ದಾಗ ಅಂಥಹವರಿಗೆ ಈ ಜಾಲದ ಸದಸ್ಯರು ಗಾಳ ಹಾಕುತ್ತಿದ್ದರು. ಇಎಸ್‌ಐ ಆಸ್ಪತ್ರೆಯಲ್ಲಿ ಮೊದಲು ಸ್ವಚ್ಛತಾ ವಿಭಾಗದ ವ್ಯವಸ್ಥಾಪಕನಾಗಿದ್ದ ಮಾಗಡಿ ತಾಲೂಕಿನ ರಮೇಶ್, ಆನಂತರ ಅದೇ ಆಸ್ಪತ್ರೆಯ ಕ್ಯಾಂಟೀನ್ ಗುತ್ತಿಗೆಯನ್ನು ಪಡೆದಿದ್ದ. ಈತನಿಗೆ ಆಸ್ಪತ್ರೆಯ ಒಳ-ಹೊರಗಿನ ಸಂಗತಿ ಚೆನ್ನಾಗಿ ತಿಳಿದಿದ್ದ. ತನ್ನ ಪ್ರಭಾವ ಬಳಸಿಕೊಂಡು ಆಸ್ಪತ್ರೆಗೆ ಬರುವ ರೋಗಿಗಳಿಗೆ ಇಎಸ್‌ಐ ಕಾರ್ಡ್ ಮಾಡಿಕೊಡುವುದಾಗಿ ಹೇಳಿ ಹಣ ಪಡೆಯುತ್ತಿದ್ದ. ಈತನಿಗೆ ಸೆಕ್ಯೂರಿಟಿಗಾರ್ಡ್ ಶ್ರೀಧರ್ ಸೇರಿದಂತೆ ಇನ್ನುಳಿದವರು ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೌತಿಕವಾಗಿ ಅಸ್ತಿತ್ವದಲ್ಲಿರದ ಕಂಪನಿಗಳನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುತ್ತಿದ್ದರು. ಸಾರ್ವಜನಿಕರು /ರೋಗಿಗಳಿಂದ ಹಣ ಪಡೆದು ಆ ನಕಲಿ ಕಂಪನಿಗಳಿಗೆ ಅವರನ್ನು ನೌಕರರೆಂದು ತೋರಿಸಿ ಇಎಸ್‌ಐ ಕಾರ್ಡ್ ಕೊಡುತ್ತಿದ್ದರು. ಪ್ರತಿಯಾಗಿ ಅವರಿಂದ 10 ಸಾವಿರದಿಂದ 2 ಲಕ್ಷವರೆಗೆ ಆರೋಪಿಗಳು ಪಡೆದುಕೊಳ್ಳುತ್ತಿದ್ದರು. ಕಾರ್ಡ್ ನಿರ್ವಹಣಾ ಶುಲ್ಕವೆಂದು ಹೇಳಿ ಮಾಸಿಕ ₹500 ಅನ್ನು ಕೂಡ ಜನರಿಂದ ಆರೋಪಿಗಳು ವಸೂಲಿ ಮಾಡುತ್ತಿದ್ದರು. ಅಂತೆಯೇ ಶ್ರೀಧರ್ ಹೆಸರಿನಲ್ಲಿ 5, ರಮೇಶ್ ಹೆಸರಿನಲ್ಲಿ 7 ಹಾಗೂ ಶಿವಗಂಗ ಹೆಸರಿನಲ್ಲಿ 3 ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದರು. ಈ ಕಂಪನಿಗಳ ಹೆಸರಿನಲ್ಲಿ ಇ-ಪೆಹಚಾನ್ ಕಾರ್ಡ್ ಮಾಡಿಸುತ್ತಿದ್ದರು. ಇನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕ ಚಂದ್ರು, ಇ-ಪೆಹಚಾನ್ ಕಾರ್ಡ್ ಪಡೆದಿರುವ ರೋಗಿಗಳಿಗೆ ವಿಮಾ ಸೌಲಭ್ಯ ಕೊಡಿಸುವಲ್ಲಿ ತೊಡಗಿಕೊಂಡಿದ್ದ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಪ್ರಕರಣ: ವಿಚಾರಣೆ ವೇಳೆ ಅಪ್ರಾಪ್ತ ಬಾಲಕನ ಹೇಳಿಕೆಗೆ ಪೊಲೀಸರೇ ಶಾಕ್
ಸರ್ಕಾರಕ್ಕೆ ಕೋಟ್ಯಂತರ ನಷ್ಟ
ನಕಲಿ ಕಂಪನಿಗಳ ಹೆಸರಿನಲ್ಲಿ ಸುಮಾರು 869 ಜನರಿಗೆ ಇ-ಪೆಹಚಾನ್ ಕಾರ್ಡ್‌ಗಳನ್ನು ಆರೋಪಿಗಳು ವಿತರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು. ಎರಡ್ಮೂರು ವರ್ಷಗಳಿಂದ ಈ ನಕಲಿ ಇ-ಪೆಹಚಾನ್ ಜಾಲ ಕಾರ್ಯನಿರ್ವಹಿಸಿರುವುದು ಗೊತ್ತಾಗಿದೆ. ಈ ಪ್ರಕರಣದ ಸಂಬಂಧ ಕೆಲವರಿಗೆ ವಿಚಾರಣೆ ಮುಂದುವರೆದಿದೆ ಎಂದು ಹೇಳಿದರು.