ಬೆಂಗಳೂರು: 5 ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

By Kannadaprabha NewsFirst Published Sep 20, 2021, 8:52 AM IST
Highlights

* ತಂದೆ-ತಾಯಿ ಮನೆಯಲ್ಲಿದ್ದ ವೇಳೆ ನೆರೆಮನೆ ವಾಸಿಯಿಂದ ಹೇಯ ಕೃತ್ಯ
* ಚೋಟಾ ಭೀಮ್‌ ತೋರಿಸಿವುದಾಗಿ ಕರೆದೊಯ್ದು ದೌರ್ಜನ್ಯ
* ಆರೋಪಿಯನ್ನು ತಮಗೊಪ್ಪಿಸುವಂತೆ ಪೊಲೀಸ್‌ ಠಾಣೆಗೆ ಪೋಷಕರು ಸೇರಿ ಸ್ಥಳೀಯರ ಮುತ್ತಿಗೆ
 

ಬೆಂಗಳೂರು(ಸೆ.20):  ಐದು ವರ್ಷದ ಬಾಲಕಿ ಮೇಲೆ ಉತ್ತರ ಭಾರತ ಮೂಲದ ಯುವಕನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿ ಠಾಣೆ ಬಳಿ ಜಮಾಯಿಸಿ ಆಕ್ರೋಶ ಹೊರ ಹಾಕಿರುವ ಘಟನೆ ಸಂಜಯನಗರ ಠಾಣೆ ಎದುರು ಭಾನುವಾರ ರಾತ್ರಿ ನಡೆಯಿತು.

ಘಟನೆ ಖಂಡಿಸಿ ಸ್ಥಳೀಯ ನೂರಾರು ಜನರು ಸಂಜಯ ನಗರ ಠಾಣೆ ಬಳಿ ಜಮಾಯಿಸಿದ್ದರಿಂದ ತಡರಾತ್ರಿವರೆಗೂ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.

ಚೋಟಾ ಭೀಮ್‌ ಆಸೆ ತೋರಿಸಿ ಹೇಯ ಕೃತ್ಯ:

ಹೆಬ್ಬಾಳ ನಿವಾಸಿ 25 ವರ್ಷದ ಯುವಕ ಕೃತ್ಯ ಎಸಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ಹೇಳಿದ್ದಾರೆ. ಮೂಲತಃ ಪಶ್ಚಿಮ ಬಂಗಾಳದ ಯುವಕ ಕೆಲ ವರ್ಷಗಳಿಂದ ಹೆಬ್ಬಾಳದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾನೆ. ಬಾಲಕಿ ನೆರೆ ಮನೆ ನಿವಾಸಿಯಾಗಿದ್ದು, ಬಾಲಕಿಯ ಪೋಷಕರು ಭಾನುವಾರ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಬಾಲಕಿ ಹಾಗೂ ಆಕೆಯ ಸಹೋದರ ಮಾತ್ರ ಮನೆಯಲ್ಲಿದ್ದರು. ಆರೋಪಿ ಚೋಟಾ ಭೀಮ್‌ ತೋರಿಸುವ ನೆಪದಲ್ಲಿ ಬಾಲಕಿಯನ್ನು ಮನೆಗೆ ಕರೆದೊಯ್ದು ಕೃತ್ಯ ಎಸದಿದ್ದಾನೆ. ಬಾಲಕಿ ದೇಹದಲ್ಲಿ ಗಾಯದ ಗುರುತುಗಳಾಗಿರುವುದನ್ನು ಕಂಡು ನೆರೆಮನೆ ನಿವಾಸಿಗಳು ಪ್ರಶ್ನಿಸಿದಾಗ, ಬಾಲಕಿ ಕೃತ್ಯದ ಬಗ್ಗೆ ಹೇಳಿದ್ದಾಳೆ. ಬಾಲಕಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಚಾರ ನಡೆಸಿದ್ದಾಗಿ ಹೇಳಿದ ಆಡಿಯೋ ವೈರಲ್ : ಕೇಸ್‌ಗೆ ಮೇಜರ್ ಟ್ವಿಸ್ಟ್

ಸ್ಥಳದಲ್ಲಿ ಬಿಗುವಿನ ವಾತಾವರಣ

ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ವಿಷಯ ತಿಳಿದು ನೂರಾರು ಜನರು ರಾತ್ರಿ 10 ಗಂಟೆ ಸುಮಾರಿಗೆ ಸಂಜಯ ನಗರ ಠಾಣೆ ಬಳಿ ಜಮಾಯಿಸಿದ್ದರು. ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ನೀಡಬೇಕು. ಆರೋಪಿಯ ಮುಖವನ್ನು ತೋರಿಸದೇ ಆತನನ್ನು ರಕ್ಷಣೆ ಮಾಡಲಾಗುತ್ತಿದೆ. ತಮ್ಮ ವಶಕ್ಕೆ ನೀಡಿದರೆ ಆತನಿಗೆ ಸಾರ್ವಜನಿಕರೇ ಕಠಿಣ ಶಿಕ್ಷೆ ನೀಡುತ್ತೇವೆ. ವಿದೇಶದಲ್ಲಿ ಇಂತಹ ಕೃತ್ಯ ಎಸಗಿದವರಿಗೆ ತ್ವರಿತವಾಗಿ ವಿಚಾರಣೆ ನಡೆದು ಅಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ನಮ್ಮಲ್ಲಿ ಇಂತಹವರನ್ನು ವರ್ಷಗಟ್ಟಲ್ಲೇ ಜೈಲಿನಲ್ಲಿಟ್ಟು ಉಪಚಾರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸರ ಜತೆ ವಾಗ್ವಾದ: ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಕೃತ್ಯ ಎಸಗಿದ್ದರೆ ಸೂಕ್ತ ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ಸಿಗುವಂತೆ ಮಾಡಲಾಗುವುದು. ಸದ್ಯಕ್ಕೆ ಪ್ರತಿಭಟನೆ ಕೈ ಬಿಡುವಂತೆ ಪೊಲೀಸರು ಸಾರ್ವಜನಿಕರ ಮನವೊಲಿಸಲು ಯತ್ನಿಸಿದರು. ಒಂದು ಹಂತದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಆರೋಪಿ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಅತ್ಯಾಚಾರ ಮಾಡಿದವನಿಗೆ ಗುಂಡು ಹೊಡೆಯಬೇಕು ಎಂಬುದು ಸಾರ್ವಜನಿಕರ ಕೂಗಾಗಿದೆ ಎಂದು ಕರವೇ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ತಿಳಿಸಿದ್ದಾರೆ.  
ಇಂತಹವರಿಂದ ಮಕ್ಕಳನ್ನು ರಕ್ಷಣೆ ಮಾಡಬೇಕಿದೆ. ಆರೋಪಿಗಳ ಮುಖವನ್ನು ಪೊಲೀಸರು ಮುಚ್ಚಿಡುವ ಕೆಲಸ ಮಾಡಬಾರದು. ಆರೋಪಿಗಳ ಫೋಟೋ ಮಾಧ್ಯಮಗಳಲ್ಲಿ ತೋರಿಸುವಂತಾಗಬೇಕು. ಮಕ್ಕಳು ಮನೆಯಿಂದ ಹೊರ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಮಹಿಳೆ ಹೇಳಿದ್ದಾರೆ. 

ಹೆಣ್ಣು ಮಕ್ಕಳು ವಿಚಾರದಲ್ಲಿ ತಪ್ಪಗಿದ್ದರೆ ಆತನನ್ನು ನೇಣಿಗೆ ಹಾಕಬೇಕು. ಯಾರೇ ಆದರೂ ಆತನನ್ನು ಬಿಡುವ ಪ್ರಶ್ನೆಯೇ ಇಲ್ಲ. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ಶಿಕ್ಷೆ ಆಗುವಂತೆ ಪೊಲೀಸರು ತನಿಖೆ ನಡೆಸಬೇಕು. ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಲಾಗಿದೆ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ತಿಳಿಸಿದ್ದಾರೆ. 

ಮೂರು ಗಂಟೆಗೆ ಅಪ್ಪ ಬಂದಿದೆ ಎಂದು ಮನೆಗೆ ಹೋದರು. ಚೋಟಾ ಭೀಮ್‌ ತೋರಿಸುತ್ತೇನೆ ಎಂದು ಆರೋಪಿ ಮನೆಗೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ. ಬಾಲಕಿ ಮೈ ಮೇಲೆ ಗಾಯಗಳಾಗಿವೆ ಎಂದು ಬಾಲಕಿ ದೊಡ್ಡಮ್ಮ ತಿಳಿಸಿದ್ದಾರೆ. 
 

click me!