ಅಧಿಕ ಲಾಭದಾಸೆ ತೋರಿಸಿ ಜನರಿಗೆ ಟೋಪಿ ಹಾಕುವ ಸೈಬರ್ ವಂಚನೆ ಕೃತ್ಯಗಳು ಮುಂದುವರೆದಿದ್ದು, ಮತ್ತಿಬ್ಬರು ಸುಶಿಕ್ಷಿತರು ಸೈಬರ್ ಮೋಸಗಾರರ ಬಲೆಗೆ ಬಿದ್ದು ಪ್ರತ್ಯೇಕವಾಗಿ 5.5 ಕೋಟಿ ರು ಹಣ ಕಳೆದುಕೊಂಡಿದ್ದಾರೆ.
ಬೆಂಗಳೂರು (ಏ.27): ಅಧಿಕ ಲಾಭದಾಸೆ ತೋರಿಸಿ ಜನರಿಗೆ ಟೋಪಿ ಹಾಕುವ ಸೈಬರ್ ವಂಚನೆ ಕೃತ್ಯಗಳು ಮುಂದುವರೆದಿದ್ದು, ಮತ್ತಿಬ್ಬರು ಸುಶಿಕ್ಷಿತರು ಸೈಬರ್ ಮೋಸಗಾರರ ಬಲೆಗೆ ಬಿದ್ದು ಪ್ರತ್ಯೇಕವಾಗಿ 5.5 ಕೋಟಿ ರು ಹಣ ಕಳೆದುಕೊಂಡಿದ್ದಾರೆ. ಮೋಸ ಹೋದವರ ಪೈಕಿ ಲೆಕ್ಕಪರಿಶೋಧಕ ಹಾಗೂ ನಿವೃತ್ತ ಸೇನಾಧಿಕಾರಿ ಸೇರಿದ್ದು, ಷೇರು ಮಾರ್ಕೆಟಿಂಗ್ ಹೆಸರಿನಲ್ಲಿ ಸಂತ್ರಸ್ತರಿಗೆ ವಂಚಿಸಿ ಆರೋಪಿಗಳು ಹಣ ದೋಚಿದ್ದಾರೆ. ಈ ಬಗ್ಗೆ ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
50 ಸಾವಿರ ಕೊಟ್ಟು , 3 ಕೋಟಿ ರು. ಕಿತ್ರು: ಷೇರು ಮಾರ್ಕೆಟ್ ಕುರಿತು ಫೇಸ್‌ಬುಕ್‌ನ ಜಾಹೀರಾತು ನೋಡಿ ನಕಲಿ ಕಂಪನಿಗೆ ಲೆಕ್ಕಪರಿಶೋಧಕರು ಹೂಡಿದ 3.14 ಕೋಟಿ ರು. ಷೇರು ಹಣವು ಖೋತಾ ಆಗಿದೆ. ರಾಜರಾಜೇಶ್ವರಿನಗರ ಬಿಇಎಂಎಲ್ ಲೇಔಟ್‌ನಲ್ಲಿ ನೆಲೆಸಿರುವ ಸಂತ್ರಸ್ತರು, ಕಳೆದ ಡಿಸೆಂಬರ್‌ನಲ್ಲಿ ಫೇಸ್‌ಬುಕ್ ನಲ್ಲಿ ಬಂದ ಷೇರು ಮಾರ್ಕೆಟ್ ಸಂಬಂಧಿಸಿದ ಸಂದೇಶವನ್ನು ಗಮನಿಸಿದ್ದಾರೆ. ಆಗ ಸಂದೇಶದ ಜೊತೆ ಇದ್ದ ಲಿಂಕ್ ಅನ್ನು ಅವರು ಕ್ಲಿಕ್ ಮಾಡಿದ ಕೂಡಲೇ ಏಳು ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಅವರು ಸೇರ್ಪಡೆ ಯಾಗಿದ್ದಾರೆ. ತರುವಾಯ ಆ ಗ್ರೂಪ್‌ಗಳಲ್ಲಿ ಷೇರು ಮಾರುಕಟ್ಟೆ ಕುರಿತು ಚರ್ಚೆಗಳು ನಡೆದಿವೆ. ಆಗ ವಿವಿಧ ಬಗೆಯ ಆ್ಯಪ್‌ಗಳನ್ನು ಡೌನ್ ಲೋಡ್ ಮಾಡಿ ಕೊಳ್ಳುವಂತೆ ಗ್ರೂಪ್ ಸದಸ್ಯರಿಗೆ ವಂಚಕರು ಸಲಹೆ ನೀಡಿದ್ದಾರೆ.
ಅದರಂತೆ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿದ ಸಂತ್ರಸ್ತರು, ತಮ್ಮ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿ 20 ಸಾವಿರ ರು. ಹೂಡಿಕೆ ಮಾಡಿದ್ದಾರೆ. ಆಗ ಅದಕ್ಕೆ ಲಾಭವಾಗಿ 50 ಸಾವಿರ ರು. ಅವರಿಗೆ ಸಂದಾಯವಾಗಿದೆ. ಆಗ ಖುಷಿಗೊಂಡ ಲೆಕ್ಕಪರಿಶೋಧಕರಿಗೆ ಆರೋಪಿಗಳು ದೊಡ್ಡ ಮೊತ್ತದ ಹಣ ತೊಡಗಿಸಿದರೆ ದುಪ್ಪಟ್ಟು ಲಾಭ ಸಿಗಲಿದೆ ಎಂದಿದ್ದಾರೆ. ಈ ಮಾತಿಗೆ ಮರುಳಾಗಿ ಹಂತ ಹಂತವಾಗಿ 3.14 ಕೋಟಿ ರು ಹಣವನ್ನು ಬ್ಲೇಡ್ ಕಂಪನಿಗೆ ಅವರು ಹೂಡಿಕೆ ಮಾಡಿದ್ದಾರೆ. ಈ ಹಣ ಸಂದಾಯವಾದ ಬಳಿಕ ಆರೋಪಿಗಳ ಸಂಪರ್ಕ ಕಡಿತವಾಗಿದೆ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಸಿಇಎನ್ ಠಾಣೆಗೆ ಸಂತ್ರಸ್ತರು ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ರಣಹೇಡಿಯ ರೀತಿ ಮಂಡ್ಯ ಕ್ಷೇತ್ರಕ್ಕೆ ಓಡಿದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್ ವಂಗ್ಯ
2.30 ಕೋಟಿ ರು. ಟೋಪಿ! ಇನ್ನು, ಇದೇ ರೀತಿ ಜಯನಗರದ ನಿವಾಸಿ ನಿವೃತ್ತ ಸೇನಾಧಿಕಾರಿಗೆ ಟೋಪಿ ಹಾಕಿ 2.3 ಕೋಟಿ ರು. ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ. ಫೆ.26ರಂದು ದೂರುದಾರರಿಗೆ ಯೂಟ್ಯೂಬ್ ಲಿಂಕ್ ಬಂದಿದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿದ ಕೂಡಲೇ ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಅವರು ಸೇರಿದ್ದಾರೆ. ಆ ಗ್ರೂಪ್‌ನಲ್ಲಿ 250 ಮಂದಿ ಸದಸ್ಯರಿದ್ದು, ಆದಿತ್ಯ ಹಾಗೂ ಮೆಹರ್ ಹೆಸರಿನ ಮೆಂಟರ್‌ಗಳಿದ್ದರು. ಆಗ ಷೇರು ಮಾರ್ಕೆಟ್‌ನ ಪ್ರೋಮೊಷನ್ ಮತ್ತು ಐಪಿಒ ಟ್ರೇಡಿಂಗ್ ತರಬೇತಿ ನೀಡುವುದಾಗಿ ಹೇಳಿದ ಆರೋಪಿಗಳು, ತಾವು ಸಲಹೆ ನೀಡಿದಂತೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ಆಮಿಷವೊಡ್ಡಿದ್ದಾರೆ. ಈ ಮಾತು ನಂಬಿದ ಸಂತ್ರಸ್ತರು, ಹಂತ ಹಂತವಾಗಿ 2.5 ಕೋಟಿ ರು ಬಂಡವಾಳ ತೊಡಗಿಸಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.