ಮತ್ತಿಬ್ಬರು ರೇಪಿಸ್ಟ್‌ಗಳ ಶೋಧಕ್ಕೆ ತ.ನಾಡಿಗೆ ಪೊಲೀಸರು

By Kannadaprabha NewsFirst Published Aug 31, 2021, 7:48 AM IST
Highlights
  • ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ವಿಚಾರಣೆ ಮುಂದುವರಿದಿದೆ
  •  ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ 

 ಮೈಸೂರು (ಆ.31):  ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಈ ಮಧ್ಯೆ ಅವರನ್ನು ಪೊಲೀಸರು ಸೋಮವಾರ ಸಂಜೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿದರು. ಈ ಮಧ್ಯೆ, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದು, ಮೈಸೂರು ಪೊಲೀಸರು ತಮಿಳುನಾಡಿಗೆ ತೆರಳಿದ್ದಾರೆ. ಆರೋಪಿಗಳನ್ನು ಟಿಟಿ ವಾಹನದಲ್ಲಿ ಕರೆದೊಯ್ದು ಮದ್ಯ ಖರೀದಿಸಿದ ಸ್ಥಳ, ಯುವತಿ ಕುಳಿತಿದ್ದ ಸ್ಥಳ, ಅತ್ಯಾಚಾರ ನಡೆಸಿದ ಸ್ಥಳವನ್ನು ಮಹಜರು ನಡೆಸಲಾಯಿತು.

ಐಎಂಇಐ ನಂಬರ್‌ನಿಂದ ಸಿಕ್ಕಿಬಿದ್ದರು: ಗ್ಯಾಂಗ್‌ರೇಪ್‌ ಆರೋಪಿಗಳು ಎರಡು ವರ್ಷದ ಹಿಂದೆ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೊಬೈಲ್‌ ಅನ್ನು ಕಸಿದುಕೊಂಡು ಹೋಗಿದ್ದರು. ಅದು ಹಳೆಯ ಮೊಬೈಲ್, ನನಗೆ ಮೊಬೈಲ್‌ ಪೋನ್‌ ಬೇಡ ಸಿಮ್‌ ಬೇಕು ಎಂದು ಹೇಳಿ ಮಹಿಳೆಯೊಬ್ಬರು ಎನ್‌ಸಿಆರ್‌ ಪಡೆದಿದ್ದರು. ಮಹಿಳೆಯ ಮೊಬೈಲ್‌ ಸಂಖ್ಯೆ ಆಧಾರದ ಮೇಲೆ ಮೊಬೈಲ್‌ನ ಐಎಂಇಐ ಸಂಖ್ಯೆಯನ್ನು ಪತ್ತೆ ಹಚ್ಚಲಾಗಿತ್ತು. ಇದೇ ಐಎಂಇಐ ಸಂಖ್ಯೆ ಮೊಬೈಲ್‌ ಗ್ಯಾಂಗ್‌ರೇಪ್‌ ನಡೆದ ಸ್ಥಳದಲ್ಲಿ ಬೇರೊಂದು ಸಂಖ್ಯೆಯೊಂದಿಗೆ ಆ್ಯಕ್ಟಿವ್‌ ಆಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಇದರ ಜಾಡು ಹಿಡಿದು ಹೋದಾಗ ರೇಪಿಸ್ಟ್‌ಗಳು ಸಿಕ್ಕಿಬಿದ್ದರು.

ಮೈಸೂರು ಗ್ಯಾಂಗ್‌ರೇಪ್: ಅತ್ಯಾಚಾರ ಮಾಡಿದ್ದು 6 ಅಲ್ಲ, 7 ಮಂದಿ!

ಇದಕ್ಕೂ ಮೊದಲು ಆರೋಪಿಗಳಾದ 17 ವರ್ಷದ ಬಾಲಕ, ಜೋಸೆಫ್‌(28), ಪ್ರಕಾಶ್‌ ಅಲಿಯಾಸ್‌ ಅರವಿಂದ್‌( 21), ಮುರುಗೇಶನ್‌(22) ಮತ್ತು ಭೂಪತಿ (25)ಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದರು. ಬಳಿಕ ಮದ್ಯ ಖರೀದಿಸಿದ್ದ ನಂಜನಗೂಡು ರಸ್ತೆಯಲ್ಲಿರುವ ಬಾರ್‌ವೊಂದಕ್ಕೆ ಕರೆದುಕೊಂಡು ಹೋಗಿ ಪರಿಶೀಲಿಸಿದರು.

ಅಲ್ಲಿಂದ ಲಲಿತಾದ್ರಿಪುರ ನಿರ್ಜನ ಪ್ರದೇಶಕ್ಕೆ ಕರೆ ತಂದು, ಆರೋಪಿಗಳು ಪಾರ್ಟಿ ಮಾಡಿದ ಸ್ಥಳವನ್ನು ಗುರುತಿಸಿ ಮಹಜರು ನಡೆಸಿದರು. ಬಳಿಕ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಕುಳಿತ್ತಿದ್ದ ಸ್ಥಳ, ನಂತರ ಯುವತಿ ಮೇಲೆ ಅತ್ಯಾಚಾರ ಎಸಗಿದ ಸ್ಥಳವನ್ನು ಮಹಜರು ನಡೆಸಿದರು. ಸಂಜೆ 5 ರಿಂದ 7 ರವರೆಗೆ ಸುಮಾರು 2 ಗಂಟೆ ಕಾಲ ಸ್ಥಳ ಮಹಜರು ನಡೆಯಿತು.

ಈ ವೇಳೆ ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್‌ ಗುಂಟಿ, ದೇವರಾಜ ವಿಭಾಗದ ಎಸಿಪಿ ಶಶಿಧರ್‌, ಆಲನಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್‌ ರವಿಶಂಕರ್‌ ಮತ್ತು ಸಿಬ್ಬಂದಿ ಇದ್ದರು.

ಮತ್ತಿಬ್ಬರಿಗಾಗಿ ಶೋಧ: ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಈಗಾಗಲೇ 5 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಉಳಿದಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳು ತಮ್ಮೊಂದಿಗೆ ಮತ್ತಿಬ್ಬರು ಇದ್ದರೆಂಬುದನ್ನು ಬಾಯಿಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳಿರುವ ಪೊಲೀಸರ ತಂಡ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದೆ.

click me!