ಮಗು ಅಪಹರಿಸಿ ರೇಪ್‌ ಮಾಡಿದ ವಿಕೃತ ಕಾಮುಕನಿಗೆ ಗುಂಡು

By Kannadaprabha NewsFirst Published Oct 13, 2020, 9:10 AM IST
Highlights

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಮಗುವಿನ ಪೋಷಕರು| ಮಧ್ಯರಾತ್ರಿ ತಾಯಿ ಎಚ್ಚರವಾದಾಗ ಮಗು ನಾಪತ್ತೆ ಬೆಳಕಿಗೆ| ಆಸ್ಪತ್ರೆಯಲ್ಲಿ ಮಗು ಪತ್ತೆ| ಆರೋಪಿಯ ಹೆಜ್ಜೆ ಗುರುತಿನ ಜಾಡು ಹಿಡಿದ ಪೊಲೀಸರು| ಬಂಧನ ವೇಳೆ ಮೊಂಡಾಟ, ಶೂಟೌಟ್‌| 

ಬೆಂಗಳೂರು(ಅ.13): ಎರಡು ದಿನಗಳ ಹಿಂದೆ ಸುರಿಯುವ ಮಳೆಯಲ್ಲಿ ನಗರದ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಹೆತ್ತವರ ಜತೆ ಆಶ್ರಯ ಪಡೆದಿದ್ದ ನಾಲ್ಕು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ವಿಕೃತ ಕಿಡಿಗೇಡಿಯೊಬ್ಬನಿಗೆ ಶ್ರೀರಾಮಪುರ ಠಾಣೆ ಪೊಲೀಸರು ಸೋಮವಾರ ಗುಂಡು ಹಾರಿಸಿ ಬಂಧಿಸಿದ್ದಾರೆ.

ದಿನೇಶ್‌ (32) ಎಂಬಾತನಿಗೆ ಗುಂಡು ಬಿದ್ದಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ. ಓಕಳಿಪುರ ಸಮೀಪ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗೆ ಇನ್‌ಸ್ಪೆಕ್ಟರ್‌ ಸುನೀಲ್‌ ನಾಯ್‌್ಕ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿ ನಡೆಸಿದ ದಾಳಿಯಿಂದ ಎಎಸ್‌ಐ ವೆಂಕಟಪ್ಪ ಅವರಿಗೆ ಪೆಟ್ಟಾಗಿದೆ ಎಂದು ಡಿಸಿಪಿ ಧರ್ಮೇಂದ್ರಕುಮಾರ್‌ ಮೀನಾ ಹೇಳಿದ್ದಾರೆ.

ಪೈಶಾಚಿಕ ಕೃತ್ಯ:

ಸಂತ್ರಸ್ತೆ ಮಗುವಿನ ಪೋಷಕರು ಮೂಲತಃ ತಮಿಳುನಾಡಿನ ಸೇಲಂನವರಾಗಿದ್ದು, ಮೆಜೆಸ್ಟಿಕ್‌ ಸುತ್ತಮುತ್ತ ಮಕ್ಕಳ ಆಟದ ಸಾಮಾನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸಿಟಿ ರೈಲ್ವೆ ನಿಲ್ದಾಣ ಹಿಂಭಾಗದ ಗೇಟ್‌ ಬಳಿಯ ಗುಡಿಸಿಲಿನಲ್ಲಿ ಆ ಬಡ ಕುಟುಂಬ ನೆಲೆಸಿದೆ. ಶನಿವಾರ ರಾತ್ರಿ 8.30ರಲ್ಲಿ ವ್ಯಾಪಾರ ಮುಗಿಸಿದ ಪೋಷಕರು, ಮಳೆ ಬೀಳುತ್ತಿದ್ದರಿಂದ ಸಿಟಿ ರೈಲ್ವೆ ನಿಲ್ದಾಣದ ಟಿಕೆಟ್‌ ಕಾಯ್ದಿರಿಸುವ ಜಾಗದಲ್ಲಿ ಮಕ್ಕಳ ಜತೆ ಮಲಗಿದ್ದರು. ಮಧ್ಯರಾತ್ರಿ ತಾಯಿ ಎಚ್ಚರಗೊಂಡಾಗ ನಾಲ್ಕು ವರ್ಷದ ಮಗಳು ನಾಪತ್ತೆಯಾಗಿದ್ದಳು. ಮರುದಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಮಗು ದಾಖಲಾಗಿರುವ ಸಂಗತಿ ಪೋಷಕರಿಗೆ ಗೊತ್ತಾಗಿದೆ. ಅಲ್ಲಿಗೆ ತೆರಳಿ ವಿಚಾರಿಸಿದಾಗ ವೈದ್ಯರು ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದರು.

ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ

ಹೆಜ್ಜೆ ಗುರುತು ನೀಡಿದ ಸುಳಿವು:

ಈ ಬಗ್ಗೆ ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ತನಿಖೆ ಆರಂಭಿಸಿದ ಇನ್‌ಸ್ಪೆಕ್ಟರ್‌ ಸುನೀಲ್‌ ಎಸ್‌.ನಾಯಕ ಅವರು, ಘಟನಾ ಸ್ಥಳ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಕೃತ್ಯ ನಡೆದ ಜಾಗದಲ್ಲಿ ಆರೋಪಿ ಹೆಜ್ಜೆ ಗುರುತು ಪತ್ತೆಯಾಗಿದೆ. ಬಳಿಕ ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಕುಂಟುಗಾಲಿನ ವ್ಯಕ್ತಿ ಹೆಜ್ಜೆ ಗುರುತು ಎಂಬುದು ಗೊತ್ತಾಗಿದೆ. ನಂತರ ಆ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಕೃತ್ಯ ನಡೆದ ವೇಳೆ ದಿನೇಶ್‌ ರೈಲ್ವೆ ನಿಲ್ದಾಣಕ್ಕೆ ಬಂದಿರುವುದು ಕಂಡಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಸೋಮವಾರ ನಸುಕಿನ 4.15ರಲ್ಲಿ ಓಕಳಿಪುರ ಆರ್‌ಆರ್‌ಕೆ ಜಂಕ್ಷನ್‌ ಬಳಿ ಆತನ ಇರುವಿಕೆಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೂಡಲೇ ತಮ್ಮ ಸಿಬ್ಬಂದಿ ಜತೆ ಆರೋಪಿಯನ್ನು ಬಂಧಿಸಲು ಇನ್‌ಸ್ಪೆಕ್ಟರ್‌ ತೆರಳಿದ್ದಾರೆ. ಆಗ ಪೊಲೀಸರ ಮೇಲೆ ದಾಳಿ ನಡೆಸಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಹಂತದಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ವೆಂಕಟಪ್ಪ ಅವರಿಗೆ ಪೆಟ್ಟಾಗಿದೆ. ತಕ್ಷಣವೇ ಇನ್‌ಸ್ಪೆಕ್ಟರ್‌ ಸುನೀಲ್‌ ನಾಯಕ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

5 ತೋರಿಸಿ ಕರೆದೊಯ್ದಿದ್ದ ಸೈಕೋ

ಕೆಲಸವಿಲ್ಲದೆ ಮೆಜೆಸ್ಟಿಕ್‌ ಸುತ್ತಮುತ್ತ ಅಲೆಯುವ ದಿನೇಶ್‌, ಶನಿವಾರ ರಾತ್ರಿ ಮಗುವಿಗೆ 5 ಆಸೆ ತೋರಿಸಿ ಕರೆದೊಯ್ದು ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಆತನ ವರ್ತನೆಗಳು ಅರೆ ಹುಚ್ಚನಂತೆ ಇದೆ. ಹೀಗಾಗಿ ಈ ಹಿಂದಿನ ಆತನ ಅಪರಾಧ ನಡೆದಿರುವ ಕೃತ್ಯಗಳ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!