ಕಂದನ ನಾನೇ ತಳ್ಳಿಬಿಟ್ಟೆ: ತಪ್ಪೊಪ್ಪಿಕೊಂಡ ತಾಯಿ: 3 ವರ್ಷದ ಮಗು ಸಾವು ಕೇಸ್‌ಗೆ ಟ್ವಿಸ್ಟ್

By Anusha KbFirst Published Jun 30, 2023, 12:25 PM IST
Highlights

ಎರಡು ತಿಂಗಳ ಹಿಂದೆ 3 ವರ್ಷದ ಮಗುವೊಂದು ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅದೊಂದು ಕೊಲೆ, ನಾನೇ ಆತನನ್ನು ಮೇಲಿನಿಂದ ತಳ್ಳಿಬಿಟ್ಟೆ ಎಂದು ಮಗುವಿನ ತಾಯಿ ತಪ್ಪೊಪ್ಪಿಕೊಂಡಿದ್ದು, ಮಗುವಿನ ತಂದೆ ಹಾಗೂ ಕುಟುಂಬದವರನ್ನು ಆಘಾತಕ್ಕೀಡುಮಾಡಿದೆ.

ಭೋಪಾಲ್: ಎರಡು ತಿಂಗಳ ಹಿಂದೆ 3 ವರ್ಷದ ಮಗುವೊಂದು ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅದೊಂದು ಕೊಲೆ, ನಾನೇ ಆತನನ್ನು ಮೇಲಿನಿಂದ ತಳ್ಳಿಬಿಟ್ಟೆ ಎಂದು ಮಗುವಿನ ತಾಯಿ ತಪ್ಪೊಪ್ಪಿಕೊಂಡಿದ್ದು, ಮಗುವಿನ ತಂದೆ ಹಾಗೂ ಕುಟುಂಬದವರನ್ನು ಆಘಾತಕ್ಕೀಡುಮಾಡಿದೆ. ಎರಡು ತಿಂಗಳ ಹಿಂದೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಟ್ಟಡದಿಂದ ಬಾಲಕ ಬಿದ್ದು ಗಂಭೀರ ಗಾಯಗೊಂಡಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಆದರೆ ಘಟನೆ ನಡೆದು ಎರಡು ತಿಂಗಳ ನಂತರ ಮಗುವಿನ ತಾಯಿ ತನ್ನ ಪತಿ ಬಳಿ ನಾನೇ ಅವನನ್ನು ಕೆಳಗೆ ತಳ್ಳಿದೆ ಎಂದು ತಪ್ಪೊಪ್ಪಿಕೊಂಡಿದ್ದು, ಮಗುವಿನ ತಂದೆ ಸೀದಾ ಪೊಲೀಸ್ ಠಾಣೆಗೆ ಬಂದು ಹೆಂಡತಿ ವಿರುದ್ಧ ದೂರು ನೀಡಿದ್ದಾರೆ. 

ತಮ್ಮ ಇಬ್ಬರು ಪುಟ್ಟ  ಮಕ್ಕಳೊಂದಿಗೆ  ಪತ್ನಿ ಜ್ಯೋತಿ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿರುವ ಪತಿ ಧ್ಯಾನ್‌ಸಿಂಗ್ ರಾಥೋರ್ ದಂಪತಿ ಗ್ವಾಲಿಯರ್‌ನ ತಾರಾಮಣಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರು. ಪುಟಾಣಿ  ಜಿತಿನ್‌ಗೆ ಸಾಯುವ ವೇಳೆ ಕೇವಲ 3 ವರ್ಷ ನಾಲ್ಕು ತಿಂಗಳಾಗಿತ್ತಷ್ಟೇ ಯಾರೊಬ್ಬರಿಗೂ ಆತ ಕಟ್ಟಡದಿಂದ ಕೆಳಗೆ ತಳ್ಳಲ್ಪಟ್ಟು ಸಾವನ್ನಪ್ಪಿದ ಎಂಬುದು ತಿಳಿದಿರಲಿಲ್ಲ. ಅಲ್ಲದೇ ಆತ ಇಬ್ಬರೂ ಮಕ್ಕಳಲ್ಲಿ ತಾಯಿ ಜ್ಯೋತಿ ಅತೀ ಹೆಚ್ಚು ಪ್ರೀತಿ ಮಾಡುತ್ತಿದ್ದ ಮಗುವಾಗಿದ್ದ, ಆದರೂ ಯಾಕೆ ಕರುಣೆ ಇಲ್ಲದೇ ತಾಯಿ ಈ ಕೃತ್ಯ ಎಸಗಿದಳು ಎಂಬುದೇ ಅಚ್ಚರಿಗೆ ಕಾರಣವಾಗಿದೆ. 

Latest Videos

ಇವಳೆಂಥಾ ತಾಯಿ: ಗೆಳೆಯನ ಜೊತೆ ಸೇರಿ 9 ವರ್ಷದ ಕಂದನ ಭೀಕರ ಹತ್ಯೆ

ಮಗುವಿನ ತಂದೆ ಧ್ಯಾನ್ ಸಿಂಗ್ ಅವರಿಗೆ ತಾವು ವಾಸವಿದ್ದ ಪ್ರದೇಶದಲ್ಲೇ ಇನ್ನೊಂದು ಕಟ್ಟಡವಿತ್ತು. ತನಗೆ ಮನೆಯಲ್ಲಿ ಬೋರಾಗುತ್ತಿದೆ ಹೀಗಾಗಿ ಆ ಕಟ್ಟಡದಲ್ಲಿ ಅಂಗಡಿಯನ್ನು ತೆರೆದುಕೊಡಿ ಎಂದು ಪತ್ನಿ ಜ್ಯೋತಿ  ಗಂಡನಿಗೆ ಕೇಳಿದ್ದಳು. ಪತ್ನಿ ಆಸೆಯಂತೆ ಪತಿ ಆ ಕಟ್ಟಡದಲ್ಲಿ ಅಂಗಡಿ ತೆರೆದಿದ್ದರು. ಇದಾಗಿ ಸ್ವಲ್ಪ ದಿನಗಳು ಕಳೆದ ನಂತರ ಪತ್ನಿ ಜ್ಯೋತಿಗೆ ಏನನಿಸಿತೋ ಏನೋ ಅಂಗಡಿ ಮುಚ್ಚುವಂತೆ ಪತಿಗೆ ಹೇಳಿದ್ದಾಳೆ. ಆದರೆ ಪತಿ ಆಕೆಯ ಮಾತನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ಇದಾದ ನಂತರ ಆಕೆ ಮಗುವನ್ನು ಕೆಳಕ್ಕೆ ತಳ್ಳುವ ಯೋಜನೆ ರೂಪಿಸಿದಳು ಎಂದು ತಿಳಿದು ಬಂದಿದೆ. 

ಶಾಪ್‌ನ ಸಮೀಪವೇ ತನ್ನ ಸಣ್ಣ ಮಗನನ್ನು ಕೆಳಗೆ ತಳ್ಳಿದರೆ, ಮುಂದೆ ಇದು ಅಶುಭ ಲಕ್ಷಣ ಎಂದು ಹೇಳಿ ಅಂಗಡಿಯನ್ನು ಮುಚ್ಚಬಹುದು ಎಂದು ಆಕೆ ಭಾವಿಸಿದ್ದಳು. ಜೊತೆಗೆ ಇದರಿಂದ ಮಗು ಸಾವನ್ನಪ್ಪಿ ಬಿಡಬಹುದು ಎಂಬ ಯೋಚನೆ ಅವಳಿಗೆ ಇರಲಿಲ್ಲ ಎಂದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ತಾಥಿಪುರ ಪೊಲೀಸ್ ಠಾಣೆಯ ಮುಖ್ಯಸ್ಥ ವಿನಯ್ ಶರ್ಮಾ ಹೇಳಿದ್ದಾರೆ. 

Bengaluru: ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತಾಯಿಯಿಂದಲೇ ಮಗುವಿನ ಹತ್ಯೆ

ಆದರೆ ಮಗುವಿನ ಸಾವಿನ ನಂತರ ಜ್ಯೋತಿಗೆ ಪಾಪಪ್ರಜ್ಞೆ ಕಾಡಲಾರಂಭಿಸಿದ್ದು, ಪತಿಯ ಬಳಿ ಆಕೆ ಈ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ಇತ್ತ ಪತ್ನಿ ಮಾತು ಕೇಳಿ ಗಂಡ ಗಾಬರಿ ಆಘಾತ ಹಾಗೂ ಮಗುವನ್ನು ಕೈಯಾರೆ ಕಳೆದುಕೊಂಡೆವಲ್ಲ ಎಂಬ ದುಃಖದಿಂದ ಸೀದಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಗಂಡ ನೀಡಿದ ದೂರಿನಂತೆ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಆಕೆ ತಪ್ಪೊಪ್ಪಿಕೊಂಡ ವಾಯ್ಸ್‌ ರೆಕಾರ್ಡರನ್ನು ಕೂಡ ಗಂಡ ಪೊಲೀಸರಿಗೆ ನೀಡಿದ್ದಾನೆ. ಆದರೆ ಪೊಲೀಸರು ಆಕೆಯನ್ನು ಇನ್ನೂ ಬಂಧಿಸಿಲ್ಲ, ಅಲ್ಲದೇ ಮಹಿಳೆ ತೀವ್ರ ಖಿನ್ನತೆಗೆ ಜಾರಿದ್ದಾಳೆ ಎಂದು ತಿಳಿದು ಬಂದಿದ್ದು, ಆಕೆ ಏನಾದರೂ ಪ್ರಾಣಕ್ಕೆ ಹಾನಿ ಮಾಡಿಕೊಳ್ಳದಂತೆ ತಡೆಯಲು ಬಹಳ ಜಾಗರೂಕವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ತಿಳಿದು ಬಂದಿದೆ. 

click me!