ನನಗೆ ಬೆಂಗಳೂರು ಮನೆ ಇದ್ದಂತೆ ನಾನು ನಗರ ತೊರೆದಿಲ್ಲ: ಹಿತೇಶಾ

By Kannadaprabha NewsFirst Published Mar 19, 2021, 7:47 AM IST
Highlights

ಘಟನಾವಳಿಯಿಂದಾಗಿ ಮೌನವಾಗಿದ್ದೇನೆ| ಗಲಾಟೆ ಘಟನೆ ಬಳಿಕ ನನ್ನ ಮೇಲೆ ಇ-ಮೇಲ್‌, ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌ ಹಾಗೂ ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ದಾಳಿ| ನಾನೇನೆ ಮಾತನಾಡಿದರೂ ತಿರುಚಿ ಪ್ರಚಾರ ನಡೆಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಹಿತೇಶಾ| 

ಬೆಂಗಳೂರು(ಮಾ.19):  ನನಗೆ ಬೆಂಗಳೂರು ಮನೆಯಂತೆ ಇದೆ. ನಾನು ಬೆಂಗಳೂರು ಬಿಟ್ಟು ಹೋಗಿದ್ದೇನೆ ಎಂಬುದು ಸುಳ್ಳು ವಂದತಿ. ಇತ್ತೀಚಿನ ಬೆಳವಣಿಗೆಯಿಂದ ನನಗೆ ಜೀವ ಭೀತಿ ಎದುರಾಗಿದೆ ಎಂದು ಫ್ಯಾಷನ್‌ ಡಿಸೈನರ್‌ ಹಿತೇಶಾ ಚಂದ್ರಾಣಿ  ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿಗೆ ನಿಗದಿತ ಸಮಯಕ್ಕಿಂತ ಊಟವನ್ನು ವಿಳಂಬವಾಗಿ ತಲುಪಿಸಿದ್ದ ಎಂಬ ಕಾರಣಕ್ಕೆ ಝೊಮ್ಯಾಟೋ ಡಿಲಿವರಿ ಬಾಯ್‌ ಕಾಮರಾಜ್‌ ಜತೆ ಗಲಾಟೆ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಹಿತೇಶಾ ಇಂದ್ರಾಣಿ ನಗರ ತೊರೆದಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರದಾಡಿತ್ತು.

ಈ ಊಹಾಪೋಹಗಳಿಗೆ ಇನ್‌ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಆಕೆ, ನಾನು ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದೇನೆ. ನಾನು ಬೆಂಗಳೂರು ತೊರೆದಿದ್ದೇನೆ ಎಂಬುದು ಸುಳ್ಳು. ಬೆಂಗಳೂರು ನನಗೆ ಮನೆ ಇದ್ದಂತೆ ಎಂದಿದ್ದಾರೆ.

ಜೋಮ್ಯಾಟೋ ಪ್ರಕರಣಕ್ಕೆ ಟ್ವಿಸ್ಟ್: ಬೆಂಗಳೂರಿನಿಂದ ಕಾಲ್ಕಿತ್ತ ಚಂದ್ರಾಣಿ !

ಝೊಮ್ಯಾಟೋ ಡಿಲವರಿ ಬಾಯ್‌ ಜತೆ ಗಲಾಟೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ತಪ್ಪಿತಸ್ಥಳು ಎನ್ನುವಂತೆ ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಸ್ತರದ ಜನರು ಬಿಂಬಿಸಿ ಟೀಕಿಸಿದ್ದಾರೆ. ಕೆಲವು ಸಂಘಟನೆಗಳು ನನಗೆ ಕರೆ ಮಾಡಿ ನಿಂದಿಸಿದ್ದಾರೆ. ನಾನು ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದೆ. ಆದರೆ ನನ್ನ ಮಾತುಗಳನ್ನು ತಿರುಚಿ ತಪ್ಪು ಭಾವನೆ ಬರುವಂತೆ ಪ್ರಚಾರ ಮಾಡಲಾಗಿದೆ. ಈ ಬೆಳವಣಿಗೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಈ ಗಲಾಟೆ ಘಟನೆ ಬಳಿಕ ನನ್ನ ಮೇಲೆ ಇ-ಮೇಲ್‌, ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌ ಹಾಗೂ ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ದಾಳಿ ನಡೆಸಿದ್ದಾರೆ. ನನ್ನ ಕುಟುಂಬದ ಬಗ್ಗೆ ಕೂಡಾ ಅವಹೇಳನ ಮಾಡುತ್ತಿದ್ದಾರೆ. ನಗರದಲ್ಲಿ ಏಕಾಂಗಿಯಾಗಿ ನೆಲೆಸುವ ಮಹಿಳೆಯರ ಸ್ಥಿತಿ ಬಗ್ಗೆ ಆತಂಕ ಮೂಡಿದೆ. ಈ ಘಟನಾವಳಿಗಳಿಂದ ಬೇಸತ್ತು ನಾನು ಮೌನವಾಗಿದ್ದೇನೆ. ನಾನೇನೆ ಮಾತನಾಡಿದರೂ ತಿರುಚಿ ಪ್ರಚಾರ ನಡೆಸಲಾಗುತ್ತದೆ ಎಂದು ಹಿತೇಶಾ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಉಚಿತ ಊಟಕ್ಕೆ ಆರ್ಡರ್‌ ಮಾಡಿದ್ದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದಾರೆ. ನನಗೆ ಝೊಮ್ಯಾಟೋ ಕಂಪನಿಯೇ ಉಚಿತ ಊಟಕ್ಕೆ ಆಫರ್‌ ನೀಡಿತ್ತು. ಹಾಗಂತ ಆಫರ್‌ನ ಆಹಾರವನ್ನು ಗ್ರಾಹಕರಿಗೆ ತಡವಾಗಿ ತಲುಪಿಸಬಹುದೇ ಎಂದು ಆಕೆ ಖಾರವಾಗಿ ಪ್ರಶ್ನಿಸಿದ್ದಾರೆ.
 

click me!