ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್; ಡಿಕೆಶಿ ಆಡಿಯೋ ಡಿಲೀಟ್‌ಗೆ ಎಸ್‌ಐಟಿ ಅಧಿಕಾರಿಯಿಂದಲೇ ಬೆದರಿಕೆ: ವಕೀಲ ದೇವರಾಜೇಗೌಡ

By Sathish Kumar KHFirst Published May 6, 2024, 8:14 PM IST
Highlights

ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಕೇಸಿನಲ್ಲಿ ಆಮಿಷವೊಡ್ಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿಯೋವನ್ನು ಡಿಲೀಟ್ ಮಾಡುವಂತೆ ಎಸ್‌ಐಟಿ ಅಧಿಕಾರಿ ಸುಮನ್ ಡಿ. ಪೆನ್ನೇಕರ್ ಬೆದರಿಕೆ ಹಾಕಿದ್ದಾರೆ ಎಂದು ವಕೀಲ ದೇವರಾಜೇಗೌಡ ಆರೋಪಿಸಿದರು.

ಬೆಂಗಳೂರು (ಮೇ 06): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಎಡಿಟ್ ಮಾಡಿ ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಲಾಗಿದೆ. ಆದರೆ, ಈ ಕೇಸಿನಲ್ಲಿ ಸರ್ಕಾರದ ಪರವಾಗಿ ಕೈ ಜೋಡಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಮಿಷವೊಡ್ಡಿದ ಆಡಿಯೋ ಡಿಲೀಟ್ ಮಾಡುವಂತೆ ಸ್ವತಃ ಎಸ್‌ಐಟಿ ತನಿಖಾ ಅಧಿಕಾರಿ ಸುಮನ್ ಡಿ. ಪೆನ್ನೇಕರ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಕೀಲ ದೇವರಾಜೇಗೌಡ ಮಹಿಳಾ ಅಧಿಕಾರಿ ಚಿತ್ರವನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಅನ್ನು ಕಾರು ಚಾಲಕ ಕಾರ್ತಿಕ್ ತಂದು ಕೊಟ್ಟಿದ್ದಾರೆ. ನನಗೆ ಕೊಟ್ಟ ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋ ಎಡಿಟೆಡ್ ಆಗಿಲ್ಲ. ಆದರೆ, ಈಗ ಹಾಸನದಲ್ಲಿ ಹಂಚಿಕೆ ಮಾಡಲಾಗಿರುವ ಪೆನ್‌ಡ್ರೈವ್‌ನಲ್ಲಿರುವ ವೀಡಿಯೋಗಳು ಎಡಿಟೆಡ್ ಆಗಿವೆ. ಸ್ವತಃ ಪೆನ್‌ಡ್ರೈವ್ ಇಟ್ಟುಕೊಂಡಿದ್ದ ಚಾಲಕ ಕಾರ್ತಿಕ್ ಅವರನ್ನು ಹಾಸನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರೇ ಡಿ.ಕೆ. ಶಿವಕುಮಾರ್ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪೆನ್‌ಡ್ರೈವ್ ಪಡೆದು ಎಡಿಟ್‌ ಮಾಡಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಹಾಸನ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಟ್ವಿಸ್ಟ್ ಕೊಟ್ಟ ದೇವರಾಜೇಗೌಡ; ಡಿಕೆಶಿ ಆಮಿಷದ ಆಡಿಯೋ ರಿಲೀಸ್

ಪೆನ್‌ಡ್ರೈವ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗೆ ಕೈ ಜೋಡಿಸುವಂತೆ ರಾಜ್ಯ ಸರ್ಕಾರದ ಪರವಾಗಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು. ಶಿವರಾಮೇಗೌಡ ಅವರು ನನನ್ನು ಭೇಟಿ ಮಾಡಲು ಬಂದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ ಬರೋಬ್ಬರಿ 2 ಗಂಟೆಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ನನಗೆ ಕ್ಯಾಬಿನೆಟ್ ದರ್ಜೆಯ ಹುದ್ದೆಯೊಂದನ್ನು ಕೊಡುವುದಾಗಿ ಆಮಿಷವನ್ನೂ ಒಡ್ಡಿದ್ದರು. ಈ ವಿಚಾರವನ್ನು ನಾನು ಎಸ್‌ಐಟಿ ತನಿಖಾ ತಂಡದ ಮುಂದೆ ಹೇಳಿದ್ದೇನೆ. ಅದಕ್ಕೆ ಸಂಬಂಧಪಟ್ಟ ಆಡಿಯೋವನ್ನು ಅವರಿಗೆ ಕೇಳಿಸಿದಾಗ, ಅವರು ಗಂಭೀರವಾಗಿ ಅದನ್ನು ಪರಿಗಣಿಸಿದರು.

ಆದರೆ, ನಾನು ಎಸ್‌ಐಟಿ ವಿಚಾರಣೆ ಎದುರಿಸಿ ಬಂದ ನಂತರ ಎಸ್‌ಐಟಿ ವಿಶೇಷ ತನಿಖಾ ಅಧಿಕಾರಿಯಾಗಿರುವ ಸುಮನ್ ಡಿ. ಪೆನ್ನೇಕರ್ ಅವರು ನನಗೆ ಕರೆ ಮಾಡಿ, ನಿಮ್ಮ ಬಳಿಯಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಡಿಯೋವನ್ನು ಡಿಲೀಟ್ ಮಾಡುವಂತೆ ತಿಳಿಸಿದರು. ಒಂದು ವೇಳೆ ನೀವು ಡಿ.ಕೆ. ಶಿವಕುಮಾರ್ ಅವರ ಆಡಿಯೋ ಡಿಲೀಟ್ ಮಾಡದಿದ್ದರೆ, ಪೆನ್‌ಡ್ರೈವ್ ಹಂಚಿಕೆ ಕೇಸ್‌ನಲ್ಲಿ ನಿಮ್ಮನ್ನು ಎ1 ಆರೋಪಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಲ್ಲಿ ಮುಖ್ಯವಾಗಿ ಎಸ್‌ಐಟಿ ಪಾರದರ್ಶಕವಾಗಿ ತನಿಖೆ ಮಾಡುತ್ತಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ವಕೀಲ ದೇವರಾಜೇಗೌಡ ತಿಳಿಸಿದರು.

ಈಗ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಮಾಡಿದ ಕೇಸ್‌ನಲ್ಲಿ ದೇವರಾಜೇಗೌಡ ಅವರನ್ನ A1 ಆರೋಪಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ನಿನ್ನೆ ಸಂಜೆ 5ಗಂಟೆವರೆಗೂ ನನ್ನ ಜೊತೆ ಸಂಧಾನ ಸಭೆ ಮಾಡಿ ವಿಫಲವಾದ ನಂತರ ಈಗ ನನ್ನ ಮೇಲೆಯೇ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಮಧ್ಯರಾತ್ರಿ ಎಸ್‌ಐಟಿ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಮಿಕ್ಸಿಂಗ್ ಆಗಿದೆ. ಈ ವಿಡಿಯೋ ಅದಕ್ಕೆ ನಾನು ಬಿಡುಗಡೆ ಮಾಡಿಲ್ಲ. ಅದಕ್ಕೆ ‌ನಾನು ಸಿಬಿಐಗೆ ಕೊಡುತ್ತಿದ್ದೇನೆ. ಇನ್ನು ಡಿ.ಕೆ. ಶಿವಕುಮಾರ್ 2 ಗಂಟೆ 31 ನಿಮಿಷ ನನ್ನ‌ಜೊತೆ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ. ಇದನ್ನ ಈಗಲೇ ಬಿಡುಗಡೆ ಮಾಡಿದ್ರೆ ಆಡಿಯೋ ಎಲ್ಲವೂ ತಿರುಚುತ್ತಾರೆ. ಹೀಗಾಗಿ ನಾನು ಬಿಡುಗಡೆ ಮಾಡಲ್ಲ. ಸಿಬಿಐ ತನಿಖೆಗೆ ನಾವು ಎಲ್ಲ ದಾಖಲೆ ಕೊಡ್ತೀವಿ ಎಂದು ಹೇಳಿದರು.

ಹಾಸನದ ಅಶ್ಲೀಲ ವಿಡಿಯೋ ರೂವಾರಿ ಡಿಕೆಶಿ; ಮೋದಿಗೆ ಮಸಿ ಬಳಿಯಲೆಂದೇ ಹುನ್ನಾರ: ವಕೀಲ ದೇವರಾಜೇಗೌಡ

ಸಂತ್ರಸ್ತರಿಗೆ ಇವರೇ ಹಣ ಕೊಟ್ಟು ಕರೆದುಕೊಂಡು ಬರ್ತಾರೆ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯರನ್ನು ಇವರೇ ಭೇಟಿ ಮಾಡಿ ದೂರು ಕೊಡಿಸುತ್ತಿದ್ದಾರೆ. ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರೇ ಸಂತ್ರಸ್ತರ ಭೇಟಿ ಮಾಡಿದ್ದಾರೆ. ಹಾಸನದ ಸ್ಕೈ ಹೋಟೆಲ್ ನಲ್ಲಿ ಭೇಟಿ ಮಾಡಿದ್ದಾರೆ. ಈ ಬಗ್ಗೆ ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಕಾಂಗ್ರೆಸ್ ನಾಯಕರು ನನ್ನ ಜೊತೆ ಕೈ ಜೋಡಿಸಿ ಎಂದು ಆಫರ್ ಕೊಟ್ಟಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಈ ಪ್ರಕರಣ ಚರ್ಚೆ ಆಗಬೇಕು. ಮೋದಿಯವರಿಗೆ ಕಪ್ಪು ಮಸಿ ಬಳೀಬೇಕು ಅಂತಲೇ ಆಫರ್ ಕೊಟ್ಟಿದ್ದಾನೆ ಎಂದು ತಿಳಿದರು.

click me!