ಕರ್ನಾಟಕದ ಮೊದಲ ಕ್ರಿಕೆಟ್ ಟೆನಿಸ್ ಬಾಲ್ ಘಟಕವಾದ ‘ಸೋಹಮ್ ರಬ್ಬರ್ ಟೆಕ್’ ಪುಟಿದೆದ್ದಿರುವುದು ಮಾತ್ರವಲ್ಲ ಮಾರುಕಟ್ಟೆಯನ್ನೂ ವಿಸ್ತರಿಸಿಕೊಳ್ಳುತ್ತಿದೆ. ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯದ ಚೆಂಡು ತಯಾರಿಕಾ ಸಂಸ್ಥೆ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಸಂತಕುಮಾರ್ ಕತಗಾಲ, ಕನ್ನಡಪ್ರಭ
ಕಾರವಾರ(ಜೂ.27): ಕೊರೋನಾ ಸಂಕಷ್ಟದ ಈ ಹೊತ್ತಲ್ಲಿ ಹೆಚ್ಚಿನ ಉದ್ಯಮಗಳು ನಷ್ಟಕ್ಕೊಳಗಾಗಿ ನೆಲಕಚ್ಚಿ ನಿಂತಿರುವಾಗ ಕರ್ನಾಟಕದ ಮೊದಲ ಕ್ರಿಕೆಟ್ ಟೆನಿಸ್ ಬಾಲ್ ಘಟಕವಾದ ‘ಸೋಹಮ್ ರಬ್ಬರ್ ಟೆಕ್’ ಪುಟಿದೆದ್ದಿರುವುದು ಮಾತ್ರವಲ್ಲ ಮಾರುಕಟ್ಟೆಯನ್ನೂ ವಿಸ್ತರಿಸಿಕೊಳ್ಳುತ್ತಿದೆ.
undefined
‘ಒಲಿಂಪಿಕ್’ ಬ್ರಾಂಡ್‌ನ ಬಾಲ್‌ಗಳನ್ನು ತಯಾರಿಸುವ ಕುಮಟಾದ ಹೆಗಡೆಯಲ್ಲಿರುವ ಈ ಘಟಕ ಲಾಕ್‌ಡೌನ್ ಅವಧಿಯಲ್ಲಿ 2 ತಿಂಗಳು ಬಂದ್ ಆಗಿತ್ತು. ಇದೀಗ ಮತ್ತೆ ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಪುನರಾರಂಭಗೊಂಡಿದ್ದು, ಪ್ರತಿದಿನ ಸಾವಿರಕ್ಕೂ ಹೆಚ್ಚು ಬಾಲ್‌ಗಳನ್ನು ತಯಾರಿಸಲಾಗುತ್ತಿದೆ.
ಘಟಕದಲ್ಲಿ ಸುಮಾರು 12 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಟೂರ್ನಮೆಂಟ್ ಟೆನಿಸ್ ಬಾಲ್, ಹಾರ್ಡ್ ಟೆನಿಸ್ ಬಾಲ್, ಲೋ ಟೆನಿಸ್‌ಬಾಲ್ ಹಾಗೂ ಪಂಚ್‌ಬಾಲ್ ಹೀಗೆ ವಿವಿಧ ರೀತಿಯ ಟೆನಿಸ್ ಬಾಲ್ ಉತ್ಪಾದಿಸಲಾಗುತ್ತಿದೆ. ಬಾಲ್ ತಯಾರಿಕೆಗೆ ಒಂದೆರಡು ಹಂತದಲ್ಲಿ ಹಳೆಯ ಕಾಲದ ಯಂತ್ರಗಳನ್ನು ಬಳಸಿಕೊಂಡರೂ ಬಹುತೇಕ ಹಂತಗಳಲ್ಲಿ ಬಾಲ್‌ಗಳು ತಯಾರಾಗುವುದು ಕಾರ್ಮಿಕರ ಕೈಯಿಂದಲೇ. ಇದೇ ಕಾರಣಕ್ಕೆ ಗುಣಮಟ್ಟದ ಬಾಲ್‌ಗಳು ಇಲ್ಲಿ ತಯಾರಾಗುತ್ತದೆ.
ಕ್ರಿಕೆಟ್ ಭವಿಷ್ಯ ಏನು? ಐಸಿಸಿ, ಬಿಸಿಸಿಐಗೆ ಸ್ಟಾರ್ ಸಂಸ್ಥೆ ಪತ್ರ!
ಮಳೆಗಾಲದಲ್ಲಿ ಕ್ರಿಕೆಟ್ ಆಡುವವರ, ಪಂದ್ಯಾವಳಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಸಹಜವಾಗಿ ಟೆನಿಸ್ ಬಾಲ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಮಳೆಗಾಲ ಕಳೆದ ಮೇಲೆ ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ಬಾಲ್‌ಗಳನ್ನು ತಯಾರಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಹಾಗೆಂದು ಮಳೆಗಾಲದಲ್ಲಿ ಬೇಡಿಕೆಯೇ ಇಲ್ಲವೆಂದಲ್ಲ. ರಾಯಚೂರು, ಬಳ್ಳಾರಿ ಮತ್ತಿತರ ಕಡೆಗಳಲ್ಲಿ ಮಳೆ ಕಡಿಮೆಯಾಗಿರುವುದರಿಂದ ಮಳೆಗಾಲದಲ್ಲೂ ಅಲ್ಲಿ ಕ್ರಿಕೆಟ್ ಆಡುತ್ತಾರೆ. ಹೀಗಾಗಿ ಅಲ್ಲಿಂದ ಸಾಕಷ್ಟು ಬೇಡಿಕೆ ಬರುತ್ತಿದೆ.
ಇದೀಗ ಸ್ವದೇಶ ಉತ್ಪನ್ನಗಳನ್ನೇ ಹೆಚ್ಚು ಬಳಸುವ ನಿಟ್ಟಿನಲ್ಲಿ ಅಭಿಯಾನ ಆರಂಭಗೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರೂ ಸಾಮಾಜಿಕ ಜಾಲತಾಣದಲ್ಲಿ ಶೇ.100ರಷ್ಟು ಸ್ವದೇಶಿ ಉತ್ಪಾದನೆಯಾದ ಓಲಿಂಪಿಕ್ ಬಾಲ್‌ಗಳನ್ನು ಬಳಸುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಈ ಪ್ರಸಿದ್ಧ ಬ್ರಾಂಡ್‌ಗೆ ಬೇಡಿಕೆ ಕುದುರಬಹುದೆನ್ನುವ ನಿರೀಕ್ಷೆ ಇದೆ.
‘ಒಲಿಂಪಿಕ್’ 35 ವರ್ಷಗಳಿಂದ ಮನೆಮಾತು
ಪಂಜಾಬ್, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಹೆಚ್ಚಾಗಿ ಟೆನಿಸ್ ಬಾಲ್‌ಗಳು ತಯಾರಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಅದರಲ್ಲೂ ಕುಮಟಾದಲ್ಲಿ ಮ್ಯಾನ್‌ಮೇಡ್ ಬಾಲ್ ತಯಾರಿಕಾ ಘಟಕ ಇರುವುದು ಬಹುತೇಕರಿಗೆ ಗೊತ್ತಿಲ್ಲ. ಕುಮಟಾದ ಹೆಗಡೆಯಲ್ಲಿ 1985ರಲ್ಲಿ ಪ್ರಸಾದ ಪ್ರೊಡಕ್ಟ್ ಹೆಸರಿನಲ್ಲಿ ಆರಂಭವಾದ ಘಟಕ 2014ರಲ್ಲಿ ಸೋಹಮ್ ರಬ್ಬರ್ ಟೆಕ್ ಎಂಬ ಹೆಸರಿನಿಂದ ಕ್ರಿಕೆಟ್ ಟೆನ್ನಿಸ್ ಬಾಲ್ ತಯಾರಿಕೆ ಮುಂದುವರಿಸಿದೆ.
ಗುಜರಾತಿನಲ್ಲಿ ಬಾಲ್ ಉತ್ಪಾದನಾ ಕಂಪನಿಯಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕುಮಟಾ ಸಮೀಪದ ಮಾನೀರ ಊರಿನ ಎಂ.ಜಿ.ಹೆಗಡೆ ನಂತರ ಘಟಕದ ಪಾಲುದಾರರಾದರು. ಅಲ್ಲಿ ಬಾಲ್ ಉತ್ಪಾದನೆಯ ಕಲೆ ಕಲಿತುಕೊಂಡು ತಮ್ಮ ಸಹೋದರನೊಂದಿಗೆ ಕುಮಟಾದಲ್ಲಿ ಘಟಕ ಆರಂಭಿಸಿದರು. ಈಗ ಎಂ.ಜಿ. ಹೆಗಡೆ ಪುತ್ರ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ದಿನೇಶ್ ಮಾನೀರ ಘಟಕ ನಿರ್ವಹಿಸುತ್ತಿದ್ದಾರೆ.