'ಬಹೀ ಖಾತಾ' ಎಂಬ ಅಕ್ಷಯ ಪಾತ್ರೆ: ಸಂಸತ್ತಿಗೆ ಬಂತು ನಿರ್ಮಲಾ ದಂಡಯಾತ್ರೆ!

By Suvarna NewsFirst Published Feb 1, 2020, 10:12 AM IST
Highlights

ಕೇಂದ್ರ ಬಜೆಟ್ ಮಂಡನೆಗೆ ಮೋದಿ ಸರ್ಕಾರ ಸಿದ್ಧ| ಕೇಂದ್ರ ಬಜೆಟ್ ಕುರಿತು ಜನಸಾಮಾನ್ಯರ ನಿರೀಕ್ಷೆಗಳೇನು?| ಕೇಂದ್ರ ಬಜೆಟ್ ಈ ಬಾರಿ ಏನೇನು ಕೌತುಕಗಳನ್ನು ಹೊತ್ತು ತರಲಿದೆ?| ಬಜೆಟ್ ಮೂಲಕ ಜನರ ಮನಸ್ಸನ್ನು ತಲುಪಲಿದೆಯಾ ಮೋದಿ ಸರ್ಕರ?| ಆರ್ಥಿಕ ಪುನಶ್ಚೇತನಕ್ಕೆ ಬಜೆಟ್ ಮೂಲಕ ಉತ್ತರ ಕೊಡಲಿದೆಯಾ ಮೋದಿ ಸರ್ಕಾರ?| ಜನಸಾಮಾನ್ಯರ ನಿರೀಕ್ಷೆಗಳನ್ನು ತಲುಪಲಿದೆಯಾ ನಿರ್ಮಲಾ ಬಜೆಟ್?|

ನವದೆಹಲಿ(ಫೆ.01):ಕೇಂದ್ರ ಬಜೆಟ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಮಂಡನೆಯಾಗಲಿದ್ದು, ಮೋದಿ ಸರ್ಕಾರದ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದೆ. ಆರ್ಥಿಕ ಸ್ಥಿತಿ ಅಷ್ಟೇನು ಉತ್ತಮವಲ್ಲದ ಈ ಸಂದರ್ಭದಲ್ಲಿ ಜನಪರ ಬಜೆಟ್ ಮಂಡಿಸುವ ಜವಾಬ್ದಾರಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿದೆ.

"

Delhi: Finance Minister Nirmala Sitharaman and MoS Finance Anurag Thakur arrive at the Parliament, to attend Cabinet meeting at 10:15 am. pic.twitter.com/GgY2Govlv1

— ANI (@ANI)

ಅದರಂತೆ ಕೇಂದ್ರ ಬಜೆಟ್ 2020ರ ನಿರೀಕ್ಷೆಗಳೇನು? ಜನಸಾಮಾನನ್ಯರೂ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಪರಿಣಿತರ ಆಕಾಂಕ್ಷೆಗಳೇನು ಎಂಬುದರತ್ತ ದೃಷ್ಟಿ ಹರಿಸಿದರೆ...

ಜಿಡಿಪಿ ಬೆಳವಣಿಗೆಯ ಸವಾಲು:

1. ಕುಸಿತದ ಹಾದಿಯಲ್ಲಿರುವ ಜಿಡಿಪಿ ಬೆಳವಣಿಗೆಯನ್ನು ಮತ್ತೆ ಮೇಲಕ್ಕೆತ್ತುವ ಜವಾಬ್ದಾರಿ ಮೋದಿ ಸರ್ಕಾರದ ಮೇಲಿದ್ದು, ಜಿಡಿಪಿ ಬೆಳವಣಿಗೆಯ ಸರಾಸರಿ ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದೆ.

2. ಪ್ರಮುಖವಾಗಿ ಆಟೋಮೊಬೈಲ್, ಮೂಲಸೌಕರ್ಯ, ಕೈಗಾರಿಕೆ ಮುಂತಾದ ಕ್ಷೇತ್ರಗಳ ಅಭಿವೃದ್ಧಿ ತುರ್ತು ಅವಶ್ಯವಾಗಿದ್ದು, ಈ ಕುರಿತು ಬಜೆಟ್ ಏನು ಪರಿಹಾರ ಒದಗಿಸಲಿದೆ ಕಾದು ನೋಡಬೇಕಿದೆ.

3, ಪ್ರಸ್ತುತ ಆರ್ಥಿಕ ಸಮೀಕ್ಷೆಯ ಪ್ರಕಾರ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.6.1ರಿಂದ ಶೇ.6.8ರವರೆಗೆ ಇರಲಿದ್ದು, ಪ್ರಸ್ತುತ ಇರುವ ಶೇ.5ರ ಜಿಡಿಪಿ ಬೆಳವಣಿಗೆಯನ್ನು ಮತ್ತಷ್ಟು ವೃದ್ಧಿಸಬೇಕಿದೆ.

4. ಆರ್ಥಿಕ ಪುನಶ್ಚೇತನಕ್ಕೆ ಕೇವಲ ವಿದೇಶಿ ಹೂಡಿಕೆಯನ್ನಷ್ಟೇ ಅವಲಂಬಿಸದೇ ದೇಶೀಯ ವ್ಯಾಪಾರ ಕ್ಷೇತ್ರಕ್ಕೂ ಬಲ ತುಂಬುವ ಮೂಲಕ ಈ ಗುರಿ ತಲುಪುವುದು ಸಾಧ್ಯ.

ಕೃಷಿ:

1. ದೇಶದ ಕೃಷಿ ಕ್ಷೇತ್ರದತ್ತ ಮೋದಿ ಸರ್ಕಾರ ಹೆಚ್ಚಿನ ಗಮನ ಹರಿಸಿರುವುದು ಈ ಹಿಂದಿನ ಬಜೆಟ್’ಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಈಗಾಗಲೇ ರೈತರ ಬೆಂಬಲಕ್ಕೆ ನಿಂತಿರುವ ಸರ್ಕಾರ, ಈ ಬಾರಿಯ ಬಜೆಟ್ ಮೂಲಕ ರೈತಾಪಿ ವರ್ಗಕ್ಕೆ ಮತ್ತಷ್ಟು ಬಲ ತುಂಬಬೇಕಿದೆ.

2. ಈಗಾಗಲೇ ಅಸ್ತಿತ್ವದಲ್ಲಿರುವ ರೈತಪರ ಯೋಜನೆಗಳಿಗೆ ಮತ್ತಷ್ಟು ವೇಗ ನೀಡಿ ದೇಶದ ಬೆನ್ನೆಲುಬಾದ ರೈತನ ನೆರವಿಗೆ ಬರುವುದು ಮೋದಿ ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲೊಂದು.

3. ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಈಗಾಗಲೇ ಪ್ರಧಾನಿ ಮೋದಿ ವಚನ ನೀಡಿದ್ದು, ಇದನ್ನು ಸಾಕಾರಗೊಳಿಸಲು ಅಗತ್ಯ ಕ್ರಮಗಳತ್ತ ಈ ಬಾರಿಯ ಬಜೆಟ್ ಗಮನಹರಿಸಬೇಕಿದೆ.

4. ಕೃಷಿಕರ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿಸುವ ವ್ಯವಸ್ಥೆಯನ್ನು ರೈತರು ಈ ಬಜೆಟ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ.

ಭದ್ರತೆ:
1. ನೆರೆಯ ರಾಷ್ಟ್ರಗಳಿಂದ ನಿರಂತರ ಬೆದರಿಕೆ ಎದುರಿಸುತ್ತಿರುವ ಭಾರತಕ್ಕೆ ಸಶಸ್ತ್ರಪಡೆಗಳನ್ನು ಆಧುನೀಕರಣಗೊಳಿಸುವ ಮೂಲಕ ಮತ್ತಷ್ಟು ಬಲಪಡಿಸಬೇಕಿದೆ.

2. ಈಗಾಗಲೇ ಸೈನ್ಯಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗಿದ್ದು, ತ್ಯಾಧುನಿಕ ವಿದೇಶಿ ಉಪಕರಣಗಳ ಆಮದು ಕೂಡ  ಸೈನ್ಯದ ಆತ್ಮಸ್ಥೈರ್ಯ ಹೆಚ್ಚಿಸಿದೆ.

3. ಆದರೂ ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಮತ್ತಷ್ಟು ಕಾರ್ಯೋನ್ಮುಖವಾಗುವುದು ಶತಸಿದ್ಧ.

4. ರಕ್ಷಣಾ ಬಜೆಟ್ ಗಾತ್ರ ಹೆಚ್ಚಿಸಿ ಆ ಮೂಲಕ ಸಶಸ್ತ್ರಪಡೆಗಳನ್ನು ಆಧುನಿಕರಣಗೊಳಿಸಿ ದೇಶದ ಗಡಿಗಳ ಸುರಕ್ಷತೆ ಮೋದಿ ಸರ್ಕಾರದ ಪ್ರಥಮ ಆದ್ಯತೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೇಂದ್ರ ಬಜೆಟ್ 2020: ನಿರೀಕ್ಷೆಗಳ ಭಾರ, ಏನಿರಲಿದೆ ನಿರ್ಮಲಾ ಬಜೆಟ್ ಸಾರ?

ಕೈಗಾರಿಕೆ:

1. ಈ ಮೇಲೆ ಹೇಳಿದಂತೆ ಆಟೋಮೊಬೈಲ್, ಮೂಲಸೌಕರ್ಯ ಸೇರಿದಂತೆ ಪ್ರಮುಖ ಕೈಗಾರಿಕಾ ವಲಯದ ಕ್ಷೇತ್ರಗಳು ಮಂದಗತಿಯಲ್ಲಿ ಸಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಒದಗಿಸಬೇಕಿದೆ.

2. ಎಲ್ಲಾ ಕ್ಷೇತ್ರಗಳಿಗೂ ಸಮಾನ ಪ್ರಾತಿನಿಧ್ಯ ಇಂದಿನ ತುರ್ತು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

3. ಸೇವಾ ವಲಯದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಣೆಗೆ ಸರ್ಕಾರ ಮುಂದಾಗಬೇಕಿದ್ದು, ಇದಕ್ಕೆ ಕೇವಲ ವಿದೇಶಿ ಬಂಡವಾಳವನ್ನಷ್ಟೇ ನೆಚ್ಚಿಕೊಳ್ಳದೇ ದೇಶೀಯ ಬಂಡವಾಳ ವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ.  

4. ಮೂಲ ಸೌಕರ್ಯ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಲ ತುಂಬಿ, ದೇಶದ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯ.

ಉದ್ಯೋಗ ಸೃಷ್ಟಿ:
1. ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಹೆಚ್ಚಿನ ನಿರುದ್ಯೋಗ ಪ್ರಮಾಣದ ಕಳಂಕ ಎದುರಿಸುತ್ತಿರುವ  ಮೋದಿ ಸರ್ಕಾರ, ಉದ್ಯೋಗ ಸೃಷ್ಟಿಯ ಅನಿವಾರ್ಯತೆಗೆ ಸಿಲುಕಿದೆ. ಎಲ್ಲಾ ವಲಯಗಳಲ್ಲೂ ನಿರುದ್ಯೋಗ ಹೆಚ್ಚಾಗಿದ್ದು, ಇದಕ್ಕಾಗಿ ವಲುಯಗಳ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಸುವತ್ತ ಸರ್ಕಾರ ಗಮನಹರಿಸಬೇಕಿದೆ.

2. ಆರ್ಥಿಕ ಹಿಂಜರಿತದಿಂದ ಕೆಲಸ ಇಲ್ಲವಾಗಿದ್ದು, ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಬೇಕಿದೆ. ಈ ಮೂಲಕ ಉದ್ಯೋಗ ಸೃಷ್ಟಿಯೂ ಕಷ್ಟಕರವಾಗಲಾರದು.

3. ಸೇವಾ ಕ್ಷೇತ್ರ ಹಾಗೂ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯವಿದ್ದು, ಯುವ ಸಮುದಾಯಕ್ಕೆ ಸೂಕ್ತ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವುದು ಉತ್ತಮ.

Delhi: Finance Minister Nirmala Sitharaman and MoS Finance Anurag Thakur arrive at the Parliament, to attend Cabinet meeting; Presentation of Union Budget 2020-21 at 11 am pic.twitter.com/J217IqrVUr

— ANI (@ANI)

ಮಹಿಳೆ:
1. ಮಹಿಳಾ ಸಬಲೀಕರಣವಿಲ್ಲದೇ ದೇಶದ ಅಭಿವೃದ್ಧಿ ಅಸಾಧ್ಯ ಎಂಬುದು ಗೋಡೆಬರಹದಷ್ಟೇ ಸತ್ಯ. ಈ ನಿಟ್ಟಿನಲ್ಲಿ ಮಹಿಳಾ ಸಮುದಾಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದ್ದು, ಆಧುನಿಕ ಭಾರತದಲ್ಲಿ ಮಹಿಳೆಗ ಸೂಕ್ತ ಸ್ಥಾನಮಾನ ಕೊಡುವ ಕರ್ತವ್ಯವನ್ನು ಮೋದಿ ಸರ್ಕಾರ ಹೇಗೆ ನಿಭಾಯಿಸಲಿದೆ ಕಾದು ನೋಡಬೇಕಿದೆ.

2. ಕಳೆದ ವರ್ಷದ ಬಜೆಟ್‌ನಲ್ಲಿ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯಾ ನಿಧಿಗೆ 891 ಕೋಟಿ ರು. ಮೀಸಲಿಡಲಾಗಿತ್ತು. ಆದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ.

3. ಈ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಗೆ ಬಜೆಟ್‌ನಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಪ್ರಮುಖ ನಿರೀಕ್ಷೆಗಳಲ್ಲಿ ಒಂದು.

4. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ, ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶ, ದೆಹಲಿಯಲ್ಲಿ ಜಾರಿಯಲ್ಲಿರುವ ಮಹಿಳೆಯರಿಗಾಗಿಯೇ ಕ್ಯಾಬ್‌ ವ್ಯವಸ್ಥೆ, ಪಿಂಕ್‌ ಆಟೋ ಮತ್ತು ಪಿಂಕ್‌ ಬಸ್‌ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿ ಮಾಡಬಹುದೆಂಬ ನಿರೀಕ್ಷೆ ಇದೆ. ಏಕಾಂಗಿಯಾಗಿ ಪ್ರವಾಸ ಕೈಗೊಳ್ಳುವ ಮಹಿಳೆಯರ ರಕ್ಷಣೆಗೂ ಸರ್ಕಾರ ಭದ್ರತೆಗೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಆದಾಯ ತೆರಿಗೆ:

1. ಪ್ರತಿ ಬಾರಿಯಂತೆ ಈ ಬಾರಿಯೂ ದೇಶದ ಮಧ್ಯಮವರ್ಗ ಆದಾಯ ತೆರಿಗೆ ಕಡಿತ ನಿರೀಕ್ಷೆಯಲ್ಲಿದೆ. ಕೇಂದ್ರ ಸರ್ಕಾರ ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಕೆಲ ಷರತ್ತಿಗೆ ಒಳಪಟ್ಟು 5 ಲಕ್ಷ ರು.ವರೆಗೆ ಹೆಚ್ಚಳ ಮಾಡಿದೆ. ಈ ಬಾರಿ ಆದಾಯ ತೆರಿಗೆ ವಿನಾಯ್ತಿಯ ಸ್ಲಾ್ಯಬ್‌ ಅನ್ನು ಇನ್ನಷ್ಟುಏರಿಸುವ ನಿರೀಕ್ಷೆಯನ್ನು ಮಧ್ಯಮ ವರ್ಗದವರು ಹೊಂದಿದ್ದಾರೆ.

2. ತೆರಿಗೆ ಸಂಗ್ರಹದಲ್ಲಿ ಕೊರತೆ ಬೀಳುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಭಾರೀ ಬದಲಾವಣೆ ಅಥವಾ ವಿನಾಯ್ತಿ ಸಾಧ್ಯತೆ ಬಹುತೇಕ ಕ್ಷೀಣಿಸಿದೆ ಎಂದು ಹೇಳಲಾಗುತ್ತಿದೆ.

3. ಆದಾಯ ತೆರಿಗೆ ವಿನಾಯ್ತಿ ಮಿತಿ ಈಗಿರುವ 5 ಲಕ್ಷ ರು.ನಿಂದ 7 ಲಕ್ಷ ರು.ಗೆ ಏರಿಕೆಯಾದರೆ ಜನಸಾಮಾನ್ಯ ತೆರಿಗೆ ಪಾವತಿದಾರರಿಗೆ ಸಾಕಷ್ಟುಉಳಿತಾಯವಾಗಲಿದೆ.

4. ಈಗಿರುವ ತೆರಿಗೆ ಸ್ಲಾಬ್ ಬದಲಿಸಿ, 7 ಲಕ್ಷ ರು.ಗಳಿಂದ 10 ಲಕ್ಷ ರು.ತನಕದ ಆದಾಯಕ್ಕೆ ಶೇ.10 ಹಾಗೂ 10 ಲಕ್ಷ ರು.ಗಳಿಂದ 20 ಲಕ್ಷ ರು. ಆದಾಯಕ್ಕೆ ಶೇ.20ರಷ್ಟುತೆರಿಗೆ ವಿಧಿಸುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರ:
1. ಮೋದಿ ಸರ್ಕಾರದ ಅವಧಿಯಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಬ್ಯಾಂಕಿಂಗ್ ಕ್ಷೇತ್ರದ ಅಭ್ಯುದ್ಯಯ ಸರ್ಕಾರದ ಜವಾಬ್ದಾರಿ. NPAಗಳಿಂದ ಕಂಗಾಲಾಗಿರುವ ಬ್ಯಾಂಕಿಂಗ್ ಕ್ಷೇತ್ರಕ್ಕೆ ಆರ್ಥಿಕ ಬಲ ನೀಡಿ ಅದನ್ನು ಮತ್ತಷ್ಟು ಜನಸ್ನೇಹಿಗೊಳಿಸಬೇಕಿದೆ.

2. ಬ್ಯಾಂಕಿಂಗ್‌ ವಲಯದ ಸಮಸ್ಯೆಗಳಿಗೆ ಪರಿಹಾರ ಸೇರಿ ಹಲವು ಉಪಕ್ರಮಗಳನ್ನು ಎದುರುನೋಡಲಾಗುತ್ತಿದೆ.

3. ಸಾರ್ವಜನಿಕ ವಲಯದ ಬ್ಯಾಂಕ್’ಗಳ ಪುಶ್ಚಚೇತನಕ್ಕೆ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದ್ದರೂ, ಅವುಗಳನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.

4. ಈ ಬಾರಿಯ ಬಜೆಟ್’ನಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಇರಾದೆ ಸರ್ಕಾರಕ್ಕಿರುವುದು ದಿಟ.

ರೈಲ್ವೇ:
1. ಖಾಸಗೀಕರಣದ ಹೊಸ್ತಿಲಲ್ಲಿರುವ ರೈಲ್ವೇ ಇಲಾಖೆಯನ್ನು ಸರ್ಕಾರ ತನ್ನ ಬಳಿಯೇ ಇಟ್ಟುಕೊಂಡು ಅದರ ಶೇಯೋಭಿವೃದ್ಧಿ ಮಾಡುವುದು ಅನಿವಾರ್ಯ. ರೈಲ್ವೇ ಪ್ರಯಾಣ ದರ ನಿಯಂತ್ರಣದಲ್ಲಿದ್ದರೂ, ಮೂಲಕ ಸೌಕರ್ಯ ಹಾಗೂ ಆಧುನೀಕರಣದತ್ತ ಗಮನ ಹರಿಸಬೇಕಿದೆ.

2. ಬುಲೆಟ್ ರೈಲು ಯೋಜನೆಯೂ ಸೇರಿದಂತೆ ಮೆಟ್ರೋ ಹಾಗೂ ಇನ್ನಿತರ ಆಧುನಿಕ ಸಾರಿಗೆ ವಿಧಾನಗಳ ಯೋಜನೆಗಳಿಗೆ ವೇಗ ನೀಡಬೇಕಿದೆ.

3. ಅಲ್ಲದೇ ಸಾಮಾನ್ಯ ರೈಲುಗಳ ಸ್ಥಿತಿಯನ್ನು ಉತ್ತಮಗೊಳಿಸಿ ಜನಸಾಮಾನ್ಯರಿಗೂ ಒಳ್ಳೆಯ ಸೌಲಭ್ಯ ಒದಗಿಸಿ ಕೊಡಬೇಕಿದೆ.

4. ನಷ್ಟದಲ್ಲಿರುವ ರೈಲ್ವೇ ಇಲಾಖೆಯನ್ನು ಲಾಭದ ಹಳಿ ಮೇಲೆ ತಂದು ವಿಶ್ವದ ಶ್ರೇಷ್ಠ ರೈಲ್ವೇ ವ್ಯವಸ್ಥೆಯಲ್ಲಿ ಭಾರತವನ್ನೂ ಸೇರಿಸುವುದು ಸರ್ಕಾರದ ಕರ್ತವ್ಯ.

ನೌಕರ ವರ್ಗ:

1. ಈ ದೇಶದ ಹಾಗೂ ಆಡಳಿತ ಯಂತ್ರದ ಭಾಗವಾಗಿರುವ ನೌಕರ ವರ್ಗದ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಲಿದೆ.

2. 2019ರ ಬಜೆಟ್‌ನಲ್ಲಿ ಸಂಬಳದಾರರ ಸ್ಟಾಂಡರ್ಡ್‌ ಡಿಡಕ್ಷನ್‌ ಅನ್ನು 40 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಇದನ್ನು 75000ಕ್ಕೆ ಏರಿಸಬಹುದೆಂದು ವೇತನದಾರರು ನಿರೀಕ್ಷಿಸಿದ್ದಾರೆ.

3. ಪಿಂಚಣಿ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡಿ ಆ ಮೂಲಕ ನೌಕರರ ಆತ್ಮಸ್ಥೈರ್ಯ ಹೆಚ್ಚಿಸಲು ಮೋದಿ ಸರ್ಕಾರ ಕರಮ ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

3. ಪ್ರಮುಖವಾಗಿ ಸೇವಾ ಭಧ್ರತೆ ಒದಗಿಸಿ ನೌಕರ ವರ್ಗವನ್ನು ಮತ್ತಷ್ಟು ಚುರುಕುಗೊಳಿಸಬೇಕು. ವೇತನ ಹೆಚ್ಚಳ ಸೇರಿದಂತೆ ನೌಕರ ವರ್ಗದ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದು ಹೇಗೆಂಬುದರ ಕುರಿತು ಸರ್ಕಾರ ಚಿಂತಿಸಬೇಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಬಜೆಟ್ ಮೂಲಕ ಮೋದಿ ಸರ್ಕಾರ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರ್ಣಗೊಳಿಸಬೇಕಿದ್ದು, ಆರ್ಥಿಕ ಪುನಶ್ಚೇತನದ ಮೂಲಕ ನವ ಭಾರತದ ನಿರ್ಮಾಣಕ್ಕೆ ಮುಂದಡಿ ಇಡಬೇಕಿದೆ.

click me!