ಸೌರಶಕ್ತಿ ಖರೀದಿ ಡೀಲ್‌ನಲ್ಲಿ ಲಂಚದ ಆರೋಪದ ಮದ್ಯೆ, ಅಮೆರಿಕದ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ಗೌತಮ್ ಅದಾನಿ ಮತ್ತು ಇತರರಿಗೆ ಸಮನ್ಸ್ ಜಾರಿ ಮಾಡಿದೆ.
ನ್ಯೂಯಾರ್ಕ್: ಸೌರಶಕ್ತಿ ಖರೀದಿ ಡೀಲ್ ಕುದುರಿಸಲು ಅದಾನಿ ಸಮೂಹ ಭಾರತದಲ್ಲಿ ಅಧಿಕಾರಿಗಳಿಗೆ ಲಂಚ ನೀಡಿತ್ತು ಎಂಬ ಆರೋಪದ ಪ್ರಕರಣದಲ್ಲಿ ಇದೀಗ ಅಮೆರಿಕದ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ಯುಎಸ್ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮೀಷನ್ (ಎಸ್ ಇಸಿ), ಗೌತಮ್ ಅದಾನಿ ಮತ್ತು ಇತರರಿಗೆ ಸಮನ್ಸ್ ಜಾರಿ ಮಾಡಿದೆ. 2 ದಿನಗಳ ಹಿಂದಷ್ಟೇ ಅಮೆರಿಕದ ನ್ಯಾಯಾಂಗ ಇಲಾಖೆ ಇದೇ ಪ್ರಕರಣದಲ್ಲಿ ಗೌತಮ್ ಅದಾನಿ ಸೇರಿ 7 ಜನರ ವಿರುದ್ಧ ಲಂಚದ ದೋಷಾರೋಪ ಹೊರಿಸಿತ್ತು.
ಅದರ ಬೆನ್ನಲ್ಲೇ ಅಮೆರಿಕದ ಷೇರುಪೇಟೆ ನಿಯಂತ್ರಣಾ ಸಂಸ್ಥೆ ಕೂಡಾ ಅದಾನಿ ಸಮೂಹಕ್ಕೆ ನೋಟಿಸ್ ಜಾರಿ ಮಾಡಿದೆ. ಅಹಮದಾಬಾದ್‌ನಲ್ಲಿರುವ ಅದಾನಿ ನಿವಾಸಕ್ಕೆ ರವಾನಿಸಲಾದ ನೋಟಿಸ್‌ನಲ್ಲಿ, 'ನೋಟಿಸ್ ತಲುಪಿದೆ 21 ದಿನಗಳಲ್ಲಿ ನಿಮ್ಮ ಮೇಲೆ ದೂರುದಾರರು ಹೊರಿಸಿದ ಆರೋಪಗಳ ಕುರಿತು ಸ್ಪಷ್ಟನೆ ನೀಡಬೇಕು. ಒಂದು ವೇಳೆ ಪ್ರತಿಕ್ರಿಯೆ ನೀಡಲು ವಿಫಲರಾದಲ್ಲಿ ದೂರುದಾರರು ನಿಮ್ಮಿಂದ ಕೇಳಿರುವ ಪರಿಹಾರದ ಪ್ರಕರಣದಲ್ಲಿ ನಿಮ್ಮ ವಿರುದ್ದ ತೀರ್ಪು ನೀಡಲಾಗುವುದು' ಎಚ್ಚರಿಸಲಾಗಿದೆ.
ಯಾವ ಕಂಪನಿ ಮೇಲೂ ದೋಷಾರೋಪ ಇಲ್ಲ ಅದಾನಿ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿ ಸ್ಪಷ್ಟನೆ
ನವದೆಹಲಿ: ಷೇರುಪೇಟೆಯಲ್ಲಿ ನೊಂದಾಯಿತವಾಗಿರುವ ಅದಾನಿ ಸಮೂಹದ 11 ಕಂಪನಿಗಳ ಪೈಕಿ ಯಾವುದೇ ಕಂಪನಿಗಳ ಮೇಲೂ ಅಕ್ರಮದ ಆರೋಪ ಹೊರಿಸಿಲ್ಲ ಎಂದು ಅದಾನಿ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ರೋಬಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಅಮೆರಿಕದ ನ್ಯಾಯಾಲಯದಲ್ಲಿ ದೋಷಾರೋಪ ಹೊರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, 'ದೋಷಾರೋಪದ ಕುರಿತು ನಾನಾ ಸುದ್ದಿಗಳು ಬರುತ್ತಿವೆ. ಆದರೆ ನ್ಯಾಯಾಲಯ ಇದುವರೆಗೂ ದೋಷರೋಪದ ಕುರಿತು ತನ್ನ ತೀರ್ಪು ನೀಡಿಲ್ಲ. ಜೊತೆಗೆ ಇದೀಗ ಮಾಡಿರುವುದು ಕೇವಲ ಆರೋಪವಷ್ಟೇ. ಆರೋಪ ಸಾಬೀತು ಆಗುವವರೆಗೂ, ಅವರನ್ನು ನಿರ್ದೋಷಿ ಎಂದೇ ಪರಿಗಣಿಸ ಲಾಗುತ್ತದೆ. ಹೀಗಾಗಿ ಸಮೂಹದ ಮೇಲೆ ಕೇಳಿ ಬಂದಿರುವ ಆರೋಪಗಳ ಕುರಿತು ನಮ್ಮ ಕಾನೂನು ತಂಡದ ಅನುಮೋದನೆ ಬಳಿಕ ಸುದೀರ್ಘ ಸ್ಪಷ್ಟನೆ ನೀಡಲಾಗುವುದು' ಎಂದು ಹೇಳಿದ್ದಾರೆ.