ಕೊರೋನಾ ವೈರಸ್ ತನ್ನ ಉಗ್ರ ಪ್ರತಾಪವನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲವಾಗಿದೆ. ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಒಂದೇ ದಿನ ಐತಿಹಾಸಿಕ ದಾಖಲೆಯ 2919 ಅಂಕಗಳಷ್ಟುಕುಸಿತ ಕಂಡಿದೆ.
ಮುಂಬೈ (ಮಾ.13): ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ತನ್ನ ಉಗ್ರ ಪ್ರತಾಪವನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲವಾಗಿದೆ. ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಒಂದೇ ದಿನ ಐತಿಹಾಸಿಕ ದಾಖಲೆಯ 2919 ಅಂಕಗಳಷ್ಟುಕುಸಿತ ಕಂಡಿದೆ. ಸೆನ್ಸೆಕ್ಸ್ ಇತಿಹಾಸದಲ್ಲಿ ಒಂದು ದಿನದ ವಹಿವಾಟಿನಲ್ಲಿ ಸೂಚ್ಯಂಕ ಈ ಪರಿ ಕುಸಿದಿದ್ದು ಇದೇ ಮೊದಲು. ಇದರಿಂದಾಗಿ ನೋಡನೋಡುತ್ತಿದ್ದಂತೆ ಹೂಡಿಕೆದಾರರ ಸಂಪತ್ತು 11 ಲಕ್ಷ ಕೋಟಿ ರು.ನಷ್ಟುಕರಗಿ ಹೋಗಿದ್ದು, ಹೂಡಿಕೆದಾರರು ಅಂಜುವಂತಾಗಿದೆ.
ಸೋಮವಾರ ಸೆನ್ಸೆಕ್ಸ್ 1942 ಅಂಕಗಳಷ್ಟುಕುಸಿತ ಕಂಡಿತ್ತು. ಅದು ಈವರೆಗಿನ ಒಂದು ದಿನದ ಅತ್ಯಂತ ಘೋರ ಕುಸಿತವಾಗಿತ್ತು. ಗುರುವಾರ ಆ ದಾಖಲೆಯನ್ನು ಮುರಿದ ಸೂಚ್ಯಂಕ, ಒಂದು ಹಂತದಲ್ಲಿ 3204 ಅಂಕಗಳ ಇಳಿಕೆ ಕಂಡಿತು. ಬಳಿಕ ಸ್ವಲ್ಪ ಚೇತರಿಸಿಕೊಂಡು ದಿನದಂತ್ಯಕ್ಕೆ 2919.26 ಅಂಕಗಳ ಕುಸಿತದೊಂದಿಗೆ 32,778 ಅಂಕಗಳಲ್ಲಿ ವಹಿವಾಟು ಮುಗಿಸಿತು.
undefined
ಜ.14ರಂದು 42,274 ಅಂಕ ತಲುಪಿ ಸರ್ವಾಧಿಕ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಸುಮಾರು 9,500 ಅಂಕಗಳಷ್ಟುಕುಸಿತ ಕಾಣುವ ಮೂಲಕ 2 ವರ್ಷ 3 ತಿಂಗಳ ಹಿಂದಿನ ಕನಿಷ್ಠಕ್ಕೆ ಬಂದು ತಲುಪಿದೆ. ಇದೇ ವೇಳೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಕೂಡ 868.25 ಅಂಕಗಳಷ್ಟುಕುಸಿತ ಕಾಣುವ ಮೂಲಕ 9590.15ರಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ.
ಮಹಾಮಾರಿ ಕರೋನಾಗೆ ಕರ್ನಾಟಕದಲ್ಲೇ ಮೊದಲ ಬಲಿ..ಎಚ್ಚರ ಎಚ್ಚರ...
ಸೆನ್ಸೆಕ್ಸ್ ಸೂಚ್ಯಂಕದ 30 ಕಂಪನಿ ಷೇರುಗಳ ಪೈಕಿ ಎಸ್‌ಬಿಐಗೆ ಅತಿ ಹೆಚ್ಚು ಹೊಡೆದ ಬಿದ್ದಿದೆ. ಅದರ ಷೇರುಗಳ ಮೌಲ್ಯ ಶೇ.13.23ರಷ್ಟುಕುಸಿತ ಕಂಡಿದೆ. ಎಸ್‌ಬಿಐ ಒಂದೇ ದಿನ ಇಷ್ಟೊಂದು ಕುಸಿತ ಕಾಣುತ್ತಿರುವುದು ಇದೇ ಮೊಲು. ಒಎನ್‌ಜಿಸಿ, ಎಕ್ಸಿಸ್ ಬ್ಯಾಂಕ್, ಐಟಿಸಿ, ಟಿಸಿಎಸ್ ಹಾಗೂ ಟೈಟಾನ್ ಕುಸಿತದಲ್ಲಿ ಎಸ್‌ಬಿಐ ನಂತರದ ಸ್ಥಾನದಲ್ಲಿವೆ.
ಮತ್ತೆ ಕೆಳಗಿಳಿಯಿತು ಚಿನ್ನದ ದರ; ಬೆಳ್ಳಿ ಖರೀದಿಗೆ ಬೇಡ ಅವಸರ...
ಸೆನ್ಸೆಕ್ಸ್ ಕುಸಿತಕ್ಕೆ ಕೊರೋನಾ ವೈರಸ್ ಹಾಗೂ ಅದನ್ನು ಹತ್ತಿಕ್ಕಲು ವೀಸಾ ನಿಷೇಧದಂತಹ ಕಠಿಣ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳುತ್ತಿರುವುದು ಪ್ರಮುಖ ಕಾರಣವಾಗಿದೆ. ಇದರ ಜತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ತಲ್ಲಣ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿರುವುದೂ ಮುಖ್ಯ ಅಂಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬುಧವಾರವಷ್ಟೆಭಾರತ ಎಲ್ಲ ದೇಶಗಳಿಗೆ ವೀಸಾ ನಿರ್ಬಂಧಿಸಿತ್ತು. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ರಿಟನ್ ಹೊರತುಪಡಿಸಿ ಮಿಕ್ಕೆಲ್ಲಾ ಐರೋಪ್ಯ ದೇಶಗಳಿಗೆ ವೀಸಾ ನೀಡದಿರುವ ಘೋಷಣೆ ಮಾಡಿದ್ದರು. ಪ್ರವಾಸೋದ್ಯಮ, ವಿಮಾನಯಾನ ಸೇರಿದಂತೆ ಹಲವು ವಲಯಗಳ ಮೇಲೆ ಗಂಭೀರ ಪರಿಣಾಮ ಬೀರುವ ಕ್ರಮಗಳು ಇವಾಗಿದ್ದರಿಂದ ಭಾರತ ಸೇರಿದಂತೆ ವಿಶ್ವದ ವಿವಿಧ ಪೇಟೆಗಳ ಮೇಲೆ ಪ್ರತಿಕೂಲ ಪರಿಣಾಮ ಆಗಿದೆ ಎಂದು ಹೇಳಲಾಗಿದೆ.
ಷೇರುಪಾತ!
9500 ಅಂಕ: ಕೇವಲ ಒಂದೂವರೆ ತಿಂಗಳುಗಳಲ್ಲಿ ಸೆನ್ಸೆಕ್ಸ್ ಕುಸಿತದ ಪ್ರಮಾಣ
33 ತಿಂಗಳು: ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ33 ತಿಂಗಳ ಕನಿಷ್ಠ ಮಟ್ಟಕ್ಕೆ
52 ವಾರ: 1180 ಷೇರುಗಳ ಮೌಲ್ಯ ಒಂದು ವರ್ಷದ ಹಿಂದಿನ ಮಟ್ಟಕ್ಕೆ ಇಳಿಕೆ
2.5 ವರ್ಷ: ನಿಫ್ಟಿ10000ಕ್ಕಿಂತ ಕೆಳಕ್ಕೆ ಇಳಿದಿದ್ದು 2.5 ವರ್ಷದಲ್ಲೇ ಮೊದಲು
---
ಸೆನ್ಸೆಕ್ಸ್ ಮಹಾ ಕುಸಿತಗಳು
2919: ಮಾ.12, 2020
1942: ಮಾ.9, 2020
1625: ಆ.24, 2015
1448: ಫೆ.28, 2020
1408: ಜ.21, 2008
1071: ಅ.24, 2008