₹67,538 ಕೋಟಿ ಮೌಲ್ಯದ ಅಮೆಜಾನ್‌ ಷೇರು ಮಾರಾಟ ಮಾಡಿದ ಜೆಫ್‌ ಬೆಜೋಸ್‌ ಮಾಜಿ ಪತ್ನಿ!

By Santosh Naik  |  First Published Nov 14, 2024, 4:05 PM IST

ಲೇಖಕಿ ಹಾಗೂ ಜೆಫ್‌ ಬೆಜೋಸ್‌ ಅವರ ಮಾಜಿ ಪತ್ನಿ ಮೆಕೆಂಜಿ ಸ್ಕಾಟ್‌ ತಮ್ಮ ಬಳಿಯಿದ್ದ ಅಮೆಜಾನ್‌ ಷೇರುಗಳಲ್ಲಿ ಶೇ. 11ರಷ್ಟು ಮಾರಾಟ ಮಾಡಿದ್ದಾರೆ. ಇದರ ಮೌಲ್ಯ 8 ಬಿಲಿಯನ್‌ ಯುಎಸ್‌ ಡಾಲರ್‌ (67,538 ಕೋಟಿ ರೂಪಾಯಿ). ಈ ಮಾರಾಟದ ನಂತರ, ಅವರ ಒಟ್ಟಾರೆ ಮೌಲ್ಯ 38 ಬಿಲಿಯನ್‌ ಯುಎಸ್‌ ಡಾಲರ್‌ನಿಂದ 30 ಬಿಲಿಯನ್‌ ಯುಎಸ್‌ ಡಾಲರ್‌ಗೆ ಇಳಿದಿದೆ.


ನವದೆಹಲಿ (ನ.14): ಲೇಖಕಿ, ಸಮಾಜ ಸೇವಕಿ ಹಾಗೂ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ನ ಮಾಜಿ ಪತ್ನಿ ಮೆಕೆಂಜಿ ಸ್ಕಾಟ್‌ ತಮ್ಮ ಬಳಿ ಇದ್ದ ಅಮೆಜಾನ್‌ ಕಂಪನಿಯ ಷೇರುಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ. ನವೆಂಬರ್‌ 8 ರಂದು ಷೇರು ಮಾರುಕಟ್ಟೆಗೆ ಸಲ್ಲಿಸಿದ ಫೈಲಿಂಗ್‌ ಪ್ರಕಾರ, ಮೆಕೆಂಜಿ ಸ್ಕಾಟ್‌ ತಮ್ಮ ಬಳಿ ಇದ್ದ ಅಮೆಜಾನ್ ಷೇರುಗಳಲ್ಲಿ  ಶೇ. 11ರಷ್ಟು ಷೇರನ್ನು ಮಾರಾಟ ಮಾಡಿದ್ದಾರೆ. ಇದರ ಮೌಲ್ಯ 8 ಬಿಲಿಯನ್‌ ಯುಎಸ್‌ ಡಾಲರ್‌. ಭಾರತೀಯ ರೂಪಾಯಿಯಲ್ಲಿ 67,538 ಕೋಟಿ ರೂಪಾಯಿ ಆಗಿದೆ. ಸೆಪ್ಟೆಂಬರ್‌ 30 ರಂದು ಅವರು ತಮ್ಮ ಪಾಲಿನ ಶೇ. 11 ರಷ್ಟು ಷೇರನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಮೆಕೆಂಜಿ ಸ್ಕಾಟ್‌ ಅವರ ಒಟ್ಟಾರೆ ಮೌಲ್ಯ 38 ಬಿಲಿಯನ್‌ ಯುಎಸ್‌ ಡಾಲರ್‌ನಿಂದ 30 ಬಿಲಿಯನ್‌ ಯುಎಸ್‌ ಡಾಲರ್‌ಗೆ ಇಳಿದಿದೆ. ಜೆಫ್‌ ಬೆಜೋಸ್‌ ಜೊತೆಗಿನ ವಿಚ್ಛೇದನದ ಬಳಿಕ ಮೆಕೆಂಜಿ ಸ್ಕಾಟ್‌ ಪರಿಹಾರದ ರೂಪದಲ್ಲಿ ಅಮೆಜಾನ್‌ ಕಂಪನಿಯಲ್ಲಿ ಶೇ. 4ರಷ್ಟು ಪಾಲನ್ನು ಪಡೆದುಕೊಂಡಿದ್ದರು.

ತಮ್ಮ ಸಮಾಜಸೇವಾ ಕಾರ್ಯಗಳಿಂದಲೇ ಪ್ರಸಿದ್ಧರಾಗಿರುವ ಮೆಕೆಂಜಿ ಸ್ಕಾಟ್‌ , ವಿಚ್ಛೇದನದ ವೇಳೆ ಪರಿಹಾರದ ರೂಪದಲ್ಲಿ 400 ಮಿಲಿಯನ್‌ ಅಮೆಜಾನ್‌ ಷೇರುಗಳನ್ನು ಪಡೆದುಕೊಂಡಿದ್ದರು. ಇದರಲ್ಲಿ ಒಂದು ಭಾಗವನ್ನು ಮಾತ್ರವೇ ತಾವಿಟ್ಟುಕೊಂಡು ಉಳಿದ ಹಣವನ್ನು ಸಮಾಜಸೇವೆಗೆ ಬಳಸುವುದಾಗಿ ತಿಳಿಸಿದ್ದರು.ಆಕೆಯ ಈ ಮಹಾ ನಿರ್ಧಾರದ ಕಾರಣದಿಂದಾಗಿ ಅಮೆರಿಕದಲ್ಲಿ ಗರಿಷ್ಠ ಪ್ರಮಾಣದ ಹಣವನ್ನು ದತ್ತಿ ಕಾರ್ಯಕ್ಕಾಗಿ ಮೀಸಲಿಟ್ಟು ಐವರು ವ್ಯಕ್ತಿಗಳ ಪೈಕಿ ಮೆಕೆಂಜಿ ಸ್ಕಾಟ್‌ ಕೂಡ ಒಬ್ಬರಾಗಿದ್ದರು. ಫೋರ್ಬ್ಸ್‌ ಮಾಹಿತಿಯ ಪ್ರಕಾರ ಮೆಕೆಂಜಿ ಸ್ಕಾಟ್‌ ಈವರೆಗೂ 17.3 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ 1 ಲಕ್ಷದ 46 ಸಾವಿರ ಕೋಟಿ ಹಣವನ್ನು ಲಾಭ ರಹಿತ ಸಂಸ್ಥೆಗಳಿಗೆ ಹಾಗೂ ಇತರ ಮಾನವೀಯ ಕಾಳಜಿಯ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ.

ಫೋರ್ಬ್ಸ್‌ ರಿಯಲ್‌ಟೈಮ್‌ ಮಾಹಿತಿಯ ಪ್ರಕಾರ ಮೆಕೆಂಜಿ ಸ್ಕಾಟ್‌ ಅವರ ಪ್ರಸ್ತುತ ಮೌಲ್ಯ 29.5 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ 2 ಲಕ್ಷದ 49 ಸಾವಿರ ಕೋಟಿ ರೂಪಾಯಿ. 2019ರ ಮೇ ತಿಂಗಳಲ್ಲಿ ಜೆಫ್‌ ಬೆಜೋಸ್‌ ಜೊತೆಗಿನ ವಿಚ್ಛೇದನದ ಬಳಿಕ ಮೆಕೆಂಜಿ ಸ್ಕಾಟ್‌ ತಮಗೆ ಬಂದಿರುವ ಹಣದಲ್ಲಿ ಹೆಚ್ಚಿನ ಪಾಲನ್ನು ಜೀವನ ಇರುವವರೆಗೂ ದತ್ತು ಕಾರ್ಯಗಳಿಗೆ ಬಳಸುವುದಾಗಿ ತಿಳಿಸಿದ್ದರು. ಜೀವಮಾನದ ಉದ್ದಕ್ಕೂ ನನ್ನ ಆಸ್ತಿಯ ಅರ್ಧದಷ್ಟು ಪಾಲು ಸಮಾಜಸೇವೆಗೆ ಮೀಸಲಾಗಿರಲಿದೆ ಎಂದಿದ್ದರು.

Latest Videos

ನಾಲ್ಕು ವರ್ಷದ ಹಿಂದೆ 3 ರೂಪಾಯಿ ಇದ್ದ ಷೇರಿನ ಬೆಲೆ ಇಂದು 1,412 ರೂಪಾಯಿ!

ಅಮೆಜಾನ್‌ ಕಂಪನಿಯ ಷೇರುಗಳ ಬೆಲೆ ಏರಿಕೆ ಆಗುತ್ತಿದ್ದಂತೆ ಮೆಕೆಂಜಿ ಸ್ಕಾಟ್‌ ಅವರ ಮೌಲ್ಯವೂ ಏರಿಕೆಯಾಗಿದೆ. ಈ ವೇಳೆ ತಮ್ಮ ಅರ್ಧದಷ್ಟು ಆಸ್ತಿಯನ್ನು ಸಮಾಜಸೇವಾ ಸಂಸ್ಥೆಗಳಿಗೆ ನೀಡುತ್ತಾರೆ. ಆದರೆ ಈವರೆಗೂ ಯಾವ ಸಂಸ್ಥೆಗಳಿಗೆ ಹಣ ನೀಡಿದ್ದೇನೆ ಎನ್ನುವ ಮಾಹಿತಿಯನ್ನು ಅವರು ಗೌಪ್ಯವಾಗಿರಿಸಿದ್ದಾರೆ.

Bengaluru: ಬಿಸಿಡಿ ಗ್ರೂಪ್‌ನಿಂದ 500 ಕೋಟಿ ವೆಚ್ಚದಲ್ಲಿ ಟೌನ್‌ಶಿಪ್‌, ಎಲ್ಲಾ 900 ಫ್ಲ್ಯಾಟ್‌ ಭೋಗ್ಯಕ್ಕೆ ಪಡೆದ ಫಾಕ್ಸ್‌ಕಾನ್‌!

ಸ್ಕಾಟ್‌ ಇತ್ತೀಚೆಗೆ 15 ಲಕ್ಷ ರೂಪಾಯಿಯನ್ನು ಮಿನಿ ಸೊಟಾ ಫಂಡ್‌ಗೆ ನೀಡಿದ್ದರು. ಫೋರ್ಬ್ಸ್‌ ಮಾಹಿತಿಯ ಪ್ರಕಾರ ಹಣ ಪಡೆದುಕೊಂಡ ಸಂಸ್ಥೆಗಳು ಈ ಹಣವನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದನ್ನು ಮೆಕೆಂಜಿ ಸ್ಕಾಟ್‌ ಆಯಾ ಸಂಸ್ಥೆಗಳ ವಿವೇಚನೆಗೆ ಬಿಟ್ಟಿದ್ದಾರೆ. ಇದರಲ್ಲಿ ಆಕೆಯ ಮಧ್ಯಪ್ರವೇಶ ಇರೋದಿಲ್ಲ. ಇಲ್ಲಿಯವರೆಗೂ ಆಕೆ 2300 ಎನ್‌ಜಿಓಗಳಿಗೆ ಸಹಾಯ ಮಾಡಿದ್ದಾರೆ. 2024ರಲ್ಲಿ ಅಮೆರಿಕದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಈಕೆ 26ನೇ ಸ್ಥಾನದಲ್ಲಿದ್ದರು.

click me!