ಭಾರತ ಈಗ ಸ್ಮಾರ್ಟ್‌ಫೋನ್‌ ಹಬ್‌: ಒಂದೇ ವರ್ಷದಲ್ಲಿ ಮೊಬೈಲ್‌ ರಫ್ತು ಡಬಲ್‌

By Kannadaprabha NewsFirst Published Nov 30, 2022, 8:41 AM IST
Highlights

ಒಂದೇ ವರ್ಷದಲ್ಲಿ ಮೊಬೈಲ್‌ ರಫ್ತು ಡಬಲ್‌ ಮಾಡಿ ಭಾರತ ಸಾಧನೆ ಮಾಡಿದೆ. ಮೋದಿ ಮೇಕ್‌ ಇನ್‌ ಇಂಡಿಯಾ, ಪ್ರೋತ್ಸಾಹ ಧನ ಫಲ ಕೊಟ್ಟಿದ್ದು, ಕಳೆದ ವರ್ಷ .17000 ಕೋಟಿ ಮೊಬೈಲ್‌ ಫೋನ್‌ಗಳು ರಫ್ತಾಗಿದ್ದರೆ, ಈ ವರ್ಷ ಈಗಾಗಲೇ 40,000 ಕೋಟಿ ಮೌಲ್ಯದ ಮೊಬೈಲ್‌ ಫೋನ್‌ಗಳು ರಫ್ತಾಗಿದೆ ಎಂದು ತಿಳಿದುಬಂದಿದೆ. 

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ 7 ತಿಂಗಳಿನಲ್ಲೇ ಭಾರತದ ಮೊಬೈಲ್‌ ರಫ್ತಿನ ಮೌಲ್ಯ 5 ಬಿಲಿಯನ್‌ ಡಾಲರ್‌ (40 ಸಾವಿರ ಕೋಟಿ ರೂ.) ದಾಟಿದ್ದು, ವಿಶ್ವದ ಅತಿದೊಡ್ಡ ಮೊಬೈಲ್‌ ರಫ್ತು ದೇಶಗಳ ಪೈಕಿ ಒಂದೆಂಬ ಹಿರಿಮೆಗೆ ದೇಶ ಪಾತ್ರವಾಗಿದೆ. ಭಾರತದ ಈ ಸಾಧನೆಗೆ ದೇಶವನ್ನು ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ, ರಫ್ತಿನಲ್ಲಿ ಜಾಗತಿಕ ಹಬ್‌ ಮಾಡುವ ಉದ್ದೇಶದೊಂದಿಗೆ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದ ಮೇಕ್‌ ಇನ್‌ ಇಂಡಿಯಾ ಮತ್ತು ಉತ್ಪಾದಕತೆ ಆಧರಿತ ಬೋನಸ್‌ ಯೋಜನೆಗಳೇ ಕಾರಣ ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷದ ಏಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ ಭಾರತದ ಮೊಬೈಲ್‌ ರಫ್ತು ಪ್ರಮಾಣ 17,000 ಕೋಟಿ ರೂ. ನಷ್ಟಿದ್ದು, ಈ ವರ್ಷ ಅದು ಡಬಲ್‌ಗಿಂತಲೂ ಹೆಚ್ಚಾಗಿದೆ. ಈಗಿನ ಲೆಕ್ಕದಲ್ಲೇ ಮೊಬೈಲ್‌ ರಫ್ತು ಮುಂದುವರೆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದಿಂದ ಒಟ್ಟಾರೆ 73,000 ಕೋಟಿ ರೂ. ಮೌಲ್ಯದ ರಫ್ತಾಗಬಹುದು ಎಂದು ಅಂದಾಜಿಸಲಾಗಿದೆ.

ಮೋದಿ ಕ್ರಮಗಳು:
ದೇಶೀಯವಾಗಿಯೇ ಜಾಗತಿಕ ಉತ್ಪನ್ನಗಳ ಉತ್ಪಾದನೆಗಾಗಿ ಮೋದಿ ಸರ್ಕಾರ ಜಾರಿಗೊಳಿಸಿದ ಮೇಕ್‌ ಇನ್‌ ಇಂಡಿಯಾ ಮತ್ತು ಮೇಕ್‌ ಇನ್‌ ಇಂಡಿಯಾ ಪ್ರೋತ್ಸಾಹಿಸಲು ಜಾರಿಗೊಳಿಸಿದ ಉತ್ಪಾದಕತೆ ಆಧರಿತ ಬೋನಸ್‌ (ಪಿಎಲ್‌ಐ) ಯೋಜನೆಗಳಿಂದಾಗಿ, ಜಾಗತಿಕ ಬ್ರ್ಯಾಂಡ್‌ಗಳಾದ ಆ್ಯಪಲ್‌ ಐಫೋನ್‌, ಸ್ಯಾಮ್‌ಸಂಗ್‌ ಮೊದಲಾದವುಗಳು ಭಾರತದಲ್ಲೇ ತಮ್ಮ ಉತ್ಪಾದನಾ ಘಟಕ ಆರಂಭವಿಸಿವೆ. ದೇಶದ ಒಟ್ಟು ರಫ್ತಿನ ಪೈಕಿ ಈ ಎರಡು ಕಂಪನಿಗಳ ಫೋನುಗಳ ಪಾಲು ಶೇ.90ಕ್ಕಿಂತ ಹೆಚ್ಚಾಗಿದೆ. ಆಫ್ರಿಕಾ, ಏಷ್ಯಾದ ಹಿಂದುಳಿದ ರಾಷ್ಟ್ರಗಳು ಮಾತ್ರವಲ್ಲದೇ ಯುರೋಪಿನ ಪ್ರಮುಖ ರಾಷ್ಟ್ರಗಳಾದ ಬ್ರಿಟನ್‌, ಆಸ್ಟ್ರಿಯಾ, ನೆದರ್‌ಲೆಂಡ್‌, ಇಟಲಿ ಕೂಡಾ ಭಾರತದಲ್ಲಿ ನಿರ್ಮಾಣವಾದ ಫೋನುಗಳಿಗೆ ಗ್ರಾಹಕರಾಗಿವೆ.

ಇದನ್ನು ಓದಿ: 70 ಸಾವಿರ ಕೋಟಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ರಫ್ತು: ರಾಜೀವ್‌ ಚಂದ್ರಶೇಖರ್‌

ಸ್ಥಳೀಯ ಉತ್ಪಾದನೆ ಹೆಚ್ಚಳ:
2014-15ಕ್ಕೂ ಮುನ್ನ 2ಜಿ ತರಂಗಾಂತರ ಹಗರಣ, ನೋಕಿಯಾ ಘಟಕದ ಮುಚ್ಚುವಿಕೆಯಿಂದಾಗಿ ಮೊಬೈಲ್‌ ಉತ್ಪಾದನೆ ಪ್ರಮಾಣ ಕೇವಲ 18,900 ಕೋಟಿ ರು.ಗಳಷ್ಟಿದ್ದು, ರಫ್ತಿನ ಪ್ರಮಾಣ ಬಹುತೇಕ ಶೂನ್ಯವಾಗಿತ್ತು. 2016-17ರ ಒಟ್ಟು ಉತ್ಪಾದನೆಯಲ್ಲಿ ಶೇ.1ರಷ್ಟಿದ್ದ ಮೊಬೈಲ್‌ ರಫ್ತಿನ ಪ್ರಮಾಣ 2021-22ನೇ ಸಾಲಿನಲ್ಲಿ ಶೇ.16ಕ್ಕೆ ಏರಿಕೆಯಾಗಿದೆ. 2022-23ನೇ ಸಾಲಿನ ಅಂತ್ಯಕ್ಕೆ ಇದು ಶೇ.22ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಆಮದು ಇಳಿಕೆ:
ಒಂದೆಡೆ ಮೊಬೈಲ್‌ಗಳ ರಫ್ತಿನ ಪ್ರಮಾಣ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ ಆಮದಿನ ಪ್ರಮಾಣದಲ್ಲೂ ಭಾರೀ ಇಳಿಕೆ ಕಂಡುಬಂದಿದೆ. 2014-15ರಲ್ಲಿ ದೇಶದ ಒಟ್ಟು ಬೇಡಿಕೆಯಲ್ಲಿ ಶೇ.78ರಷ್ಟಿದ್ದ ಮೊಬೈಲ್‌ಗಳ ಆಮದಿನ ಪ್ರಮಾಣ 2022ರ ಆರ್ಥಿಕ ವರ್ಷದ ಕೊನೆಯಲ್ಲಿ ಶೇ.5ಕ್ಕೆ ಇಳಿಕೆಯಾಗಿದೆ. ಅದೇ 2023ರ ಆರ್ಥಿಕ ವರ್ಷದಲ್ಲಿ ಈ ಪ್ರಮಾಣ ಶೇ.4ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಪಿಎಲ್‌ಐ ಯೋಜನೆಯ ಯಶಸ್ಸು, ದೇಶದ ಮೊಬೈಲ್‌ ರಫ್ತು ಪ್ರಮಾಣ ದುಪ್ಪಟ್ಟು!

ಬೃಹತ್‌ ರಫ್ತಿನ ಗುರಿ:
ಭಾರತ ಜಗತ್ತಿನ ಅತಿದೊಡ್ಡ ಮೊಬೈಲ್‌ ಉತ್ಪಾದನಾ ಹಬ್‌ ಎನಿಸಿದ ಚೀನಾ ಹಾಗೂ ವಿಯೆಟ್ನಾಂ ಅನ್ನು ಹಿಂದಿಕ್ಕಿ 2025-26ನೇ ಸಾಲಿನ ಅಂತ್ಯವರೆಗೆ 4.9 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್‌ ರಫ್ತು ಮಾಡುವ ಗುರಿ ಹೊಂದಿದೆ. ಸರ್ಕಾರ ಮುಂದಿನ 5 ವರ್ಷಗಳಲ್ಲಿ 10.05 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್‌ ಉತ್ಪಾದನೆ ಹಾಗೂ 6.5 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತಿನ ಗುರಿಯನ್ನು ಹೊಂದಿದೆ. ಇದು ಮುಂದಿನ 5 ವರ್ಷಗಳ ಅವಧಿಯಲ್ಲಿ 8 ಲಕ್ಷಕ್ಕೂ ಹೆಚ್ಚು ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಪಿಎಲ್‌ಐ ಯೋಜನೆ ಕಾರಣ
ಏಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ ಫೋನುಗಳ ರಫ್ತಿನ ಪ್ರಮಾಣ 2 ಪಟ್ಟಿಗಿಂತ ಹೆಚ್ಚಾಗಿದೆ. ಇದಕ್ಕೆ ಪ್ರಧಾನಿ ಮೋದಿಯವರ ಪಿಎಲ್‌ಐ ಯೋಜನೆಯೇ ಕಾರಣ. ಮೊಬೈಲ್‌ ಫೋನಿನ ರಫ್ತು ಕಳೆದ ವರ್ಷದ ಸಾಧನೆಯನ್ನು ಮೀರಿ ಈ ವರ್ಷ ಈಗಾಗಲೇ 40000 ಕೋಟಿ ರು.ಗಳ (5 ಬಿಲಿಯನ್‌ ಡಾಲರ್‌) ಮೈಲುಗಲ್ಲನ್ನು 7 ತಿಂಗಳಲ್ಲಿ ದಾಟಿದೆ. ಕಳೆದ ವರ್ಷ ಭಾರತದ ಒಟ್ಟು ಮೊಬೈಲ್‌ ರಫ್ತಿನ ಪ್ರಮಾಣ 17,600 ಕೋಟಿ ರು. ಇತ್ತು. ಈ ಬಾರಿ ಅದು ಎರಡು ಪಟ್ಟು ಹೆಚ್ಚಾಗಿದೆ.
- ರಾಜೀವ್‌ ಚಂದ್ರಶೇಖರ್‌, ಕೇಂದ್ರ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಎಲೆಕ್ಟ್ರಾನಿಕ್ಸ್‌ ಹಾಗೂ ತಂತ್ರಜ್ಞಾನ ರಾಜ್ಯ ಸಚಿವ

ಭಾರತ ಈಗ ಸ್ಮಾರ್ಟ್‌ಫೋನ್‌ ಹಬ್‌
- ಭಾರತವನ್ನು ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ಜಾಗತಿಕ ಹಬ್‌ ಮಾಡುವ ಗುರಿ ಹಾಕಿಕೊಂಡ ಮೋದಿ
- ಮೇಕ್‌ ಇನ್‌ ಇಂಡಿಯಾ, ಉತ್ಪಾದಕತೆ ಆಧರಿತ ಬೋನಸ್‌ ಸ್ಕೀಮ್‌ನಡಿ ಫೋನ್‌ ಉದ್ದಿಮೆಗೆ ಪ್ರೋತ್ಸಾಹ
- ಆ್ಯಪಲ್‌, ಸ್ಯಾಮ್ಸಂಗ್‌ ಮುಂತಾದ ಜಾಗತಿಕ ಕಂಪನಿಗಳಿಂದ ಭಾರತದಲ್ಲಿ ಫೋನ್‌ ತಯಾರಿ ಘಟಕ ಸ್ಥಾಪನೆ
- ಏಷ್ಯಾ, ಆಫ್ರಿಕನ್‌ ರಾಷ್ಟ್ರಗಳ ಜೊತೆ ಬ್ರಿಟನ್‌, ಆಸ್ಟ್ರಿಯಾ, ನೆದರ್ಲೆಂಡ್‌, ಇಟಲಿ ಕೂಡ ಭಾರತದ ಗ್ರಾಹಕರು
- 2015ರಲ್ಲಿ ಭಾರತದಿಂದ ಮೊಬೈಲ್‌ ಫೋನ್‌ ರಫ್ತು ಶೂನ್ಯ; 2017ರಲ್ಲಿ ಉತ್ಪಾದನೆಯ 1%, ಈಗ 16%ಗೆ ಏರಿಕೆ

2014-15ಕ್ಕೂ ಮುನ್ನ 2ಜಿ ತರಂಗಾಂತರ ಹಗರಣ, ನೋಕಿಯಾ ಘಟಕದ ಮುಚ್ಚುವಿಕೆಯಿಂದಾಗಿ ಮೊಬೈಲ್‌ ಉತ್ಪಾದನೆ ಪ್ರಮಾಣ ಕೇವಲ 18,900 ಕೋಟಿ ರೂ. ಗಳಷ್ಟಿದ್ದು, ರಫ್ತಿನ ಪ್ರಮಾಣ ಬಹುತೇಕ ಶೂನ್ಯವಾಗಿತ್ತು. 2016-17ರ ಒಟ್ಟು ಉತ್ಪಾದನೆಯಲ್ಲಿ ಶೇ.1ರಷ್ಟಿದ್ದ ಮೊಬೈಲ್‌ ರಫ್ತಿನ ಪ್ರಮಾಣ 2021-22ನೇ ಸಾಲಿನಲ್ಲಿ ಶೇ.16ಕ್ಕೆ ಏರಿಕೆಯಾಗಿದೆ. 2022-23ನೇ ಸಾಲಿನ ಅಂತ್ಯಕ್ಕೆ ಇದು ಶೇ.22ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಏನಿದು ಪಿಎಲ್‌ಐ ಯೋಜನೆ?
ಸರ್ಕಾರವು ಪಿಎಲ್‌ಐ ಯೋಜನೆಯನ್ನು 2020 ಏ.1ರಲ್ಲಿ ಜಾರಿಗೆ ತಂದಿತ್ತು. ಇದು ದೇಶದಲ್ಲಿ ಮೊಬೈಲ್‌ ಉತ್ಪಾದಿಸಲು ಜಾಗತಿಕ ಕಂಪನಿಗಳಿಗೆ ಆಹ್ವಾನ ನೀಡುತ್ತದೆ. ಅಲ್ಲದೇ ಮೊಬೈಲ್‌ ಉತ್ಪಾದಕತೆ ಆಧರಿಸಿ ಸರ್ಕಾರ ಕಂಪನಿಗಳಿಗೆ ಕ್ಯಾಶ್‌ಬ್ಯಾಕ್‌ ಸೌಲಭ್ಯವನ್ನು ನೀಡುತ್ತದೆ.

click me!