12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೈನೀಸ್‌ ಸ್ಮಾರ್ಟ್‌ ಫೋನ್‌ಗಳಿಗೆ ಭಾರತದಲ್ಲಿ ನಿಷೇಧ?

By Santosh NaikFirst Published Aug 8, 2022, 11:32 PM IST
Highlights

ಚೀನಾದ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದ್ದ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾದ ಸ್ಮಾರ್ಟ್‌ಫೋನ್‌ಗಳಿಗೆ ನಿಷೇಧ ಹೇರುವ ನಿರ್ಧಾರ ಮಾಡಲಿದೆ ಎಂದು ವರದಿಯಾಗಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ದೇಶೀಯ ಕಂಪನಿಗಳು ಮೇಲುಗೈ ಸಾಧಿಸಬೇಕು ಎನ್ನುವ ಉದ್ದೇಶದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
 

ನವದೆಹಲಿ (ಆ.8): ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ದೇಶೀಯ ಕಂಪನಿಗಳಾದ ಲಾವಾ, ಮೈಕ್ರೋಮ್ಯಾಕ್ಸ್‌ನಂಥ ಕಂಪನಿಗಳು ಪ್ರಾಬಲ್ಯ ಸಾಧಿಸಬೇಕು ಎನ್ನುವ ಉದ್ದೇಶದಲ್ಲಿ ಕೇಂದ್ರ ಸರ್ಕಾರ, 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೈನೀಸ್‌ ಸ್ಮಾರ್ಟ್‌ಫೋನ್‌ಗಳಿಗೆ ನಿಷೇಧ ಹೇರಲು ಸಜ್ಜಾಗಿದೆ.  ಭಾರತವು ಪ್ರಸ್ತುತ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿದೆ ಮತ್ತು ಬಹುತೇಕ ಚೀನಾದ ಕಂಪನಿಗಳಿಂದ ಆಕ್ರಮಿಸಿಕೊಂಡಿದೆ. ಸರ್ಕಾರದ ಈ ನಿರ್ಧಾರವು ಶಿಯೋಮಿ, ವಿವೋ, ಒಪ್ಪೊ, ಪೊಕೋ, ರೆಡ್ಮಿ, ರಿಯಲ್‌ಮೀ ನಂತಹ ಕಂಪನಿಗಳಿಗೆ ದೊಡ್ಡ ಹೊಡೆತವನ್ನು ನೀಡಲಿದೆ. ಆದರೂ ಈ ವಿಷಯದ ಬಗ್ಗೆ ಸರ್ಕಾರದಿಂದ ಅಥವಾ ಯಾವುದೇ ಚೀನಾದ ಕಂಪನಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.  ಸರ್ಕಾರದ ಈ ನಿರ್ಧಾರದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ದೇಶೀಯ ಕಂಪನಿಗಳ ಪ್ರಾಬಲ್ಯವನ್ನು ಸ್ಥಾಪಿಸುವುದು ಎಂದು ಹೇಳಲಾಗಿದೆ. ಭಾರತವು ಪ್ರಸ್ತುತ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಚೀನಾದ ಕಂಪನಿಗಳಿಂದಲೇ ಆಕ್ರಮಿಸಿಕೊಂಡಿವೆ. ಈ ಚೀನೀ ಕಂಪನಿಗಳ ಮುಂದೆ ದೇಶೀಯ ಕಂಪನಿಗಳು ಪೈಪೋಟಿ ನೀಡಲು ಈವರೆಗೂ ಸಾಧ್ಯವಾಗಿಲ್ಲ.

80% ಚೀನಾ ಕಂಪನಿಗಳ ಪ್ರಾಬಲ್ಯ: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ಪ್ರಕಾರ, ಜೂನ್ 2022 ರವರೆಗಿನ ತ್ರೈಮಾಸಿಕದಲ್ಲಿ 150 ಡಾಲರ್‌ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ ಫೋನ್‌ಗಳು ಭಾರತದ ಮಾರುಕಟ್ಟೆಯ ಮೂರನೇ ಒಂದು ಭಾಗವನ್ನು ಹೊಂದಿದ್ದು, ಇದರಲ್ಲಿ ಬಹುತೇಕ ಚೀನಾದ ಕಂಪನಿಗಳು ಪ್ರಾಬಲ್ಯ ಸಾಧಿಸಿವೆ. ಅಂದಾಜು ಶೇ. 80ರಷ್ಟು ಚೀನಾ ಕಂಪನಿಗಳೇ ಇದರಲ್ಲಿವೆ ಎಂದು ವರದಿಯಾಗಿದೆ.

 

Indo-China Talk: ಚೀನಾಕ್ಕೆ ಭಾರತದ ಎಚ್ಚರಿಕೆ, ಲಡಾಖ್‌ನಲ್ಲಿ ವಾಯು ಗಡಿ ಉಲ್ಲಂಘನೆ ಮಾಡಬೇಡಿ!

ಸ್ಯಾಮ್‌ಸಂಗ್‌, ಆಪಲ್‌ಗೆ ಲಾಭ: ಸರ್ಕಾರದ ಈ ನಿರ್ಧಾರದಿಂದ ಸ್ಯಾಮ್ ಸಂಗ್ ಮತ್ತು ಆ್ಯಪಲ್ ಕಂಪನಿಗಳಿಗೆ ಸಾಕಷ್ಟು ಲಾಭವಾಗಲಿದೆ. ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಿಡ್‌ರೇಂಜ್ ಮತ್ತು ಎಂಟ್ರಿ ಲೆವೆಲ್‌ನಲ್ಲಿ ನಿರಂತರವಾಗಿ ನೀಡಲು ಪ್ರಯತ್ನಿಸಿದ್ದರೂ. ಚೀನಾದ ಕಂಪನಿಗಳ ಮುಂದೆ ಸೋಲು ಕಂಡಿದ್ದವು. ಈಗ ಆಪಲ್ ಕೂಡ ಮಿಡ್‌ರೇಂಜ್‌ನಲ್ಲಿ ಮುಂದುವರಿಯಬಹುದು. ವಿವೋ (Vivo), ಒಪ್ಪೋ (Oppo) ಮತ್ತು ಶಿಯೋಮಿ (Xiaomi) ನಂತಹ ಕಂಪನಿಗಳು ಈಗಾಗಲೇ ಆದಾಯ ತೆರಿಗೆ ಇಲಾಖೆಯ ಗುರಿಯಲ್ಲಿವೆ. ಈ ಕಂಪನಿಗಳ ಮೇಲೆ ತೆರಿಗೆ ವಂಚನೆ ಆರೋಪವೂ ಕೇಳಿಬಂದಿದೆ. ಇತ್ತೀಚೆಗೆ ಈ ಕಂಪನಿಗಳ ಮೇಲೆ ಇಡಿ ದಾಳಿಯೂ ನಡೆದಿದೆ.

ಚೀನಾ ತೈವಾನ್ ಯುದ್ಧವಾದ್ರೆ, ತೈವಾನ್ ಸಹಾಯಕ್ಕೆ ಬರುತ್ತಾ ಅಮೆರಿಕಾ.?

ಚೀನಾ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದ ಭಾರತ: 2020 ರಲ್ಲಿ, ಸರ್ಕಾರವು ಒಂದೇ ಬಾರಿಗೆ ಸುಮಾರು 60 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು ಮತ್ತು ಅದರ ನಂತರ ಅನೇಕ ಬಾರಿ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ. ಇಲ್ಲಿಯವರೆಗೆ, 349 ಚೈನೀಸ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ, ಸರ್ಕಾರದ ಆದೇಶದ ನಂತರ ಪಬ್‌ಜಿ ಯ ಹೊಸ ಅವತಾರ್ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು ಗೂಗಲ್ ಪ್ಲೇ ಸ್ಟೋರ್‌ ಮತ್ತು ಆಪಲ್‌ ಸ್ಟೋರ್‌ ಅಪ್ಲಿಕೇಶನ್‌ನಿಂದ ತೆಗೆದುಹಾಕಲಾಗಿದೆ. ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾವನ್ನು ಸ್ಟೋರ್‌ನಿಂದ ತೆಗೆದುಹಾಕುವ ಕುರಿತು, ಕಂಪನಿಯು ಅಪ್ಲಿಕೇಶನ್ ಅನ್ನು ಶಾಶ್ವತವಾಗಿ ನಿಷೇಧಿಸಲಾಗಿಲ್ಲ ಎಂದು ಹೇಳಿದೆ, ಆದರೆ ಅದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಅಪ್ಲಿಕೇಶನ್ ಶೀಘ್ರದಲ್ಲೇ ಹಿಂತಿರುಗುತ್ತದೆ ಎಂದು ವರದಿಯಾಗಿದೆ.

ಈ ಕ್ರಮವು ಆಪಲ್‌ ಅಥವಾ ಸ್ಯಾಮ್‌ ಸಂಗ್‌ ಮೇಲೆ ಪರಿಣಾಮ ಬೀರೋದಿಲ್ಲ. ಈಗಾಗಲೇ ಈ ಕಂಪನಿಯ ಫೋನ್‌ಗಳು ಇದಕ್ಕಿಂತ ಹೆಚ್ಚಿನ ದರದಲ್ಲಿವೆ. ಈ ಕುರಿತಾಗಿ ಚೀನಾ ಕಂಪನಿಗಳ ವಕ್ತಾರರು ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಕೇಂದ್ರ ತಂತ್ರಜ್ಞಾನ ಸಚಿವರೂ ಕೂಡ ಈ ಬಗ್ಗೆ ಮಾತನಾಡಿಲ್ಲ. ವಿವಾದಿತ ಹಿಮಾಲಯದ ಗಡಿಯಲ್ಲಿರುವ ಗಲ್ವಾನ್‌ ಕಣಿವೆಯಲ್ಲಿ ಭಾರತ-ಚೀನಾ ಘರ್ಷಣೆಯ ನಂತರ ಒಂದು ಡಜನ್‌ಗಿಂತಲೂ ಹೆಚ್ಚು ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಆ ನಂತರ 2020ರಿಂದ ಭಾರತವು ಚೀನಾದ ಸಂಸ್ಥೆಗಳ ಮೇಲೆ ತನ್ನ ಒತ್ತಡವನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಕ್ಷೀಣಿಸುತ್ತಿರುವ ಕಾರಣ ಇದು ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ವೀಚಾಟ್ ಮತ್ತು ಬೈಟ್‌ಡ್ಯಾನ್ಸ್ ಲಿಮಿಟೆಡ್‌ನ ಟಿಕ್‌ಟಾಕ್ ಸೇರಿದಂತೆ 300 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

click me!