
ನವದೆಹಲಿ (ಮಾ.28): ಇಡೀ ದೇಶ ಯುಗಾದಿಯ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ತುಟ್ಟಿ ಭತ್ಯೆ ಅಥವಾ ಡಿಎಅನ್ನು ಶೇ. 2ರಷ್ಟು ಏರಿಕೆ ಮಾಡಿದೆ. 8ನೇ ವೇತನ ಆಯೋಗಕ್ಕೂ ಮುನ್ನವೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಈ ಗಿಫ್ಟ್ ನೀಡಿದೆ. ಇದು 1.15 ಕೋಟಿ ಉದ್ಯೋಗಿಗಳಿಗೆ ಲಾಭವಾಗಲಿದೆ. ಇನ್ನು ಶೇ. 2ರಷ್ಟು ಡಿಎ ಏರಿಕೆಯಿಂದ ಕೇಂದ್ರ ಸರ್ಕಾರದ ಖಜಾನೆಗೆ 6614 ಕೋಟಿ ರೂಪಾಯಿ ಹೊರ ಬೀಳಲಿದೆ. ಇದರಲ್ಲಿ ವೇತನದಾರರಿಗೆ 3622 ಕೋಟಿ ವೆಚ್ಚವಾಗಲಿದ್ದರೆ, ಪಿಂಚಣಿದಾರರ ಡಿಎಗೆ 2992 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳವನ್ನು ನಿರ್ಧರಿಸಲಾಯಿತು. ಇದಕ್ಕೂ ಮೊದಲು, ಜುಲೈ 2024 ರಲ್ಲಿ, ಸರ್ಕಾರವು ತುಟ್ಟಿ ಭತ್ಯೆಯನ್ನು 3% ರಷ್ಟು ಹೆಚ್ಚಿಸಿತ್ತು. 8ನೇ ವೇತನ ಆಯೋಗದ ಅನುಷ್ಠಾನಕ್ಕೂ ಮುನ್ನ, ಈ ಹೆಚ್ಚಳವು ತುಟ್ಟಿ ಭತ್ಯೆಯನ್ನು 53% ರಿಂದ 55% ಕ್ಕೆ ಹೆಚ್ಚಿಸುತ್ತದೆ. ಸುಮಾರು 48 ಲಕ್ಷ ಕೇಂದ್ರ ನೌಕರರು ಮತ್ತು 66 ಲಕ್ಷ ಪಿಂಚಣಿದಾರರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ.
ಈ ಹೆಚ್ಚಳವು 2025 ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಡಿಎ ಘೋಷಣೆಯಲ್ಲಿ ವಿಳಂಬವಾಗಿತ್ತು, ಆದ್ದರಿಂದ ಏಪ್ರಿಲ್ ಸಂಬಳವು ಕಳೆದ ಮೂರು ತಿಂಗಳ (ಜನವರಿ-ಮಾರ್ಚ್ 2025) ಬಾಕಿ ಮೊತ್ತದ ಜೊತೆಗೆ ಹೆಚ್ಚಿದ ಡಿಎ ಅನ್ನು ಒಳಗೊಂಡಿರುತ್ತದೆ.
ಕಳೆದ 7 ವರ್ಷಗಳಲ್ಲಿ ತುಟ್ಟಿ ಭತ್ಯೆಯಲ್ಲಿನ ಹೆಚ್ಚಳ ಅತ್ಯಂತ ಕಡಿಮೆ: ಸಾಮಾನ್ಯವಾಗಿ ತುಟ್ಟಿ ಭತ್ಯೆಯಲ್ಲಿನ ಹೆಚ್ಚಳವು 3% ರಿಂದ 4% ರ ನಡುವೆ ಇರುತ್ತದೆ, ಆದರೆ ಈ ಬಾರಿ ಕೇವಲ 2% ಹೆಚ್ಚಳವಾಗಿದೆ. ಕಳೆದ ಏಳು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ. ಸರ್ಕಾರ ಸಾಮಾನ್ಯವಾಗಿ ಹೋಳಿ ಮತ್ತು ದೀಪಾವಳಿಯಂತಹ ದೊಡ್ಡ ಹಬ್ಬಗಳಿಗೆ ಮೊದಲು ಹೆಚ್ಚಳವನ್ನು ಘೋಷಿಸುತ್ತದೆ. ಈ ಬಾರಿ ಹೋಳಿ ನಂತರ ಘೋಷಣೆ ಮಾಡಲಾಗಿದೆ.
ಹಣದುಬ್ಬರವನ್ನು ನಿಭಾಯಿಸಲು ಡಿಎ ನೀಡಲಾಗುತ್ತದೆ: ಹಣದುಬ್ಬರ ಹೆಚ್ಚುತ್ತಿದ್ದರೂ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಜೀವನ ಮಟ್ಟವನ್ನು ಕಾಯ್ದುಕೊಳ್ಳಲು ತುಟ್ಟಿ ಭತ್ಯೆ (ಡಿಎ) ನೀಡಲಾಗುತ್ತದೆ. ಡಿಎ ದರಗಳನ್ನು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಇದನ್ನು ಪ್ರತಿ 6 ತಿಂಗಳಿಗೊಮ್ಮೆ ನವೀಕರಿಸಲಾಗುತ್ತದೆ.
DA Hike: ಡಿಎ ಏರಿಕೆ ಬಗ್ಗೆ ಬಿಗ್ ಅಪ್ಡೇಟ್… ಹೆಚ್ಚಳವಾಗಲಿದೆ ಕೇಂದ್ರ ಸರ್ಕಾರಿ ನೌಕರರ ಸಂಬಳ
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಎಂದರೇನು?: ಭಾರತದಲ್ಲಿ ಎರಡು ರೀತಿಯ ಹಣದುಬ್ಬರಗಳಿವೆ. ಒಂದು ಚಿಲ್ಲರೆ ಮತ್ತು ಇನ್ನೊಂದು ಸಗಟು ಹಣದುಬ್ಬರ. ಚಿಲ್ಲರೆ ಹಣದುಬ್ಬರ ದರವು ಸಾಮಾನ್ಯ ಗ್ರಾಹಕರು ಪಾವತಿಸುವ ಬೆಲೆಗಳನ್ನು ಆಧರಿಸಿದೆ. ಇದನ್ನು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಎಂದೂ ಕರೆಯುತ್ತಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ; ಶೀಘ್ರದಲ್ಲೇ ಶೇ.4ರಷ್ಟು ಡಿಎ ಏರಿಕೆ ಸಾಧ್ಯತೆ
ಎಷ್ಟಾಗಲಿದೆ ಸಂಬಳ: ಇಲ್ಲಿದೆ ಉದಾಹರಣೆ
50 ಸಾವಿರ ಮೂಲ ವೇತನ ಹೊಂದಿರುವ ಉದ್ಯೋಗಿಗೆ 1 ಸಾವಿರ ರೂಪಾಯಿ ಲಾಭ
1. ಹಳೆಯ ಡಿಎ (ಶೇ. 53)
DA=ಮೂಲ ವೇತನ* ಡಿಎ ಪ್ರಮಾಣ
DA=50,000*53/100
DA= ಪ್ರತಿ ತಿಂಗಳಿಗೆ 26500 ರೂಪಾಯಿ.
ಒಟ್ಟು ವೇತನ (ಮೂಲ+ಡಿಎ)
50,000+26500: ಪ್ರತಿ ತಿಂಗಳಿಗೆ 76,500 ರೂಪಾಯಿ ಸಂಬಳ
2. ಹೊಸ ಡಿಎ (ಶೇ.55)
DA=ಮೂಲ ವೇತನ* ಡಿಎ ಪ್ರಮಾಣ
DA=50,000*55/100
DA= ಪ್ರತಿ ತಿಂಗಳಿಗೆ 27500 ರೂಪಾಯಿ.
ಒಟ್ಟು ವೇತನ (ಮೂಲ+ಡಿಎ)
50,000+27500: ಪ್ರತಿ ತಿಂಗಳಿಗೆ 77,500 ರೂಪಾಯಿ ಸಂಬಳ
ಎಷ್ಟು ಹೆಚ್ಚಳ
ಹೊಸ ಡಿಎ-ಹಳೆಯ ಡಿಎ=
27,500-26,500=ಪ್ರತಿ ತಿಂಗಳಿಗೆ 1 ಸಾವಿರ ರೂಪಾಯಿ
50 ಸಾವಿರ ಮೂಲ ವೇತನ ಹೊಂದಿರುವ ಉದ್ಯೋಗಿ 1 ಸಾವಿರ ಡಿಎ ಹೆಚ್ಚಳ ಪಡೆಯುತ್ತಾರೆ. ಏಪ್ರಿಲ್ ತಿಂಗಳ ವೇತನ ಪಡೆಯುವ ವೇಳೆಗೆ ಆತನಿಗೆ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಬಾಕಿ ಡಿಎ ಕೂಡ ಬರಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.