BMTC ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ದಂಡ!

By Kannadaprabha NewsFirst Published Oct 21, 2019, 8:41 AM IST
Highlights

ಪ್ರತ್ಯೇಕ ಬಸ್‌ ಪಥ’ದಲ್ಲಿ ಇತರೇ ವಾಹನಗಳ ಸಂಚಾರದ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮರಾ ಅಳವಡಿಸಲು ಬಿಎಂಟಿಸಿ ನಿರ್ಧರಿಸಿದೆ.

ಬೆಂಗಳೂರು [ಅ.21]:  ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕಾಗಿ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ-ಸೆಂಟ್ರಲ್‌ ಸಿಲ್ಕ್ ಬೋರ್ಡ್‌ (18.5 ಕಿ.ಮೀ.) ಮಾರ್ಗದಲ್ಲಿ ನಿರ್ಮಿಸುತ್ತಿರುವ ‘ಪ್ರತ್ಯೇಕ ಬಸ್‌ ಪಥ’ದಲ್ಲಿ ಇತರೇ ವಾಹನಗಳ ಸಂಚಾರದ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮರಾ ಅಳವಡಿಸಲು ಬಿಎಂಟಿಸಿ ನಿರ್ಧರಿಸಿದೆ.

ಬಿಬಿಎಂಪಿ, ಬಿಎಂಟಿಸಿ, ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಅಧಿಕ ವಾಹನ ಸಂಚಾರ ದಟ್ಟಣೆ ಇರುವ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ-ಸೆಂಟ್ರಲ್‌ ಸಿಲ್ಕ್ ಬೋರ್ಡ್‌ (18.5 ಕಿ.ಮೀ.) ಮಾರ್ಗದಲ್ಲಿ ಪ್ರತ್ಯೇಕ ಬಸ್‌ ಪರ್ಥ ನಿರ್ಮಿಸಲಾಗುತ್ತಿದೆ. ಕೇವಲ ಬಿಎಂಟಿಸಿ ಬಸ್‌ಗಳು ಮಾತ್ರ ಈ ಪಥದಲ್ಲಿ ಸಂಚರಿಸಬೇಕು. ಹಾಗಾಗಿ ರಸ್ತೆಯ ಎಡಭಾಗದಲ್ಲಿ ಈ ಪ್ರತ್ಯೇಕ ಪಥ ನಿರ್ಮಿಸಲಾಗುತ್ತಿದೆ. ಇತರೆ ವಾಹನಗಳು ಪಥ ಪ್ರವೇಶಿಸದಂತೆ ‘ಬೊಲ್ಲಾರ್ಡ್‌’ಗಳನ್ನು ಅಳವಡಿಸಲಾಗುತ್ತಿದೆ. ಈ ‘ಬೊಲ್ಲಾರ್ಡ್‌’ ದಾಟಿಕೊಂಡು ಪಥ ಪ್ರವೇಶಿಸುವ ವಾಹನಗಳ ಮೇಲೆ ನಿಗಾ ಇರಿಸಲು ಬಿಎಂಟಿಸಿ ಸಿಸಿಟಿವಿ ಕ್ಯಾಮರಾಗಳ ಮೊರೆಹೋಗಲು ತೀರ್ಮಾನಿಸಿದೆ.

ಮೊದಲಿಗೆ ಸದರಿ ಮಾರ್ಗದಲ್ಲಿ ಸಂಚರಿಸುವ 90 ಬಸ್‌ಗಳಿಗೆ ಹೈಟೆಕ್‌ ಸಿಸಿಟಿವಿ ಕ್ಯಾಮರಾ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬಸ್ಸಿನ ಮುಂಭಾಗದಲ್ಲಿ ಈ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಬಸ್‌ ಸಂಚಾರ ವೇಳೆ ಇತರೆ ವಾಹನಗಳು ಈ ಪ್ರತ್ಯೇಕ ಪಥ ಪ್ರವೇಶಿಸಿದರೆ, ಸಿಸಿಟಿವಿ ಕ್ಯಾಮರಾ ಆ ವಾಹನಗಳ ಚಿತ್ರ ಸೆರೆ ಹಿಡಿಯಲಿದೆ. ಸೆರೆ ಹಿಡಿದ ವಾಹನದ ಚಿತ್ರಗಳನ್ನು ಸಂಚಾರ ಪೊಲೀಸರಿಗೆ ನೀಡಲಾಗುವುದು. ಸಂಚಾರ ಪೊಲೀಸರು ಆ ವಾಹನದ ಮಾಲಿಕನಿಗೆ ನಿಯಮದ ಪ್ರಕಾರ ದಂಡ ವಿಧಿಸಲಿದ್ದಾರೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಐಟಿಎಸ್‌ ಬಳಕೆ:  ಬಸ್‌ನ ಚಾಲಕನ ಎದುರು ಸಿಸಿಟಿವಿ ಕ್ಯಾಮರಾದ ಬಟನ್‌ ಇರುತ್ತದೆ. ಇತರೆ ವಾಹನಗಳು ಪ್ರತ್ಯೇಕ ಪಥ ಪ್ರವೇಶಿಸಿದರೆ ಚಾಲಕ ಆ ಬಟನ್‌ ಒತ್ತಿದರೆ ವಾಹನ ಚಿತ್ರ ಸೆರೆಯಾಗಲಿದೆ. ಚತುರ ಸಾರಿಗೆ ವ್ಯವಸ್ಥೆ(ಐಟಿಎಸ್‌) ತಂತ್ರಜ್ಞಾನದ ಮೂಲಕ ಆ ಫೋಟೋ ಬಿಎಂಟಿಸಿಯ ಕೇಂದ್ರ ಕಚೇರಿಯ ಐಟಿಎಸ್‌ ಕೇಂದ್ರಕ್ಕೆ ರವಾನೆಯಾಗಲಿದೆ. ಅಲ್ಲಿಂದ ನಗರ ಸಂಚಾರ ಪೊಲೀಸರಿಗೆ ಆ ವಾಹನದ ಚಿತ್ರವನ್ನು ಹಂಚಿಕೊಳ್ಳಲಾಗುವುದು. ಅದಕ್ಕಾಗಿಯೇ ಕೃತಕ ಬುದ್ಧಿಮತ್ತೆ ಸೌಲಭ್ಯವಿರುವ ಹೈಟೆಕ್‌ ಸಿಸಿಟಿವಿ ಕ್ಯಾಮರಾಗಳನ್ನು ಬಳಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ನಿರ್ಭಯಾ ನಿಧಿ ಅನುದಾನ :  ಹೈಟೆಕ್‌ ಕ್ಯಾಮರಾ ಖರೀದಿಗೆ ನಿರ್ಭಯಾ ನಿಧಿಯ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು. ಪ್ರತ್ಯೇಕ ಪಥ ನಿರ್ಮಾಣವಾಗುತ್ತಿರುವ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ-ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ ಮಾರ್ಗದಲ್ಲಿ ಪ್ರತಿ ನಿತ್ಯ 700 ಬಸ್‌ಗಳು ಸಂಚರಿಸುತ್ತಿದ್ದರೂ ಎಲ್ಲ ಬಸ್‌ಗಳಿಗೂ ಏಕಕಾಲಕ್ಕೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ಸಾಧ್ಯವಿಲ್ಲ. ಈಗಾಗಲೇ ಬಿಎಂಟಿಸಿ ನಿಗಮ ಕೇಂದ್ರದ ಫೇಮ್‌ ಯೋಜನೆಯ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಟೆಂಡರ್‌ ಆಹ್ವಾನಿಸಿದೆ. ಈ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಸೇರಿದಂತೆ ಹಲವು ಸೌಲಭ್ಯಗಳಿರಲಿವೆ. ಪ್ರತ್ಯೇಕ ಪಥದಲ್ಲಿ ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳನ್ನೇ ಕಾರ್ಯಾಚರಣೆ ಮಾಡಲಾಗುವುದು. ಈ ಬಸ್‌ಗಳನ್ನು ಸಾರ್ವಜನಿಕರು ಗುರುತಿಸಲು ಅನುವಾಗುವಂತೆ ಬಸ್ಸಿನ ಹೊರ ಕವಚದಲ್ಲಿ ಸ್ಟಿಕರ್‌ ಅಂಟಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಚಾಲಕರಿಗೆ ಮೊಬೈಲ್‌ ನಿಷೇಧ :  ಬಿಎಂಟಿಸಿ ಬಸ್‌ಗಳಲ್ಲಿ ಚಾಲಕರು ಮೊಬೈಲ್‌ ಫೋನ್‌ ಬಳಸದಂತೆ ನಿಷೇಧಿಸಲಾಗಿದೆ. ಪ್ರತ್ಯೇಕ ಪಥದ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಚಾಲಕರಿಗೂ ಇದು ಅನ್ವಯವಾಗುತ್ತದೆ. ಆದರೆ, ನಿರ್ವಾಹಕರಿಗೆ ಮೊಬೈಲ್‌ ಬಳಕೆಗೆ ಅವಕಾಶ ನೀಡಲಾಗಿದೆ. ಮಾರ್ಗ ಮಧ್ಯೆ ಬಸ್‌ಗಳು ಕೆಟ್ಟು ನಿಂತರೆ ಅಥವಾ ತುರ್ತು ಸಂದರ್ಭಗಳಲ್ಲಿ ನಿಗಮದ ‘ಸಾರಥಿ’ ವಾಹನಕ್ಕೆ ಮಾಹಿತಿ ನೀಡಲು ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

click me!