ನಾಳೆಯಿಂದ 3 ದಿನ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

By Govindaraj SFirst Published May 5, 2024, 8:03 AM IST
Highlights

ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ಮಳೆರಾಯ ತಂಪೆರೆದಿದ್ದ ಒಂದೇ ದಿನದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿಗೆ ಮರಳಿದ್ದು, ಶನಿವಾರ ಮಧ್ಯಾಹ್ನ ಬಿಸಿಲಿನ ಝಳ ಕೊಂಚ ಮಟ್ಟಿಗೆ ಹೆಚ್ಚಾಗಿತ್ತು. 

ಬೆಂಗಳೂರು (ಮೇ.05): ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ಮಳೆರಾಯ ತಂಪೆರೆದಿದ್ದ ಒಂದೇ ದಿನದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿಗೆ ಮರಳಿದ್ದು, ಶನಿವಾರ ಮಧ್ಯಾಹ್ನ ಬಿಸಿಲಿನ ಝಳ ಕೊಂಚ ಮಟ್ಟಿಗೆ ಹೆಚ್ಚಾಗಿತ್ತು. ಆದರೆ, ಮೇ 6 ರಿಂದ ಮೂರು ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆಗಳಿದ್ದು, ನಗರದಲ್ಲಿ ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೇಸಿಗೆ ಅವಧಿಯಲ್ಲಿ ಮಳೆಯ ಸುಳಿವಿಲ್ಲದೆ ಬೆಂಗಳೂರು ಹೈರಾಣಾಗಿತ್ತು. 

38 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಉಷ್ಣಾಂಶ ಕಂಡಿದ್ದ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಭಾರೀ ಮಳೆಯಾಗಿತ್ತು. ಅದರ ಪರಿಣಾಮ ಇಡೀ ದಿನ ತಂಪಾದ ವಾತಾವರಣ ನಿರ್ಮಾಣವಾಗಿತ್ತು. ಶನಿವಾರವೂ ಮಳೆ ಮುಂದುವರಿಯುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ನೀಡಿತ್ತಾದರೂ, ಮಳೆ ಬರಲಿಲ್ಲ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತಾದರೂ ಮಳೆಯ ಸುಳುವು ಇರಲಿಲ್ಲ. ಆದರೆ, ಶನಿವಾರ ಮಧ್ಯಾಹ್ನ ಎಂದಿನಂತೆ ಬಿಸಿಲಿನ ಜತೆಗೆ ಬಿಸಿಯ ವಾತಾವರಣ ನಿರ್ಮಾಣವಾಗಿತ್ತು. 

ಬೆಂಗಳೂರಿನಲ್ಲಿ ಹರ್ಷತಂದ ವರ್ಷಧಾರೆ: ಸತತ 2ನೇ ದಿನವೂ ಮಳೆಯ ಸಿಂಚನ

ಹವಾಮಾನ ಇಲಾಖೆ ವರದಿ ಪ್ರಕಾರ ಸೋಮವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿದ್ದು, ತಂಪಾದ ವಾತಾವರಣ ಇರಲಿದೆ ಎಂದು ಹೇಳಲಾಗಿದೆ. ಅದರಲ್ಲೂ ಮೇ 7 ಮತ್ತು 8ರಂದು ಮಳೆ ಪ್ರಮಾಣ ಹೆಚ್ಚಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆದರೂ, ಮುಂದಿನ ಮೂರು ದಿನಗಳ ಕಾಲ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಷಿಯಸ್‌ ಹಾಗೂ ಕನಿಷ್ಠ 24-25 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಉಷ್ಣ ಹವೆಗೆ  ಜನರು ತತ್ತರ: ಮಂಡ್ಯ ಜಿಲ್ಲೆಯ ಕಡೆಗೆ ಇದುವರೆಗೆ ಉಷ್ಣ ಹವೆ ಕಾಣಿಸಿಕೊಂಡಿದ್ದೇ ಇಲ್ಲ. ಬಿಸಿಲ ತಾಪ ಹೆಚ್ಚಿದ್ದರೂ ಅದನ್ನು ಸಹಿಸಿಕೊಂಡಿದ್ದ ಜನರು ಉಷ್ಣಹವೆಯನ್ನು ತಡೆಯುವುದಕ್ಕೆ ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೆಚ್ಚಿನ ಜನರು ದೇಹವನ್ನು ತಂಪಾಗಿಸಿಕೊಳ್ಳುವುದಕ್ಕೆ ನದಿಗಳಿಗೆ ಇಳಿದಿದ್ದಾರೆ. ನದಿ ಪಾತ್ರದ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಜನರು ಉಷ್ಣಹವೆಯಿಂದ ಧಗ ಧಗಿಸುತ್ತಿರುವ ದೇಹವನ್ನು ನದಿಗಿಳಿದು ತಂಪಾಗಿಸಿಕೊಳ್ಳುತ್ತಿದ್ದಾರೆ.

ಅನಿರೀಕ್ಷಿತ ಮಳೆಗೆ ತುಸು ತಣ್ಣಗಾದ ಬೆಂಗಳೂರು: ಏಕಾಏಕಿ ಗುಡುಗು, ಮಿಂಚು

ಶ್ರೀರಂಗಪಟ್ಟಣದ ಸಂಗಮ, ಗೋಸಾಯಿಘಾಟ್, ಶ್ರೀನಿಮಿಷಾಂಬ ದೇಗುಲ, ಎಡಮುರಿ, ಬಲಮುರಿ, ಸ್ನಾನಘಟ್ಟ, ಮಳವಳ್ಳಿ ತಾಲೂಕಿನ ಮುತ್ತತ್ತಿ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಬಂದವರೆಲ್ಲರೂ ನದಿಗಿಳಿದು ಈಜಾಡಿ ದೇಹವನ್ನು ತಂಪಾಗಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಕನಿಷ್ಠ ೩೫ ಡಿಗ್ರಿ ಉಷ್ಣಾಂಶದಿಂದ ೩೬ ಡಿಗ್ರಿಯವರೆಗೆ ತಾಪಮಾನವಿರುತ್ತಿತ್ತು. ೨೦೧೭ರ ಏಪ್ರಿಲ್ ೧೬ರಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ೪೧.೬ ಡಿಗ್ರಿ ತಾಪಮಾನ ದಾಖಲಾಗಿದ್ದು ಈವರೆಗಿನ ದಾಖಲೆಯಾಗಿದೆ. 

click me!