ಮುಂಗಾರು ಪೂರ್ವ ಮಳೆಯಿಂದ ಉಂಟಾಗಬಹುದಾದ ಪ್ರವಾಹವನ್ನು ತಡೆಯಲು ನಗರದ ಚರಂಡಿ, ರಾಜಕಾಲುವೆಗಳನ್ನು ಮೇ 10ರೊಳಗೆ ಸ್ವಚ್ಛಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಲಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು (ಮೇ.05): ಮುಂಗಾರು ಪೂರ್ವ ಮಳೆಯಿಂದ ಉಂಟಾಗಬಹುದಾದ ಪ್ರವಾಹವನ್ನು ತಡೆಯಲು ನಗರದ ಚರಂಡಿ, ರಾಜಕಾಲುವೆಗಳನ್ನು ಮೇ 10ರೊಳಗೆ ಸ್ವಚ್ಛಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಲಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಕೆಲದಿನಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿಯಲಿದೆ. ಈ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಚರಂಡಿ, ರಾಜಕಾಲುವೆಗಳಲ್ಲಿ ಶೇಖರಣೆಯಾಗಿರುವ ತ್ಯಾಜ್ಯ, ಹೂಳನ್ನು ತೆಗೆಯಲಾಗುತ್ತಿದೆ. ಅದಕ್ಕಾಗಿ ವಲಯ ಅಧಿಕಾರಿಗಳಿಗೆ ಮೇ 10ರೊಳಗೆ ಚರಂಡಿ, ರಾಜಕಾಲುವೆ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಚರಂಡಿ, ರಾಜಕಾಲುವೆಗಳಲ್ಲಿ ಹೂಳು, ತ್ಯಾಜ್ಯ ಶೇಖರಣೆಯಾಗುವುದನ್ನು ತಡೆಯಲು ಪ್ರತಿ ತಿಂಗಳ ಮೂರನೇ ವಾರ ಬಿಬಿಎಂಪಿ ವ್ಯಾಪ್ತಿಯ ಎಲ್ಲೆಡೆ ಚರಂಡಿ ಮತ್ತು ರಾಜಕಾಲುವೆ ಸ್ವಚ್ಛತಾ ವಾರವನ್ನಾಗಿ ಆಚರಿಸಲಾಗುವುದು. ವಲಯ ಅಧಿಕಾರಿಗಳು ಅದಕ್ಕೆ ಬೇಕಾಗುವ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ರಸ್ತೆ ಬದಿ ಶೇಖರಣೆಯಾಗಿರುವ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯವನ್ನು ಕೂಡಲೇ ತೆರವು ಮಾಡುವಂತೆಯೂ ನಿರ್ದೇಶಿಸಲಾಗಿದೆ. ಜತೆಗೆ ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಹೇಳಲಾಗಿದೆ ಎಂದು ಹೇಳಿದರು.
ಬೇಗನೇ ಪ್ರಜ್ವಲ್ ರೇವಣ್ಣ ಬಂಧಿಸಿ: ಎಸ್‌ಐಟಿಗೆ ಸಿಎಂ ಸಿದ್ದರಾಮಯ್ಯ ತಾಕೀತು
ಸಮಸ್ಯೆ ಪರಿಹಾರಕ್ಕೆ ಎಂಟು ನಿಯಂತ್ರಣ ಕೊಠಡಿ ಸ್ಥಾಪನೆ: ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯಲ್ಲಿ ಜನರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲ ಎಂಟು ವಲಯಗಳಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಬಿಬಿಎಂಪಿ ಜತೆಗೆ ಬೆಸ್ಕಾಂ, ಜಲಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳನ್ನು ನೇಮಿಸಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ. ವಿವಿಧ ಇಲಾಖೆಗಳು ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮುಂದಿನ 10 ದಿನಗಳಲ್ಲಿ ಪೂರ್ಣ ಅಥವಾ ಸ್ಥಗಿತಗೊಳಿಸಿ ರಸ್ತೆ ಹಾಗೂ ರಸ್ತೆ ಬದಿ ಹಾಕಲಾಗಿರುವ ಕಾಮಗಾರಿಗಳಿಗೆ ಬಳಸಲಾದ ಸಾಮಗ್ರಿಗಳನ್ನು ತೆರವು ಮಾಡುವಂತೆಯೂ ನಿರ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.