Asianet Suvarna News Asianet Suvarna News

ಮಹಿಂದ ರಾಜಪಕ್ಸ ಸೋದರ ಲಂಕಾಧಿಪತಿ!

ರಾಜಪಕ್ಸ ಸೋದರ ಲಂಕಾ ಅಧ್ಯಕ್ಷ| ಚೀನಿ ಪರ ನಿಲುವಿನ ಗೋಟಬಾಯಗೆ ಜಯ| ಅಣ್ಣ ಮಹಿಂದರನ್ನು ಪ್ರಧಾನಿ ಮಾಡುವ ಸಾಧ್ಯತೆ

Gotabaya Rajapaksa wins Sri Lankan presidential election
Author
Bangalore, First Published Nov 18, 2019, 8:57 AM IST

 

ಕೊಲಂಬೊ[ನ.18]: ಎಲ್‌ಟಿಟಿಇ ವಿರುದ್ಧದ ಯುದ್ಧದ ವೇಳೆ ಶ್ರೀಲಂಕಾದ ರಕ್ಷಣಾ ಕಾರ್ಯದರ್ಶಿ ಆಗಿ ಸಾಕಷ್ಟುವಿವಾದಕ್ಕೆ ಕಾರಣರಾಗಿದ್ದ ಗೋಟಬಾಯ ರಾಜಪಕ್ಸ ಅವರು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಭಾನುವಾರ ಆಯ್ಕೆಯಾಗಿದ್ದಾರೆ. ಚೀನಾ ಪರ ನಿಲುವು ಹೊಂದಿರುವ ಗೋಟಬಾಯ ಅವರು, ಭಾರತದ ಪರ ಒಲವು ಹೊಂದಿದ್ದ ಆಡಳಿತಾರೂಢ ಪಕ್ಷದ ಸಜಿತ್‌ ಪ್ರೇಮದಾಸ ಅವರನ್ನು 13 ಲಕ್ಷ ಮತಗಳ ಅಂತರದಿಂದ ಮಣಿಸಿದ್ದಾರೆ.

ಗೋಟಬಾಯ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

2015ರಲ್ಲಿ ರಾಜಪಕ್ಸ ಕುಟುಂಬವು ಅಧಿಕಾರ ವಂಚಿತವಾಗಿತ್ತು. ಈಗ ಮತ್ತೆ ಈ ಕುಟುಂಬ ಅಧಿಕಾರಕ್ಕೆ ಬಂದಿರುವುದು ವಿಶೇಷ. ಇನ್ನೊಂದು ವಿಶೇಷವೆಂದರೆ ಹಾಲಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ಗೋಟಬಾಯ ಜಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಆ ಜಾಗಕ್ಕೆ ಅಣ್ಣ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರನ್ನೇ ಪ್ರಧಾನಿಯನ್ನಾಗಿ ಗೋಟಬಾಯ ನೇಮಿಸುವ ಸಾಧ್ಯತೆ ಇದೆ. ಶ್ರೀಲಂಕಾ ಕಾನೂನಿನ ಪ್ರಕಾರ ಸಂಸತ್ತಿಗೆ 2020ರ ಫೆಬ್ರವರಿವರೆಗೆ ಚುನಾವಣೆ ನಡೆಸಲು ಅವಕಾಶವಿಲ್ಲ. ಹೀಗಾಗಿ ಅಲ್ಲಿಯವರೆಗೆ ತಮಗೆ ಬೇಕಾದವರನ್ನು ಪ್ರಧಾನಿ ಎಂದು ನೇಮಿಸುವ ಅಧಿಕಾರ ಗೋಟಬಾಯ ಅವರಿಗೆ ಇದೆ.

ಹಾಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಉತ್ತರಾಧಿಕಾರಿಯಾಗಲಿರುವ ಎಸ್‌ಎಲ್‌ಪಿಪಿ ಪಕ್ಷದ ಅಭ್ಯರ್ಥಿ ಗೋಟಬಾಯ ಅವರಿಗೆ ಸುಮಾರು 69 ಲಕ್ಷ ಮತಗಳು ದೊರಕಿದರೆ, ಅವರ ವಿರೋಧಿ ಯುನೈಟೆಡ್‌ ನ್ಯಾಷನಲ್‌ ಪಾರ್ಟಿಯ (ಯುಎನ್‌ಪಿ) ಪ್ರೇಮದಾಸ ಅವರಿಗೆ ಸುಮಾರು 56 ಲಕ್ಷ ಮತಗಳು ದೊರಕಿದವು.

ಈ ಜಯದ ಬೆನ್ನಲ್ಲೇ, ಚೀನಾ ಪರ ನಿಲುವು ಹೊಂದಿದ್ದರೂ 70 ವರ್ಷದ ಗೋಟಬಾಯ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಇದಕ್ಕೆ ಗೋಟಬಾಯ ಧನ್ಯವಾದಗಳನ್ನು ಸಲ್ಲಿಸಿ ‘ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕೆ ಎದುರು ನೋಡುತ್ತಿದ್ದೇನೆ’ ಎಂದು ಉತ್ತರಿಸಿದ್ದಾರೆ.

ಗೋಟಬಾಯ ನಿಲುವು ಚೀನಾ ಪರ

ಗೋಟಬಾಯ ರಾಜಪಕ್ಸ ಅವರು ಚೀನಾ ಪರ ನಿಲುವು ಹೊಂದಿದವರು. ಚುನಾವಣೆ ಪ್ರಚಾರದ ಸಂದರ್ಭದಲ್ಲೇ ಅವರು ‘ಚೀನಾ ಜತೆಗಿನ ಸಂಬಂಧ ಮರುಸ್ಥಾಪನೆ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದರು. ಭಾರತದ ಸನಿಹ ಇರುವ ಶ್ರೀಲಂಕಾದ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ತನ್ನ ನೆಲೆ ಸ್ಥಾಪಿಸಲು ಚೀನಾ ಹವಣಿಸುತ್ತಿದೆ. ಅದಕ್ಕೆಂದೇ ಶ್ರೀಲಂಕಾಗೆ ಅಪಾರ ಸಾಲ ನೀಡಿದೆ. ಇದಕ್ಕೆ ಪ್ರತಿಯಾಗಿ ಲಂಕಾದ ಹಂಬಂತೋಟ ಬಂದರನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಆದರೆ ಶ್ರೀಲಂಕಾದಲ್ಲಿನ ಈ ಚೀನಾ ನೆಲೆಯು ಭಾರತದ ಪಾಲಿಗೆ ರಕ್ಷಣಾ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಹೀಗಾಗಿ ಈಗ ಚೀನಾ ಪರ ಒಲವುಳ್ಳ ಗೋಟಬಾಯ ಅವರು ಭಾರತಕ್ಕೆ ಮತ್ತಷ್ಟುಕಳವಳ ಸೃಷ್ಟಿಸಬಲ್ಲರೇ ಎಂಬುದು ಈಗಿನ ಪ್ರಶ್ನೆ.

ಎಲ್‌ಟಿಟಿಇಯನ್ನು ಬಗ್ಗುಬಡಿದಿದ್ದ ಗೋಟಬಾಯ

ಗೋಟಬಾಯ ರಾಜಪಕ್ಸ ಅವರು ಈ ಮುನ್ನ ಶ್ರೀಲಂಕಾ ಸೇನೆಯಲ್ಲಿ ಹಾಗೂ 10 ವರ್ಷ ಕಾಲ ದೇಶದ ರಕ್ಷಣಾ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಅಣ್ಣ ಮಹಿಂದ ರಾಜಪಕ್ಸ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಈ ಹುದ್ದೆಯಲ್ಲಿ ಅವರು ಇದ್ದರು. ಈ ವೇಳೆ ತಮಿಳು ಪ್ರತ್ಯೇಕತಾವಾದಿ ‘ಎಲ್‌ಟಿಟಿಇ’ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಮಹಿಂದ ರಾಜಪಕ್ಸ ನಡೆಸಿದ್ದರು. ಕಾರ್ಯಾಚರಣೆಗೆ ಗೋಟಬಾಯ ಅವರನ್ನೇ ಉಸ್ತುವಾರಿಯೆಂದು ಮಹಿಂದ ನೇಮಿಸಿದ್ದರು.

ಎಲ್‌ಟಿಟಿಇ ವಿರುದ್ಧ ಸೇನೆ ಜಯ ಸಾಧಿಸಿದಾಗ ತಮಿಳರ ಬಗ್ಗೆ ಅಷ್ಟಾಗಿ ಒಲವು ಹೊಂದಿರದ ಬಹುಸಂಖ್ಯಾತ ಬೌದ್ಧರಲ್ಲಿ ರಾಜಪಕ್ಸ ಸೋದರರು ಬಹಳ ಜನಪ್ರಿಯತೆ ಗಳಿಸಿದ್ದರು. ಆದರೆ ಯುದ್ಧದ ಸಂದರ್ಭದಲ್ಲಿ ಅಪಾರ ಮಾರಣಹೋಮ ಸಂಭವಿಸಿದ್ದ ಕಾರಣ ‘ನಿರ್ದಯಿ ಆಡಳಿತಗಾರ’ ಎಂಬ ಕುಖ್ಯಾತಿಗೂ ಗೋಟಬಾಯ ತುತ್ತಾಗಿದ್ದರು.

ವಿಶೇಷವೆಂದರೆ 80ರ ದಶಕದಲ್ಲಿ ಇವರು ಅಸ್ಸಾಂನಲ್ಲಿ ಭಯೋತ್ಪಾದನಾ ವಿರೋಧಿ ತರಬೇತಿ ಪಡೆದಿದ್ದರು.

Follow Us:
Download App:
  • android
  • ios