ಕರ್ನಾಟಕದ ಟಾಪ್ ಸುದ್ದಿಗಳು, ಅಕ್ರಮ ಅದಿರು ಸಾಗಣೆ ಪ್ರಕರಣ, ಚಿನ್ನದ ಬೆಲೆ ಏರಿಕೆ, ಜಾಗತಿಕ ರಾಜಕೀಯ ಬದಲಾವಣೆಗಳು ಸೇರಿದಂತೆ ಹಲವು ಮಹತ್ವದ ಸುದ್ದಿಗಳು ಇಲ್ಲಿವೆ.
ಬೇಲೇಕೇರಿ ಅದಿರು ಕೇಸಲ್ಲಿ ಕೈ ಶಾಸಕ ಸೈಲ್ ಅರೆಸ್ಟ್
ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಮಂಗಳವಾರ ಬಂಧಿಸಿದ್ದಾರೆ. ಕಳೆದ ಆ.13 ಮತ್ತು 14ರಂದು ಶಾಸಕ ಸತೀಶ್ ಸೈಲ್ ಮನೆ ಹಾಗೂ ಕಂಪನಿಗಳ ಮೇಲೆ ದಾಳಿ ಮಾಡಿ ಶೋಧಿಸಿದ್ದ ಇ.ಡಿ. ಅಧಿಕಾರಿಗಳು ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ಸತೀಶ್ ಸೈಲ್ ಅವರನ್ನು ಕೆಲ ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಲಾಗಿದೆ.
ಮುಂದೆ ಮುಸ್ಲಿಂ ಆಗಿ ಹುಟ್ಟುವಾಸೆ ಸಂಗಮೇಶ್ವರ್
ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ನಿಮ್ಮ ಈ ಪ್ರೀತಿ ನೋಡುತ್ತಿದ್ದರೆ ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವ ಆಸೆ ಉಂಟಾಗುತ್ತಿದೆ’ ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆಯನ್ನೂ ಏರ್ಪಡಿಸಲಾಗಿತ್ತು.
100ರಲ್ಲಿ 63 ಜನ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ತಾರೆ: ಎಚ್ಕೆ ಪಾಟೀಲ್
ನಮ್ಮ ರಾಜ್ಯ ಎಷ್ಟೇ ಅಭಿವೃದ್ಧಿ ಆಗಿದೆ ಎಂದು ನಾವು ಹೇಳಿಕೊಂಡರೂ, 100ಕ್ಕೆ 63ರಷ್ಟು ಜನ ಸರ್ಕಾರಿ ಕಚೇರಿ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುತ್ತಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ? ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಬೇಸರ ವ್ಯಕ್ತಪಡಿಸಿದರು. ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಸಿ.ಎಚ್ ಜಾಧವ್, ರಾಜಶೇಖರ್ ಟಿ.ಬಿ ಹಾಗೂ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರಶ್ಮಿ ಜಾಧವ್ ಬರೆದಿರುವ ‘ಲಾ ರಿಲೇಟಿಂಗ್ ಟು ಕರಪ್ಷನ್ ಆ್ಯಂಡ್ ಪೊಸೆಷನ್ ಆಫ್ ಡಿಸ್‌ಪ್ರೊಪೋರ್ಷನೇಟ್ ಅಸ್ಸೆಟ್ಸ್’ 2ನೇ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನ ಸಾಮಾನ್ಯರನ್ನು ಕಿತ್ತು ತಿನ್ನುವ, ಲೂಟಿ ಹೊಡೆಯುವ ಸಂಘಟಿತ ಭ್ರಷ್ಟಾಚಾರವನ್ನು ಇಡೀ ವ್ಯವಸ್ಥೆಯಾಗಿ ನಾವು ತಡೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದರು.
ಚಿನ್ನದ ಬೆಲೆ 10 ಗ್ರಾಂಗೆ ₹1.14 ಲಕ್ಷ : ದಾಖಲೆ
ದೇಶದಲ್ಲಿ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆಯು 2400 ರು. ಏರಿಕೆಯಾಗಿ, 10 ಗ್ರಾಂಗೆ 1,14,800 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ. ಜೊತೆಗೆ ಬೆಳ್ಳಿ ಬೆಲೆಯು 2500 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,32,700 ರು.ಗೆ ಜಿಗಿದಿದೆ. ಅಮೆರಿಕದಲ್ಲಿನ ಕಾರ್ಮಿಕ ನೀತಿ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದಿಂದಾಗಿ ಹೂಡಿಕೆದಾರರು ಅಮೂಲ್ಯ ಲೋಹದ ಕಡೆಗೆ ಚಿತ್ತ ಹರಿಸಿದ್ದಾರೆ. ಹೀಗಾಗಿ ಚಿನ್ನದ ಬೆಲೆಯು ಜಿಗಿದಿದೆ. ಸೋಮವಾರ ಬೆಂಗಳೂರಿನಲ್ಲಿ 10 ಗ್ರಾಂ 99.5 ಶುದ್ಧತೆಯ ಚಿನ್ನ 1,12,400 ರು. ಇತ್ತು.
ತಂದೆ ಆಸ್ತಿಯಲ್ಲಿ ಪಾಲು ಕೇಳಿ ನಟಿ ಕರಿಷ್ಮಾ ಮಕ್ಕಳು ಕೋರ್ಟ್‌ಗೆ
ನವದೆಹಲಿ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ಇತ್ತೀಚೆಗಷ್ಟೇ ನಿಧನರಾದ ತಮ್ಮ ತಂದೆ ಸಂಜಯ ಕಪೂರ್ ಅವರ ಆಸ್ತಿಯಲ್ಲಿ ಪಾಲು ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸೆ.10ರಂದು ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.ಕರಿಷ್ಮಾ ಮಾಜಿ ಪತಿ ಸಂಜಯ್ ಕಪೂರ್ ಕಳೆದ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾಗಿದ್ದರು. ಅವರು ಒಟ್ಟು 31000 ಕೋಟಿ ರು. ಆಸ್ತಿ ಹೊಂದಿದ್ದಾರೆ.
ಮೆಟ್ರೋಗೆ ಸೇಂಟ್ ಮೇರಿ ಹೆಸರು; ಮೆಟ್ರೋಗೋಸ್ಕರ ಸ್ವಂತ ದುಡ್ಡು ಖರ್ಚು ಮಾಡಿದ್ದ Shankar Nag ನೆನಪಾಗಲಿಲ್ವಾ?
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ( Namma Metro ) ವಿಸ್ತರಣೆ ಆಗುತ್ತಲಿದೆ. ಈಗ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು ಇಡಲು ಸಿದ್ದರಾಮಯ್ಯನವರ ಸರ್ಕಾರ ನಿರ್ಧಾರ ಮಾಡಿದ್ದು, ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆಯಂತೆ. ಮೆಟ್ರೋ ಮಾಡಲು ಅಂದು ಸ್ವಂತ ಖರ್ಚು ಮಾಡಿ ಸರ್ವೇ ಮಾಡಿದ್ದ, ಲಂಡನ್‌ಗೆ ಹೋಗಿದ್ದ ಶಂಕರ್ ನಾಗ್ ಅವರನ್ನು ( Shankar Nag ) ಸರ್ಕಾರ ಮರೆತಿದೆ.
ಹಮಾಸ್ ಉಗ್ರರು ಟಾರ್ಗೆಟ್: ಕತಾರ್ ಮೇಲೆ ಇಸ್ರೇಲ್ ದಾಳಿ
ದೋಹಾ: ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್‌ನ ಉಗ್ರ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮಂಗಳವಾರ ದಾಳಿ ನಡೆಸಿದೆ. ಆದರೆ ಸಾವುನೋವಿನ ಮಾಹಿತಿ ಲಭಿಸಿಲ್ಲ. ದಾಳಿಯನ್ನು ಕತಾರ್ ಖಂಡಿಸಿದ್ದು. ‘ಹಮಾಸ್ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ನಡೆಸಿರುವುದು ಹೇಡಿತನದ ದಾಳಿ. ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ’ ಎಂದು ಕಿಡಿಕಾರಿದೆ.ಇಸ್ರೇಲ್ ಭದ್ರತಾ ಸಂಸ್ಥೆ ಶಿನ್‌ಬೆಟ್ ನೆರವಿನಿಂದ ಈ ದಾಳಿ ನಡೆದಿದೆ. ಕತಾರ್ ಅಮೆರಿಕದ ಸ್ನೇಹಿತ ದೇಶವಾಗಿದ್ದು, ಯುದ್ಧ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂಥದ್ದರಲ್ಲಿ ನಡೆದ ಈ ದಾಳಿ ಶಾಂತಿ ಸಂಧಾನಕ್ಕೆ ಹಿನ್ನಡೆ ತಂದಿದೆ.
3 ದಿನ 3 ಪ್ರಧಾನಿಗಳು ಔಟ್! ಜಾಗತಿಕ ರಾಜಕಾರಣದಲ್ಲಿ ತಲ್ಲಣ!
ಜಾಗತಿಕ ರಾಜಕಾರಣ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಕಳೆದ 3 ದಿನಗಳಲ್ಲಿ 3 ಪ್ರಧಾನಿಗಳು ಪಟ್ಟ ಕಳೆದುಕೊಂಡಿದ್ದಾರೆ. ಕಳೆದ ಭಾನುವಾರ ಜಪಾನ್ ಪ್ರಧಾನಿ ಶಿಗೆರೋ ಇಶಿಬಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಸೋಮವಾರದಂದು ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಬೈರೊ ವಿಶ್ವಾಸ ಕಳೆದುಕೊಂಡರು, ಮಂಗಳವಾರ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಬೇಕಾಯ್ತು
ನೇಪಾಳದಲ್ಲಿ ಪೊಲೀಸರಿಂದಲೇ ಹಿಂಸೆ, ರೇ*: ಆರೋಪ
ಕಾಠ್ಮಂಡು: ಸಾಮಾಜಿಕ ಜಾಲತಾಣ ನಿಷೇಧದ ವಿರುದ್ಧ ಆರಂಭವಾದ ಪ್ರತಿಭಟನೆಯು ನೇಪಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಅಲ್ಲಿನ ಪೊಲೀಸರೇ ಆಸ್ಪತ್ರೆ, ಶಾಲೆಗೆ ನುಗ್ಗಿ ಗುಂಡಿನ ಮಳೆಗರೆದಿದ್ದಾರೆ, ಮನೆಗಳಿಗೆ ನುಗ್ಗಿ ಅತ್ಯಾ*ರವೆಸಗಿದ್ದಾರೆ ಎಂದು ಅಲ್ಲಿನ ಸಾಮಾಜಿಕ ಜಾಲತಾಣದ ಪ್ರಭಾವಿಗಳು ಆರೋಪಿಸಿದ್ದಾರೆ.
