ಅಘೋಷಿತ ಚಿನ್ನ ಬೇಟೆಗಾಗಿ ಹೊಸ ಕಾನೂನು ಜಾರಿ ಇಲ್ಲ

‘ಚಿನ್ನ ಕ್ಷಮಾದಾನ’ ಯೋಜನೆ ಜಾರಿಗೆ ಮುಂದಾಗಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ, ಇಂಥ ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

No Proposal To Launch Gold Amnesty Scheme

ನವದೆಹಲಿ [ಅ.01]:  ಕಪ್ಪುಹಣದ ಮೂಲಕ ಖರೀದಿಸಿದ ಚಿನ್ನ ಪತ್ತೆಗಾಗಿ ಕೇಂದ್ರ ಸರ್ಕಾರ ‘ಚಿನ್ನ ಕ್ಷಮಾದಾನ’ ಯೋಜನೆ ಜಾರಿಗೆ ಮುಂದಾಗಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ, ಇಂಥ ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಚಿನ್ನ ಕ್ಷಮಾದಾನದಂಥ ಯಾವುದೇ ಯೋಜನೆ ಜಾರಿಗೊಳಿಸುವ ಪ್ರಸ್ತಾಪ ಆದಾಯ ತೆರಿಗೆ ಇಲಾಖೆ ಮುಂದಿಲ್ಲ. ಈಗಾಗಲೇ ಮುಂದಿನ ಬಜೆಟ್‌ ಸಿದ್ಧಪಡಿಸುವಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇಂಥ ಸಂದರ್ಭದಲ್ಲಿ ಈ ರೀತಿಯ ಊಹಾಪೋಹ ಮತ್ತು ವದಂತಿಗಳು ಸುದ್ದಿಗಳಾಗುವುದು ಸಾಮಾನ್ಯ ಸಂಗತಿ. ಆದರೆ, ಇಂಥ ವರದಿಗಳ ಬಗ್ಗೆ ಜನ ಸಾಮಾನ್ಯರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಚಿನ್ನ ಬಚ್ಚಿಟ್ಟುಕೊಂಡವರೇ ಹುಷಾರ್

ಸಾರ್ವಜನಿಕರು ತಮ್ಮ ಬಳಿ ಇರುವ ‘ಬಿಲ್‌ ರಹಿತವಾದ ಚಿನ್ನ’ವನ್ನು ಸ್ವಯಂಘೋಷಣೆ ಮಾಡಿಕೊಂಡು ಸರ್ಕಾರಕ್ಕೆ ಮಾಹಿತಿ ಸಲ್ಲಿಸಬೇಕು. ಇಂಥ ಚಿನ್ನಕ್ಕೆ ಸರ್ಕಾರ ತೆರಿಗೆ ಮತ್ತು ದಂಡ ವಿಧಿಸಿ ಸಕ್ರಮಕ್ಕೆ ಅವಕಾಶ ಮಾಡಿಕೊಡುತ್ತದೆ. ಹೀಗೆ ಘೋಷಿಸಿಕೊಂಡವರು ಮುಂದೆ ತನಿಖೆಯಿಂದ ಪಾರಾಗುತ್ತಾರೆ. ಘೋಷಿಸಿಕೊಳ್ಳದವರು ಮುಂದೆ ಸಿಕ್ಕಿಬಿದ್ದರೆ ಅಘೋಷಿತ ಚಿನ್ನಕ್ಕೆ ಭಾರೀ ತೆರಿಗೆ, ದಂಡದ ಜೊತೆಗೆ ಶಿಕ್ಷೆಯನ್ನೂ ಎದುರಿಸಬೇಕಾಗಿ ಬರುತ್ತದೆ. ಕೇಂದ್ರ ವಿತ್ತ ಸಚಿವಾಲಯ ಹಾಗೂ ಕಂದಾಯ ಸಚಿವಾಲಯಗಳು ಜಂಟಿಯಾಗಿ ಈ ಚಿನ್ನ ಕ್ಷಮಾದಾನ ಯೋಜನೆ  ಪ್ರಸ್ತಾಪ ಸಿದ್ಧಪಡಿಸಿದ್ದು, ಸಚಿವ ಸಂಪುಟಕ್ಕೆ ಕಳಿಸಿವೆ ಎಂದು ವರದಿಯಾಗಿತ್ತು. ಇದು ಸಹಜವಾಗಿಯೇ ಭಾರೀ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸಿದ್ದವರಲ್ಲಿ ಭೀತಿಯನ್ನೂ ಹುಟ್ಟಿಸಿತ್ತು. ಆದರೆ ಅದರ ಬೆನ್ನಲ್ಲೇ ಇದೀಗ ಅಂಥ ಯಾವುದೇ ಪ್ರಸ್ತಾಪವನ್ನು ತಾನು ಸಿದ್ಧಪಡಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

ಭಾರತೀಯರು ಒಟ್ಟಾರೆ 20 ಸಾವಿರ ಟನ್‌ ಚಿನ್ನ ಹೊಂದಿದ್ದಾರೆ ಎಂಬ ಅಂದಾಜಿದೆ. ಅಲ್ಲದೆ, ಲೆಕ್ಕಕ್ಕೆ ಸಿಗದಿರುವ ಹಾಗೂ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಚಿನ್ನವನ್ನು ಒಟ್ಟುಗೂಡಿಸಿದರೆ, ಭಾರತೀಯರ ಬಳಿ ಒಟ್ಟಾರೆ 25,000-30,000 ಟನ್‌ವರೆಗೂ ಚಿನ್ನವಿರಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

Latest Videos
Follow Us:
Download App:
  • android
  • ios