ಮುಕ್ತ ವಾಯುಸೀಮೆ ಒಪ್ಪಂದಕ್ಕೆ ಗುಡ್‌ಬೈ, ಅಮೆರಿಕ ಯುದ್ದೋನ್ಮಾದದಲ್ಲಿದೆ ಎಂದ ಚೀನಾ

By Kannadaprabha News  |  First Published May 23, 2020, 10:03 AM IST

34 ಸದಸ್ಯ ದೇಶಗಳ ಮೇಲೆ ನಿಶ್ಯಸ್ತ್ರ ವೈಮಾನಿಕ ಕಣ್ಗಾವಲಿಗೆ ಅವಕಾಶ ಕಲ್ಪಿಸುವ ಮುಕ್ತವಾಯು ಸೀಮೆ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಅಮೆರಿಕ ಘೋಷಿಸಿದೆ. ಇದು ಶೀತಲ ಸಮರದ ಮನೋಸ್ಥಿತಿ ಎನ್ನುವ ಮೂಲಕ, ಅಮೆರಿಕ ಯುದ್ಧೋನ್ಮಾದದಲ್ಲಿದೆ ಎಂಬರ್ಥದಲ್ಲಿ ಚೀನಾ ಟೀಕೆ ಮಾಡಿದೆ


ವಾಷಿಂಗ್ಟನ್(ಮೇ 23)‌: 34 ಸದಸ್ಯ ದೇಶಗಳ ಮೇಲೆ ನಿಶ್ಯಸ್ತ್ರ ವೈಮಾನಿಕ ಕಣ್ಗಾವಲಿಗೆ ಅವಕಾಶ ಕಲ್ಪಿಸುವ ಮುಕ್ತವಾಯು ಸೀಮೆ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಅಮೆರಿಕ ಘೋಷಿಸಿದೆ.

ರಷ್ಯಾ ಈ ಒಪ್ಪಂದವನ್ನು ಉಲ್ಲಂಘಿಸಿರುವುದರಿಂದ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಅಮೆರಿಕ ಹೇಳಿದೆ. ರಷ್ಯಾ ನಿಯಮಗಳನ್ನು ಪಾಲಿಸುತ್ತಿಲ್ಲ. ಆದ್ದರಿಂದ ಈ ಒಪ್ಪಂದದಿಂದ ನಾವು ಹಿಂದೆ ಸರಿಯುತ್ತಿದ್ದೇವೆ. ಹೊಸ ಒಪ್ಪಂದ ಮಾಡಿಕೊಳ್ಳುವ ಹಾಗೂ ಮತ್ತೊಮ್ಮೆ ಒಪ್ಪಂದಕ್ಕೆ ಮರಳುವ ಆಯ್ಕೆಗಳು ಮುಕ್ತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Latest Videos

undefined

ನ್ಯೂಯಾರ್ಕ್ ಮಹಾನಗರದಲ್ಲಿ ತುತ್ತು ಊಟಕ್ಕೆ ತತ್ವಾರ!

ಮುಕ್ತ ವಾಯುಸೀಮೆ ಒಪ್ಪಂದ ಉತ್ತರ ಅಮೆರಿಕ, ಯೂರೋಪ್‌ ಹಾಗೂ ದಕ್ಷಿಣ ಏಷ್ಯಾದ 34 ರಾಷ್ಟ್ರಗಳು ಸೇರಿಕೊಂಡು ಮಾಡಿದ ಒಡಂಬಡಿಕೆಯಾಗಿದ್ದು, ಇದರನ್ವಯ ಈ ದೇಶಗಳು ಪರಸ್ಪರ ತಮ್ಮ ವಾಯುಸೀಮೆಯಲ್ಲಿ ನಿಶ್ಶಸ್ತ್ರ ವೈಮಾನಿಕ ಕಣ್ಗಾವಲು ಮಾಡಬಹುದಾಗಿದೆ. 2002 ರಿಂದ ಇದು ಜಾರಿಯಲ್ಲಿದ್ದು, ಭಾರತ ಈ ಗುಂಪಿನಲ್ಲಿಲ್ಲ.

ಇಡೀ ವಿಶ್ವವನ್ನೇ ಆರೋಗ್ಯ ತುರ್ತು ಪರಿಸ್ಥಿತಿಗೆ ದೂಡಿರುವ ಕೊರೋನಾ ವೈರಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೆಂಡಕಾರುತ್ತಿರುವ ಬೆನ್ನಲ್ಲೇ, ಅಮೆರಿಕದ ಷೇರುಪೇಟೆಯಿಂದ ಚೀನಾ ಮೂಲದ ಕಂಪನಿಗಳನ್ನು ಹೊರದಬ್ಬುವ ಮಸೂದೆಯೊಂದಕ್ಕೆ ಸೆನೆಟ್‌ ಅನುಮೋದನೆ ನೀಡಿದೆ.

ಕೊರೋನಾ ಸೋಂಕು: ಇಟಲಿಯನ್ನು ಮೀರಿಸಿದ ನ್ಯೂಯಾರ್ಕ್..!

‘ಹೋಲ್ಡಿಂಗ್‌ ಫಾರಿನ್‌ ಕಂಪನೀಸ್‌ ಅಕೌಂಟೇಬಲ್‌ ಆ್ಯಕ್ಟ್’(ವಿದೇಶಿ ಕಂಪನಿಗಳ ಜವಾಬ್ದಾರಿಯುತ ಕಾಯ್ದೆ) ಎಂಬ ಮಸೂದೆಯು ಕಾಯ್ದೆಯಾಗಿ ರೂಪುಗೊಳ್ಳಲು ಇನ್ನೆರಡೇ ಹಂತಗಳು ಬಾಕಿಯಿದೆ. ಅವುಗಳೆಂದರೆ ಅಮೆರಿಕದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನ ಅನುಮೋದನೆ ಹಾಗೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಹಿ. ಇದು ಮುಂದಿನ ದಿನಗಳಲ್ಲಿ ಅಲಿಬಾಬಾ, ಬೈಡು ಮೊದಲಾದ ಕಂಪನಿಗಳಿಗೆ ಅಮೆರಿಕದ ಷೇರುಪೇಟೆಯಲ್ಲಿ ನೊಂದಾಯಿಸಿಕೊಳ್ಳುವ ಅವಕಾಶ ತಪ್ಪಿಸುತ್ತದೆ. ವಿದೇಶಿ ಕಂಪನಿಗಳು ತಾವು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತಿಲ್ಲ ಎಂಬ ಸ್ಪಷ್ಟನೆ ಕೊಟ್ಟರೆ ಮಾತ್ರ ಅವುಗಳಿಗೆ ಅಮೆರಿಕ ಷೇರುಪೇಟೆ ಪ್ರವೇಶಕ್ಕೆ ಅವಕಾಶ ಸಿಗುತ್ತದೆ.

ನ್ಯೂಯಾರ್ಕ್ ಕೊರೋನಾ ಸೋಂಕಿತರಿಗೆ ದೇವರಾದ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ!.

ಮುಕ್ತವಾಯು ಸೀಮೆ ಒಪ್ಪಂದದಿಂದ ಹಿಂದೆ ಸರಿಯುವ ಅಮೆರಿಕ ನಿರ್ಧಾರವನ್ನು ಚೀನಾ ಬಲವಾಗಿ ಪ್ರಶ್ನಿಸಿದೆ. ಜೊತೆಗೆ ಇದು ಶೀತಲ ಸಮರದ ಮನೋಸ್ಥಿತಿ ಎನ್ನುವ ಮೂಲಕ, ಅಮೆರಿಕ ಯುದ್ಧೋನ್ಮಾದದಲ್ಲಿದೆ ಎಂಬರ್ಥದಲ್ಲಿ ಟೀಕೆ ಮಾಡಿದೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರರು, ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ಹೊರತಾಗಿಯೂ ಅಮೆರಿಕ ಇಂಥ ನಿರ್ಧಾರ ಕೈಗೊಂಡಿರುವುದು ವಿಷಾದನೀಯ. ಇದು ಶೀತಲ ಸಮರ ಮನೋಸ್ಥಿತಿಯಲ್ಲಿ ಮತ್ತೊಂದು ಹೆಜ್ಜೆ. ಅಮೆರಿಕ ಮೊದಲು ಎಂಬ ನೀತಿಯಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಬಾಧ್ಯತೆಯನ್ನು ಮುರಿಯುವ ಏಕಪಕ್ಷೀಯ ನಿರ್ಧಾರವಾಗಿ ಎಂದು ಟೀಕಿಸಿದೆ. ವ್ಯಾಪಾರ ಬಿಕ್ಕಟ್ಟು, ಕೊರೋನಾ ವೈರಸ್‌ ಉಗಮ ಸಂಬಂಧ ಎರಡು ದೇಶಗಳ ನಡುವೆ ಬಹಿರಂಗ ವಾಕ್ಸಮರ ನಡೆಯುತ್ತಿರುವ ಹೊತ್ತಿನಲ್ಲೇ ಚೀನಾ ಶೀತಲ ಸಮರದ ಮಾತುಗಳನ್ನು ಆಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

click me!