
ಫ್ಲೋರಿಡಾ(ಆ.26) : ಡೆಂಘೀ, ಝೀಕಾ ವೈರಸ್, ಚಿಕುನ್‌ಗುನ್ಯಾ ಮುಂತಾದ ರೋಗಗಳು ಹರಡುವುದನ್ನು ತಡೆಯಲು ಫೆä್ಲೕರಿಡಾದಲ್ಲಿ 75 ಕೋಟಿ ಕುಲಾಂತರಿ ಸೊಳ್ಳೆಗಳನ್ನು ಬಿಡುಗಡೆ ಮಾಡುವ ವಿವಾದಾಸ್ಪದ ನಿರ್ಧಾರಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ಎರಡು ವರ್ಷಗಳಲ್ಲಿ ಫೆä್ಲೕರಿಡಾ ಕೀಸ್ ಪ್ರದೇಶದಲ್ಲಿ ಈ ಸೊಳ್ಳೆಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.
ಫ್ಲೋರಿಡಾ ರಾಜ್ಯದಲ್ಲಿ ಡೆಂಘೀ ವೇಗವಾಗಿ ಹರಡುತ್ತಿದೆ. ಇದಕ್ಕೂ ಮುನ್ನ ಝೀಕಾ ವೈರಸ್, ಚಿಕುನ್‌ಗುನ್ಯಾ, ಹಳದಿ ಜ್ವರದ ಹಾವಳಿಯೂ ಪದೇಪದೇ ಕಾಣಿಸಿಕೊಂಡಿತ್ತು. ಇವೆಲ್ಲವೂ ಸೊಳ್ಳೆಗಳಿಂದ ಹರಡುವ ರೋಗಗಳಾಗಿವೆ. ಹೀಗಾಗಿ ಈ ರೋಗಗಳನ್ನು ಹರಡುವ ಸೊಳ್ಳೆಗಳ ವಂಶವಾಹಿ ಬದಲಿಸಿ, ಕ್ರಮೇಣ ಸೊಳ್ಳೆಗಳ ಸಂತತಿಯನ್ನೇ ನಿರ್ಮೂಲನೆ ಮಾಡಲು ಬ್ರಿಟನ್ ಮೂಲದ ಆಕ್ಸಿಟೆಕ್ ಎಂಬ ಕಂಪನಿ ಫ್ಲೋರಿಡಾ ಸರ್ಕಾರಕ್ಕೆ ಕುಲಾಂತರಿ ಸೊಳ್ಳೆಗಳನ್ನು ಸೃಷ್ಟಿಸಿ ವಾತಾವರಣಕ್ಕೆ ಬಿಡುಗಡೆ ಮಾಡುವ ಉಪಾಯ ಸೂಚಿಸಿತ್ತು. ಯೋಜನೆಗೆ ಟ್ರಂಪ್ ಆಡಳಿತ ಮತ್ತು ಫ್ಲೋರಿಡಾ ರಾಜ್ಯದ ಅನುಮತಿ ಸಿಕ್ಕಿತ್ತು. ಇದೀಗ ಸ್ಥಳೀಯರ ತೀವ್ರ ವಿರೋಧದ ಹೊರತಾಗಿಯೂ ಸ್ಥಳೀಯ ಆಡಳಿತ ಯೋಜನೆಗೆ ಒಪ್ಪಿಗೆ ನೀಡಿದೆ.
ಸೊಳ್ಳೆಯಿಂದ ಹರಡುತ್ತಾ ಕೊರೋನಾ? ಕಡೆಗೂ ಸಿಕ್ಕಿತು ಉತ್ತರ
ಸೊಳ್ಳೆಗಳಿಂದಲೇ ಸೊಳ್ಳೆಗಳ ನಿರ್ಮೂಲನೆ:
ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು, ರೋಗ ಹರಡುವ ಈಡಿಪಸ್ ಈಜಿಪ್ಟಿಸೊಳ್ಳೆಗಳನ್ನು ನಾಶಪಡಿಸಲು ಕೀಟನಾಶಕ ಸಿಂಪಡಿಸುವ ಬದಲು ಗಂಡು ಈಡಿಪಸ್ ಈಜಿಪ್ಟಿಸೊಳ್ಳೆಗಳ ವಂಶವಾಹಿಯನ್ನು ತಿದ್ದಿ ವಾತಾವರಣಕ್ಕೆ ಬಿಡುಗಡೆ ಮಾಡಲಾಗುತ್ತದೆ. ಈ ಸೊಳ್ಳೆಯನ್ನು ಒಎಕ್ಸ್ 5034 ಎಂದು ಕರೆಯಲಾಗಿದೆ. ಈ ಕುಲಾಂತರಿ ಸೊಳ್ಳೆಗಳ ದೇಹದಲ್ಲಿ ಒಂದು ವಿಶಿಷ್ಟಪ್ರೋಟೀನ್ ಸೇರಿಸಲಾಗಿದ್ದು, ನೈಸರ್ಗಿಕ ಹೆಣ್ಣು ಸೊಳ್ಳೆಗಳ ಜೊತೆ ಇವು ಲೈಂಗಿಕ ಕ್ರಿಯೆ ನಡೆಸಿದಾಗ ಇವುಗಳ ದೇಹದಿಂದ ಆ ಪ್ರೋಟೀನ್ ಹೆಣ್ಣು ಸೊಳ್ಳೆಗಳಿಗೆ ವರ್ಗಾವಣೆಯಾಗುತ್ತದೆ. ಅಂತಹ ಹೆಣ್ಣು ಸೊಳ್ಳೆಗೆ ಹುಟ್ಟುವ ಸೊಳ್ಳೆಗಳಲ್ಲಿ ರೋಗ ಹರಡುವ ಶಕ್ತಿಯೇ ಇರುವುದಿಲ್ಲ. ಜೊತೆಗೆ ಆ ಸೊಳ್ಳೆಗಳಿಗೆ ವಂಶಾಭಿವೃದ್ಧಿ ಶಕ್ತಿಯೂ ಇರುವುದಿಲ್ಲ. ಹೀಗಾಗಿ ಕ್ರಮೇಣ ಸೊಳ್ಳೆಗಳ ಸಂತತಿಯೇ ಕಡಿಮೆಯಾಗುತ್ತದೆ ಎಂದು ಆಕ್ಸಿಟೆಕ್ ಕಂಪನಿ ಹೇಳಿಕೊಂಡಿದೆ.
ಕೃತಕವಾಗಿ ಸೃಷ್ಟಿಸಿದ ಸೊಳ್ಳೆಗಳೆಲ್ಲ ಗಂಡು ಸೊಳ್ಳೆಗಳಾಗಿವೆ. ಇವು ಮನುಷ್ಯರಿಗೆ ಕಚ್ಚುವುದಿಲ್ಲ. ಹೆಣ್ಣು ಈಡಿಪಸ್ ಈಜಿಪ್ಟಿಸೊಳ್ಳೆಗಳು ಮಾತ್ರ ಮನುಷ್ಯರಿಗೆ ಕಚ್ಚುತ್ತವೆ. ಗಂಡು ಸೊಳ್ಳೆಗಳು ಹೂವಿನ ಮಕರಂದ ಹೀರಿ ಬದುಕುತ್ತವೆ. ಹೀಗಾಗಿ ಇವು ರೋಗ ಹರಡುವುದಿಲ್ಲ. ಆದ್ದರಿಂದ ಇವುಗಳಿಂದ ಮನುಷ್ಯರಿಗೆ ಅಪಾಯವಿಲ್ಲ ಎಂದು ಕಂಪನಿ ತಿಳಿಸಿದೆ.
ಸಾಂಕ್ರಾಮಿಕ ರೋಗದ ನಡುವೆ ಡೆಂಗ್ಯೂ ಭೀತಿ
ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಪ್ರಯೋಗದಿಂದ ಪರಿಸರದ ಸಮತೋಲನ ನಾಶವಾಗಬಹುದು. ಜೊತೆಗೆ, ಒಂದು ಸೊಳ್ಳೆಯನ್ನು ನಾಶಪಡಿಸಲು ಹೋಗಿ ಇನ್ನೊಂದು ಸೊಳ್ಳೆಯನ್ನು ಸೃಷ್ಟಿಸಿದಂತಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ