
ಈಗಿನ ವಾತಾವರಣ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತಿದೆ. ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಸಾಮಾನ್ಯವಾಗಿ 46ರ ಗಡಿ ದಾಟುತ್ತಿದ್ದಂತೆ ಮಹಿಳೆಯರು ಋತುಬಂಧ (menopause)ಕ್ಕೊಳಗಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮುಟ್ಟು ನಿಲ್ಲುವ ವರ್ಷದಲ್ಲಿ ಇಳಿಕೆ ಕಂಡು ಬಂದಿದೆ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೂ ಮುಟ್ಟು ನಿಲ್ಲುತ್ತಿದೆ. ಋತುಬಂಧಕ್ಕಿಂತ ಮೊದಲು ಮಹಿಳೆಯರಿಗೆ ಕೆಲವೊಂದು ಸಮಸ್ಯೆ ಕಾಡುತ್ತದೆ. ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆ ಯಾವುದು? ಯಾವ ಲಕ್ಷಣ ಕಂಡು ಬಂದಾಗ ವೈದ್ಯರನ್ನು ಭೇಟಿಯಾಗಬೇಕು ಎಂಬ ವಿವರ ಇಲ್ಲಿದೆ.
ಅಕಾಲಿಕ ಋತುಬಂಧ (Early menopause) : ಕಡಿಮೆ ವಯಸ್ಸಿನಲ್ಲಿ ಮುಟ್ಟು ನಿಲ್ಲುವುದನ್ನು ಅಕಾಲಿಕ ಅಂಡಾಶಯ ಕೊರತೆ ಅಥವಾ ಅಕಾಲಿಕ ಋತುಬಂಧವೆಂದು ಕರೆಯಲಾಗುತ್ತದೆ. ವಿಶ್ವದ ಶೇಕಡಾ ಐದರಷ್ಟು ಮಹಿಳೆಯರು ಆರಂಭಿಕ ಋತುಬಂಧ ಅನುಭವಿಸುತ್ತಾರೆ.
ಅಕಾಲಿಕ ಋತು ಬಂಧಕ್ಕೆ ಕಾರಣ (reason) :
ಬದಲಾದ ಜೀವನ ಶೈಲಿ,ಕೆಲವು ಔಷಧಿಗಳ ನಿರಂತರ ಬಳಕೆ,ಐವಿಎಫ್ ಸೇರಿದಂತೆ ಅನೇಕ ಕಾರಣಗಳಿಗೆ ಅಕಾಲಿಕ ಋತುಬಂಧಕ್ಕೆ ಕಾರಣವಾಗ್ತಿದೆ. ಇದಲ್ಲದೆ ಇನ್ನೂ ಕೆಲ ಕಾರಣಗಳಿವೆ.
1. ಕುಟುಂಬದ ಇತಿಹಾಸ:
ಅಕಾಲಿಕ ಋತುಬಂಧಕ್ಕೆ ಕುಟುಂಬದ ಹಿನ್ನಲೆ ಕೂಡ ಕಾರಣವಾಗುತ್ತದೆ. ತಾಯಿ ಸೇರಿದಂತೆ ರಕ್ತ ಸಂಬಂಧಿಕರು ಅಕಾಲಿಕ ಋತು ಬಂಧಕ್ಕೊಳಗಾಗಿದ್ದರೆ ಅದು ಮುಂದಿನ ತಲೆಮಾರಿನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಮಹಿಳೆರನ್ನು ಮಾತ್ರವಲ್ಲ ಪುರುಷರನ್ನು ಕಾಡುತ್ತದೆ ಋತುಬಂಧ... ಏನಿದು ಸಮಸ್ಯೆ, ಪರಿಹಾರ ?
2. ಧೂಮಪಾನ: ಧೂಮಪಾನ ಮಾಡದ ಮಹಿಳೆಯರಿಗಿಂತ ಧೂಮಪಾನ ಮಾಡುವ ಮಹಿಳೆಯರು 2 ವರ್ಷಗಳ ಮೊದಲೇ ಋತುಬಂಧಕ್ಕೊಳಗಾಗ್ತಾರೆ. ಋತುಬಂಧದ ವೇಳೆ ಸಾಕಷ್ಟು ಸಮಸ್ಯೆಗಳನ್ನೂ ಅವರು ಎದುರಿಸುತ್ತಾರೆ.
3. ಕ್ಯಾನ್ಸರ್ ಕಿಮೊಥೆರಪಿ ಅಥವಾ ಪೆಲ್ವಿಕ್ ವಿಕಿರಣ ಚಿಕಿತ್ಸೆ:
ಈ ಚಿಕಿತ್ಸೆಗಳು ಅಂಡಾಶಯವನ್ನು ಹಾನಿಗೊಳಿಸುವ ಸಾಧ್ಯತೆಯಿರುತ್ತದೆ. ಮುಟ್ಟನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ನಿಲ್ಲಿಸಬಹುದು. ಎಲ್ಲ ಮಹಿಳೆಯರಿಗೂ ಬೇಗ ಮುಟ್ಟು ನಿಲ್ಲುತ್ತದೆ ಎನ್ನಲು ಸಾಧ್ಯವಿಲ್ಲ.
ಅಕಾಲಿಕ ಋತುಬಂಧದ ಲಕ್ಷಣ :
ಈ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಸಾಮಾನ್ಯವಾಗಿ ಮುಟ್ಟಿನ ದಿನಗಳಲ್ಲಿ ಕಾಡುವ ಸಾಮಾನ್ಯ ಲಕ್ಷಣಗಳೇ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅದನ್ನು ಗುರುತಿಸುವುದು ಸ್ವಲ್ಪ ಕಷ್ಟ.
ಮುಟ್ಟು ನಿಲ್ಲುವ ಮೊದಲ ಲಕ್ಷಣ (symptom):
ಅಕಾಲಿಕ ಅನಿಯಮಿತ ಮುಟ್ಟು ಅಥವಾ ಮುಟ್ಟಿನ ಅವಧಿ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಮೊದಲ ಲಕ್ಷಣವಾಗಿದೆ. ಎರಡು ವಾರಗಳಲ್ಲಿಯೇ ಮುಟ್ಟು ಕಾಣಿಸಿಕೊಳ್ಳುತ್ತದೆ. ಹೆಚ್ಚು ರಕ್ತಸ್ರಾವ ಕೂಡ ಇದರ ಲಕ್ಷಣಗಳಲ್ಲಿ ಒಂದು. ಯೋನಿ ಶುಷ್ಕತೆ, ರಾತ್ರಿ ಏಕಾಏಕಿ ಕಾಣಿಸಿಕೊಳ್ಳುವ ಬೆವರು, ನಿದ್ರೆಯಲ್ಲಿ ಏರುಪೇರು,ಮೂಡ್ ಸ್ವಿಂಗ್ ನಂತಹ ಸಮಸ್ಯೆಗಳು ಆರಂಭಿಕ ಋತುಬಂಧದ ಸಂಕೇತವಾಗಿರಬಹುದು.
12 ತಿಂಗಳಿಗಿಂತ ಹೆಚ್ಚು ಸಮಯದಿಂದ ಮುಟ್ಟು ಆಗದೆ ಹೋದಲ್ಲಿ ನೀವು ಋತುಬಂಧಕ್ಕೊಳಗಾಗಿದ್ದೀರಿ ಎಂದರ್ಥ.ಸಾಮಾನ್ಯವಾಗಿ ಋತುಬಂಧದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಅಕಾಲಿಕ ಋತುಬಂಧಕ್ಕೊಳಗಾಗಿದ್ದೀರಿ ಅಥವಾ ಅದರ ಲಕ್ಷಣ ಕಾಣಿಸಿಕೊಳ್ಳುತ್ತಿದೆ ಎಂದಾದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಮೆನೋಪಾಸ್ ಟೈಮಲ್ಲಿ ಕೆಲವು ಮಹಿಳೆಯರಿಗೆ ಲೈಂಗಿಕಾಸಕ್ತಿ ಕುಂದುತ್ತಾ?
ಅಕಾಲಿಕ ಋತುಬಂಧದ ಪರೀಕ್ಷೆ :
ಆಂಟಿ-ಮುಲರಿಯನ್ ಹಾರ್ಮೋನ್ (AMH): ಋತುಬಂಧವನ್ನು ಸಮೀಪಿಸುತಿದ್ದೀರಾ ಎಂಬುದನ್ನು ಈ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಈಸ್ಟ್ರೊಜೆನ್ (estrogen): ಈಸ್ಟ್ರೊಜೆನ್ ಮಟ್ಟವನ್ನು ಪರಿಶೀಲಿಸಿ ಋತುಬಂಧದ ಬಗ್ಗೆ ಪರೀಕ್ಷೆ ಮಾಡಬಹುದು. ಋತುಬಂಧದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (FSH): ಎಫ್‌ಎಸ್‌ಎಚ್ ಮಟ್ಟವು ಸತತವಾಗಿ 30 mIU/mL ಗಿಂತ ಹೆಚ್ಚಿದ್ದರೆ ಮತ್ತು ಒಂದು ವರ್ಷದಿಂದ ಮುಟ್ಟಾಗದೆ ಹೋದಲ್ಲಿ ಇದು ಋತುಬಂಧದ ಅವಧಿಯಾಗಿದೆ.
ಪ್ರೌಢಾವಸ್ಥೆ ಬೇಗ ಆಗ್ತಿರುವ ಕಾರಣ ಋತುಬಂಧ ಕೂಡ ಬೇಗ ಬರ್ತಿದೆ. ಅಕಾಲಿಕ ಋತುಬಂಧ ತಡೆಯಬೇಕಾದಲ್ಲಿ ವ್ಯಾಯಾಮ ಹಾಗೂ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ನಿಯಮಿತ ವ್ಯಾಯಾಮದ ಜೊತೆ ಸೋಯಾ ಹೆಚ್ಚಿರುವ ಆಹಾರ ಸೇವನೆ ಮಾಡಬೇಕು. ಯಾವುದೇ ಪರೀಕ್ಷೆಗೆ ಒಳಗಾಗುವ ಮೊದಲು ಅಥವಾ ಯಾವುದೇ ನಿರ್ಣಯಕ್ಕೆ ಬರುವ ಮೊದಲು ವೈದ್ಯರನ್ನು ಭೇಟಿಯಾಗುವುದು ಬಹಳ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.