ಮುನೀಬಾ ಮಜಾರಿ ಎಂಬುದು ಬರೀ ಹೆಸರಲ್ಲ. ಜೀವನೋತ್ಸಾಹ, ಸೆಣಸುವ ಛಲ, ಮುಳುಗಿದ ಬದುಕನ್ನು ಮತ್ತೆ ಮೇಲೆತ್ತುವ ದಿಟ್ಟ ಹೋರಾಟದ ಸ್ವಭಾವಗಳಿಗೆ ಈಕೆ ಇನ್ನೊಂದು ಹೆಸರು. ನಡೆಯಲಾಗದೆ ವ್ಹೀಲ್‌ಚೇರ್ ಮೇಲಿದ್ದರೂ ಈಕೆ ಜಗತ್ತನ್ನೇ ಗೆದ್ದವಳು.
ಮುನೀಬಾ ಮಜಾರಿ ಪಾಕಿಸ್ತಾನದ ರಹೀಂ ಯಾರ್ ಖಾನ್ ಎಂಬ ನಗರದವಳು. ಬಲೂಚಿಸ್ತಾನದ ಮಜಾರಿ ಸಮುದಾಯದ ಹುಡುಗಿ. ೧೮ನೇ ವರ್ಷದಲ್ಲಿ, ಈಕೆಗೆ ಇಷ್ಟವಿಲ್ಲದಿದ್ದರೂ ಇವಳಿಗೆ ಮದುವೆ ಮಾಡಲಾಯಿತು. ಗಂಡ ಏರ್‌ಫೋರ್ಸ್ ಪೈಲಟ್. ಮದುವೆಯಿಂದೇನೂ ಸುಖವಿರಲಿಲ್ಲ. ಮದುವೆಯಾದ ಎರಡೇ ವರ್ಷದಲ್ಲಿ, ಅಂದರೆ ಈಕೆಗೆ ೨೦ ವರ್ಷವಾಗಿದ್ದಾಗ, ಇಸ್ಲಾಮಾಬಾದ್‌ನಿಂದ ರಹೀಂ ಯಾರ್ ಖಾನ್‌ಗೆ ಹೋಗುತ್ತಿದ್ದಾಗ ಕಾರು ಆಕ್ಸಿಡೆಂಟ್ ಆಯ್ತು. ಅದಕ್ಕೂ ಕಾರಣ ಆಕೆಯ ಗಂಡನೇ. ಅವನು ಡ್ರೈವಿಂಗ್‌ವ್ಹೀಲ್ ಹಿಡಿದೇ ನಿದ್ದೆ ಮಾಡಿಬಿಟ್ಟಿದ್ದ. ಆಕ್ಸಿಡೆಂಟ್ ಆಗುವ ಹಿತ್ತಿಗೆ ಹೊರಜಿಗಿದು ತಪ್ಪಿಸಿಕೊಂಡ. ಆದರೆ ಒಳಗೇ ಇದ್ದ ಮುನೀಬಾಳ ಒಟ್ಟೂ ಬೆನ್ನೆಲುಬು ಜಖಂ ಆಯಿತು. ಎರಡೂ ಕೈಗಳ ಮೂಳೆ ಮುರಿದವು. ಸೊಂಟದಿಂದ ಕೆಳಗೆ ಕಾಲುಗಳೆರಡೂ ಜಜ್ಜಿಹೋದವು. ಲಿವರ್‌ಗೆ ಘಾಸಿಯಾಯಿತು. ಆದರೂ ಆಕೆ ಬದುಕಿದಳು. ಹತ್ತಿರದ ಆಸ್ಪತ್ರೆಗೆ ಹೋದಾಗ ಅಲ್ಲಿ ಪ್ರಥಮ ಚಿಕಿತ್ಸೆಯೂ ಆಕೆಗೆ ಸಿಗಲಿಲ್ಲ. ಹುಟ್ಟೂರಿನಲ್ಲಿ ಈಕೆಗೆ ಚಿಕಿತ್ಸೆ ನೀಡುವ ಆಸ್ಪತ್ರೆಯೂ ಇರಲಿಲ್ಲ. ಕರಾಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಳಾದರೂ ಸೊಂಟದಿಂದ ಕೆಳಗೆ ಸ್ವಾಧೀನ ಬರಲೇ ಇಲ್ಲ. ಆಕೆ ಶಾಶ್ವತವಾಗಿ ವ್ಹೀಲ್‌ಚೇರ್ ಮೇಲೆಯೇ ಕುಳಿತು ಸಂಚರಿಸುವಂತಾಯಿತು. ಮುನೀಬಾಳ ಗರ್ಭಕೋಶ ನಷ್ಟವಾಯಿತು. ಮುಂದೆ ಮಕ್ಕಳನ್ನು ಪಡೆಯಲು ಆಕೆಯಿಂದ ಸಾಧ್ಯವಿಲ್ಲ ಎಂಬುದು ಗೊತ್ತಾಯಿತು.
ಆರಂಭದಲ್ಲಿ ಆಕೆ ತತ್ತರಿಸಿ ಹೋದಳು. ಇದೇ ಸಮಯದಲ್ಲಿ ಈಕೆಯನ್ನು ನೋಡಿಕೊಳ್ಳಲೆಂದು ಈಕೆಯ ತಾಯಿ ಬಂದಳು. ಇದೇ ಕಾರಣವಾಗಿ ಈಕೆಯ ತಂದೆ ಈಕೆಯ ತಾಯಿಗೆ ವಿಚ್ಛೇದನ ನೀಡಿದ. ಈ ಸಮಯದಲ್ಲಿ ಆಕೆಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಿದ್ದ ಈಕೆಯ ಗಂಡ, ಆಕೆಯನ್ನು ಕಡೆಗಣಿಸಿ ಮನೆಯಿಂದ ಹೊರಹಾಕಿದ. ನಂತರ ಆಕೆಗೆ ತಲಾಖ್ ಕೊಟ್ಟ. ಇಂಥ ಸಮಯದಲ್ಲಿ ಆಕೆ ಕೇಳಿಕೊಂಡ ಪ್ರಶ್ನೆ- ನಾನ್ಯಾಕೆ ಬದುಕಿರಬೇಕು? ಆಕೆಗೆ ಉತ್ತರ ಹೊಳೆಯಲಿಲ್ಲ. ಆದರೆ ಆಸ್ಪತ್ರೆಯ ಬಿಳಿ ಗೋಡೆಗಳನ್ನು ದಿಟ್ಟಿಸುತ್ತಾ ಆಕೆಗೆ ಬಣ್ಣಗಳ ಕಡೆಗೆ ಪ್ರೀತಿ ಹುಟ್ಟಿತು. ಆಕೆ ಅಸ್ಪತ್ರೆಯಲ್ಲಿ ರಚಿಸಿದ ಮೊತ್ತ ಮೊದಲ ಚಿತ್ರವೇ ಎಲ್ಲರ ಗಮನ ಸೆಳೆಯಿತು. ಎಷ್ಟೊಂದು ಸುಂದರ ಚಿತ್ರ ಎಂದು ಜನ ಹೇಳುತ್ತಿದ್ದರೂ, ಅದರ ಹಿಂದಿದ್ದ ಕಣ್ನೀರನ್ನು ಗುರುತಿಸದಾದರು ಎಂದು ಹೇಳುತ್ತಾಳೆ ಮುನೀಬಾ.
ಅಂದಿನಿಂದ ಮುನೀಬಾ ತನಗಾಗಿ ಬದುಕಲು ನಿಶ್ಚಯಿಸಿದಳು. ಯಾರೋ ಇನ್ನೊಬ್ಬರಿಗೆ ಪರ್‌ಫೆಕ್ಟ್ ಸಂಗಾತಿಯಾಗುವ ಆಸೆಯನ್ನು ಬಿಟ್ಟುಬಿಟ್ಟೆ. ಇನ್ನು ಮುಂದೆ ನನಗಾಗಿ ಬದುಕಬೇಕು ಎಂದು ನಿರ್ಧರಿಸಿದೆ. ನನ್ನ ಭಯಗಳನ್ನೆಲ್ಲ ಒಂದು ಪಟ್ಟಿ ಮಾಡಿದೆ. ನಾನು ಇದೆಲ್ಲವನ್ನೂ ಮೀರಿ ನಿಲ್ಲಬೇಕು ಎಂದು ನಿರ್ಧರಿಸಿದೆ. ನನ್ನ ಮೊದಲ ಭಯ ಡೈವೋರ್ಸ್ ಆಗಿತ್ತು. ಅದಕ್ಕೆ ಸಿದ್ಧಳಾದೆ. ಗಂಡ ತನಗೆ ಡೈವೋರ್ಸ್ ನೀಡಲಿದ್ದಾನೆ ಎಂದು ಗೊತ್ತಾದಾಗ ನಾನು ಅಳಲಿಲ್ಲ. ಅದಕ್ಕೆ ಸಿದ್ಧಳಾಗಿದ್ದೆ. ಆತನಿಗೆ ಶುಭಹಾರೈಕೆ ಕಳುಹಿಸಿದೆ. ನಂತರದ ಇನ್ನೊಂದು ಭಯ, ಮಗು ಪಡೆಯಲಾರೆ ಎನ್ನುವುದು. ಆದರೆ ಜಗತ್ತಿನಲ್ಲಿ ಎಷ್ಟೊಂದು ಮಕ್ಕಳಿದ್ದಾರೆ, ಒಂದನ್ನು ದತ್ತು ಪಡೆಯುತ್ತೇನೆ ಎಂದು ನಿರ್ಧರಿಸಿದೆ. ಹಾಗೇ ಮಾಡಿದೆ. ಎರಡು ದಿನಗಳ ಪುಟ್ಟ ಗಂಡು ಮಗುವೊಂದು ನನಗಾಗಿ ಕಾಯುತ್ತಿತ್ತು. ನಾನು ಅದಕ್ಕೆ ತಾಯಿಯಾದೆ.
ಸಮಸ್ಯೆ ಸುಳಿಯಲ್ಲಿ ಸಿಲುಕಿರುವಾಗ ಹೀಗೊಮ್ಮೆ ಯೋಚಿಸಿ ನೋಡಿ
ನಂತರ ಮುನೀಬಾ ಪಾಕಿಸ್ತಾನದ ನ್ಯಾಷನಲ್ ಚಾನೆಲ್ ಒಂದರ ಆಂಕರ್ ಆದಳು. ಪಾಕಿಸ್ತಾನದ ಮಹಿಳಾ ರಾಯಭಾರಿಯೂ ಆದಳು. ಬೇಡಿಕೆ ವ್ಹೀಲ್‌ಚೇರ್ ಮಾಡೆಲ್ ಆದಳು. ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿಯೂ ಹೌದು ಆಕೆ. ಬಿಬಿಸಿ ಚಾನೆಲ್ ಹಾಗೂ ಫೋರ್ಬ್ಸ್ ಪತ್ರಿಕೆಗಳು ಪಟ್ಟಿ ಮಾಡಿದ ಶತಮಾನದ ನೂರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಈಕೆಯೂ ಒಬ್ಬಳು.
undefined
ನಮ್ಮ ಜೀವ ನೀವು ಕೊಟ್ಟ ದಾನ; ವೈದ್ಯರೇ, ನಿಮಗೊಂದು ಸಲಾಂ..!
ತನ್ನ ಜೀವನದ ಕತೆಯನ್ನು ಹೇಳಿ ಮುನೀಬಾ ಹೇಳುವುದಿಷ್ಟೆ- ಯಾರೋ ಇನ್ನೊಬ್ಬರಿಗೆ ಪರಿಪೂರ್ಣ ಪತ್ನಿಯಾಗುವ, ಮಗುವಾಗುವ ಅಥವಾ ತಾಯಿಯಾಗುವ, ತಂದೆಯಾಗುವ ಆಸೆಗಳೆನ್ನೆಲ್ಲ ಬಿಟ್ಟುಬಿಡಿ. ಅದು ನಮ್ಮಿಂದ ಸಾಧ್ಯವಿಲ್ಲ ಯಾಕೆಂದರೆ ನಾವ್ಯಾರೂ ಪರಿಪೂರ್ಣರಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ಕೊರತೆಯಿದೆ. ನಾವು ನಮಗಾಗಿ ಬದುಕೋಣ ಜಗತ್ತಿಗೆ ಸಾಧ್ಯವಾದಷ್ಟು ಸಹಾಯ ಮಾಡೋಣ. ನಮ್ಮ ಸಂಕಷ್ಟಗಉ ನೂರಾರು ಇರುತ್ತವೆ. ಆದರೆ ಅದೆಲ್ಲವನ್ನೂ ಮೀರಿ ಮೇಲೆ ಎದ್ದು ಬರಲು ಖಂಡಿತ ಸಾಧ್ಯವಿದೆ. ಬದುಕು ಸದಾ ಸುಖವಾಗಿರಬೇಕು ಎಂದು ನಾವು ಬಯಸುತ್ತೇವೆ. ಆದರೆ ಹಾಗಿರಲು ಸಾಧ್ಯವಿಲ್ಲ. ಬದುಕು ಪರೀಕ್ಷೆಗಳಿಂದ, ನರಳುವಿಕೆಗಳಿಗೆ ಕೂಡಿದೆ. ಬದುಕು ನಮಗೆ ನಿಂಬೆಹಣ್ಣು ನೀಡಿದರೆ ಅದರಿಂದ ಶರಬತ್ತು ಮಾಡಿಕೊಳ್ಳಬೇಕು. ಅಳುವುದು, ವಿಫಲವಾಗುವುದು ಎಲ್ಲವೂ ಸರಿ. ಆದರೆ ಅದಕ್ಕೆ ಹೆದರಿ ಬದುಕನ್ನು ಕೈಬಿಡುವುದು ಮಾತ್ರ ಸರಿಯಲ್ಲ. ವೈಫಲ್ಯಗಳು ನಮ್ಮನ್ನು ಬದುಕಿನಲ್ಲಿ ಮೇಲೆತ್ತಬೇಕು. ಅದೇ ಬದುಕು.
#Feelfree: ಮಗುವಾಗಿ ಎಷ್ಟು ಕಾಲದ ಬಳಿಕ ಪೀರಿಯಡ್ಸ್ ಆಗುತ್ತೆ?