ಮುಖದ ತುಂಬ ಮೊಡವೆಗಳಿದ್ದ ಹುಡುಗಿ ಮನೋವೈದ್ಯರ ಬಳಿ ಬಂದದ್ಯಾಕೆ?

By Suvarna NewsFirst Published Feb 10, 2020, 10:41 AM IST
Highlights

ಮನಸ್ಸಲ್ಲಿ ಸ್ಟ್ರೆಸ್ ತುಂಬಿಕೊಂಡೂ ಪಿಂಪಲ್ ಆಗ್ಬಾರ್ದು ಅಂತ ಸಿಕ್ಕ ಸಿಕ್ಕ ಕ್ರೀಮ್ ಹಚ್ಕೊಳ್ತೀವಿ. ಅದರ ಬದಲು ಒತ್ತಡ ನಿವಾರಿಸಿದರೆ ಪಿಂಪಲ್ಲೇ ಬರಲ್ಲ ಅನ್ನೋ ಸಿಂಪಲ್ ಸತ್ಯ ನಮಗೆ ಗೊತ್ತೇ ಆಗಲ್ಲ. ಹಾಗೆ ನೋಡಿದರೆ ಕೂದಲು ಉದುರೋದಕ್ಕೂ ಮಾನಸಿಕ ಕಾರಣಗಳಿರಬಹುದು. ಇಂಥ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.

ಡಾ. ಕೆ.ಎಸ್.ಪವಿತ್ರ

ನನ್ನ ಬಳಿ ಬಂದಿದ್ದ 18 ವರ್ಷದ ಹುಡುಗಿಗೆ ಇದ್ದದ್ದು ಮುಖದ ತುಂಬಾ ಮೊಡವೆಗಳು, ಚರ್ಮದ ಸಮಸ್ಯೆಗೆ ಮನೋವೈದ್ಯರ ಬಳಿ ಈ ಹುಡುಗಿ ಬಂದಿದ್ದು ಏಕೆ? ಮೊಡವೆಗಳಿಗೆಂದು ಎಷ್ಟು ರೀತಿಯ ಔಷಧಿ ಮಾಡಿದರೂ, ಮೊಡವೆ ಗುಣವಾಗಿರಲಿಲ್ಲ. ಚರ್ಮವೈದ್ಯರು ಆಗ ಅವಳಿಗೆ ಹೇಳಿದ್ದು‘ಸ್ಟ್ರೆಸ್’ನಿಂದಲೂ ಪಿಂಪಲ್ಸ್ ಬರಬಹುದು. ಹಾಗಾಗಿ ನೀವು ಒಮ್ಮೆ ಮನೋವೈದ್ಯರನ್ನು ನೋಡಬೇಕು.

ಚಳಿಗಾಲದಲ್ಲಿ ಪದೇ ಪದೇ ಹ್ಯಾಂಡ್‌ವಾಶ್‌ ಲಿಕ್ವಿಡ್ ಬಳಸಲೇಬಾರದು, ಯಾಕೆ..?

ಮತ್ತೊಬ್ಬ ಮಹಿಳೆ ಬಂದದ್ದು ಚರ್ಮವೈದ್ಯರ ಬಳಿ ತನಗೆ ಇತ್ತೀಚೆಗೆ ಕೂದಲು ತುಂಬಾ ಉದುರುತ್ತಿದೆ ಎಂಬ ಸಮಸ್ಯೆಯಿಂದ. ಕೂದಲುದುರುವಿಕೆಗೆ ಇರಬಹುದಾದ ಸಾಮಾನ್ಯ ಕಾರಣಗಳನ್ನು ಪರೀಕ್ಷಿಸಿದಾಗ ಎಲ್ಲವೂ ‘ನಾರ್ಮಲ್’. ಮತ್ತಷ್ಟು ಪರಿಶೀಲಿಸಿದಾಗ ಆಕೆಗೆ ನಿದ್ರಾಹೀನತೆ, ಯಾವುದರಲ್ಲೂ ಆಸಕ್ತಿಯಿರದಿರುವುದು ಮೊದಲಾದ ಖಿನ್ನತೆಯ ಲಕ್ಷಣಗಳೂ ಇತ್ತು.

ಚರ್ಮಕ್ಕೂ, ಮನಸ್ಸಿಗೂ ಸಂಬಂಧವುಂಟೆ ಎಂಬ ಪ್ರಶ್ನೆಗೆ ಮೇಲಿನ ಉದಾಹರಣೆಗಳು ಸ್ಪಷ್ಟವಾಗಿ ‘ಹೌದು’ ಎಂಬ ಉತ್ತರವನ್ನು ನೀಡುತ್ತದೆ. ಚರ್ಮಕ್ಕೂ, ಮನಸ್ಸಿಗೂ ಇರುವ ಸಂಬಂಧವನ್ನು ನಾವು ಸುಲಭವಾಗಿ ನೋಡಬಹುದು. ಎಲ್ಲರ ಎದುರಿಗೆ ಮುಜುಗರವಾಗುವಂತಹ ಸನ್ನಿವೇಶ ಬಂದಿತು ಎಂದುಕೊಳ್ಳಿ. ಆಗ ಮುಜುಗರದ ಭಾವನೆ ಮನಸ್ಸಿಗೆ ಉಂಟಾದರೂ, ಕೆಂಪೇರುವುದು ಚರ್ಮ! ಭಯವಾದಾಗ ಬೆವರುವುದು, ಬಿಳಿಚಿಕೊಳ್ಳುವುದು ಮೊದಲಾದ ದೈಹಿಕ ಪ್ರತಿಕ್ರಿಯೆಗಳೆಲ್ಲವೂ ವ್ಯಕ್ತವಾಗುವುದು ಚರ್ಮದ ಮೂಲಕ ತೋರುವ ಬದಲಾವಣೆಗಳಿಂದಲೇ.

* ಚರ್ಮದ ಸಮಸ್ಯೆಗಳು ಬರಲು ಪ್ರಾಥಮಿಕವಾಗಿಯೇ ಮಾನಸಿಕ ಒತ್ತಡ ಕಾರಣವಾಗಬಹುದು. ಅಲರ್ಜಿ, ಕೂದಲು ದುರುವಿಕೆ, ಮೊಡವೆ ಇವುಗಳು ಈಗ ಗುರುತಿಸಲ್ಪಡುವುದು ‘ಸೈಕೋ ಸೊಮ್ಯಾಟಿಕ್’ ಎಂಬ ಶೀರ್ಷಿಕೆಯಡಿಯಲ್ಲಿಯೇ.

* ಈಗಾಗಲೇ ಇರುವ ಚರ್ಮದ ಕಾಯಿಲೆಗಳು, ಮಾನಸಿಕ ಒತ್ತಡದ ಸಮಯದಲ್ಲಿ ಉಲ್ಬಣ ಗೊಳ್ಳುವುದು. ಒತ್ತಡ ಕಡಿಮೆಯಾದ ತಕ್ಷಣ ತನ್ನಿಂದ ತಾನೇ ಕಡಿಮೆಯಾಗುವುದು. ಸೋರಿಯಾಸಿಸ್, ಅಲರ್ಜಿಯಂತ ಸಮಸ್ಯೆಗಳಲ್ಲಿ ಇದು ಬಲು ಸಾಮಾನ್ಯ. ಅಲರ್ಜಿಯಿಂದ ನರಳುವವರಲ್ಲಿ ಗಮನವನ್ನು ಬೇರೆಡೆಗೆ ಸೆಳೆದಾಗ ಕಡಿತ-ಉರಿ ಆ ಕ್ಷಣಗಳಲ್ಲಿ ಕಡಿಮೆಯಾಗುವುದನ್ನು ಸಾಮಾನ್ಯವಾಗಿ ನೋಡಬಹುದು. 

* ಹದಿಹರೆಯದ ಮಕ್ಕಳು ಕೆನ್ನೆಯ ಮೇಲೆ ಬಂದ ಒಂದು ಚಿಕ್ಕ ಮೊಡವೆಯನ್ನು ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತು ಪರೀಕ್ಷಿಸಿಕೊಳ್ಳುವುದು ಅಪರೂಪವೇನಲ್ಲ. ತನ್ನಿಂದ ತಾನೇ ಮಾಯುವ ಮುನ್ನ ತಾವೇ ಚಿವುಟಿ ತೆಗೆಯುವ ಸಾಹಸಕ್ಕೂ ಕೈ ಹಾಕಬಹುದು. ಇದರಿಂದ ಮೊಡವೆಗಳು ಮತ್ತಷ್ಟು ಉಲ್ಬಣಗೊಳ್ಳಬಹುದು.

* ಹದಿಹರೆಯದ ಮಕ್ಕಳು ಮತ್ತು ಅವರ ಅಪ್ಪ-ಅಮ್ಮಂದಿರ ನಡುವಣ ಘರ್ಷಣೆಗೂ ಚರ್ಮದ ಸಮಸ್ಯೆಗಳು ಕಾರಣವಾಗಬಹುದು ಬಾಯಿ ಹುಣ್ಣಿಗೆ ಇನ್ನೊಂದು ಹೆಸರು ‘ಸ್ಟ್ರೆಸ್ ಅಲ್ಸರ್’. ಸೂಕ್ಷ್ಮವಾಗಿ ಗಮನಿಸಿದರೆ ಒತ್ತಡದ ಸನ್ನಿವೇಶ ಕಾದಿದೆ ಎನ್ನುವಾಗ ಬಾಯಿಯಲ್ಲಿ ಅಲ್ಲಲ್ಲಿ ಹುಣ್ಣುಗಳಾಗುತ್ತವೆ. ಮಾತ ನಾಡಲು, ಊಟ ಮಾಡಲು ಒದ್ದಾಡುತ್ತೇವೆ. ಒತ್ತಡದ ಸನ್ನಿವೇಶ ಮುಗಿದ ತಕ್ಷಣ ಯಾವ ಔಷಧಿ ಇರದೆಯೂ ಅವು ಮಾಯವಾಗಿಬಿಡುತ್ತವೆ.
ಗೀಳು ಕಾಯಿಲೆಯಲ್ಲಿ ಸ್ವಚ್ಛತೆಯ ಗೀಳು ಕಂಡು ಬರುತ್ತದೆ. ಕೈ ತೊಳೆದು ತೊಳೆದು, ಚರ್ಮದ ಒಣಗುವಿಕೆಗಳಿಂದ ಅವರು ಧಾವಿಸುವುದು ಚರ್ಮವೈದ್ಯರ ಬಳಿಗೆ. ಅಂಥದ್ದೇ ಇನ್ನೊಂದು ಸಮಸ್ಯೆ ಆತಂಕದಿಂದ ಕೂದಲು ಕೀಳುವ ಅಭ್ಯಾಸದ Trichotillomania. ಇವರೂ ಮೊದಲು ಓಡುವುದು ಚರ್ಮವೈದ್ಯರ ಬಳಿ. ಕುಟುಂಬದವರು ’ಕೂದಲು ಉದುರುತ್ತಿದೆ’ ಎಂಬ ಸಮಸ್ಯೆ ಎಂದು ಹೇಳಿದರೂ, ಚರ್ಮವೈದ್ಯರು ಪರೀಕ್ಷಿಸಿದಾಗ ಇದು ಕೂದಲು ಉದುರುತ್ತಿರುವುದಲ್ಲ, ರೋಗಿ ಆತಂಕದಿಂದ ಸ್ವತಃ ಕೀಳುತ್ತಿರುವುದು ಎಂಬುದು ತಿಳಿಯುತ್ತದೆ. ಇಂಥ ಸಮಸ್ಯೆಗಳಲ್ಲಿ ಚಿಕಿತ್ಸೆ ಬೇಕಾದ್ದು ಚರ್ಮಕ್ಕೆ ಎನ್ನುವುದಕ್ಕಿಂದ ಮನಸ್ಸು-ಮಿದುಳುಗಳಿಗೆ ಎನ್ನಬಹುದು.

ಆತ್ಮವಿಶ್ವಾಸಕ್ಕಿಂತ ದೊಡ್ಡ ಬ್ಯೂಟಿ ಪ್ರಾಡಕ್ಟ್‌ಗಳಿಲ್ಲ!

- ಮಾನಸಿಕ ಒತ್ತಡವನ್ನು ಸರಿಯಾಗಿ ನಿಭಾಯಿಸುವುದು, ಚರ್ಮವನ್ನು ಸುಂದರವಾಗಿಸುತ್ತದೆ. ಚರ್ಮದ ಕಿರಿಕಿರಿಗಳಿಂದ ನಮ್ಮನ್ನು ಪಾರು ಮಾಡುತ್ತದೆ.

- ಚೆನ್ನಾಗಿ ನೀರು ಕುಡಿಯಿರಿ. ದಿನಕ್ಕೆರಡು ಬಾರಿ ಸ್ವಚ್ಛ ನೀರಿನಿಂದ ಮುಖ ತೊಳೆಯಿರಿ.

- ಬೆವರನ್ನು ಹೀರುವಂತಹ ಹತ್ತಿಯ ಬಟ್ಟೆ ಬಳಕೆ ಮಾಡಿ.

-  ಪೌಷ್ಠಿಕಾಂಶ ನೀಡುವ ಹಸಿರುಸೊಪ್ಪು, ತರಕಾರಿಗಳನ್ನು ಸೇವಿಸುವುದು, ಎಣ್ಣೆ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.

- ಕೈಕಾಲು ಬೆವರುವುದು, ಮೊಡವೆಗಳು, ಕೂದಲುದುರುವುದು ಇಂಥ ಸಮಸ್ಯೆಗಳಲ್ಲಿ ಒತ್ತಡ ನಿಭಾಯಿಸುವಿಕೆ ಬಹುಮುಖ್ಯ ಎನ್ನುವುದನ್ನು ಹದಿಹರೆಯದ ಮಕ್ಕಳು ವಿಶೇಷವಾಗಿ ಗಮನಿಸಬೇಕು.

- ಚರ್ಮದ ಬಿಳಿಕಪ್ಪು ಇಂಥ ಅಂಶಗಳಿಗಿಂತ ‘ಆತ್ಮವಿಶ್ವಾಸ-ನೆಮ್ಮದಿ’ಗಳೇ ಅತ್ಯುತ್ತಮ ಸೌಂದರ್ಯವರ್ಧಕ ಎಂಬುದನ್ನು ಮರೆಯಬಾರದು. 

click me!