ಸೀರೆ ಉಟ್ಟಾಗ ಬ್ಲೌಸ್ ಕೊಂಚ ಲೂಸ್ ಇದ್ದರೂ ಆಗಾಗ ಭುಜದಲ್ಲಿ ಜಾರಿ ಹೋಗಿ ಒಳಗಿನ ಬಟ್ಟೆಯ ಸ್ಟ್ರ್ಯಾಪ್ ತೋರಿಸುತ್ತಾ ಮುಜುಗರಕ್ಕೀಡು ಮಾಡುತ್ತಿರುತ್ತದೆ. ಇದಕ್ಕೊಂದು ಸಿಂಪಲ್ ಪರಿಹಾರವಿದೆ.
ಸೀರೆ ಉಟ್ಟಾಗ ಬ್ಲೌಸ್ ಕೊಂಚ ಲೂಸ್ ಇದ್ದರೂ ಆಗಾಗ ಭುಜದಲ್ಲಿ ಜಾರಿ ಹೋಗಿ ಒಳಗಿನ ಬಟ್ಟೆಯ ಸ್ಟ್ರ್ಯಾಪ್ ತೋರಿಸುತ್ತಾ ಮುಜುಗರಕ್ಕೀಡು ಮಾಡುತ್ತಿರುತ್ತದೆ. ಇದಂತೂ ಬಹುತೇಕ ಎಲ್ಲ ಮಹಿಳೆಯರು ಎದುರಿಸೋ ಸಾಮಾನ್ಯ ಸಮಸ್ಯೆ. ಇದನ್ನು ಟೈಲರ್ ಬಳಿ ತೆಗೆದುಕೊಂಡು ಹೋಗಿ ಸರಿ ಮಾಡಿಸಿಕೊಂಡು ಬರಬೇಕು ಎಂದೇ ಸಮಯ ತಳ್ಳುತ್ತಾ, ಕಡೆಗೆ ಬೇಕಾದ ಕಾರ್ಯಕ್ರಮಗಳಿಗೆಲ್ಲ ಬ್ಲೌಸ್ ಲೂಸ್ ಎಂಬ ಕಾರಣಕ್ಕೆ ಆ ಸೀರೆ ಉಡದೇ ಹೋಗುವವರು ಹಲವರು. ಮತ್ತೆ ಕೆಲವರು ಅದೇ ಬ್ಲೌಸ್ ಹಾಕಿಕೊಂಡು ಪದೇ ಪದೇ ಜಾರುವ ಬ್ಲೌಸನ್ನು ಸರಿ ಮಾಡಿಕೊಳ್ಳುತ್ತಿರುತ್ತಾರೆ.
ಆದರೆ, ಸ್ವಲ್ಪ ಬುದ್ಧಿವಂತಿಕೆ ಖರ್ಚು ಮಾಡಿದರೆ, ಇದೊಂದು ಸಮಸ್ಯೆಯೇ ಅಲ್ಲ.
ಹೌದು, ಸ್ಟಿಚಿಂಗ್ ರಗಳೆ ಇಲ್ಲದೆಯೇ, ಸೂಜಿ ದಾರದ ಸಹವಾಸಕ್ಕೆ ಹೋಗದೆಯೇ ಈ ಸಮಸ್ಯೆಯನ್ನು ಸರಿ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದೆ ಫೇಸ್‌ಬುಕ್‌ನ ಅಕೇಶಾ ವ್ಲಾಗ್ಸ್ ಎಂಬ ಪೇಜ್. ಹೌದು, ನಿಮ್ಮ ಬಳಿ 2 ರೂ ಇದ್ದರೂ ಸಾಕು ಬ್ಲೌಸ್ ಕಿರಿಕಿರಿ ಇಲ್ಲದೆಯೇ ಆತ್ಮವಿಶ್ವಾಸದಿಂದ ನೀವು ಕಾರ್ಯಕ್ರಮ ಮುಗಿಸಬಹುದು.
undefined
ಡಬಲ್ ಸೈಡೆಡ್ ಬ್ರಾ ಸ್ಟಿಕ್ಕರ್ಸ್
ಮಾರ್ಕೆಟ್‌ನಲ್ಲಿ ಕಡಿಮೆ ಬೆಲೆಗೆ ಸಿಗುವ ಡಬಲ್ ಸೈಡೆಡ್ ಬ್ರಾ ಸ್ಟಿಕ್ಕರ್ಸ್ ಈ ಕೆಲಸವನ್ನು ಅನಾಯಾಸವಾಗಿ ಮಾಡುತ್ತವೆ. ಎರಡೂ ಕಡೆ ಗಮ್ ಇರುವ ಪಾರದರ್ಶಕ ಗಮ್ ಸ್ಟಿಕರ್ ಇವಾಗಿದ್ದು, ನೀವು ಬ್ಲೌಸ್ ಎಲ್ಲಿ ಕೂರಬೇಕೋ ಅಲ್ಲಿ ಈ ಸ್ಟಿಕ್ಕರ್ ಅಂಟಿಸಿಕೊಂಡು ಮೇಲೆ ಬ್ಲೌಸ್ ಎಳೆದು ಗಮ್ ತಾಗಿಸಿದರಾಯಿತು. ನಂತರದಲ್ಲಿ ಬ್ಲೌಸ್ ಯೋಚನೆಯನ್ನೇ ಬಿಟ್ಟು ಕಾರ್ಯಕ್ರಮದ ಕಡೆ ಗಮನ ಹರಿಸಬಹುದು. ಈ ಸ್ಟಿಕ್ಕರನ್ನು ಹೇಗೆ ಬಳಸಬೇಕೆಂದು ವಿಡಿಯೋದಲ್ಲಿ ಕಾಣಬಹುದು.
ಈ ಬ್ರಾ ಸ್ಟಿಕ್ಕರ್ ಕೇವಲ ಬ್ಲೌಸ್ ಇಳಿಕೆ ಸಮಸ್ಯೆಗೇ ಅಲ್ಲದೆ, ಯಾವುದೇ ಟಾಪ್ ಧರಿಸಿದಾಗ ಬ್ರಾ ಸ್ಟ್ರಿಪ್ಸ್ ಹೊರಗೆ ಕಾಣುವ ಸಮಸ್ಯೆ ಇದ್ದರೆ ಅಲ್ಲೆಲ್ಲ ಬಳಸಬಹುದು. ಇನ್ನು ಯಾವುದಾದರೂ ಟಾಪ್ ಕೊಂಚ ಕೆಳಗೆ ಹೋಗಿ ಕ್ಲೀವೇಜ್ ತೋರಿಸಿ ಕಿರಿಕಿರಿ ಉಂಟುಮಾಡುತ್ತಿದ್ದರೂ, ಈ ಸ್ಟಿಕ್ಕರ್ ಸಹಾಯದಿಂದ ಆ ಟಾಪ್ ಎದೆಯಲ್ಲಿ ಜಾರದಂತೆ ನೋಡಿಕೊಳ್ಳಬಹುದು. ಟಾಪ್‌ಗಳನ್ನು ಹಾಕಿದಾಗ ಸ್ಟಿಕ್ಕರ್ ಬಳಿಸಿದರೆ, ಬಗ್ಗಿದಾಗಲೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇನ್ನು ಸರ ಅಲುಗದಂತೆ, ನೆರಿಗೆ ತಪ್ಪದಂತೆ ಹೀಗೆ ಹಲವು ರೀತಿಯಲ್ಲಿ ಈ ಸ್ಟಿಕರ್ ಬಳಸಬಹುದು.
ಮಹಿಳೆಯರಿಗೆ ಬಹಳಷ್ಟು ಉಪಯೋಗ ಕೊಡುವ ಈ ಸ್ಟಿಕರ್ಸ್ ಎಲ್ಲ ಮಹಿಳೆಯರ ಕಿಟ್‌ನಲ್ಲಿರಲೇಬೇಕು. ಏನಂತೀರಾ?