ರಸ್ತೆಗುಂಡಿ ನೆಪ ಹೇಳಿ ಕೈಕೊಟ್ಟ ಬಸ್ಸುಗಳು; ಊರ ಮಂದಿಯಿಂದಲೇ ರಸ್ತೆ ರಿಪೇರಿ!

Jun 14, 2019, 8:29 PM IST

ಶಿವಮೊಗ್ಗ (ಜೂ. 14): ನಮ್ಮ ಗ್ರಾಮಕ್ಕೆ ಬಸ್ಸು ಬರಲ್ಲ.. ಖಾಸಗಿ ಬಸ್ಸುಗಳೇ ಹೆಚ್ಚಿರುವ ಇಲ್ಲಿ ಬಸ್ಸು ಬಿಡಿ ಎಂದು ಮನವಿ ಮಾಡಿದರೆ ನಿಮ್ಮ ಗ್ರಾಮದ ರಸ್ತೆ ಸರಿಯಿಲ್ಲ ಅಂತಾರೆ.. ಹಾಗಾಗಿ ಗ್ರಾಮದ ಜನರೆಲ್ಲ ಸೇರಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ. 

ಕರಿಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾನ್‍ಮನೆ ಸರ್ಕಲ್‍ನಿಂದ ಕರಿಮನೆಗೆ ಸಾಗುವ ಪ್ರಮುಖ ರಸ್ತೆಯಿದೆ. ಅಲ್ಲದೆ ಈ ರಸ್ತೆಗೆ ಹೊಂದಿಕೊಂಡಂತೆ ನೂರಾರು ಕುಟುಂಬಗಳು ಇದೆ. ಆದರೆ ಈ ಮಾರ್ಗದಲ್ಲಿ ಬಸ್ಸಿನ ಸಂಪರ್ಕವಿಲ್ಲ. ಸರ್ಕಾರಿ ಬಸ್ಸು ಬಿಡುವಂತೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.

ಬಸ್ಸಿನ ಸಂಪರ್ಕವಿರದ ಕಾರಣ ಶಾಲಾ ಕಾಲೇಜು ಮಕ್ಕಳು, ಗ್ರಾಮಸ್ಥರು ಪ್ರತಿಯೊಂದು ಕೆಲಸಕ್ಕು 8 ಕಿಮೀ ನಡೆದೇ ಹೋಗಬೇಕಾದ ಅನಿವಾರ್ಯತೆ ಇದೆ. ಈ ಭಾಗದಲ್ಲಿ ಗಾಳಿಮಳೆ ತುಸು ಹೆಚ್ಚೇ ಬರುವ ಕಾರಣ ಶಾಲಾ ಕಾಲೇಜು ಮಕ್ಕಳು ಓಡಾಡಕ್ಕೆ ಸಾಹಸ ಪಡಬೇಕು. ಅಲ್ಲದೆ ಕಾಡು ಮಾರ್ಗ ಆದ ಕಾರಣ ಭಯವೂ ಒಮ್ಮೊಮ್ಮೆ ಆವರಿಸುತ್ತದೆ.  ರಸ್ತೆ ಸರಿಯಿರದ ಕಾರಣ ಬಸ್ಸು ಬಿಡಲ್ಲ ಎಂಬ ಕಾರಣಕ್ಕೆ ಇಲ್ಲಿಯ ಗ್ರಾಮಸ್ಥರೇ ಖುದ್ದಾಗಿ ಸುಮಾರು 4 ಕಿಮೀ ರಸ್ತೆ ದುರಸ್ತಿ ಕಾರ್ಯ ನಡೆಸಿದ್ದಾರೆ.