ಮಂಡ್ಯ ಜಿಲ್ಲೆಯ 7886 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಈ ವರ್ಷ ಸುಮಾರು ಒಂದೂವರೆ ಸಾವಿರ ಹೆಕ್ಟೇರ್‌ನಿಂದ ಎರಡು ಸಾವಿರ ಹೆಕ್ಟೇರ್‌ನಷ್ಟು ವಿಸ್ತೀರ್ಣವನ್ನು ಅಡಿಕೆ ಬೆಳೆ ಹೆಚ್ಚಿಸಿಕೊಂಡಿದೆ.
ಎಚ್.ಕೆ.ಅಶ್ವಥ್ ಹಳುವಾಡಿ
ಮಂಡ್ಯ : ಬಿಸಿಲ ತಾಪದ ನಡುವೆಯೂ ಜಿಲ್ಲೆಯಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ಚಳವಾಗುತ್ತಿದೆ. ನೀರಿನ ಕೊರತೆಯ ನಡುವೆಯೂ ಅಡಿಕೆ ಬೆಳೆಯುವುದಕ್ಕೆ ಜನರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಭತ್ತ, ಕಬ್ಬು ಬೆಳೆಯುತ್ತಿದ್ದ ಜಾಗಗಳಲ್ಲಿ ಇದೀಗ ಅಡಿಕೆ ನಿಧಾನವಾಗಿ ಮೇಲೇಳಲಾರಂಭಿಸಿದೆ.
undefined
ಜಿಲ್ಲೆಯ 7886 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಈ ವರ್ಷ ಸುಮಾರು ಒಂದೂವರೆ ಸಾವಿರ ಹೆಕ್ಟೇರ್‌ನಿಂದ ಎರಡು ಸಾವಿರ ಹೆಕ್ಟೇರ್‌ನಷ್ಟು ವಿಸ್ತೀರ್ಣವನ್ನು ಅಡಿಕೆ ಬೆಳೆ ಹೆಚ್ಚಿಸಿಕೊಂಡಿದೆ. ಕೊಳವೆಬಾವಿ ಅಳವಡಿಸಿಕೊಂಡಿರುವ ರೈತರೆಲ್ಲರೂ ತೆಂಗಿಗೆ ಉಪ ಬೆಳೆಯಾಗಿ ಅಡಿಕೆಯನ್ನು ಬೆಳೆಯುತ್ತಿದ್ದಾರೆ. ಅಡಿಕೆ ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಪೋಷಿಸಿದರೆ ಲಕ್ಷಾಂತರ ರು. ಲಾಭ ಗಳಿಸಬಹುದೆಂಬ ಆಲೋಚನೆ ಸಕ್ಕರೆ ನಾಡಿನ ಜನರಿಗೆ ಬಂದಂತಿದೆ.
ತೆಂಗು ಬೆಳೆಯುವವರು ಬಹುತೇಕ ಅದರ ನಡುವೆಯೇ ಅಡಿಕೆಯನ್ನೂ ನೆಟ್ಟು ಬೆಳೆಸುತ್ತಿದ್ದಾರೆ. ಅಡಿಕೆ ಬೆಳೆ ಹೆಚ್ಚು ನೀರನ್ನು ಬೇಡುತ್ತದೆ. ಆದರೂ ಉತ್ತಮವಾಗಿ ಬೆಳೆ ಬಂದಲ್ಲಿ ಲಾಭ ನಿಶ್ಚಿತ ಎಂಬ ಮನೋಧೋರಣೆ ಬೆಳೆಗಾರರಲ್ಲಿದೆ. ಇದರಿಂದಾಗಿ ಜಿಲ್ಲೆಯ ಜನರು ಕೃಷಿ ಪದ್ಧತಿಯಲ್ಲಿ ನಿಧಾನವಾಗಿ ರೂಪಾಂತರಗೊಳ್ಳಲಾರಂಭಿಸಿದ್ದಾರೆ.
ಮಳೆ ಕೊರತೆ, ನೀರಿನ ಅಭಾವದಿಂದ ಬಹಳಷ್ಟು ಬೋರ್‌ವೆಲ್‌ಗಳು ಬತ್ತಿಹೋದವು. ಅಡಿಕೆ, ತೆಂಗು ಬೆಳೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಮತ್ತೆ ಕೊಳವೆಬಾವಿ ಕೊರೆಸಿದರು. ಕೆಲವು ಕೊಳವೆಬಾವಿಗಳಲ್ಲಿ ನೀರು ಬಂದರೆ, ಮತ್ತೆ ಕೆಲವೆಡೆ ನೀರು ಬಾರದಂತಾಯಿತು. ಬಿಸಿಲ ಹೊಡೆತಕ್ಕೆ ಹಲವೆಡೆ ಅಡಿಕೆ ಬೆಳೆಯೂ ಒಣಗಿಹೋದವು. ಹಸಿರಾಗಿರಬೇಕಾಗಿದ್ದ ಅಡಿಕೆ ಮರಗಳ ಗರಿಗಳು ಹಳದಿ ವರ್ಣಕ್ಕೆ ತಿರುಗಿದವು. ಇಳುವರಿಯೂ ಕುಸಿತಗೊಂಡಿತು.
ತುಮಕೂರು ಜಿಲ್ಲೆಯಲ್ಲಿ ತೆಂಗು ಬೆಳೆಗೆ ಪರ್ಯಾಯವಾಗಿ ಅಡಿಕೆ ಬೆಳೆ ಬೆಳೆಯುತ್ತಿದ್ದು, ಅಲ್ಲಿನ ಬೆಳೆಗಾರರಿಂದ ಪ್ರೇರಿತರಾದ ಮಂಡ್ಯ ಜಿಲ್ಲೆಯ ಜನರು ಅಡಿಕೆ ಬೆಳೆಗೆ ಮಾರುಹೋಗಿದ್ದಾರೆ. ನಿರ್ವಹಣೆ ಸುಲಭವೆಂಬ ಕಾರಣಕ್ಕೆ ಕೊಳವೆಬಾವಿಗಳನ್ನು ಕೊರೆಸಿ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ. ಸಕಾಲದಲ್ಲಿ ನೀರು ಹಾಯಿಸಿಕೊಂಡು ಉತ್ತಮವಾಗಿ ಪೋಷಣೆ ಮಾಡಿಕೊಂಡು ಬಂದವರು ವರ್ಷಕ್ಕೆ ಲಕ್ಷಾಂತರ ರು. ಲಾಭ ಗಳಿಸುತ್ತಿದ್ದಾರೆ. ಪ್ರಸ್ತುತ ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಮತ್ತು ಬೇಡಿಕೆಯೂ ಇದೆ. ಇದರಿಂದಾಗಿ ಜಿಲ್ಲೆಯ ಜನರು ಅಡಕೆ ಬೆಳೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಶ್ರೀಮಂತರು ಮಾತ್ರವಲ್ಲದೆ ಬಡವರು, ಮಧ್ಯಮವರ್ಗದ ರೈತರು ಕೂಡ ಅಡಿಕೆ ಬೆಳೆಯತ್ತ ವಾಲುತ್ತಿದ್ದಾರೆ. ಹೆಚ್ಚು ಖರ್ಚಿಲ್ಲದೆ ಬೆಳೆಯಬಹುದಾದ ಅಡಿಕೆ ಬೆಳೆಯ ಮೋಹಕ್ಕೆ ಒಳಗಾಗಿ ಬೆಳೆ ಬೆಳೆಯಲು ಉತ್ಸಾಹ ತೋರುತ್ತಿರುವುದರಿಂದ ಅಡಿಕೆ ಬೆಳೆ ವಿಸ್ತೀರ್ಣ ಸದ್ದಿಲ್ಲದೆ ಹೆಚ್ಚಾಗುತ್ತಲೇ ಇದೆ.
ಜಿಲ್ಲೆಯ ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕುಗಳು ಹೆಚ್ಚು ಅಡಿಕೆ ಬೆಳೆ ಬೆಳೆಯುವ ಪ್ರದೇಶಗಳಾಗಿವೆ. ಶ್ರೀರಂಗಪಟ್ಟಣದ 3796 .13 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆದು ಪ್ರಥಮ ಸ್ಥಾನದಲ್ಲಿದ್ದರೆ, ಕೆ.ಆರ್‌ಪೇಟೆ 2667 32 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ7886 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 1 ಹೆಕ್ಟೇರ್‌ಗೆ1.12 ಮೆಟ್ರಿಕ್ ಟನ್‌ನಂತೆ ವಾರ್ಷಿಕ 8867 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಾ 310.35 ಕೋಟಿ ರು.ನಷ್ಟು ಆದಾಯ ಸೃಷ್ಟಿಯಾಗುತ್ತಿದೆ. ಮಳೆಯ ಕೊರತೆಯಿಂದ ತೆಂಗು, ಅಡಿಕೆ ಸೇರಿದಂತೆ ಈ ಸಾಲಿನಲ್ಲಿ ಎಲ್ಲ ಬೆಳೆಗಳ ಇಳುವರಿಯೂ ಕುಸಿತಗೊಂಡಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ
ಮಂಡ್ಯ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಅಡಿಕೆ ಬೆಳೆಯುವ ವಿಸ್ತಿರ್ಣ ಹೆಚ್ಚಾಗಿದೆ. ಭತ್ತ, ಕಬ್ಬು ಬೆಳೆಯುತ್ತಿದ್ದ ರೈತರು ಕೊಳವೆಬಾವಿ ನಿರ್ಮಿಸಿಕೊಂಡು ಅಡಿಕೆ ಬೆಳೆಗೆ ಆಸಕ್ತಿ ತೋರಿದ್ದಾರೆ. ವಾರ್ಷಿಕ ೩೧೦.೩೫ ಕೋಟಿ ರು.ನಷ್ಟು ಅಡಿಕೆ ಬೆಳೆ ವಹಿವಾಟು ನಡೆಯುತ್ತಿದೆ. ನೀರಿನ ಕೊರತೆ ನಡುವೆಯೂ ಅಡಿಕೆಯತ್ತ ಜನರ ಒಲವು ಹೆಚ್ಚುತ್ತಿದೆ.
- ಕೆ.ಎನ್.ರೂಪಶ್ರೀ, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ