Karnataka Rain Updates: 6 ಜಿಲ್ಲೆಗಳಲ್ಲಿ ಗುಡ್ಡ ಕುಸಿತ: 28 ತಾಲೂಕಿನ ಜನರಿಗೆ ಪ್ರಾಣ ಭಯ

Aug 15, 2022, 3:02 PM IST

ಈ ಬಾರಿಯ ಮುಂಗಾರು ಇಡೀ ದೇಶಾದ್ಯಂತ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಕಳೆದೊಂದು ತಿಂಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಉತ್ತರ ಭಾರತದಲ್ಲಿ ಮೇಘಸ್ಫೋಟವಾಗಿದ್ದು, ಸಣ್ಣ ದೊಡ್ಡ ನದಿಗಳೆಲ್ಲವೂ ಉಕ್ಕಿ ಹರಿಯುತ್ತಿವೆ. ಪರಿಣಾಮ ಅನೇಕರು ಮನೆ ಮಠ ಕಳೆದುಕೊಂಡು ಇರಲು ನೆಲೆ ಇಲ್ಲದೇ ನಿರ್ಗತಿಕರಾಗಿದ್ದಾರೆ. ಇತ್ತ ರಾಜ್ಯದಲ್ಲೂ ಪರಿಸ್ಥಿತಿ ಏನು ಭಿನ್ನವಾಗಿಲ್ಲ. ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ, ಮಳೆ ಸ್ವಲ್ಪ ನಿಂತಿದ್ದರೂ ಮಳೆಯ ಆರ್ಭಟಕ್ಕೆ ನೆನೆದ ಧರೆ ನಿಂತಲ್ಲಿಯೇ ಕುಸಿದು ಎಲ್ಲರನ್ನೂ ಆಹುತಿ ತೆಗೆದುಕೊಳ್ಳುತ್ತಿದೆ. ಜಾಗತಿಕ ತಾಪಮಾನದಿಂದ ಭೂಮಿಯಲ್ಲಿ ಹವಾಮಾನ ಬದಲಾಗುತ್ತಿದೆ. ಇದರ ಪರಿಣಾಮ ಎಲ್ಲೆಡೆಯೂ ಆಗುತ್ತಿದೆ. ಆಸರೆಗಿದ್ದ ಮನೆಗಳು ಜಲಾವೃತವಾಗಿವೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ಗುಡ್ಡ ಕುಸಿತ ಹೆಚ್ಚಾಗಿದೆ. ಇದರಿಂದ ಹಲವು ಮನೆಗಳ ಜನ ಆತಂಕದಲ್ಲಿದ್ದಾರೆ. ಸಕಲೇಶಪುರದಲ್ಲಿ ಭೂಕುಸಿತದಿಂದ 20 ಎಕರೆ ಕಾಫಿ ತೋಟವೇ ಕೊಚ್ಚಿ ಹೋಗಿದೆ. ಕಷ್ಟಪಟ್ಟು ನೆಟ್ಟ ಕಾಫಿಗಿಡಗಳು ಫಸಲು ನೀಡುವ ಸಮಯದಲ್ಲಿ ವರುಣ ಆರ್ಭಟ ತೋರಿದ್ದು, ಬೆಳೆಗಾರರು ಕಣ್ಣೀರಿಡುತ್ತಿದ್ದಾರೆ.