‘ಜಿಂದಾಲ್‌ಗೆ ಭೂಮಿ ಕೊಟ್ಟದ್ದೇ BJP, ಈಗ್ಯಾಕೆ ವಿರೋಧ?’

Jun 14, 2019, 5:19 PM IST

ಬೆಂಗಳೂರು (ಜೂ. 13): ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಕೈಗಾರಿಕ ಸಚಿವ ಕೆ.ಜೆ. ಜಾರ್ಜ್,  ‘ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3666 ಎಕರೆ ಭೂಮಿ ಮಾರುವ ನಿರ್ಧಾರ ಹಳೆಯ ಸರ್ಕಾರಗಳದ್ದು. ಸದಾನಂದ ಗೌಡ ಮತ್ತು ಯಡಿಯೂರಪ್ಪ ಆಡಳಿತಾವಧಿಯಲ್ಲೇ ಜಿಂದಾಲ್ ಕಂಪನಿಗೆ ಸೇಲ್ ಡೀಡ್ ಮಾಡಿಕೊಡಲಾಗಿದೆ, ಈ ಸರ್ಕಾರ ಯಾವುದೇ ಹೊಸ ಆದೇಶ ಮಾಡಿಲ್ಲ’ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.  

ತಾತ್ವಿಕವಾಗಿ ಹಳೆಯ ಸರ್ಕಾರಗಳ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ, ನಾವದನ್ನು ಆಗಲೂ ಸ್ವಾಗತಿಸಿದ್ದೇವೆ, ಈಗಲೂ ಸಮರ್ಥಿಸುತ್ತೇವೆ ಎಂದು ಹೇಳಿರುವ ಜಾರ್ಜ್,  ಸಾರ್ವಜನಿಕ ವಲಯದಲ್ಲಿ ಗೊಂದಲವುಂಟಾಗಿರುವ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ಇನ್ನೊಂದು ಕಡೆ ಇಂಧನ ಸಚಿವ ಹಾಗೂ ಬಳ್ಳಾರಿ ಉಸ್ತುವಾರಿ ಡಿ.ಕೆ. ಶಿವಕುಮಾರ್ ಕೂಡಾ ಜಿಂದಾಲ್ ಲ್ಯಾಂಡ್ ಡೀಲ್ ಪರ ಬ್ಯಾಟಿಂಗ್ ಮಾಡಿದ್ದು, ಇಡೀ ಸರ್ಕಾರವೇ ಬಂದರೂ ನಾನೊಬ್ಬನೇ ಸಾಕು, ಜಿಂದಾಲ್ ಪರ ನಾನು ನಿಲ್ಲುತ್ತೇನೆ ಎಂದಿದ್ದಾರೆ.