ಇವನು ಅವನಲ್ಲ, ಅವಳು...! 7 ವರ್ಷದ ಬಳಿಕ ಝೂ ಸಿಬ್ಬಂದಿಗೆ ಗೊತ್ತಾಯ್ತು ಸತ್ಯ..!

By Anusha KbFirst Published Apr 28, 2024, 9:34 AM IST
Highlights

ಮನುಷ್ಯರು ಹೆಣ್ಣಾಗಿ ಹುಟ್ಟಿದವರು ಗಂಡಾಗಿ ಬದಲಾಗುತ್ತಾರೆ. ಗಂಡಾಗಿ ಹುಟ್ಟಿದವರು ಹೆಣ್ಣಾಗಿ ಬದಲಾಗುವುದು ಇದೆ. ಈ ವಿಚಾರಗಳು ಸುದ್ದಿಯಾಗಿರುವುದನ್ನು ನೀವು ಕೇಳಿರಬಹುದು. ಆದರೆ ಜಪಾನ್‌ನಲ್ಲಿ  ಗಂಡಾಗಿದ್ದ ಪ್ರಾಣಿಯೂ ಕೂಡ ಈಗ ಹೆಣ್ಣಾಗಿ ಬದಲಾಗಿದೆ.

ಟೋಕಿಯೋ: ಮನುಷ್ಯರು ಹೆಣ್ಣಾಗಿ ಹುಟ್ಟಿದವರು ಗಂಡಾಗಿ ಬದಲಾಗುತ್ತಾರೆ. ಗಂಡಾಗಿ ಹುಟ್ಟಿದವರು ಹೆಣ್ಣಾಗಿ ಬದಲಾಗುವುದು ಇದೆ. ಈ ವಿಚಾರಗಳು ಸುದ್ದಿಯಾಗಿರುವುದನ್ನು ನೀವು ಕೇಳಿರಬಹುದು. ಆದರೆ ಜಪಾನ್‌ನಲ್ಲಿ  ಗಂಡಾಗಿದ್ದ ಪ್ರಾಣಿಯೂ ಕೂಡ ಈಗ ಹೆಣ್ಣಾಗಿ ಬದಲಾಗಿದೆ. ಇದೇನು ಪ್ರಾಣಿಯೂ ಲಿಂಗ ಬದಲಾಯಿಸುಕೊಂಡಿದೆಯಾ ಎಂದು ನೀವು ಅಚ್ಚರಿಯಿಂದ ಕೇಳಬಹುದು. ಆದರೆ ಅಂತಹದ್ದೇನಿಲ್ಲ,  ಝೂ ಸಿಬ್ಬಂದಿಯ ಎಡವಟ್ಟಿನಿಂದ ಹೀಗಾಗಿದೆಯಷ್ಟೇ?

ಅಂದಹಾಗೆ ಗಂಡಾಗಿದ್ದು, ಹೆಣ್ಣಾಗಿ ಬದಲಾಗಿದ್ದು ಒಂದು ಘೇಂಡಾಮೃಗ, ಜೆನ್ ಚಾನ್ ಹೆಸರಿನ ಈ ಘೇಂಡಾಮೃಗವನ್ನು ಮೆಕ್ಸಿಕೋದ ಆಫ್ರಿಕನ್ ಸಫಾರಿಯಿಂದ 2017ರಲ್ಲಿ ದತ್ತು ಪಡೆಯಲಾಗಿತ್ತು. ಆಗ ಅದರ ವಯಸ್ಸು ಕೇವಲ 5 ವರ್ಷ, ಈ ಪ್ರಾಣಿಯನ್ನು ಪರಿಚಯಿಸುವಾಗ, ಅದನ್ನು ಇರಿಸಲಾಗಿದ್ದ ಮೃಗಾಲಯದ ಉಸ್ತುವಾರಿಯಾಗಿದ್ದವರು ಅದು ಗಂಡು ಎಂದು ವಿವರಿಸಿದರು ಮತ್ತು ಅಲ್ಲಿಂದ ಆಮದು ಮಾಡಿಕೊಳ್ಳಲು ಬೇಕಾಗಿದ್ದ ಅಗತ್ಯವಾದ ದಾಖಲೆಗಳಲ್ಲಿ ಅದನ್ನು 'ಗಂಡು' ಎಂದೇ ನಮೂದಿಸಲಾಗಿತ್ತು. ಕೇವಲ 5 ವರ್ಷವಾಗಿದ್ದರಿಂದ ಅದಿನ್ನು ಮಗುವಾಗಿತ್ತು. ಹೀಗಾಗಿ ಅದರ ಲಿಂಗದ ಬಗ್ಗೆ ನಮಗೇನು ಸಂದೇಹವಿರಲಿಲ್ಲ ಎಂದು ಜಪಾನ್ ಮೃಗಾಲಯವೂ ಹೇಳಿದೆ. 

ಆದರೆ ಇತ್ತೀಚೆಗೆ ಅದರ ಡಿಎನ್‌ಎ ಪರೀಕ್ಷೆ ಮಾಡಿದಾಗ ಅದು ಗಂಡಲ್ಲ ಹೆಣ್ಣು ಎಂಬುದು ಗೊತ್ತಾಗಿದೆ. ಜಪಾನ್‌ನ ಒಸಾಕಾ ಟೆನೊಜಿ ಮೃಗಾಲಯದಲ್ಲಿ ಈ  ಜೆನ್ ಚಾನ್  ಹೆಸರಿನ ಘೇಂಡಾಮೃಗವನ್ನು ಇರಿಸಲಾಗಿತ್ತು. 7 ವರ್ಷದ ಹಿಂದೆ ಈ ಮೃಗಾಲಯಕ್ಕೆ ಬಂದ ಜೆನ್ ಚಾನ್‌ ಘೇಂಡಾಮೃಗವನ್ನು ಗಂಡು ಎಂದೇ ಇಷ್ಟು ದಿನ ಭಾವಿಸಲಾಗಿತ್ತು. ಆದರೆ ಇತ್ತೀಚೆಗೆ ಬಂದ ಡಿಎನ್‌ಎ ವರದಿ ಈ ಘೇಂಡಾಮೃಗ ಹೆಣ್ಣು ಎಂದು ಹೇಳಿದ್ದು,ಮೃಗಾಲಯದ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದೆ. 

ಅಲ್ಲದೇ ಈ ಜೆನ್ ಚಾನ್ ಘೇಂಡಾಮೃಗ ಯಾವತ್ತೂ ಕೂಡ  ಗಂಡಿನ ನಿರ್ದಿಷ್ಟ ನಡವಳಿಕೆಗಳನ್ನು ತೋರಿಸಿರಲಿಲ್ಲ ಗಂಡು ಹಿಪ್ಪೋಗಳಂತೆ ಅದು ವರ್ತಿಸುತ್ತಿರಲಿಲ್ಲ,  ಅಂದರೆ ಸಾಮಾನ್ಯವಾಗಿ  ಗಂಡು ಹಿಪ್ಪೋಗಳು (ಘೇಂಡಾಮೃಗ) ತಮ್ಮ ಪ್ರದೇಶವನ್ನು ಗುರುತಿಸಲು ಮಲವಿಸರ್ಜನೆ ಮಾಡುವಾಗ ತಮ್ಮ ಬಾಲವನ್ನು ಫ್ಯಾನ್ ತರ ತಿರುಗಿಸುತ್ತವೆ. ಆದರೆ ಈ ಹಿಪ್ಪೋ ಯಾವತ್ತೂ ಹಾಗೆ ಮಾಡುತ್ತಿರಲಿಲ್ಲ.  ಅಲ್ಲದೇ ಇದನ್ನು ನೋಡಿಕೊಳ್ಳುತ್ತಿದ್ದ ಝೂ ಸಿಬ್ಬಂದಿಗಳು ಕೂಡ ಇದರ ಪುರುಷ ಲಿಂಗವನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ, ಅಲ್ಲದೇ ಅದು ಇತರ ಹೆಣ್ಣು ಘೇಂಡಾಮೃಗಗಳತ್ತ ಆಕರ್ಷಿತವಾಗುತ್ತಿರಲಿಲ್ಲ ಎಂದು ಝೂ ಸಿಬ್ಬಂದಿ ಹೇಳಿದ್ದಾರೆ.

ಅಲ್ಲದೇ ಜೆನ್ ಚಾನ್‌ನ ಜನನಾಂಗಗಳು ಕೂಡ ಝೂ ಸಿಬ್ಬಂದಿಗೆ ಕಾಣಿಸದೇ ಇದ್ದಿದ್ದರಿಂದ ಮೃಗಾಲಯ ಸಿಬ್ಬಂದಿ ಈ ಘೇಂಡಾಮೃಗಕ್ಕೆ ಡಿಎನ್‌ಎ ಪರೀಕ್ಷೆ ಮಾಡಲು ಮುಂದಾಯ್ತು. ಈ ಪರೀಕ್ಷೆಯಲ್ಲಿ ಇದು ಗಂಡು ಅಲ್ಲ ಹೆಣ್ಣು ಎಂಬುದು ಗೊತ್ತಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

click me!