‘ಇಂದಿರಾ ಕ್ಯಾಂಟೀನ್‌’ಗೆ ಡಾ. ಶಿವಕುಮಾರ ಸ್ವಾಮೀಜಿ ಹೆಸರು: ಯಾವಾಗಿಂದ?

Nov 15, 2019, 4:02 PM IST

ಬೆಂಗಳೂರು/ತುಮಕೂರು, [ನ.15]: ಕಾಂಗ್ರೆಸ್‌ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷಿ ‘ಇಂದಿರಾ ಕ್ಯಾಂಟೀನ್‌’ ಹೆಸರು ಬದಲಾಯಿಸಿ ‘ಸಿದ್ದಗಂಗಾದ ಡಾ.ಶಿವಕುಮಾರ ಸ್ವಾಮೀಜಿ’ ಎಂದು ಮರು ನಾಮಕರಣಕ್ಕೆ ಬಿಬಿಎಂಪಿ ಚಿತನೆ ನಡೆಸಿದೆ.

ಕಾಂಗ್ರೆಸ್‌ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017ರಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಈ ಹಿಂದಿನ ಸಮ್ಮಿಶ್ರ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರ ಈವರೆಗೆ ಒಂದೇ ಒಂದು ರುಪಾಯಿ ಅನುದಾನ ನೀಡಿಲ್ಲ.

 ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಈ ಯೋಜನೆಯಿದೆ ಎಂಬ ಕಾರಣಕ್ಕೆ ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ, ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹಾಗಾಗಿ, ಪಾಲಿಕೆ ಆಡಳಿತರೂಢ ಬಿಜೆಪಿ ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ಮಾಡಿ ಬಡವರಿಗೆ ಆಹಾರ ನೀಡುವ ಯೋಜನೆ ಮುಂದುವರಿಸುವುದಕ್ಕೆ ತೀರ್ಮಾನಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಉಪಚುನಾವಣೆ ಮುಗಿದ ಬಳಿಕ ಇಂದಿರಾ ಕ್ಯಾಂಟೀನ್ ಬದಲಿಸಿ ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ ಮಾಡುವುದು ಬಹುತೇಕ ಖಚಿತ.