ಸತತ ಮಳೆಯಿಂದ ಶ್ರವಣಬೆಳಗೊಳ ಬೆಟ್ಟದ ತಡೆಗೋಡೆ, ಬಂಡೆ ಕುಸಿತ, ಬೆಟ್ಟಹತ್ತುವುದಕ್ಕೆ ನಿರ್ಬಂಧ

Aug 4, 2022, 5:08 PM IST

ಹಾಸನ (ಆ.04): ಸತತವಾಗಿ ಸುರಿದ ಮಳೆಯಿಂದಾಗಿ ಶ್ರವಣ ಬೆಳಗೊಳದಲ್ಲಿರುವ ಬಾಹುಬಲಿ ಬೆಟ್ಟ(ವಿಂಧ್ಯಗಿರಿ)ದ ಮೇಲಿದ್ದ ಕೋಟೆಯ ತಡೆಗೋಡೆಯ ಒಂದು ಭಾಗ ಕುಸಿದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಬೆಟ್ಟದ ಮೇಲೆ ಸೈಜ್‌ ಕಲ್ಲಿನಿಂದ ಕಟ್ಟಲಾಗಿದ್ದ ಕೋಟೆಯ ತಡೆಗೋಡೆ ಸುಮಾರು 20 ಮೀಟರ್‌ನಷ್ಟುಕುಸಿದು ಬಿದ್ದಿದೆ. ನೂರಾರು ಕಲ್ಲುಗಳು ಒಮ್ಮೆಲೆ ಜಾರಿದ ಪರಿಣಾಮ ಬೆಟ್ಟದ ಮೇಲಿದ್ದ ಹಲವು ಬಂಡೆಗಳು ಮೇಲಿಂದ ಕೆಳಗೆ ಜಾರಿವೆ. ಮುಂಜಾನೆ ಈ ಘಟನೆ ಸಂಭವಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ವಿಶ್ವವಿಖ್ಯಾತ ಗೊಮ್ಮಟೇಶ್ವರ ಮೂರ್ತಿಯ ಸುತ್ತಲೂ ಈ ಕೋಟೆ ನಿರ್ಮಿಸಲಾಗಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೋಟೆಯ ಉತ್ತರಾಭಿಮುಖದ ತಡೆಗೋಡೆಯ ಒಂದು ಭಾಗ ಜೋರು ಮಳೆಯಿಂದ ಕಳಚಿ ಬಿದ್ದಿದೆ. ಇದರಿಂದ ಬೆಟ್ಟಕ್ಕೆ ಹತ್ತುವ ಕಲ್ಲಿನ ಮೆಟ್ಟಿಲು ದಾರಿಯ ಮಧ್ಯೆ ಭಾರೀ ಗಾತ್ರದ ಬಂಡೆಗಳು ಉರುಳಿವೆ. ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನ ಇದರಿಂದ ಆತಂಕಗೊಂಡಿದ್ದಾರೆ. ಬಂಡೆ ಕುಸಿತ ಹಿನ್ನೆಲೆಯಲ್ಲಿ ಬೆಟ್ಟಹತ್ತುವುದಕ್ಕೆ ನಿರ್ಬಂಧ ಹೇರಲಾಗಿದೆ.